ಕಾಂಗ್ರೆಸ್ ಪಕ್ಷಕ್ಕೆ ಪಂಜಾಬ್ ಎಲ್ಲಾ ರೀತಿಯಲ್ಲೂ ಚೆನ್ನಾಗಿಯೇ ಇತ್ತು. ಕ್ಯಾಪ್ಟನ್ ಅಮರೀಂದರ್ ಸಿಂಗ್ ಎಂಬ ಜನಾನುರಾಗಿ ನಾಯಕ ಇದ್ದರು. ಪ್ರತಿಪಕ್ಷಗಳಾದ ಆಮ್ ಆದ್ಮಿ ಪಕ್ಷ, ಅಖಾಲಿದಳ ಮತ್ತು ಬಿಜೆಪಿ ನಿಸ್ತೇಜವಾಗಿದ್ದವು. ಇಂಥ ಸಂದರ್ಭದಲ್ಲಿ ‘ಆಟ ಕೆಡಸಿದ್ದು’ ಮಾಜಿ ಕ್ರಿಕೇಟರ್, ಹಾಲಿ ರಾಜಕಾರಣಿ ನವಜೋತ್ ಸಿಂಗ್ ಸಿಧು. ಸಿಧು ಮಾತು ಕೇಳಿ ಕಾಂಗ್ರೆಸ್ ಪಕ್ಷ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿತು. ಅಂದಿನಿಂದ ಕಾಂಗ್ರೆಸ್ ಪಕ್ಷದ ಗ್ರಾಫು ಕೆಳಗಿಳಿಯಲು ಮತ್ತು ಆಮ್ ಅದ್ಮಿ ಪಕ್ಷದ ಗ್ರಾಫ್ ಮೇಲೆರಲು ಶುರುವಾಯಿತು. ಫಲಿತಾಂಶ ಬಂದಾಗ 117 ವಿಧಾನಸಭಾ ಕ್ಷೇತ್ರದ ಪೈಕಿ 92 ಸ್ಥಾನ ಗೆಲ್ಲುವಂತಾಯಿತು.
ಇಂಥ ನವಜೋತ್ ಸಿಂಗ್ ಸಿಧು ನಿನ್ನೆ (ಮಾರ್ಚ್ 16) ಪಂಜಾಬಿನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದೂ ಎಐಸಿಸಿ ಅಧ್ಯಕ್ಷಗಾದಿ ಇತ್ತೀಚೆಗೆ ಚುನಾವಣೆಯಲ್ಲಿ ಸೋತ ಉತ್ತರ ಪ್ರದೇಶ, ಉತ್ತರಖಂಡಾ, ಗೋವಾ, ಮಣಿಪುರ ಮತ್ತು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರು ರಾಜೀನಾಮೆ ನೀಡಬೇಕೆಂದು ಫಾರ್ಮಾನು ಹೊರಡಿಸಿದ ಬಳಿಕ. ಸೋನಿಯಾ ಗಾಂಧಿ ಅವರಿಗೆ ಕಳುಹಿಸಿದ ರಾಜೀನಾಮೆ ಪತ್ರದಲ್ಲಿ ‘ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ’ ಎಂಬ ಒಂದೇ ಒಂದು ಸಾಲು ಬರೆದಿದ್ದಾರೆ. ರಾಜೀನಾಮೆ ಪತ್ರವನ್ನು ತಮ್ಮ ಟ್ವೀಟರ್ ಖಾತೆಗೆ ಲಗತ್ತಿಸಿ ‘ಕಾಂಗ್ರೆಸ್ ಅಧ್ಯಕ್ಷರ ಅಪೇಕ್ಷೆಯಂತೆ ನಾನು ನನ್ನ ರಾಜೀನಾಮೆಯನ್ನು ಕಳುಹಿಸಿದ್ದೇನೆ’ ಇನ್ನೊಂದು ಸಾಲು ಸೇರಿಸಿದ್ದಾರೆ.
ಇದೇ ನವಜೋತ್ ಸಿಂಗ್ ಸಿಧು ಇಂದು ಪಂಜಾಬಿನ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಮನಸಾರೆ ಹೊಗಳಿದ್ದಾರೆ. ‘ಯಾರಿಂದಲೂ ಏನೊಂದನ್ನೂ ನಿರೀಕ್ಷಿಸದವನೇ ಅತ್ಯಂತ ಸಂತೋಷದಾಯಕ ವ್ಯಕ್ತಿ’ ಎಂದು ಬಣ್ಣಿಸಿದ್ದಾರೆ. ‘ಭಗವಂತ್ ಮಾನ್ ಪಂಜಾಬ್‌ನಲ್ಲಿ ಮಾಫಿಯಾ ವಿರೋಧಿ ಹೊಸ ಯುಗವನ್ನು ಸೃಷ್ಠಿ ಮಾಡಲಿದ್ದಾರೆ ಎಂಬ ನಿರೀಕ್ಷೆಗಳ ಪರ್ವತವೇ ಇದೆ. ಅವರು ನಿರೀಕ್ಷೆಗಳ ಬೆಟ್ಟವನ್ನು ಏರಲಿದ್ದಾರೆ. ಜನಪರ ನೀತಿಗಳೊಂದಿಗೆ ಪಂಜಾಬ್ ಅನ್ನು ಪುನರುಜ್ಜೀವನದ ಹಾದಿಗೆ ತರುತ್ತಾರೆ ಎಂದು ಭಾವಿಸುತ್ತೇನೆ’ ಎಂಬ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ.
Also Read : ಪಂಜಾಬ್ ಗೆದ್ದ ಬಳಿಕ ಕರ್ನಾಟಕ, ಗುಜರಾತ್ ಮಾತ್ರವಲ್ಲ, ಪ.ಬಂಗಾಳದತ್ತಲೂ ಗುರಿ ನೆಟ್ಟ AAP
ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಮರುದಿನವೇ ನವಜೋತ್ ಸಿಂಗ್ ಸಿಧು ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಬಗ್ಗೆ ಮೆಚ್ಚುಗೆಯ ಮಾತನ್ನಾಡಿರುವುದು ಹಲವು ಅನುಮಾನಗಳನ್ನು ಸೃಷ್ಟಿಸಿದೆ. ಇಂತಹ ಅನುಮಾನ ಮೂಡಲು ಹಿನ್ನೆಲೆಯೂ ಇದೆ. ಪುಷ್ಠಿ ನೀಡುವ ಅಂಶಗಳೂ ಇವೆ. ಮೊದಲನೆಯದಾಗಿ ಈ ಹಿಂದೆಯೇ ನವಜೋತ್ ಸಿಂಗ್ ಸಿಧು ಆಮ್ ಆದ್ಮಿ ಪಕ್ಷವನ್ನು ಸೇರಲು ಬಯಸಿದ್ದರು. ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಮೂಲಕ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದರು. ಆದರೆ ಪಂಜಾಬಿನಲ್ಲಿ ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಬೇಕೆಂಬ ಷರತ್ತು ಇಟ್ಟ ಕಾರಣಕ್ಕೆ ಆಗ ಆಮ್ ಆದ್ಮಿ ಪಕ್ಷ ಸೇರಲು ಸಾಧ್ಯವಾಗಿರಲಿಲ್ಲ.
ನವಜೋತ್ ಸಿಂಗ್ ಸಿಧು ಮೂಲ ಕಾಂಗ್ರೆಸಿಗರೇನೂ ಅಲ್ಲ. ಬಿಜೆಪಿ ತನ್ನ ನೆಲೆಯನ್ನು ಕಂಡುಕೊಳ್ಳಲು ಹಲವು ಸಿನಿಮಾ ನಟರು ಹಾಗೂ ಕ್ರಿಕೆಟ್ ಆಟಗಾರರನ್ನು ಬಳಸಿಕೊಂಡಿದೆ. ನವಜೋತ್ ಸಿಂಗ್ ಸಿಧು ಕೂಡ ಇಂಥದೇ ಒಂದು ಅಸ್ತ್ರ. ಆದರೆ ‘ಸದಾ ಅಧಿಕಾರ ಬೇಕು, ತಾನು ಹೇಳಿದ್ದೇ ನಡೆಯಬೇಕು’ ಎಂಬ ಹಪಹಪಿಯಿಂದಾಗಿ ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಅಮರೀಂದರ್ ಸಿಂಗ್ ಅವರನ್ನು ಮೂಲೆಗುಂಪು ಮಾಡಿಬಿಟ್ಟರೆ ತಾನು ಮುಖ್ಯಮಂತ್ರಿ ಆಗಬಹುದು ಎಂದು ತಂತ್ರಗಾರಿಕೆ ಮಾಡಿದರು. ಆದರೆ ಕಾಂಗ್ರೆಸ್ ಹೈಕಮಾಂಡ್ ದಲಿತ ನಾಯಕ ಚರಣಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದ್ದರಿಂದ ಸಿಧು ಲೆಕ್ಕಾಚಾರ ತಲೆಕೆಳಗಾಯಿತು.
ಕಡೆಗೀಗ ಅಮೃತಸರದಲ್ಲಿ ನವಜೋತ್ ಸಿಂಗ್ ಸಿಧು ಸ್ವತಃ ಸೋತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಕೇಳಿ ರಾಜೀನಾಮೆ ಪಡೆದಿದೆ ಎಂದರೆ ಕಿತ್ತುಹಾಕಿದೆ ಎಂದೇ ಅರ್ಥ. ಅಲ್ಲಿಗೆ ನವಜೋತ್ ಸಿಂಗ್ ಸಿಧುಗೆ ಇನ್ನೂ ಕಾಂಗ್ರೆಸ್ ಪಕ್ಷದಲ್ಲಿ ಇದ್ದು ಏನೂ ಪ್ರಯೋಜನ ಇಲ್ಲ ಎನಿಸಿದೆ. ಜೊತೆಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಟಿಕೆಟ್ ಪಡೆಯುವುದು, ಟಿಕೆಟ್ ಸಿಕ್ಕರೂ ಆಮ್ ಆದ್ಮಿ ಪಕ್ಷದ ಎದುರು ಗೆಲ್ಲುವುದು ಕಷ್ಟ ಎಂಬುದು ಗೊತ್ತಿದೆ. ಅದೇ ಕಾರಣಕ್ಕೆ ಅವರೀಗ ಆಮ್ ಆದ್ಮಿ ಪಕ್ಷದ ಕಡೆ ನಡೆಯಲು ಬಯಸಿದ್ದಾರೆ ಎನ್ನಲಾಗುತ್ತಿದೆ.
Also Read : ಮೇಲ್ಮನೆಗೆ ಎಎಪಿ ಅಭ್ಯರ್ಥಿಯಾಗಿ Turbanoter ಹರ್ಭಜನ್ ಸಿಂಗ್!
ಆಮ್ ಆದ್ಮಿ ಪಕ್ಷದಲ್ಲೂ ಪಂಜಾಬಿನಲ್ಲಿ ನವಜೋತ್ ಸಿಂಗ್ ಸಿಧು ಏನನ್ನೂ ಆಗಲು ಸಾಧ್ಯವಿಲ್ಲ. ಆದರೆ ಲೋಕಸಭೆ ಟಿಕೆಟ್ ಗಿಟ್ಟಿಸಿಕೊಳ್ಳಬಹುದು, ನಂತರ ಗೆಲ್ಲಲೂಬಹುದು ‘ಬರಿಗೈಗಿಂತ ಹಿತ್ತಾಳೆ ಕಡಗ ಲೇಸು’ ಎನ್ನುವ ಮಾತಿನಂತೆ ಏನೂ ಆಗಿಲ್ಲದಿರುವುದಕ್ಕಿಂತ ಸಂಸದ ಆಗಬಹುದು ಎಂಬುದು ನವಜೋತ್ ಸಿಂಗ್ ಸಿಧು ಅವರ ಈಗಿನ ಲೆಕ್ಕಾಚಾರ. ಆದರೀಗ ಪಂಜಾಬಿನಲ್ಲಿ ಆಮ್ ಆದ್ಮಿ ಪಕ್ಷ ಸೇರಲು ನಾಯಕರು ಸಾಲುಗಟ್ಟಿ ನಿಂತಿದ್ದಾರೆ. ಕಾಂಗ್ರೆಸ್ ಮನೆಯನ್ನು ಧ್ವಂಸ ಮಾಡಿರುವ ನವಜೋತ್ ಸಿಂಗ್ ಸಿಧು ಅವರನ್ನು ಆಮ್ ಆದ್ಮಿ ಪಕ್ಷ ಗೊತ್ತಿದ್ದೂ ಗೊತ್ತಿದ್ದೂ ತನ್ನ ತೆಕ್ಕೆಗೆ ಸೇರಿಸಿಕೊಳ್ಳಲಿದೆಯಾ ಎಂಬುದೇ ಸದ್ಯದ ಕುತೂಹಲ.