—ನಾ ದಿವಾಕರ —
ಶುದ್ಧ-ಅಶುದ್ಧ ಕಲ್ಪನೆಗಳ ನಡುವೆ ನಿರ್ಲಕ್ಷ್ಯಕ್ಕೊಳಗಾಗಿರುವುದು ಅಧಿಕಾರ ರಾಜಕಾರಣದ ಮಾಲಿನ್ಯ
ಇತ್ತೀಚಿನ ಬೆಳವಣಿಗೆಯೊಂದರಲ್ಲಿ ರಾಜಸ್ಥಾನದ ಹವಾಮಹಲ್ ಕ್ಷೇತ್ರದ ಬಿಜೆಪಿ ಶಾಸಕ ಬಾಲಮುಕುಂದ್ ಆಚಾರ್ಯ ಅಲ್ಲಿನ ಪುರಸಭೆಯನ್ನು ಶುದ್ಧೀಕರಿಸಲು ಹಾಗೂ ಬಿಜೆಪಿಗೆ ಸೇರಿದ ಕಾಂಗ್ರೆಸ್ ಸದಸ್ಯರನ್ನು ಮತ್ತು ಕೆಲವು ಪುರಸಭೆ ಅಧಿಕಾರಿಗಳನ್ನು ಶುದ್ಧೀಕರಿಸಿ ಸನಾನತವಾದಿಗಳಾಗಿ ಪರಿವರ್ತಿಸುವ ಆಚರಣೆಯನ್ನು ನಡೆಸಿದ್ದಾರೆ. ಅಧಿಕಾರ ಲಾಲಸೆಯಿಂದ ಪಕ್ಷಾಂತರ ಮಾಡಿದ ರಾಜಕೀಯ ನಾಯಕರ ಮೇಲೆ ಗಂಗಾಜಲ ಮತ್ತು ಗೋಮೂತ್ರವನ್ನು ಸಿಂಪಡಿಸುವ ಮೂಲಕ ಅವರಲ್ಲಿದ್ದ ಭ್ರಷ್ಟಾಚಾರದ ಕಳಂಕವನ್ನು ಹೋಗಲಾಡಿಸಿ ಸಚ್ಚಾರಿತ್ರ್ಯದೆಡೆಗೆ ಕರೆದೊಯ್ಯುವ ಪ್ರಯತ್ನ ಮಾಡಿದ್ದಾರೆ. ಈ ಆಚರಣೆಯ ಮೂಲಕ ಜೈಪುರ ಮುನಿಸಿಪಲ್ ಕಾರ್ಪೋರೇಷನ್ ಹೆರಿಟೇಜ್ ಸಂಸ್ಥೆಯನ್ನು ಸಂಪೂರ್ಣ ಪರಿಶುದ್ಧಗೊಳಿಸಿರುವುದಾಗಿ ಶಾಸಕರು ಹೇಳಿದ್ದಾರೆ. ಭಾರತದ ಆಳ್ವಿಕೆಯನ್ನು ಮೇಲಿನಿಂದ ಕೆಳಗಿನವರೆಗೂ ಕಾಡುತ್ತಿರುವ ಭ್ರಷ್ಟಾಚಾರ ಮತ್ತು ಅನೈತಿಕ ರಾಜಕಾರಣವನ್ನು ಇಷ್ಟು ಸುಲಭವಾಗಿ ಹೋಗಲಾಡಿಸಬಹುದಾದರೆ, ಬಹುಶಃ ಸಾಂವಿಧಾನಿಕ ಸಂಸ್ಥೆಗಳು ನೆಮ್ಮದಿಯಿಂದ ವಿರಮಿಸಬಹುದು.
ಈ ನಡುವೆಯೇ ದೇಶದ ಲಕ್ಷಾಂತರ ಜನರು ಭಕ್ತಿಭಾವದಿಂದ ಸೇವಿಸುವ ತಿರುಪತಿಯ ಲಡ್ಡು ಪ್ರಾಣಿಗಳ ಕೊಬ್ಬಿನಿಂದ ಕೂಡಿದೆ ಎಂಬ ವರದಿ ಸಾರ್ವಜನಿಕ ವಲಯದಲ್ಲಿ ಶುದ್ಧೀಕರಣದ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ತಿರುಪತಿ ದೇವಾಲಯ ಮತ್ತು ಸುತ್ತಲ ಪರಿಸರವನ್ನೂ ಶುದ್ಧೀಕರಿಸಲು ಹಲವು ಧಾರ್ಮಿಕ ಆಚರಣೆಗಳನ್ನು ಅನುಸರಿಸಲಾಗಿದ್ದು, ಪ್ರಸಾದ ಎಂದು ವಿತರಿಸಲಾಗುವ ಲಡ್ಡು ದನದ ಕೊಬ್ಬು ಅಥವಾ ಇತರ ಪ್ರಾಣಿಗಳ ಕೊಬ್ಬಿನಿಂದ ಕಲುಷಿತವಾಗಿದೆಯೇ ಎನ್ನುವುದು ತನಿಖೆಗೊಳಗಾಗಿದ್ದು, ಪ್ರಯೋಗಾಲಯದ ವರದಿಯ ನಂತರವಷ್ಟೇ ಖಚಿತವಾಗಲಿದೆ. ಆದರೆ ಈ ವಿವಾದ ಈಗಾಗಲೇ ರಾಜಕೀಯ ಸ್ವರೂಪ ಪಡೆದುಕೊಂಡಿದ್ದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈ ಪ್ರಕರಣದ ರಾಜಕೀಯ ಲಾಭ ಪಡೆಯಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ.
ಮಾರುಕಟ್ಟೆ ಮತ್ತು ಕಲಬೆರಕೆಯ ನಂಟು
ʼಕಲಬೆರಕೆʼ ಎಂಬ ಒಂದು ಭೌತಿಕ ಪ್ರಕ್ರಿಯೆಗೂ ವಸ್ತುಗಳ ಉತ್ಪಾದನೆ ಮತ್ತು ವಿತರಣೆಯ ಮಾರುಕಟ್ಟೆಯ ಪ್ರಕ್ರಿಯೆಗೂ ನೇರವಾದ ಸಂಬಂಧ ಇರುವುದನ್ನು ಗಮನಿಸಿದರೆ, ತಿರುಪತಿ ಲಡ್ಡು ಸಹ ಇದೇ ಪ್ರಕ್ರಿಯೆಯ ಒಂದು ಭಾಗವಾಗಿ ಕಾಣುತ್ತದೆ. ತಿರುಪತಿಯ ಲಡ್ಡು ತಯಾರಿಕೆಯೂ ಸಹ ಹೊರಗುತ್ತಿಗೆ ನೀಡಿರುವ ಒಂದು ಔದ್ಯೋಗಿಕ ಉತ್ಪನ್ನವಾಗಿರುವುದರಿಂದ ಸಹಜವಾಗಿಯೇ, ಉದ್ಯಮಿ ತನ್ನ ಲಾಭ ಹೆಚ್ಚಿಸಿಕೊಳ್ಳಲು ವಾಮಮಾರ್ಗಗಳ ಮೊರೆ ಹೋಗುತ್ತಾನೆ. ಇದರ ಸತ್ಯಾಸತ್ಯತೆಗಳು ಏನೇ ಇರಲಿ, ಬಂಡವಾಳಶಾಹಿ ಆರ್ಥಿಕತೆಯಲ್ಲಿ ದೈವ-ದೈವೀಕ ಸ್ಥಾನಗಳು ಮತ್ತು ಆಚರಣೆಗಳೆಲ್ಲವೂ ಸರಕೀಕರಣಕ್ಕೊಳಗಾಗುವುದರಿಂದ (Commodification) ಭಕ್ತಾದಿಗಳ ಕೈಸೇರುವ ಲಡ್ಡು ಇತ್ಯಾದಿ ಪ್ರಸಾದಗಳೂ ಸಹ ಮಾರುಕಟ್ಟೆಯ ಅಂಗಳದಲ್ಲೇ ಉತ್ಪಾದನೆಯಾಗುತ್ತವೆ.
“ ಅತಿ ಕಡಿಮೆ ವೆಚ್ಚದಲ್ಲಿ ಅತಿ ಹೆಚ್ಚು ಲಾಭ ” ಗಳಿಸುವುದು ಯಾವುದೇ ಮಾರುಕಟ್ಟೆ ವ್ಯಾಪಾರಿಯ ಮೂಲ ಮಂತ್ರವಾಗಿರುವುದರಿಂದ ಇಲ್ಲಿಯೂ ಸಹ ಕಲಬೆರಕೆ ನಡೆದಿರುವ ಸಾಧ್ಯತೆಗಳಿವೆ. ನಮ್ಮ ಸಾಮಾಜಿಕ-ಆರ್ಥಿಕ ವ್ಯವಸ್ಥೆಯಲ್ಲಿ ವಾಣಿಜ್ಯೀಕರಣ ಮತ್ತು ಔದ್ಯೋಗಿಕ ವಿಸ್ತರಣೆಯೇ ಪ್ರಧಾನ ಗುರಿ ಆಗಿರುವುದರಿಂದ ಎಲ್ಲ ಕ್ಷೇತ್ರಗಳೂ ತಮ್ಮ ಆಂತರಿಕ ಶುದ್ಧತೆಯನ್ನು ಸಹಜವಾಗಿ ಕಳೆದುಕೊಳ್ಳುತ್ತಿವೆ. ಸಾಮಾನ್ಯ ಪರಿಭಾಷೆಯಲ್ಲಿ ನಾವು ಬಳಸುವ ʼ ಕಲಬೆರಕೆ ʼ ಎಂಬ ಅಶುದ್ಧತೆಯ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಆಧುನಿಕ ನಾಗರಿಕತೆಯಲ್ಲಿ ಜನಬಳಕೆಗೆ ತೆರೆದುಕೊಳ್ಳುವ ಎಲ್ಲ ವಲಯಗಳೂ ಸಹ ಮಾರುಕಟ್ಟೆಯನ್ನು ಆಕರ್ಷಿಸಲು, ತನ್ಮೂಲಕ ಬಂಡವಾಳ-ಸಂಪತ್ತನ್ನು ವಿಸ್ತರಿಸಲು ಈ ಪ್ರಕ್ರಿಯೆಯನ್ನು ಅವಲಂಬಿಸುವುದನ್ನು ಗಮನಿಸಬಹುದು. ತಿರುಪತಿ ಲಡ್ಡು ಇತ್ತೀಚಿನ ಸೇರ್ಪಡೆ.
ರಾಜಸ್ಥಾನದ ರಾಜಕೀಯ ಅಂಗಳದಿಂದ ತಿರುಪತಿಯ ದೈವೀಕ ಪ್ರಾಂಗಣದವರೆಗೆ ವಿಸ್ತರಿಸಿರುವ ಈ ಶುದ್ಧೀಕರಣ ಪ್ರಕ್ರಿಯೆಯನ್ನು ಬದಿಗಿಟ್ಟು ನೋಡಿದಾಗ, ಭಾರತದ ಜನತೆ ತಮ್ಮ ನಿತ್ಯ ಜೀವನದಲ್ಲಿ ʼಕಲಬೆರಕೆʼ ಇಲ್ಲದ ಯಾವ ವಸ್ತುವನ್ನಾಗಲೀ, ಚಟುವಟಿಕೆಯ ಕೇಂದ್ರವನ್ನಾಗಲೀ ಕಾಣಲು ಸಾಧ್ಯವೇ ಎಂಬ ಪ್ರಶ್ನೆ ನಮ್ಮನ್ನು ಕಾಡಬೇಕಲ್ಲವೇ ? ಭ್ರಷ್ಟ ರಾಜಕಾರಣಿಗಳನ್ನು ಅಥವಾ ಭ್ರಷ್ಟಾಚಾರದ ಆವಾಸ ಸ್ಥಾನವಾಗಿರುವ ಆಳ್ವಿಕೆಯ ಆಡಳಿತ ಕೇಂದ್ರಗಳನ್ನು ಗೋಮೂತ್ರ ಮತ್ತು ಗಂಗಾಜಲ ಶುದ್ಧೀಕರಿಸುತ್ತದೆ ಎಂದು ನಂಬುವ ಅವೈಜ್ಞಾನಿಕ ಅವೈಚಾರಿಕತೆ ಸಮಾಜದ ಬೌದ್ಧಿಕ ಶಕ್ತಿಯನ್ನು ಮತ್ತಷ್ಟು ಕಲುಷಿತಗೊಳಿಸುತ್ತದೆ. ಮೂಲತಃ ಸಮಾಜದ ಚಿಂತನಾ ಶಕ್ತಿಯೇ ಜಾತಿ, ಧರ್ಮ, ಭಾಷೆ ಮುಂತಾದ ಅಸ್ಮಿತೆಗಳಿಂದ ಕಲುಷಿತಗೊಂಡಿರುವ ಅಧುನಿಕ ಭಾರತದಲ್ಲಿ ಈ ಆಚರಣೆಗಳು ಸಮಾಜವನ್ನು ಮತ್ತಷ್ಟು ಹಿಂದಕ್ಕೆ ಕೊಂಡೊಯ್ಯುತ್ತದೆ
ರಾಜಕಾರಣದ ಮಾರುಕಟ್ಟೆ ಜಗುಲಿ
ಭಾರತ ಒಪ್ಪಿಕೊಂಡಿರುವ, ಅನುಸರಿಸುತ್ತಿರುವ ಉದಾರವಾದಿ ಆರ್ಥಿಕತೆಯಲ್ಲಿ ರಾಜಕೀಯವೂ ಕೊಡುಕೊಳ್ಳುವಿಕೆಯ, ಖರೀದಿ-ಬಿಕರಿಯ ಮಾರುಕಟ್ಟೆ ಜಗುಲಿಯಾಗಿರುವುದರ ಪರಿಣಾಮ ರಾಜಕೀಯ ಪಕ್ಷಗಳೂ ಸಹ ಕಲಬೆರಕೆಯ ಪರಿಣಾಮವನ್ನು ಎದುರಿಸುತ್ತಿವೆ. ಪಕ್ಷಾಂತರ ಮಾಡುವ ರಾಜಕಾರಣಿಗಳು, ಗ್ರಾಮಪಂಚಾಯತ್ ಮಟ್ಟದಿಂದ ಸಂಸತ್ತಿನವರೆಗೂ ಬಯಸುವುದು ಅಧಿಕಾರ ರಾಜಕಾರಣದ ಫಲವನ್ನು. ಅಥವಾ ರಾಜಕೀಯದ ಏಣಿಯನ್ನು ಏರುತ್ತಾ ಹೋದಂತೆ ತಮ್ಮ ವೈಯುಕ್ತಿಕ ಬದುಕು ಮತ್ತು ವ್ಯಕ್ತಿಗತ ಸಾಮಾಜಿಕ ಸ್ಥಿತ್ಯಂತರಗಳು ಇನ್ನೂ ಹೆಚ್ಚಿನ ಸಮೃದ್ಧಿ ಪಡೆದುಕೊಳ್ಳಬೇಕು ಎಂಬ ಮಹತ್ವಾಕಾಂಕ್ಷೆಯಿಂದ. ಮೂರು ನಾಲ್ಕು ದಶಕಗಳ ಹಿಂದೆಯೂ ಭಾರತದ ರಾಜಕಾರಣದಲ್ಲಿ ಕಳಂಕ ಎಂದು ಭಾವಿಸಲಾಗುತ್ತಿದ್ದ ʼ ಪಕ್ಷಾಂತರ ʼ ಈಗ ಒಂದು ರೀತಿಯಲ್ಲಿ ಪಾವಿತ್ರ್ಯತೆಯನ್ನೂ ಪಡೆದುಕೊಂಡಿರುವುದು, ಕಲಬೆರಕೆಯ ರಾಜಕೀಯ ಸ್ವರೂಪವಾಗಿಯೇ ಕಾಣುತ್ತದೆ.
ಇತ್ತೀಚೆಗೆ ಕೇಂದ್ರ ಸಚಿವರೊಬ್ಬರು ಕರ್ನಾಟಕದಲ್ಲಿ ಆಪರೇಷನ್ ಕಮಲದ ಕಾರ್ಯಾಚರಣೆಗೆ ಪ್ರತಿ ಶಾಸಕರಿಗೆ 100 ಕೋಟಿ ರೂಗಳ ದರ ನಿಗದಿಪಡಿಸಿ, ಒಟ್ಟು 6500 ಕೋಟಿ ರೂ ಬೇಕಾಗುವುದರಿಂದ ಅದು ಕಾರ್ಯಸಾಧುವಲ್ಲ ಎಂದು ಹೇಳಿರುವುದು ವರದಿಯಾಗಿದೆ. ಬೌದ್ಧಿಕ ಕಲಬೆರಕೆ ಮತ್ತು ಮಾಲಿನ್ಯದ ರಾಜಕೀಯ ರೂಪವಾಗಿ ಇದನ್ನು ಗಮನಿಸಿದಾಗ, ಭಾರತದ ರಾಜಕೀಯ ವಲಯ ಹೇಗೆ ವಸ್ತುಶಃ ಮಾರುಕಟ್ಟೆಯಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಈ ರಾಜಕೀಯ ಕಲಬೆರಕೆಯೇ ಭ್ರಷ್ಟಾಚಾರದ ಮೂಲವೂ, ಅಂತಃಸತ್ವವೂ ಆಗಿರುವುದನ್ನು ಅಲ್ಲಗಳೆಯಲಾಗುವುದೇ ? 77 ವರ್ಷಗಳ ಸಾಂವಿಧಾನಿಕ ಆಳ್ವಿಕೆಯ ನಂತರ ಭಾರತದ ರಾಜಕಾರಣದಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಒಂದು ಮಾರುಕಟ್ಟೆ ಮೌಲ್ಯವನು ನಿಗದಿಪಡಿಸಿರುವುದು ಏನನ್ನು ಸೂಚಿಸುತ್ತದೆ ? ತಿರುಪತಿಯ ಲಡ್ಡು ಕಾಡುವಷ್ಟು ಮಟ್ಟಿಗೆ ಈ ನೈತಿಕ ಮಾಲಿನ್ಯ ನಮ್ಮ ಸಾರ್ವಜನಿಕ ಪ್ರಜ್ಞೆಯನ್ನು ಕಾಡುವುದಿಲ್ಲ ಏಕೆ ? ಈ ಪ್ರಶ್ನೆ ನಮ್ಮನ್ನು ಕಾಡಬೇಕಲ್ಲವೇ ?
ಕಲಬೆರಕೆ ಎನ್ನುವುದು ಭಾರತಕ್ಕೆ ಮಾತ್ರವಲ್ಲ ಯಾವುದೇ ಸಮಾಜಕ್ಕೂ ಹೊಸ ವಿದ್ಯಮಾನವಲ್ಲ. ಕಳೆದ ಐದಾರು ದಶಕದಿಂದಲೂ ಭಾರತದ ಉತ್ಪಾದಕ-ವಿತರಕ-ಗ್ರಾಹಕ ಮಾರುಕಟ್ಟೆಯನ್ನು ಆಕ್ರಮಿಸಿರುವ ಈ ʼಕಲಬೆರಕೆʼ ಈಗ ತಿರುಪತಿ ಲಡ್ಡು ಮೂಲಕ ಜನರ ಶ್ರದ್ಧಾಭಕ್ತಿಗೆ ನೇರವಾಗಿ ನಾಟಿರುವುದರಿಂದ ರಾಜಕೀಯ ಸ್ವರೂಪವನ್ನೂ ಪಡೆದಿದೆ. ಇತ್ತೀಚಿನ ಒಂದು ವರದಿಯಲ್ಲಿ ಕೆಲವು ಜೀವರಕ್ಷಕ ಔಷಧಿಗಳೂ, ಮಾತ್ರಗಳೂ ಸಹ ಕಲಬೆರಕೆಯಿಂದ ಕೂಡಿರುವುದಾಗಿ ಐವತ್ತಕ್ಕೂ ಹೆಚ್ಚು ಔಷಧಗಳನ್ನು ನಿಷೇಧಿಸಿರುವುದು ಸುದ್ದಿಯಾಗಿದೆ. ಅಷ್ಟೇ ಅಲ್ಲದೆ ಜನಸಾಮಾನ್ಯರು ಸೇವಿಸುವ ಅಡುಗೆ ಎಣ್ಣೆ, ತರಕಾರಿ ವಗೈರೆ, ಬೇಳೆಕಾಳುಗಳು, ದವಸ ಧಾನ್ಯಗಳೂ ಸಹ ಕಲಬೆರಕೆಗೆ ಒಳಗಾಗಿವೆ. ಮತ್ತೊಂದೆಡೆ ಕುಡಿಯುವ ನೀರಿನ ಅತಿಯಾದ ಕಲಬೆರಕೆಯಿಂದ ತಳಸಮಾಜದಲ್ಲಿ ರೋಗ ರುಜಿನಗಳು ಹೆಚ್ಚಾಗಿರುವುದನ್ನೂ ವಿಜ್ಞಾನಿಗಳು ಆಗಿಂದಾಗ್ಗೆ ಎಚ್ಚರಿಸುತ್ತಲೇ ಇದ್ದಾರೆ. ತಿರುಪತಿ ವಿವಾದದ ನಡುವೆಯೇ ಬಿಸಿಯೂಟ ಸೇವಿಸಿದ ಮಕ್ಕಳು ಅಸ್ವಸ್ಥರಾಗಿರುವ ಸುದ್ಧಿ ಕೇಳಿಬಂದಿದೆ.
ಬೌದ್ಧಿಕ ಮಾಲಿನ್ಯದ ಜಟಿಲ ಸಮಸ್ಯೆ
ಆದರೆ ಇಂತಹ ಸುದ್ದಿಗಳು ಸಾರ್ವಜನಿಕ ಚರ್ಚೆಗೊಳಗಾಗುವುದೇ ಇಲ್ಲ. ಏಕೆಂದರೆ ಸುದ್ದಿರೋಚಕತೆಯ ವ್ಯಸನಕ್ಕೆ ಬಲಿಯಾಗಿರುವ ವಿದ್ಯುನ್ಮಾನ ಮಾಧ್ಯಮಗಳಿಗೆ ಇದು ಟಿಆರ್‌ಪಿಗೆ ನೆರವಾಗುವ ಅಂಶವಲ್ಲ. ಹಾಗೆಯೇ ಈ ಕಲಬೆರಕೆಗಳಿಂದ ಎಷ್ಟೇ ಜೀವನಾಶವಾದರೂ ಜನಪ್ರತಿನಿಧಿಗಳ ಅಥವಾ ಅಧಿಕಾರ ರಾಜಕಾರಣದ ಪರಿಭಾಷೆಯಲ್ಲಿ ಈ ದುರಂತಗಳು “ಜನರ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದಿಲ್ಲ ”. ಹಾಗಾಗಿ ಈ ಕಲಬೆರಕೆಯೊಡನೆ ಹೊಂದಾಣಿಕೆ ಮಾಡಿಕೊಂಡು ಬದುಕುವುದನ್ನು ಸಾಮಾನ್ಯರೇ ರೂಢಿಸಿಕೊಳ್ಳುವಂತಾಗಿದೆ. ಇಲ್ಲಿ ಮಾಧ್ಯಮಗಳೂ ಸಹ ತಮ್ಮ ವೃತ್ತಿಧರ್ಮದಲ್ಲಿ ಕಲಬೆರಕೆಯ ಸಮಸ್ಯೆ ಎದುರಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಮಾರುಕಟ್ಟೆ ಲಾಲಸೆಗೆ ಒಲಗಾಗಿ ತಮ್ಮ ಸಾಮಾಜಿಕ ಜವಾಬ್ದಾರಿ ಮತ್ತು ನೈತಿಕತೆಯನ್ನೇ ಮರೆತಿರುವ ಮಾಧ್ಯಮಗಳನ್ನು ಯಾವ ಗಂಗೆಯೂ ಶುದ್ಧೀಕರಿಸಲಾಗುವುದಿಲ್ಲ.
ಈ ಭಾವನಾತ್ಮಕ ರಾಜಕಾರಣದ ಮತ್ತೊಂದು ವಿಕೃತ ಆಯಾಮವನ್ನು ಇತ್ತೀಚೆಗೆ ಕರ್ನಾಟಕದ ಸಾರ್ವಜನಿಕ-ರಾಜಕೀಯ ವಲಯವನ್ನು ಆವರಿಸಿರುವ ಅತ್ಯಾಚಾರ, ಮಹಿಳಾ ದೌರ್ಜನ್ಯ, ಭ್ರಷ್ಟಾಚಾರ, ಭೂ ಅತಿಕ್ರಮಣ ಮೊದಲಾದ ವಿವಾದಗಳಲ್ಲಿ ಗುರುತಿಸಬೇಕಿದೆ. ಶಾಸಕರೊಬ್ಬರು ತನ್ನ ಮೇಲೆ ವಿಧಾನಸೌಧದ ಕಚೇರಿಯ ಒಳಗೇ ಅತ್ಯಾಚಾರ ಎಸಗಿದ್ದರು ಎಂಬ ಮಹಿಳೆಯೊಬ್ಬರ ಆರೋಪ ಏನನ್ನು ತೋರಿಸುತ್ತದೆ ? ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಶುದ್ಧತೆಯನ್ನು ಬಿಂಬಿಸಬೇಕಾದ ಆಡಳಿತ ಕೇಂದ್ರವೊಂದು ಕಲಬೆರಕೆಯಾಗಿದೆ ಎಂದಲ್ಲವೇ ? ಇದು ಇಲ್ಲಿಗೇ ನಿಂತಿಲ್ಲ. ಆಧ್ಯಾತ್ಮಿಕ ಕೇಂದ್ರಗಳು, ಕಾವಿಧಾರಿಗಳ ಮಠಗಳು, ಆಶ್ರಮಗಳು, ಎಳೆಯ ಮಕ್ಕಳು ವ್ಯಾಸಂಗ ಮಾಡುವ ಶಾಲಾ ಕಾಲೇಜುಗಳು, ಬಡ ಮಕ್ಕಳು ಆಶ್ರಯಿಸುವ ಹಾಸ್ಟೆಲ್‌ಗಳು, ವಿಶ್ವವಿದ್ಯಾನಿಲಯಗಳು ಎಲ್ಲವೂ ಸಹ ಮಹಿಳಾ ದೌರ್ಜನ್ಯಗಳಿಗೆ ಮುಕ್ತ ಮೈದಾನಗಳಾಗಿ ಪರಿಣಮಿಸಿವೆ. ಇಲ್ಲಿ ಅತ್ಯಾಚಾರ-ದೌರ್ಜನ್ಯ ಎಸಗುತ್ತಿರುವವರು, ಸಮಾಜದ ಉನ್ನತೀಕರಣದ ಸೇತುವೆಗಳಾಗಬೇಕಾದ ಶಿಕ್ಷಕ ವರ್ಗಗಳು, ಅಧ್ಯಾತ್ಮದ ಪ್ರತಿನಿಧಿಗಳು ಇತ್ಯಾದಿ.
ಕರ್ನಾಟಕದ ರಾಜಕೀಯ-ಸಾಮಾಜಿಕ ಸಂಕಥವನ್ನು ಆಕ್ರಮಿಸಿರುವ ಪ್ರಜ್ವಲ್, ದರ್ಶನ್, ಮುನಿರತ್ನ ಪ್ರಕರಣಗಳು ನಮ್ಮ ಇಡೀ ಸಾಮಾಜಿಕ ವ್ಯವಸ್ಥೆಯೇ ಬೌದ್ಧಿಕ ಮಾಲಿನ್ಯದಿಂದ ಪೀಡಿತವಾಗಿರುವುದನ್ನು ಎತ್ತಿ ತೋರಿಸುತ್ತಿದೆ. ಆಂಗ್ಲಭಾಷೆಯಲ್ಲಿ ಅಧಿಕಾರ ಲಾಲಸೆಯಿಂದ ಬೇಲಿ ಜಿಗಿಯುವ ಪಕ್ಷಾಂತರಿಗಳನ್ನು ಬಣ್ಣಿಸಲು Turn Coats ಎಂಬ ಪದವನ್ನು ಬಳಸಲಾಗುತ್ತದೆ. ಅಂದರೆ ನಾವು ಬಳಸುವ ಭಾಷೆಯಲ್ಲೂ ಸಹ ಪಕ್ಷಾಂತರ ಮಾಡುವುದನ್ನು ಒಂದು ಅನೈತಿಕ ನಡೆ ಎಂದು ಬಣ್ಣಿಸಲು ನಾವು ಹಿಂಜರಿಯುತ್ತಿದ್ದೇವೆ. ಪಕ್ಷಾಂತರ ಎಂಬ ಅನೈತಿಕ ರಾಜಕೀಯ ನಡೆಯನ್ನು ಸಾರ್ವತ್ರೀಕರಿಸಿ ಸ್ವೀಕೃತ ಪ್ರಕ್ರಿಯೆಯನ್ನಾಗಿ ಮಾಡುವ ಮೂಲಕ, ಡಾ. ಬಿ.ಆರ್. ಅಂಬೇಡ್ಕರ್ ಪದೇಪದೇ ಹೇಳುತ್ತಿದ್ದ ಸಾಂವಿಧಾನಿಕ ನೈತಿಕತೆ ಎಂಬ ಉದಾತ್ತ ಚಿಂತನೆಯನ್ನೇ ಬಲಿಕೊಟ್ಟಿದ್ದೇವೆ.
ಇದಕ್ಕೆ ಕಾರಣ ನಮ್ಮ ಬೌದ್ಧಿಕತೆ ಮತ್ತು ಚಿಂತನಾ ಲಹರಿಗಳು ವಿಚಾರ ಮಾಲಿನ್ಯದಿಂದ ಕಲುಷಿತವಾಗಿರುವುದು. ಬೇಲಿ ಜಿಗಿಯುವ ರಾಜಕಾರಣಿಗಳನ್ನು, ಭ್ರಷ್ಟಾತಿಭ್ರಷ್ಟರನ್ನು, ಅಪರಾಧದ ಹಿನ್ನೆಲೆಯುಳ್ಳವರನ್ನು ಶಾಸನಸಭೆಗಳಲ್ಲಿ ಅಧಿಕೃತವಾಗಿ ಕೂರಿಸಿರುವ ಭಾರತದ ರಾಜಕೀಯ ವ್ಯವಸ್ಥೆ ಗಂಗಾಜಲ-ಗೋಮೂತ್ರ ಸಿಂಪಡನೆಯಿಂದ ಪರಿಶುದ್ಧವಾಗುವುದೇ ಆದರೆ ದೇಶದ ಎಲ್ಲ ವಿಧಾನಮಂಡಲಗಳನ್ನೂ, ಸಂಸತ್ ಭವನವನ್ನೂ ಒಂದೇ ಏಟಿನಲ್ಲಿ ಪರಿಶುದ್ಧಗೊಳಿಸಿಬಿಡಬಹುದು. ಆದರೆ ಇದು ಸಾಧ್ಯವಾದೀತೇ ? ನವ ಉದಾರವಾದದ ಕಾರ್ಪೋರೇಟ್ ಮಾರುಕಟ್ಟೆಯ ಪ್ರಭಾವ ಮತ್ತು ಜಾತಿ ಧರ್ಮಗಳ ಭಾವನಾತ್ಮಕ ರಾಜಕಾರಣಕ್ಕೆ ಸಿಲುಕಿ ಇಡೀ ನಾಗರಿಕ ಪ್ರಪಂಚವೇ ಇಂತಹ ಕಲಬೆರಕೆಗಳೊಡನೆ ಹೊಂಧಾಣಿಕೆ ಮಾಡಿಕೊಂಡು ಬದುಕುವ ಪರಿಸ್ಥಿತಿಯಲ್ಲಿ ನಾವಿದ್ದೇವೆ.
ಇಡೀ ಭಾರತೀಯ ಸಮಾಜವೇ ಗ್ರಾಹಕ ಸಂಸ್ಕೃತಿ ಮತ್ತು ಮಾರುಕಟ್ಟೆ ಮೌಲ್ಯಗಳತ್ತ ವಾಲುತ್ತಿರುವ ಅಪಾಯವನ್ನು ನಾವು ಎದುರಿಸುತ್ತಿದ್ದೇವೆ. ಹಾಗಾಗಿಯೇ ಮಾರುಕಟ್ಟೆಯ ಪರಿಭಾಷೆಯಲ್ಲಿ ಕಲಬೆರಕೆ ಎನ್ನುವುದನ್ನು ಸಾಂಸ್ಕೃತಿಕ ನೆಲೆಯಲ್ಲಿ ಬೌದ್ಧಿಕ ಮಾಲಿನ್ಯ ಎಂಬ ಅರ್ಥದಲ್ಲಿ ನಾವು ಮರುವ್ಯಾಖ್ಯಾನಿಸಬೇಕಿದೆ. ಸಮಾಜದ ಓರೆಕೋರೆಗಳನ್ನು ತಿದ್ದಬೇಕಾದ ಜವಾಬ್ದಾರಿಯನ್ನೇ ಮರೆತಿರುವ ಅಧಿಕಾರ ರಾಜಕಾರಣ, ಮಾಧ್ಯಮ, ಆಡಳಿತ ವ್ಯವಸ್ಥೆ ಹಾಗೂ ಜನಪ್ರತಿನಿಧಿಗಳು ತಾವು ಪೋಷಿಸುತ್ತಿರುವ Adulterated Society, ಅಂದರೆ ಕಲಬೆರಕೆಯ ಸಮಾಜದತ್ತ ಒಮ್ಮೆಯಾದರೂ ಕಣ್ಣು ಹಾಯಿಸಿರುವುದುಂಟೇ ? ತಿರುಪತಿಯ ಲಡ್ಡು ಇಂದಲ್ಲಾ ನಾಳೆ ಶುದ್ಧವಾಗಿ ಮಾರುಕಟ್ಟೆಗೆ ಬರುತ್ತದೆ. ಆದರೆ ದೇಶದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ, ಆಧ್ಯಾತ್ಮಿಕ ಹೀಗೆ ಎಲ್ಲ ವಲಯಗಳೂ ಅನೈತಿಕತೆ ಕೂಪಗಳಾಗಿ ಪರಿವರ್ತನೆಯಾಗುತ್ತಿರುವ ಹೊತ್ತಿನಲ್ಲಿ ಶುದ್ಧೀಕರಣ ಎಲ್ಲಿಂದ ಆರಂಭಿಸಬೇಕು ? ಶುದ್ಧೀಕರಣ ಆಗುವುದೇ ಆದರೆ ಈಗ ತುರ್ತಾಗಿ ಮೇಲಿನಿಂದ ಕೆಳಗಿನವರೆಗೆ ಇಡೀ ಆಡಳಿತ ವ್ಯವಸ್ಥೆಯ ಶುದ್ಧೀಕರಣ ಆಗಬೇಕಿದೆ. ಇದಕ್ಕೆ ಯಾವುದೇ ಧಾರ್ಮಿಕ ವಿಧಿವಿಧಾನಗಳು ಬೇಕಿಲ್ಲ. ಸಾಂವಿಧಾನಿಕ ಪ್ರಜ್ಞೆ ಮತ್ತು ಸಾಮಾಜಿಕ ನೈತಿಕತೆ-ಜವಾಬ್ದಾರಿ ಇದ್ದರೆ ಸಾಕು.
-೦-೦-೦-