ಸುಮಾರು ಎರಡು ತಿಂಗಳ ಹಗ್ಗ ಜಗ್ಗಾಟದ ನಂತರ ಪಂಜಾಬ್ ಕಾಂಗ್ರೆಸ್ ನ ಚುಕ್ಕಾಣಿ ನವಜೋತ್ ಸಿಂಗ್ ಸಿಧು ಅವರಿಗೆ ಲಭಿಸಿದೆ. ಆದರೆ, ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಜತೆಗಿನ ಮುನಿಸು ಮಾತ್ರ ಇನ್ನೂ ತಣ್ಣಗಾಗಿಲ್ಲ. ಪ್ರಸ್ತುತ ಕರ್ನಾಟಕದಲ್ಲಿ ಉಂಟಾಗಿರುವ ಪರಿಸ್ಥಿತಿ ಪಂಜಾಬ್ ಕಾಂಗ್ರೆಸ್ ನಲ್ಲಿಯೂ ತಲೆದೋರಿದಂತೆ ಕಾಣುತ್ತಿದೆ.
ಪಂಜಾಬ್ ನಲ್ಲಿ ಚುನಾವಣೆಗೂ ಮುನ್ನವೇ ಬಣ ರಾಜಕೀಯ ಆರಂಭವಾಗಿದೆ. ಬುಧವಾರ ಸಿಧು ಅವರು ತಮ್ಮ ಬೆಂಬಲಿಗರೊಂದಿಗೆ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ್ದರು. ಇದಕ್ಕೂ ಮುನ್ನ ಸಿಧು ನಿವಾಸದಲ್ಲಿ ಸಭೆ ಸೇರಿದ್ದ ನಾಯಕರು, ಪಿಸಿಸಿ ಅಧ್ಯಕ್ಷರಾಗಿ ಸಿಧು ಆಯ್ಕೆಯನ್ನು ಮುಕ್ತ ಮನಸ್ಸಿನಿಂದ ಆಚರಿಸಿದ್ದಾರೆ.
ಸುಮಾರು 62 ಜನ ಕಾಂಗ್ರೆಸ್ ಶಾಸಕರು ನವಜೋತ್ ಸಿಂಗ್ ಸಿಧೂ ಜತೆಗೆ ಗುರುತಿಸಿಕೊಂಡಿದ್ದಾರೆ. ಇದರ ನಡುವೆ, ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಸಿಧು ಅವರ ಬಹಿರಂಗ ಕ್ಷಮೆಗೆ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ತೀವ್ರವಾದ ಆಕ್ಷೇಪ ವ್ಯಕ್ತಪಡಿಸಿರುವ ಸಿಧು ಬಣದ ಶಾಸಕರಾದ ಪರ್ಗಟ್ ಸಿಂಗ್ ಅವರು, ಇದೇನೂ ಸಾರ್ವಜನಿಕ ವಿಚಾರವಲ್ಲ. ಹಾಗಾಗಿ ಸಿಧು ಬಹಿರಂಗ ಕ್ಷಮೆ ಕೇಳುವ ಅಗತ್ಯವಿಲ್ಲ. ಸಿಎಂ ಅವರು ಕೂಡಾ ಹಲವು ಸಮಸ್ಯೆಗಳನ್ನು ಬಗೆಹರಿಸಿಲ್ಲ, ಅವರೂ ಕ್ಷಮೆ ಕೇಳುವರೇ? ಎಂದು ಪ್ರಶ್ನಿಸಿದ್ದಾರೆ.
ಇನ್ನೊಬ್ಬ ಶಾಸಕರಾದ ಮದನ್ ಲಾಲ್ ಜಲಾಲ್ ಪುರ್ ಅವರು ಮಾತನಾಡುತ್ತಾ “ಸಿಧು ಅವರ ನೇತೃತ್ವದಲ್ಲಿ 2022ರ ಚುನಾವಣೆಯನ್ನು ಗೆಲ್ಲುವ ವಿಶ್ವಾಸವಿದೆ. ಸಿಎಂ ಅವರ ಸಲಹೆಗಾರರು ಅವರನ್ನು ದಾರಿ ತಪ್ಪಿಸುತ್ತಿದ್ದಾರೆ. ಹಿಗಾಗಿ ಪಂಜಾಬ್ ಅಭಿವೃದ್ದಿಯಲ್ಲಿ ಹಿಂದೆ ಉಳಿಯುತ್ತಿದೆ,” ಎಂದಿದ್ದಾರೆ.
ಕಳೆದ ಭಾನುವಾರ ಪಂಜಾಬ್ ಪಿಸಿಸಿ ಅಧ್ಯಕ್ಷರಾಗಿದ್ದ ಸುನಿಲ್ ಜಾಖರ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಸಿಧು ಅವರನ್ನು ಅಧ್ಯಕ್ಷರನ್ನಾಗಿ ಘೋಷಿಸಲಾಗಿತ್ತು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರೊಂದಿಗೆ ಸರಣಿ ಸಭೆಗಳನ್ನು ನಡೆಸಿದ ಸಿಧು ಕೊನೆಗೂ ಅಧ್ಯಕ್ಷ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದರು. ಹಲವು ಬಾರಿ ಸಚಿವ ಸ್ಥಾನ ನೀಡಿದ್ದರೂ ಅದನ್ನು ತಿರಸ್ಕರಿಸಿದ್ದ ಸಿಧು, ಈ ಬಾರಿ ಅಧ್ಯಕ್ಷ ಸ್ಥಾನದ ಆಫರ್ ಸ್ವೀಕರಿಸಿದ್ದರು.
ಆದರೆ, ಇದರಿಂದಾಗಿ ಪಂಜಾಬ್ ಕಾಂಗ್ರೆಸ್ ನಲ್ಲಿ ಕರ್ನಾಟಕದ ಮಾದರಿಯ ವಾತಾವರಣ ರೂಪುಗೊಂಡಿದೆ. ಇಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ನಡೆಯುತ್ತಿರುವ ಬಣ ರಾಜಕೀಯ ಅಲ್ಲಿಯೂ ಗೋಚರಿಸುತ್ತಿದೆ. ಚುನಾವಣೆಗೆ ಇನ್ನು ಕೆಲವೇ ತಿಂಗಳುಗಲು ಬಾಕಿ ಇರುವಾಗ ಇಂತಹ ಬೆಳವಣಿಗೆಗಳು ಕಾಂಗ್ರೆಸ್’ಗೆ ಮಾರಕವಾಗಿ ಪರಿಣಮಿಸಬಲ್ಲದು. ಈ ಒಳಜಗಳದಿಂದಾಗಿ ಚುನಾವಣೆಯಲ್ಲಿ ಸೋಲನ್ನಪ್ಪುವ ಸಾಧ್ಯತೆಯೂ ಇದ್ದು, ಕಾಂಗ್ರೆಸ್ ಹೈಕಮಾಂಡ್ ಶೀಘ್ರವೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ.