ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡುವ ವಿಚಾರಕ್ಕೆ ಸಂಬಂಧಪಟ್ಟಹಾಗೆ ಭುಗಿಲೆದ್ದಿದ್ದ ಗೊಂದಲಗಳಿಗೆ ಖುದ್ದು ಸಿಎಂ ಸಿದ್ದು ತೆರೆ ಎಳೆದಿದ್ದಾರೆ. ಈ ಬಗ್ಗೆ ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಯಾರಿಗೂ ನನ್ನ ಹೆಸರಿಡಲು ನಾನು ಹೇಳಿಲ್ಲ ಎಂದಿದ್ದಾರೆ.
ನನಗೆ ಯಾವುದೇ ರಸ್ತೆಗೆ ಅಥವಾ ಕಟ್ಟಡಕ್ಕೆ ನಾನ್ ಹೆಸರಿಡುವ ಇಂಗಿತ ಇಲ್ಲ . ಈ ಬಗ್ಗೆ ನಾನು ಯಾರ್ ಬಳಿ ಚರ್ಚಿಸಿಯೂ ಇಲ್ಲ. ಸ್ವತಃ ಮೈಸೂರು ವಿಶ್ವ ವಿದ್ಯಾನಿಲಯ ಡಾಕ್ಟರೇಟ್ ಕೊಡಲು ಮುಂದಾದಾಗಲೇ ನಾನು ಬೇಡ ಎಂದಿದ್ದೆ ಅಂತ ಹೇಳಿದ್ದಾರೆ.
ನನ್ನ ಸುಧೀರ್ಘವಾದ 40 ವರ್ಷಗಳ ರಾಜಕಾರಣದಲ್ಲಿ ಎಂದಿಗೂ ಯಾರ ಬಳಿಯೂ ಇಂಥ ವಿಚಾರಗಳ ಬಗ್ಗೆ ನಾನು ಚರ್ಚೆ ಮಾಡಿಲ್ಲ. ಈಗಾಗಲೇ ಆ ರಸ್ತೆಗೆ ಬೇರೆ ಹೆಸರಿದ್ದಲ್ಲಿ, ಅದನ್ನು ಬದಲಾಯಿಸುವುದು ಬೇಡ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ಆರೋಗ್ಯ ಮಾರ್ಗ ನಾಮಕರಣಕ್ಕೆ ಬ್ರೇಕ್ ಹಾಕಿದ್ದಾರೆ.