ಕರೋನಾದಿಂದ ಉಂಟಾದ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಭಾರತದಲ್ಲಿ ಸುಮಾರು ಒಂದು ಲಕ್ಷದಷ್ಟು ಶಿಶುಮರಣ ಸಂಭವಿಸಿದೆ ಎಂದು ವಿಶ್ವ ಬ್ಯಾಂಕ್ ಸಂಶೋಧಕರು ಅಂದಾಜಿಸಿದ್ದಾರೆ. ಕೆಳ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಕಳೆದೊಂದು ವರ್ಷದಲ್ಲಿ ಸುಮಾರು ಎರಡು ಲಕ್ಷದ ಅರವತ್ತೇಳು ಸಾವಿರ ಶಿಶುಗಳು ಮರಣಕ್ಕೀಡಾಗಿವೆ. ಅದರಲ್ಲಿ ಮೂರನೇ ಒಂದರಷ್ಟು ಭಾರತದಲ್ಲೇ ಸಂಭವಿಸಿದೆ ಎಂದು ಸಂಶೋಧಕರ ತಂಡ ತಿಳಿಸಿರುವುದಾಗಿ ವರದಿಯಾಗಿದೆ.
ಒಟ್ಟು 128 ದೇಶಗಳಲ್ಲಿ 2,67,208 ಶಿಶುಗಳು ಕರೋನಾ ಸಾಂಕ್ರಾಮಿಕದಿಂದ ಉಂಟಾಗಿರುವ ಆರ್ಥಿಕ ಕುಸಿತದಿಂದಾಗಿ ಜೀವ ತೆತ್ತಿದೆ. ಇದು 2020 ರಲ್ಲಿ ನಿರೀಕ್ಷಿಸಲಾಗಿದ್ದ ಒಟ್ಟು ಸಾವಿನ ಸಂಖ್ಯೆಗಿಂತ 6.8% ಹೆಚ್ಚು ಎಂದು ವಿಶ್ವ ಬ್ಯಾಂಕ್ ಸಂಶೋಧಕರು ತಿಳಿಸಿದ್ದಾರೆ.

ಕರೊನಾ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಕಡೆಗೆ ಪ್ರಯತ್ನಗಳು ಉತ್ತಮಗೊಳಿಸುವ ಜೊತೆ ಜೊತೆಗೆ, ಜಾಗತಿಕ ಸಮುದಾಯದ ಸಾಮಾಜಿಕ ಸುರಕ್ಷತಾ ವ್ಯವಸ್ಥೆಯನ್ನು ಬಲಪಡಿಸಬೇಕು, ಹಾಗೂ ಅಗತ್ಯ ಆರೋಗ್ಯ ಸೇವೆಯ ನಿರಂತರ ಲಭ್ಯವಾಗುವುದನ್ನು ಖಾತರಿಪಡಿಸಬೇಕು” ಎಂದು ಸಂಶೋಧಕರು ಹೇಳಿದ್ದಾರೆ.
ಕರೊನಾ ಸಾಂಕ್ರಾಮಿಕದ ಪ್ರಾರಂಭದ ಮೊದಲ ಆರು ತಿಂಗಳಲ್ಲಿ ಪ್ರಪಂಚದಲ್ಲಿ 2.5 ಲಕ್ಷಕ್ಕೂ ಅಧಿಕ ಮಕ್ಕಳ ಸಾವು ಆಗಬಹುದೆಂದು ಊಹಿಸಲಾಗಿತ್ತು. ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟವಾದ ಇತ್ತೀಚಿನ ವಿಶ್ಲೇಷಣೆಯ ಪ್ರಕಾರ ಅಧಿಕ ಶಿಶು ಮರಣದ ಮೂರನೇ ಒಂದು ಭಾಗಕ್ಕಿಂತ ಹೆಚ್ಚು (99, 642) ಭಾರತದಲ್ಲಿ ಸಂಭವಿಸಿದೆ ಎಂದು ಅಂದಾಜಿಸಿದೆ.
ಭಾರತದಲ್ಲಿ ವಾರ್ಷಿಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನನಗಳು ಆಗುತ್ತವೆ. ಆದರೆ ಅದಕ್ಕೆ ಅನುಗುಣವಾಗಿ ಮೂಲ ಸೌಕರ್ಯಗಳು ಇಲ್ಲ. ನಿರ್ದಿಷ್ಟವಾಗಿ ಯೋಜಿತ ಆರ್ಥಿಕ ಕೊರತೆ -17.3% ಇರುವುದಾಗಿ ವರದಿ ಹೇಳಿದೆ.