ಇತ್ತೀಚಿನ ದಿನಗಳಲ್ಲಿ ಎನ್ಸಿಬಿ ಮತ್ತು ಇಡಿ ಸಂಸ್ಥೆಗಳು ಸಖತ್ ಆಕ್ಟೀವ್ ಆಗಿ ಕೆಲಸ ಮಾಡುತ್ತಿವೆ. ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳಿಗೆ ಇಡಿ ಚಾಟಿ ಬೀಸುತ್ತಿದೆ. ಇನ್ನೊಂದೆಡೆ ಮಾದಕ ಜಾಲಗಳನ್ನ ಎನ್ಸಿಬಿ ಬೇಧಿಸುತ್ತಿದೆ. ಈಗ ರಾಜ್ಯ ರಾಜಕಾರಣದಲ್ಲಿ ಭ್ರಷ್ಟರ ಬೇಟೆಗೆ ಈ ಎರಡು ಸಂಸ್ಥೆಗಳು ಮುಂದಾಗಿವೆ.
ರಾಜ್ಯ ರಾಜಕಾರಣದಲ್ಲಿ ಸುಂಟರಗಾಳಿಯನ್ನ ಭ್ರಷ್ಟರ ಮೇಲೆ ದಾಳಿಗೆ ಕೇಂದ್ರದ ಎರಡು ತನಿಖಾ ಸಂಸ್ಥೆಗಳಾದ ಇಡಿ ಮತ್ತು ಎನ್ಸಿಬಿ ಭಾರೀ ಸಿದ್ಧತೆ ನಡೆಸಿವೆ. ಕೇಂದ್ರ ಗುಪ್ತಚರ ಇಲಾಖೆಯಿಂದ ಲಭ್ಯವಾದ ಮಾಹಿತಿ ಪ್ರಕಾರ ರಾಜ್ಯದ ಇಬ್ಬರು ರಾಜಕಾರಣಿಗಳಿಗೆ ದಾಳಿ ಖಾಯಂ ಆಗಿದೆ. ಅಲ್ಲದೇ ರಾಜ್ಯದಲ್ಲಿ ಒಟ್ಟಿಗೆ ಇಡಿ, ಎನ್ಸಿಬಿ ದಾಳಿ ಮಾಡಲಿದೆ. ಹೀಗಾಗಿ ಇಬ್ಬರು ರಾಜಕಾರಣಿಗಳ ಎದೆಯಲ್ಲಿ ಆತಂಕ ಶುರುವಾಗಿದೆ.
ಇಬ್ಬರು ರಾಜ್ಯ ನಾಯಕರ ಮೇಲೆ ಇಡಿ ಮತ್ತು ಎನ್ಸಿಬಿ ದಾಳಿ ನಡೆಸುವ ಬಗ್ಗೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ವಿಧಾನಸೌಧ ಮತ್ತು ಸಿಸಿಬಿ ಪೊಲೀಸ್ ಇಲಾಖೆಯಲ್ಲಿ ಯಾರು ಆ ಇಬ್ಬರು ರಾಜಕಾರಣಿಗಳು ಎಂಬ ಬಗ್ಗೆ ಚರ್ಚೆಯೂ ನಡೆಯುತ್ತಿದೆ. ಅದರಲ್ಲಿ ಬಿಟ್ ಕಾಯಿನ್ನಲ್ಲಿ ಹೂಡಿಕೆ ಮಾಡಿಸುತ್ತಿರುವ ಒಬ್ಬ ರಾಜಕಾರಣಿ ಶಿಷ್ಯರು, ಮತ್ತೊಬ್ಬರು ಡ್ರಗ್ ವ್ಯವಹಾರದಲ್ಲಿ ಪಾಲುದಾರನಾಗಿರುವ ಇನ್ನೊಬ್ಬರ ಶಿಷ್ಯರ ಮನೆ ಮೇಲೆ ದಾಳಿ ಎಂಬುದು ಸದ್ಯಕ್ಕೆ ಸಿಕ್ಕ ಮಾಹಿತಿ.
ಇಬ್ಬರು ಸೇರಿ ಕ್ರಿಪ್ಟೋ ಕರೆನ್ಸಿ ಬಳಸಿ ಡ್ರಗ್ ವ್ಯವಹಾರ ಮಾಡಿದ್ದಾರೆ ಎಂಬ ಆರೋಪದಡಿ ರೇಡ್ ನಡೆಯೋ ಸಾಧ್ಯತೆ ಇದೆ. ಅಲ್ಲದೇ ಸೈಬರ್ ಕ್ರೈಂ ಮಾಡಲು ಸಹ ಬಿಟ್ ಕಾಯಿನ್ ಬಳಕೆ ಮಾಡುತ್ತಿರುವ ಶಂಕೆ ಕೂಡಾ ವ್ಯಕ್ತವಾಗಿದೆ. ಜೊತೆಗೆ ಆರೋಪಿಗಳ ರಕ್ಷಣೆಗೆ ಈ ನಾಯಕರು ಭಾರೀ ಕಿಕ್ ಬ್ಯಾಕ್ ಪಡೆದಿರುವ ಆರೋಪವೂ ಕೇಳಿಬಂದಿದೆ. ಅಲ್ಲದೇ ಈಗಾಗಲೇ ಕಿಕ್ ಬ್ಯಾಕ್ ಪಡೆದು ಕೇಸ್ನ ಮುಚ್ಚಿಸಿದ್ರಂತೆ. ಆದ್ರೀಗ ಕೇಂದ್ರ ಗುಪ್ತಚರ ಇಲಾಖೆ ಮತ್ತು ಸಿಬಿಐ ಈ ಬಗ್ಗೆ ಮಾಹಿತಿ ಕಲೆ ಹಾಕಿವೆಯಂತೆ.
ಈಗಾಗಲೇ ಎನ್ಸಿಬಿ ಮತ್ತು ಇಡಿ ಜೊತೆ ಗುಪ್ತಚರ ಇಲಾಖೆ ಮತ್ತು ಸಿಬಿಐ ಸಂಸ್ಥೆಗಳು ಮಾಹಿತಿಯನ್ನ ಹಂಚಿಕೊಂಡಿವೆ ಎನ್ನಲಾಗಿದೆ. ಆ ಮಾಹಿತಿ ಮೇರೆಗೆ ಸದ್ಯದಲ್ಲೇ ದಾಳಿ ಮಾಡೋದು ಇಡಿ ಎನ್ಸಿಬಿ ಚಿಂತನೆಯಾಗಿದೆ. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆ ತರುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು, ಈ ದಾಳಿಯಿಂದ ತನಿಖಾ ಸಂಸ್ಥೆಯ ಕೆಲ ಅಧಿಕಾರಿಗಳ ತಲೆದಂಡವಾಗುವ ಸಾಧ್ಯತೆ ಇದೆ. ಇಬ್ಬರು ನಾಯಕರ ಜೊತೆ ಸೇರಿ ಈ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರಂತೆ. ಅಲ್ಲದೇ ಆರೋಪಿಗಳ ರಕ್ಷಣೆ ಮಾಡಲು ಹೋಗಿ ಈಗ ತಲೆನೋವು ತಂದುಕೊಂಡಿದ್ದಾರೆ. ಇಬ್ಬರು ನಾಯಕರಿಗೆ ಕಿಕ್ ಬ್ಯಾಕ್ ಕೊಡಿಸಿ ಅದರಲ್ಲಿ ತಾವು ಶೇರ್ ತೆಗೆದುಕೊಂಡಿದ್ದಾರೆ. ಪರಿಣಾಮ ಅವರ ಜೊತೆ ತಮಗೂ ಸಂಕಷ್ಟ ಅಂತಾ ತನಿಖಾಧಿಕಾರಿಗಳು ಪರದಾಡುತ್ತಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆಯ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಪ್ರಧಾನಮಂತ್ರಿ ಕಚೇರಿಯಿಂದ ರಾಜ್ಯದ ಡಿಜಿ, ಐಜಿಪಿ ಕಚೇರಿಗೆ ರಾಜ್ಯದಲ್ಲಿ ನಡೆದ ಎರಡು ಪ್ರಮುಖ ಕೇಸ್ಗಳ ವಿವರ ಕೇಳಿ ಪತ್ರ ಬಂದಿದೆಯಂತೆ. ಡ್ರಗ್ ಮತ್ತು ಬಿಟ್ ಕಾಯಿನ್ ವ್ಯವಹಾರದ ಆ ಎರಡು ಕೇಸ್ಗಳು ಯಾವ ಕಾರಣಕ್ಕೆ ಕೇಸ್ ಕ್ಲೋಸ್ ಆಯ್ತು ಅಂತಾ ಪಿಎಂ ಕಚೇರಿ ಕೇಳಿದೆಯಂತೆ.
ಕೇಂದ್ರದ ತನಿಖಾ ಸಂಸ್ಥೆಗಳು ಕೊಟ್ಟ ಸುಳಿವಿನ ಮೇರೆಗೆ ಪಿಎಂ ಕಚೇರಿ ಈ ರೀತಿ ಪ್ರಶ್ನಿಸಿದೆ ಎನ್ನಲಾಗಿದೆ. ಇನ್ನು ಎರಡು ಕೇಸ್ಗಳನ್ನ ಕ್ಲೋಸ್ ಮಾಡಲು ಕ್ರಿಪ್ಟೋ ಕರೆನ್ಸಿಯ ಲಂಚ ಪಡೆದಿರೋ ಆರೋಪವಿದೆ. ಅಲ್ಲದೇ ಲಂಚ ಪಡೆದು ರಾಜ್ಯದ ನಾಯಕರು ಕೇಸ್ಗಳನ್ನ ಕ್ಲೋಸ್ ಮಾಡಿಸಿದ್ದಾರೆ ಎನ್ನಲಾಗಿದೆ.
ಸದ್ಯ ಪತ್ರಕ್ಕೂ ಈಗಾಗಲೇ ಡಿಜಿ-ಐಜಿಪಿ ಕಚೇಯಿಂದ ಉತ್ತರವೂ ಸಹ ರವಾನೆಯಾಗಿದೆ. ಅಲ್ಲದೇ ಕ್ಲೋಸ್ ಆದ ಕೇಸ್ ರಿ ಓಪನ್ ಆಗುವ ಜೊತೆಗೆ ಕೆಲ ಅಧಿಕಾರಿಗಳಿಗೆ ಇದು ಮುಳುವಾಗೋದು ಖಚಿತವಾಗಿದೆ. ಇನ್ನು ಈ ಎರಡು ಕೇಸ್ಗಳು ರಾಜ್ಯದಲ್ಲಿ ಭಾರಿ ಸಂಚಲನವನ್ನೇ ಸೃಷ್ಟಿಸಲಿದೆಯಂತೆ. ಜೊತೆಗೆ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರೋ ಸ್ಕ್ಯಾಮ್ಗಳು, ಭ್ರಷ್ಟ ಕಳ್ಳಾಟಗಳು ಬಯಲಿಗೆ ಬರೋದು ಖಚಿತವಾಗಿದೆ.