ಸಮಾಜ ವಿಜ್ಞಾನಗಳ ಶಾಲಾ ಪಠ್ಯಕ್ರಮವನ್ನು ಪರಿಷ್ಕರಿಸಲು ಎನ್‌ಸಿಇಆರ್‌ಟಿ ರಚಿಸಿರುವ ಸಮಿತಿಯು ರಾಮಾಯಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳನ್ನು ಪಠ್ಯಪುಸ್ತಕಗಳಲ್ಲಿ ಸೇರಿಸಲು ಶಿಫಾರಸು ಮಾಡಿದೆ.
ಕಳೆದ ವರ್ಷ ರಚನೆಯಾದ ಏಳು ಸದಸ್ಯರ ಸಮಿತಿಯು ಸಮಾಜ ವಿಜ್ಞಾನದ ಪಠ್ಯಗಳಿಗೆ ಹಲವಾರು ಶಿಫಾರಸುಗಳನ್ನು ಮಾಡಿದೆ ಮಾತ್ರವಲ್ಲದೆ, ತರಗತಿಯ ಗೋಡೆಗಳಲ್ಲಿ ಸಂವಿಧಾನದ ಪೀಠಿಕೆ ಅಳವಡಿಸಲು ಶಿಫಾರಸು ಮಾಡಿದೆ7ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ರಾಮಾಯಣ ಮತ್ತು ಮಹಾಭಾರತವನ್ನು ಕಲಿಸುವುದು ಮಹತ್ವದ್ದು ಎಂದು ಸಮಿತಿಯ ಅಧ್ಯಕ್ಷ ಸಿಐ ಇಸಾಕ್ ಹೇಳಿದ್ದಾರೆ.
‘‘ಸಮಾಜ ವಿಜ್ಞಾನ ಪಠ್ಯಕ್ರಮದಲ್ಲಿ ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವಂತೆ ಸಮಿತಿ ಒತ್ತಾಯಿಸಿದೆ. ಇದರಿಂದ ತಮ್ಮ ಎಳೆಯ ಪ್ರಾಯದಲ್ಲೇ ವಿದ್ಯಾರ್ಥಿಗಳು ಸ್ವಾಭಿಮಾನ, ದೇಶಭಕ್ತಿ ಮತ್ತು ತಮ್ಮ ರಾಷ್ಟ್ರಕ್ಕಾಗಿ ಹೆಮ್ಮೆಯನ್ನು ಬೆಳೆಸುತ್ತಾರೆ ಎಂದು ನಾವು ಭಾವಿಸುತ್ತೇವೆ” ಎಂದು ಅವರು ಹೇಳಿದ್ದಾರೆ.ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ದೇಶವನ್ನು ತೊರೆದು ಇತರ ದೇಶಗಳಲ್ಲಿ ಪೌರತ್ವವನ್ನು ಬಯಸುತ್ತಾರೆ. ಏಕೆಂದರೆ ಅವರಲ್ಲಿ ದೇಶಭಕ್ತಿಯ ಕೊರತೆಯಿದೆ. ಆದ್ದರಿಂದ, ಅವರು ತಮ್ಮ ಬೇರುಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವರ ದೇಶ ಮತ್ತು ಅವರ ಸಂಸ್ಕೃತಿಯ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಳ್ಳುವುದು ಮುಖ್ಯವಾಗಿದೆ ಎಂದವರು ಹೇಳಿದ್ದಾರೆ.
“ಕೆಲವು ಶಿಕ್ಷಣ ಮಂಡಳಿಗಳು ಪ್ರಸ್ತುತ ವಿದ್ಯಾರ್ಥಿಗಳಿಗೆ ರಾಮಾಯಣವನ್ನು ಕಲಿಸುತ್ತಿದ್ದರೂ, ಅವರು ಅದನ್ನು ಪುರಾಣವೆಂದು ಕಲಿಸುತ್ತಾರೆ. ಪುರಾಣ ಎಂದರೇನು? ವಿದ್ಯಾರ್ಥಿಗಳಿಗೆ ಈ ಮಹಾಕಾವ್ಯಗಳನ್ನು ಕಲಿಸದಿದ್ದರೆ ಶಿಕ್ಷಣ ವ್ಯವಸ್ಥೆಗೆ ಯಾವುದೇ ಉದ್ದೇಶವಿಲ್ಲದಂತಾಗುತ್ತದೆ ಮತ್ತು ಅದು ರಾಷ್ಟ್ರ ಸೇವೆಯಾಗುವುದಿಲ್ಲ”ಎಂದು ಅವರು ಹೇಳಿದರು.3 ರಿಂದ 12 ನೇ ತರಗತಿಯ ಪಠ್ಯಪುಸ್ತಕಗಳ ಪಠ್ಯಕ್ರಮದಲ್ಲಿ ಪ್ರಾಚೀನ ಇತಿಹಾಸದ ಬದಲಿಗೆ ‘ಶಾಸ್ತ್ರೀಯ ಇತಿಹಾಸ’ವನ್ನು ಪರಿಚಯಿಸಲು, ಪಠ್ಯಪುಸ್ತಕಗಳಲ್ಲಿ ‘ಇಂಡಿಯಾʼ ಹೆಸರನ್ನು ‘ಭಾರತ್’ ಎಂದು ಬದಲಿಸಲು ಸಮಿತಿಯು ಶಿಫಾರಸು ಮಾಡಿದೆ ಎಂದು ಐಸಾಕ್ ಈ ಹಿಂದೆ ಹೇಳಿದ್ದರು.
“ರಾಮಾಯಣ ಮತ್ತು ಮಹಾಭಾರತವನ್ನು ಪಠ್ಯಕ್ರಮದಲ್ಲಿ ಸೇರಿಸಲು ಶಿಫಾರಸು ಮಾಡಲಾಗಿತ್ತು. ಸಮಿತಿಯು ಯಾವುದೇ ಹೊಸ ಶಿಫಾರಸುಗಳನ್ನು ಮಾಡಿಲ್ಲ” ಎಂದು ಅವರು ಹೇಳಿದರು.
ತರಗತಿಯ ಗೋಡೆಗಳ ಮೇಲೆ ಸಂವಿಧಾನದ ಪೀಠಿಕೆಯನ್ನು ಬರೆಯಲು ಶಿಫಾರಸು ಮಾಡುವ ಹಿಂದಿನ ಕಲ್ಪನೆಯನ್ನು ವಿವರಿಸಿದ ಐಸಾಕ್, “ನಮ್ಮ ಪೀಠಿಕೆಯು ಉದಾತ್ತವಾಗಿದೆ. ಇದು ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆ ಸೇರಿದಂತೆ ಸಾಮಾಜಿಕ ಮೌಲ್ಯಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತದೆ. ಆದ್ದರಿಂದ, ತರಗತಿಯ ಗೋಡೆಗಳ ಮೇಲೆ ಬರೆಯಲು ನಾವು ಶಿಫಾರಸು ಮಾಡಿದ್ದೇವೆ ಇದರಿಂದ ಪ್ರತಿಯೊಬ್ಬರೂ ಸಂವಿಧಾನವನ್ನು ಅರ್ಥಮಾಡಿಕೊಳ್ಳಬಹುದು ಮತ್ತು ಕಲಿಯಬಹುದು, ”ಎಂದು ಹೇಳಿದ್ದಾರೆ.NCERT ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಕ್ಕೆ ಅನುಗುಣವಾಗಿ ಶಾಲಾ ಪಠ್ಯಕ್ರಮವನ್ನು ಪರಿಷ್ಕರಿಸುತ್ತಿದೆ. ಹೊಸ NCERT ಪಠ್ಯಪುಸ್ತಕಗಳು ಮುಂದಿನ ಶೈಕ್ಷಣಿಕ ಅವಧಿಗೆ ಸಿದ್ಧವಾಗುವ ಸಾಧ್ಯತೆಯಿದೆ.