ಕರ್ನಾಟಕದ ಶಾಲೆಗಳ ಹಿಜಾಬ್ ವಿವಾದವನ್ನು ಕೋಮುವಾದವನ್ನಾಗಿ ತಿರುಚಿದ ಕಾರ್ಯಕ್ರಮಕ್ಕಾಗಿ ಮುಖೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದ ನ್ಯೂಸ್ 18 ಸುದ್ದಿ ವಾಹಿನಿಗೆ ವಾರ್ತಾ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ (ಎನ್‌ಬಿಡಿಎಸ್‌ಎ) 50,000 ರೂ ದಂಡ ವಿಧಿಸಿ ಆದೇಶಿಸಿದೆ.
ಚಾನಲ್‌ನ ಆಂಕರ್ ಅಮನ್ ಚೋಪ್ರಾ ಅವರು ಹಿಜಾಬ್ ಅನ್ನು ಬೆಂಬಲಿಸುವ ಪ್ಯಾನೆಲಿಸ್ಟ್‌ಗಳನ್ನು ಅಲ್-ಖೈದಾಗೆ ಹೋಲಿಸುವ ಮೂಲಕ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು NBDSA ಅಭಿಪ್ರಾಯ ಪಟ್ಟಿದೆ.
ಕರ್ನಾಟಕ ಹೈಕೋರ್ಟ್ ತೀರ್ಪು ನಂತರ ಈ ವಿಷಯದ ಬಗ್ಗೆ ಚರ್ಚೆ ನಡೆಸಲು ಪ್ರಸಾರಕರು ಅರ್ಹರಾಗಿದ್ದರೂ, ಕಾರ್ಯಕ್ರಮಕ್ಕೆ ನೀಡಿದ ನಿರೂಪಣೆ ಮತ್ತು ತಿರುಚುವಿಕೆಯಲ್ಲಿ ಸಮಸ್ಯೆಯಿದೆ ಎಂದು ನ್ಯಾಯಮೂರ್ತಿ ಎಕೆ ಸಿಕ್ರಿ ಅವರು ಶುಕ್ರವಾರ ಅಂಗೀಕರಿಸಿದ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.
ಶಾಲೆಗಳಲ್ಲಿ ಹಿಜಾಬ್ ಧರಿಸುವುದನ್ನು ಅನುಮತಿಸಬೇಕೇ ಅಥವಾ ಬೇಡವೇ ಎಂಬ ಚರ್ಚೆಯ ಸಂದರ್ಭದಲ್ಲಿ, ಅದನ್ನು ಕೋಮು ವಿಷಯವಾಗಿ ಪರಿವರ್ತಿಸುವ ಮೂಲಕ ಚರ್ಚೆಯನ್ನು ತಿರುಚುವ ಯಾವುದೇ ಅಗತ್ಯವಿಲ್ಲ ಎಂದು ಎನ್‌ಬಿಡಿಎಸ್‌ಎ ಗಮನಿಸಿದೆ.

ಏಪ್ರಿಲ್ 6 ರಂದು ನ್ಯೂಸ್ 18 ನಲ್ಲಿ ಪ್ರಸಾರವಾದ ಕಾರ್ಯಕ್ರಮಕ್ಕೆ ಪ್ರತಿಕ್ರಿಯೆಯಾಗಿ ಟೆಕ್ ಎಥಿಕ್ಸ್ ಮತ್ತು ಸೇಫ್ಟಿ ವೃತ್ತಿಪರ ಇಂದ್ರಜೀತ್ ಘೋರ್ಪಡೆ ಸಲ್ಲಿಸಿದ ದೂರಿನ ಮೇರೆಗೆ ಈ ಆದೇಶವನ್ನು ನೀಡಲಾಗಿದೆ, ಇದರಲ್ಲಿ ಆಂಕರ್ ಅಮನ್ ಚೋಪ್ರಾ ಅವರು ಮುಸ್ಲಿಂ ವಿದ್ಯಾರ್ಥಿನಿಯರನ್ನು “ಹಿಜಾಬಿ ಗ್ಯಾಂಗ್”, “ಹಿಜಾಬ್ವಾಲಿ ಗಜ್ವಾ” ಎಂದು ಉಲ್ಲೇಖಿಸಿದ್ದಾರು. ಇದರ ವಿರುದ್ಧ ದೂರು ದಾಖಲಿಸಲಾಗಿತ್ತು.
ಚೋಪ್ರಾ ಮಾರ್ಗಸೂಚಿಗಳು ಮತ್ತು ನೈತಿಕ ಮಾನದಂಡಗಳನ್ನು ಉಲ್ಲಂಘಿಸಿದ್ದಲ್ಲದೆ, (ನಿಲೇಶ್ ನವಲಖಾ vs ಯೂನಿಯನ್ ಆಫ್ ಇಂಡಿಯಾ ಪ್ರಕರಣದ) ಬಾಂಬೆ ಹೈಕೋರ್ಟಿನ ತೀರ್ಪನ್ನು ಅನುಸರಿಸಲು ವಿಫಲರಾಗಿದ್ದಾರೆ ಎಂದು ಪ್ರಾಧಿಕಾರವು ಹೇಳಿದೆ.
“ಅಲ್ಲದೆ, ಈ ಸಂದರ್ಭದಲ್ಲಿ, ಇತರ ಪ್ಯಾನೆಲಿಸ್ಟ್‌ಗಳನ್ನು ಮಿತಿ ಮೀರದಂತೆ ತಡೆಯಲು ಆಂಕರ್ ವಿಫಲವಾಗಿದ್ದಾರೆ, ಮಾತ್ರವಲ್ಲ ದೇಶದಲ್ಲಿ ಕೋಮು ಸೌಹಾರ್ದತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ತೀವ್ರ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ವೇದಿಕೆಯನ್ನು ಒದಗಿಸಿದ್ದಾರೆ” ಎಂದು ಆದೇಶ ಹೇಳಿದೆ. ತನ್ನ ವೆಬ್‌ಸೈಟ್ ಮತ್ತು ಎಲ್ಲಾ ಪ್ಲಾಟ್‌ಫಾರ್ಮ್‌ಗಳಿಂದ ಆಕ್ಷೇಪಾರ್ಹ ಕಾರ್ಯಕ್ರಮದ ವೀಡಿಯೊವನ್ನು 7 ದಿನಗಳಲ್ಲಿ ತೆಗೆದುಹಾಕುವಂತೆ ನ್ಯೂಸ್ 18 ಗೆ NBDSA ನಿರ್ದೇಶಿಸಿದೆ.