ಜೆಡಿಎಸ್‌ನ ಪಂಚರತ್ನ ಯೋಜನೆಗಳ ಬಗ್ಗೆ ಕುಮಾರಸ್ವಾಮಿ ರಥಯಾತ್ರೆ ಮಾಡುತ್ತಿದ್ದಾರೆ. ರಾಜ್ಯಾದ್ಯಂತ ಸಾವಿರಾರು ಜನರು ಕುಮಾರಸ್ವಾಮಿ ಯೋಜನೆಗಳಿಗೆ ಬೆಂಬಲ ಸೂಚಿಸಿ ಭಾಗಿಯಾಗ್ತಿದ್ದಾರೆ. ಈ ನಡುವೆ ಜೆಡಿಎಸ್ ಪಂಚರತ್ನ ಯಾತ್ರೆ ಬಗ್ಗೆ ವಾಗ್ದಾಳಿ ಮಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಜೆಡಿಎಸ್‌ನವರು ಒಂದೇ ಕುಟುಂಬದಿಂದ 9 ಜನ ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡ್ತಾರೆ, ಪಂಚರತ್ನ ಯಾತ್ರೆ ಬದಲು ನವಗ್ರಹ ಯಾತ್ರೆ ಎಂದು ಹೆಸರಿಡುವುದು ಸೂಕ್ತ ಎಂದು ವಾಗ್ದಾಳಿ ಮಾಡಿದ್ದರು. ಅದಕ್ಕೆ ತಿರುಗೇಟು ನೀಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ಬಿಜೆಪಿ ನಡೆಸಲು ಸಿದ್ಧವಾಗ್ತಿರೋ ವಿಜಯ ಸಂಕಲ್ಪ ಯಾತ್ರೆ ಬದಲು ಸಿ.ಡಿ ಸಂಕಲ್ಪ ಅಥವಾ ಸಿ.ಡಿ ಯಾತ್ರೆ ಎಂದು ಮಾಡಿದರೆ ನಾನು ನವಗ್ರಹ ಯಾತ್ರೆ ಎಂದು ರಥಯಾತ್ರೆ ಮಾಡುತ್ತೇನೆ ಎಂದಿದ್ದರು. ಅದಾದ ಬಳಿಕ ಮತ್ತೊಂದು ಬಾರಿ ಪ್ರಹ್ಲಾದ್ ಜೋಷಿ ವಿರುದ್ಧ ಕಿಡಿಕಾರಿರುವ ಕುಮಾರಸ್ವಾಮಿ, ಪ್ರಹ್ಲಾದ್ ಜೋಷಿ ವಾಗ್ದಾಳಿಗೆ ಕಾರಣ ಬಿಚ್ಚಿಟ್ಟಿದ್ದಾರೆ.
ಶೃಂಗೇರಿ ಮಠ ಧ್ವಂಸ ಮಾಡಿದ ಮಹಾರಾಷ್ಟ್ರದ ಬ್ರಾಹ್ಮಣರು..!
ಪ್ರಹ್ಲಾದ್ ಜೋಷಿ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿರುವ ಕುಮಾರಸ್ವಾಮಿ, ನವಗ್ರಹ ಯಾತ್ರೆ ಎಂದು ವ್ಯಂಗ್ಯವಾಡಿದ್ದಾರೆ. ಪಂಚರತ್ನ ಯೋಜನೆ ಜನಸ್ಪಂದನೆ ನೋಡಿ ಅವರು ಹೆದರಿದ್ದಾರೆ.ಪ್ರಹ್ಲಾದ್ ಜೋಶಿಯನ್ನ ಚುನಾವಣೆ ನಂತರ ಸಿಎಂ ಮಾಡಬೇಕು ಅಂತ ಸಂಘ ಪರಿವಾರ ನಿರ್ಧರಿಸಿದೆ. ಜೋಷಿ ಅವರು ನಮ್ಮ ದಕ್ಷಿಣ ಕರ್ನಾಟಕ ಭಾಗದ ಬ್ರಾಹ್ಮಣರಲ್ಲ. ಶೃಂಗೇರಿಯ ಮಠವನ್ನು ಧ್ವಂಸ ಮಾಡಿದ ಬ್ರಾಹ್ಮಣ ವರ್ಗಕ್ಕೆ ಪ್ರಹ್ಲಾದ್ ಜೋಷಿ ಸೇರುತ್ತಾರೆ. ಮಹಾತ್ಮ ಗಾಂಧಿ ಅವರನ್ನು ಕೊಂದ ಬ್ರಾಹ್ಮಣರು ಇವರು. ನಮ್ಮ ಭಾಗದ ಬ್ರಾಹ್ಮಣರು ಸರ್ವ ಜನ ಸುಖಿನೋ ಭವಂತು ಎನ್ನುತ್ತಾರೆ. ಆದರೆ ಇವರು ಮರಾಠಿ ಪೇಶ್ವೆ ಸಮುದಾಯಕ್ಕೆ ಸೇರಿದ ಬ್ರಾಹ್ಮಣರು. ದೇಶಭಕ್ತಿ ಹೆಸರಿನಲ್ಲಿ ದೇಶವನ್ನು ಒಡೆಯುವ, ದೇಶಕ್ಕೆ ಕೊಡುಗೆ ನೀಡಿದವರನ್ನ ಹತ್ಯೆ ಮಾಡಿದ ಬ್ರಾಹ್ಮಣ ಸಮುದಾಯ ಎಂದು ಕಟು ಶಬ್ಧಗಳಿಂದ ಟೀಕೆ ಮಾಡಿದ್ದಾರೆ. ಇದು ಸಾಕಷ್ಟು ಜನರ ಕಣ್ಣು ಕೆಂಪಾಗುವಂತೆ ಮಾಡಿದೆ. ಬ್ರಾಹ್ಮಣ ಸಮುದಾಯದ ಬಗ್ಗೆ ಹೇಳಿದ್ದು, ಸರಿಯಲ್ಲ ಎಂದಿದ್ದಾರೆ.

ಮರಾಠಿ ಪೇಶ್ವೆ ಶೃಂಗೇರಿ ಮಠ ಧ್ವಂಸ ಮಾಡಿದ್ದು ನಿಜಾನಾ..?
ಇತಿಹಾಸದ ಪುಟಗಳನ್ನು ಕೆದಕಿದಾಗ ಮರಾಠಿ ಸೇನೆ ಶೃಂಗೇರಿ ಮಠವನ್ನು ಧ್ವಂಸ ಮಾಡಿದ್ದು ಸತ್ಯ ಎನ್ನುತ್ತದೆ. 1796ರಲ್ಲಿ ಮರಾಠಿಯ 2ನೇ ಬಾಜಿರಾಬ್ ಪೇಶ್ವೇಯೂ ಆದಿಶಂಕರಾಚಾರ್ಯರು ಸ್ಥಾಪನೆ ಮಾಡಿದ್ದ ಶೃಂಗೇರಿ ಮಠದ ಮೇಲೆ ದಾಳಿ ಮಾಡಿ ಸಿಕ್ಕಸಿಕ್ಕಿದ್ದನ್ನು ದೋಚಿಸಿದ್ದರು. ಮೂರ್ತಿಗಳನ್ನು ಭಗ್ನ ಮಾಡಿದ್ದರು. ಆತನ ಸೈನ್ಯವು ಮಠವನ್ನು ಲೂಟಿ ಮಾಡುವಾಗ ವಿರೋಧಿಸಿದ ಬ್ರಾಹ್ಮಣ ಸಮುದಾಯವನ್ನು ಕೊಲೆ ಮಾಡಿದ್ದರು. ಆ ಬಳಿಕ ಮೈಸೂರಲ್ಲಿ ಆಳ್ವಿಕೆ ನಡೆಸುತ್ತಿದ್ದ ಟಿಪ್ಪು, ಶೃಂಗೇರಿ ಮಠಕ್ಕೆ ಆಗಿದ್ದ ನಷ್ಟವನ್ನು ತುಂಬಿಸಿಕೊಟ್ಟಿದ್ದು ಮಾತ್ರವಲ್ಲದೆ ಬ್ರಾಹ್ಮಣರ ರಕ್ಷಣೆಗೂ ಕ್ರಮ ತೆಗೆದುಕೊಂಡಿದ್ದ. ಇದೇ ಕಾರಣಕ್ಕೆ ಶೃಂಗೇರಿ ಮಠದಲ್ಲಿ ಶಾಸನವನ್ನೂ ಬರೆಸಲಾಗಿದೆ. ಟಿಪ್ಪು ನೆನಪಿಗಾಗಿ ಆರತಿಯನ್ನು ಮಾಡಲಾಗುತ್ತದೆ.
ಮರಾಠಿಯ ಪೇಶ್ವೆ ವಂಶದವರು ಕರ್ನಾಟಕದ ಸಿಎಂ..?
ಕುಮಾರಸ್ವಾಮಿ ಕೊಟ್ಟಿರುವ ಮಾಹಿತಿ ಪ್ರಕಾರ, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಪ್ರಹ್ಲಾದ್ ಜೋಷಿಯನ್ನು ಮುಖ್ಯಮಂತ್ರಿ ಮಾಡಿ 8 ಜನರನ್ನು ಉಪಮುಖ್ಯಮಂತ್ರಿ ಮಾಡುವ ಬಗ್ಗೆ ಆರ್ಎಸ್ಎಸ್ ನಾಯಕರು ಚಿಂತನೆ ಮಾಡಿದ್ದಾರೆ ಎಂದಿದ್ದಾರೆ. ಪ್ರಹ್ಲಾದ್ ಜೋಷಿ ನಮ್ಮ ಕರ್ನಾಟಕದ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಅಲ್ಲ, ಅವರು ಮರಾಠಿಯ ಪೇಶ್ವೆಯ ವಂಶಸ್ಥರು. ಪ್ರಹ್ಲಾದ್ ಜೋಷಿ ಅವರಿಗೆ ಸರ್ವಜನ ಸುಖಿನೋ ಭವಂತು ಎನ್ನುವ ಸಂಸ್ಕಾರ ಇಲ್ಲ. ಪ್ರಹ್ಲಾದ್ ಜೋಷಿಗೆ ಪಟ್ಟ ಕಟ್ಟಲು ಎಲ್ಲಾ ತಯಾರಿಯೂ ನಡೆದಿದೆ. 8 ಜನರನ್ನು ಉಪಮುಖ್ಯಮಂತ್ರಿ ಮಾಡುತ್ತಾರೆ. ಬಿಜೆಪಿ ನಾಯಕರ ಮಾತಿಗೆ ಮರುಳಾಗಬೇಡಿ ಎಂದಿದ್ದರು. ಇದೀಗ ಬ್ರಾಹ್ಮಣ ಸಮುದಾಯವನ್ನು ಟೀಕೆ ಮಾಡಿದ್ದಾರೆ ಎನ್ನುವ ಮೂಲಕ ಬಿಜೆಪಿ ನಾಯಕರು ಕ್ಷಮೆ ಕೇಳುವಂತೆ ಆಗ್ರಹ ಮಾಡಿದ್ದಾರೆ. ಬ್ರಾಹ್ಮಣ ಸಂಘ ಕೂಡ ಕ್ಷಮೆ ಕೇಳುವಂತೆ ಒತ್ತಾಯ ಮಾಡಿದೆ. ಕುಮಾರಸ್ವಾಮಿ ಕೇಳ್ತಾರಾ..? ಶೃಂಗೇರಿ ಮಠವನ್ನು ಧ್ವಂಸ ಮಾಡಿದ ಪೇಶ್ವೆ ಸಮುದಾಯದ ಪ್ರಹ್ಲಾದ್ ಜೋಷಿ ಕರ್ನಾಟಕದ ಮುಖ್ಯಮಂತ್ರಿ ಆಗ್ತಾರಾ ಅನ್ನೋದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಬೇಕಿದೆ.











