ದೇಶದ ರಾಜಧಾನಿ ದೆಹಲಿಯ ತೀನ್ ಮೂರ್ತಿ ಭವನ ಆವರಣದಲ್ಲಿರುವ ನೆಹರೂ ಸ್ಮಾರಕ ಮ್ಯೂಸಿಯಂ ಎಂದೇ ಕರೆಯಲಾಗುವ ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆ (ಎನ್ಎಂಎಂಎಲ್) ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದ್ದು ʼಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆʼ (ಪಿಎಂಎಂಎಲ್) ಎಂಬುದಾಗಿ ಅಧಿಕೃತವಾಗಿ ಮರುನಾಮಕರಣಗೊಂಡಿದೆ ಎಂದು ಬುಧವಾರ (ಆಗಸ್ಟ್ 16) ವರದಿಯಾಗಿದೆ.
ಅ.14ರಿಂದ ಅಧಿಕೃತವಾಗಿ ನೆಹರೂ ಮ್ಯೂಸಿಯಂ ಇನ್ನು ಮುಂದೆ ʼಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆʼಯಾಗಿ ಬದಲಾಗಿದೆ. ಪ್ರಜಾಪ್ರಭುತ್ವಿಕರಣ ಮತ್ತು ವೈವಿದ್ದೀಕರಣಕ್ಕೆ ಅನುಗುಣವಾಗಿ ಹೆಸರನ್ನು ಬದಲಾಯಿಸಲಾಗಿದೆ ಎಂದು ಪಿಎಂಎಂಎಲ್ ಉಪಾಧ್ಯಕ್ಷ ಎ. ಸೂರ್ಯ ಪ್ರಕಾಶ್ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ (ಟ್ವಿಟರ್) ಬರೆದುಕೊಂಡಿದ್ದಾರೆ.
ಎನ್ಎಂಎಂಎಲ್ನ ಉಪಾಧ್ಯಕ್ಷರೂ ಆಗಿರುವ ರಕ್ಷಣಾ ಸಚಿವ ರಾಜನಾಥ ಸಿಂಗ್ ಅಧ್ಯಕ್ಷತೆಯಲ್ಲಿ ಜೂನ್ 17ರಂದು ನಡೆದ ವಿಶೇಷ ಸಭೆಯಲ್ಲಿ ನೆಹರೂ ಸ್ಮಾರಕ ಮ್ಯೂಸಿಯಂ ಸಂಸ್ಥೆಯ ಹೆಸರನ್ನು ಬದಲಾಯಿಸುವ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು.
ವಿಶೇಷ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ರಾಜನಾಥ ಸಿಂಗ್, “ಈ ಸಂಸ್ಥೆಗೆ ಹೊಸ ರೂಪ ನೀಡಲಾಗಿದೆ. ಜವಾಹರಲಾಲ್ ನೆಹರೂ ಅವರಿಂದ ಹಿಡಿದು ನರೇಂದ್ರ ಮೋದಿ ತನಕ ಎಲ್ಲ ಪ್ರಧಾನಿಗಳ ಕೊಡುಗೆಗಳನ್ನು ಈ ಸಂಸ್ಥೆ ಪ್ರದರ್ಶಿಸುತ್ತದೆ. ಹೀಗಾಗಿ ನೆಹರೂ ಮ್ಯೂಸಿಯಂ ಸಂಸ್ಥೆಯ ಹೆಸರನ್ನು ಬದಲಾಯಿಸುವ ಪ್ರಸ್ತಾವ ಮಂಡಿಸಿದ್ದು ಸ್ವಾಗತಾರ್ಹ” ಎಂದು ಹೇಳಿದ್ದರು.
ಈ ಸುದ್ದಿ ಓದಿದ್ದೀರಾ? 77ನೇ ಸ್ವಾತಂತ್ರ್ಯೋತ್ಸವ | ಸರ್ಕಾರದ ಸಾಧನೆ ಬಗ್ಗೆ ಪ್ರಧಾನಿ ಮೋದಿ ಸುದೀರ್ಘ ಮಾತು ; ಮಣಿಪುರ ಸೇರಿ ಹಲವು ವಿಷಯ ಚರ್ಚೆ
“ದೇಶದ ಪ್ರಧಾನಿಯೇ ಒಂದು ಸಂಸ್ಥೆ ಇದ್ದಂತೆ. ಅಧಿಕಾರದಲ್ಲಿದ್ದ ಅವಧಿಯ ಅವರ ಪಯಣವನ್ನು ಕಾಮನಬಿಲ್ಲಿನಲ್ಲಿರುವ ಒಂದೊಂದು ಬಣ್ಣಕ್ಕೆ ಹೋಲಿಸಬಹುದು. ಕಾಮನಬಿಲ್ಲು ಕಣ್ಮನ ಸೆಳೆಯಬೇಕು ಎಂದಾದಲ್ಲಿ ಅದರಲ್ಲಿನ ಎಲ್ಲ ಬಣ್ಣಗಳಿಗೆ ಸಮಾನ ಪ್ರಾತಿನಿಧ್ಯ ಇರಬೇಕು. ಅದೇ ರೀತಿ ಎಲ್ಲ ಪ್ರಧಾನಿಗಳ ಕೊಡುಗೆಗಳಿಗೂ ಸರಿಯಾದ ಪ್ರಾತಿನಿಧ್ಯ ಸಿಗಬೇಕು” ಎಂದು ತಿಳಿಸಿದ್ದರು.
“ನೆಹರೂ ಸ್ಮಾರಕ ಮ್ಯೂಸಿಯಂ ಸಂಸ್ಥೆಯ ಹೆಸರು ಬದಲಾವಣೆ ಮಾಡುವ ಮೂಲಕ ಹಿಂದಿನ ಎಲ್ಲ ಪ್ರಧಾನಿಗಳಿಗೆ ಗೌರವ ನೀಡಿದಂತಾಗಿದೆ. ಈ ನಿರ್ಣಯವು ಪ್ರಜಾಸತ್ತಾತ್ಮಕವಾಗಿಯೂ ಇದೆ” ಎಂದು ರಾಜನಾಥ್ ಸಿಂಗ್ ಹೇಳಿದ್ದರು.