ಸಮುದ್ರದ ಮಧ್ಯೆ ನಡೆಯುತ್ತಿದ್ದ ರೇವ್ ಪಾರ್ಟಿಯನ್ನ ಭೇದಿಸುವಲ್ಲಿ ಎನ್‌ಸಿಬಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಜೊತೆಗೆ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿ ಮೂವರು ಆರೋಪಿಗಳನ್ನು ಬಲೆಗೆ ಬೀಳಿಸಿದ್ದಾರೆ. ಹಾಗಾದ್ರೆ, ಎನ್‌ಸಿಬಿಗೆ ಈ ಹೈಪ್ರೊಫೈಲ್ ಪಾರ್ಟಿಯ ಮಾಹಿತಿ ಸಿಕ್ಕಿದ್ದೇಗೆ? ಜೊತೆಗೆ ಆರೋಪಿಗಳಿಗೆ ಅಧಿಕಾರಿಗಳು ಖೆಡ್ಡಾ ತೋಡಿದ್ದೇಗೆ? ಇಲ್ಲಿದೆ ಸಂಪೂರ್ಣ ವಿವರ.
ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿ 8 ಮಂದಿ ಆರೋಪಿಗಳನ್ನ ಎನ್‌ಸಿಬಿ ಬಲೆಗೆ ಬೀಳಿಸಿದ್ದೇ ಬಲು ರೋಚಕ. ರೇವ್ ಪಾರ್ಟಿ ಆಯೋಜಕರು ಚಾಪೆ ಕೆಳಗೆ ತೂರಿದರೆ, ಎನ್‌ಸಿಬಿ ಅಧಿಕಾರಿಗಳು ರಂಗೋಳಿ ಕೆಳಗೆ ತೂರಿ ಮಾದಕ ಜಾಲವನ್ನ ಬೇಟೆಯಾಡಿದ್ದಾರೆ. ಸಮುದ್ರದ ಮಧ್ಯೆ ನಡೆಯುತ್ತಿದ್ದ ರೇವ್ ಪಾರ್ಟಿಯನ್ನ ಪತ್ತೆ ಹಚ್ಚಿ, ಇಡೀ ಬಾಲಿವುಡ್ ಮಂದಿಗೆ ಆಘಾತ ನೀಡಿದ್ದಾರೆ.
ಐಷಾರಾಮಿ ಕ್ರೂಸ್‌ನಲ್ಲಿ ರೇವ್ ಪಾರ್ಟಿ ನಡೆಯಬಹುದು ಎಂದು 2 ವಾರಗಳಿಂದಲೇ ಎನ್‌ಸಿಬಿ ಅಧಿಕಾರಿಗಲು ಹದ್ದಿನ ಕಣ್ಣಿಟ್ಟಿದ್ದರು. ಜೊತೆಗೆ ಮುಂಬೈನಿಂದ ಗೋವಾಕ್ಕೆ ತೆರಳುತ್ತಿದ್ದ ಕ್ರೂಸ್ ಶಿಪ್‌ನಲ್ಲಿ ಗಾಂಧಿ ಜಯಂತಿ ದಿನದಂದೇ ಪಾರ್ಟಿ ನಡೆಸಲು ತೀರ್ಮಾನ ಮಾಡಲಾಗಿದೆ ಎಂಬ ಮಾಹಿತಿಯನ್ನ ಈ ಮೊದಲೇ ಎನ್‌ಸಿಬಿ ಅಧಿಕಾರಿಗಳು ಕಲೆ ಹಾಕಿದ್ದರು. ಇದೇ ಖಚಿತ ಮಾಹಿತಿ ಆಧಾರದ ಮೇಲೆ ಎನ್‌ಸಿಬಿ ಹಡಗಿನ ಮೇಲೆ ದಾಳಿ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಐಷಾರಾಮಿ ಕ್ರೂಸ್‌ನಲ್ಲಿ ಹಲವು ಯುವಕ ಯುವತಿಯರು ಇದ್ದರು. ಅದರಲ್ಲಿ ಒಬ್ಬರು ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ಕೂಡ ದಾಖಲಾಗಿದೆ ಎಂದು ಎನ್‌ಸಿಬಿ ಮುಖ್ಯಸ್ಥ ಎಸ್.ಎನ್. ಪ್ರಧಾನ್ ತಿಳಿಸಿದ್ದಾರೆ.
ಡ್ರಗ್ ಕೇಸ್ ಪ್ರಕರಣದಲ್ಲಿ ಬಾಲಿವುಡ್ ಲಿಂಕ್ ಇರುವುದು ಖಚಿತವಾಗಿದೆ. ತನಿಖೆಯಲ್ಲಿ ಎಲ್ಲದರ ಬಗ್ಗೆ ಇಂಚಿಂಚೂ ಮಾಹಿತಿಯನ್ನ ಎನ್‌ಸಿಬಿ ಕಲೆ ಹಾಕಿದೆ. ಸದ್ಯ, ಆರ್ಯನ್ ಖಾನ್, ನಟ ಅರ್ಬಾಜ್ ಮರ್ಚೆಂಟ್, ಮುನ್ಮುನ್ ಧಮೇಚಾ, ನೂಪುರ್ ಸಾರಿಕಾ, ಇಸ್ಮೀತ್ ಸಿಂಗ್, ಮೋಹಕ್ ಜಸ್ವಾಲ್, ವಿಕ್ರಾಂತ್ ಚೋಕರ್, ಗೋಮಿತ್ ಚೋಪ್ರಾ, ಈ ಎಂಟು ಜನರನ್ನು ಶಿಪ್ ಪಾರ್ಟಿಯಲ್ಲಿಯೇ ಬಂಧಿಸಲಾಗಿದೆ.
ಪ್ರಕರಣದಲ್ಲಿ ಈಗಾಗಲೇ ಎಫ್ಐಆರ್ ಕೂಡ ದಾಖಲಿಸಲಾಗಿದೆ. ಜೊತೆಗೆ ವಿಚಾರಣೆಗೆ ಹಾಜರಾಗುವಂತೆ ಕ್ರೂಸ್ ಮಾಲೀಕರಿಗೆ ನೋಟಿಸ್ ನೀಡಲಾಗಿದೆ ಎಂದು ಎನ್‌ಸಿಬಿ ಮುಖ್ಯಸ್ಥ ಎಸ್.ಎನ್. ಪ್ರಧಾನ್ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನಲ್ಲಿ ನಿಷೇಧಿತ ಔಷಧಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಇನ್ನೂ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದೆ ಎಂದು ಎನ್ಸಿಬಿ ಅಧಿಕಾರಿಯೊಬ್ಬರು ಅಕ್ಟೋಬರ್ 5, 2021 ಮಂಗಳವಾರ ತಿಳಿಸಿದ್ದಾರೆ.
ನಟ ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್ ಡ್ರಗ್ಸ್ ದಂಧೆ ಮೇಲೆ ಎನ್‌ಸಿಬಿ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ರು. ಹೀಗಾಗಿ ಎನ್‌ಸಿಬಿ ಫುಲ್ ಅಲರ್ಟ್ ಆಗಿ ಈ ಪ್ರಕರಣವನ್ನ ಭೇದಿಸಿದೆ. ಜೊತೆಗೆ ಈ ರೇವ್ ಪಾರ್ಟಿ ಮೂಲಕ ಬಾಲಿವುಡ್ ಮಂದಿ ಮೇಲೆ ಮತ್ತಷ್ಟು ಅನುಮಾನಗಳು ಹೆಚ್ಚಾಗಿವೆ. ಜೊತೆಗೆ ಮತ್ತಷ್ಟು ನಟ ನಟಿಯರು ಈ ಕೇಸ್‌ನಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಕಾರ್ಡೆಲಿಯಾ ಕ್ರೂಸ್‌ನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣದ ಹಿಂದೆ ಬಾಲಿವುಡ್ ನಟ, ನಟಿಯರ ಲಿಂಕ್ ಇರುವ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ. ಅಲ್ಲದೇ ಪಾರ್ಟಿಯಲ್ಲಿದ್ದವರು ಹಲವರು ನಟ, ನಟಿಯರ ಫ್ರೆಂಡ್ಸ್ ಎಂಬ ಮಾಹಿತಿ ಎನ್‌ಸಿಬಿ ದೊರೆತಿದೆ. ಜೊತೆಗೆ ಇದಕ್ಕೂ ಮೊದಲು ಇವರೆಲ್ಲಾ ಹಲವು ಪಾರ್ಟಿಗಳನ್ನ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಆ ಪಾರ್ಟಿಯಲ್ಲಿ ನಟ, ನಟಿಯರು ಭಾಗಿಯಾಗಿರುವ ಶಂಕೆ ಮೂಡಿದ್ದು, ಈಗಿರುವ ಕೆಲ ಡ್ರಗ್ಸ್ ಕೇಸ್‌ಗಳನ್ನು ರೀ ಓಪನ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಆರ್ಯನ್ ಖಾನ್ ಬಂಧನದ ಬಳಿಕ ಮತ್ತಷ್ಟು ಬಾಲಿವುಡ್ ಮಂದಿಗೆ ಆಘಾತ ಎದುರಾಗಿದೆ. ಇವರನ್ನೆಲ್ಲಾ ಬಲೆಗೆ ಬೀಳಿಸಲು ಎನ್‌ಸಿಬಿ ಮತ್ಯಾವ ತಂತ್ರ ಹೆಣೆಯಲಿದೆ ಎಂದು ಕಾದು ನೋಡಬೇಕಿದೆ.