ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಆರಂಭದಿಂದಲೂ ವಿವಾದಾತ್ಮಕವಾಗಿಯೇ ಇದೆ. ಗುಜರಾತ್, ಉತ್ತರಪ್ರದೇಶದಂತಹ ಕಟ್ಟಾ ಬಿಜೆಪಿ ಆಡಳಿತವಿರುವ ರಾಜ್ಯಗಳಿಗೂ ಮೊದಲೇ ನಮ್ಮ ಕರ್ನಾಟಕ ಸರ್ಕಾರ ಈ ನೀತಿಯನ್ನು ಇದೇ ಅಕಾಡೆಮಿಕ್ ವರ್ಷದಲ್ಲಿ ಜಾರಿ ಮಾಡಲು ಹೊರಟಿದೆ.
ಆದರೆ ವಿವಿಧ ವಿದ್ಯಾ ಸಮೂಹಗಳು, ಕಾಲೇಜುಗಳು ಮತ್ತು ಪ್ರೊಫೆಸರ್‌ಗಳಿಂದ ಇದಕ್ಕೆ ಪ್ರತಿರೋಧ ಕಂಡು ಬಂದಿದೆ. ಕೆಲವರು ಹೊಸ ನೀತಿ ಸ್ವಾಗತಾರ್ಹ,, ಆದರೆ ಜಾರಿಯಲ್ಲಿ ಕೆಲವು ಸಮಸ್ಯೆ ಇವೆ ಎನ್ನುತ್ತಾರೆ. ಇನ್ನು ಕೆಲವರ ಪ್ರಕಾರ, ಈ ನೀತಿ ಶಿಕ್ಷಣವನ್ನೇ ವ್ಯಾಪಾರೀಕರಣದತ್ತ ನೂಕುತ್ತದೆ. ಆದರೂ ತಾನೇ ಮೊದಲು ಎಂಬ ಹುಂಬತನದಲ್ಲಿ ರಾಜ್ಯ ಸರ್ಕಾರ ಈ ನೀತಿಯ ಜಾರಿಗೆ ಮುಂದಾಗಿದೆ.
ಇತ್ತೀಚೆಗೆ ಕೆಲವು ಸ್ವಾಯತ್ತ ಕಾಲೇಜುಗಳು ಸರ್ಕಾರಕ್ಕೆ ಮನವಿಯೊಂದನ್ನು ಸಲ್ಲಿಸಿದ್ದು, ಹೊಸ ಶಿಕ್ಷಣ ನೀತಿಯ ಜಾರಿಗೆ ಅವಸರ ಬೇಡ. ಇದು ಸ್ವಾಗತಾರ್ಹ ನಿಜ. ಆದರೆ ಅದಕ್ಕೆ ಬೇಕಾದ ಪೂರ್ವ ತಯಾರಿ ಇಲ್ಲದೇ ಅವಸರದಿಂದ ಜಾರಿ ಮಾಡುವುದು ಬೇಡ ಎಂದು ಮನವಿಯಲ್ಲಿ ತಿಳಿಸಿವೆ. ಏಕರೂಪದ ಸಿಲಬಸ್, ವಿದ್ಯಾರ್ಥಿಗಳಿಗೆ ದೊರಕುತ್ತಿರುವ ಸೌಲಭ್ಯಗಳು ಮುಂತಾದ ವಿಷಯಗಳ ಕುರಿತು ವ್ಯಾಪಕ ಚರ್ಚೆ ನಡೆಯಬೇಕು ಮತ್ತು ಅದಕ್ಕೆ ಅಗತ್ಯವಾದ ಮೂಲಭೂತ ಸೌಕರ್ಯಗಳು ಲಭ್ಯವಾಗಬೇಕು ಎಂದು ಮನವಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಒಟ್ಟಿನಲ್ಲಿ ಯಾವುದೇ ಚರ್ಚೆ-ಸಂವಾದವಿಲ್ಲದೇ ರಾಜ್ಯ ಸರ್ಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಮುಂದಾಗಿರುವುದಕ್ಕೆ ಆಕ್ಷೇಪಗಳು ಕೇಳಿ ಬಂದಿವೆ. ಈ ಕುರಿತಂತೆ ತಿಂಗಳ ಹಿಂದೆಯೇ ಟ್ವೀಟ್ ಮಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ತರಾತುರಿಯಲ್ಲಿ ಈ ನೀತಿ ಜಾರಿಗೊಳಿಸಬೇಡಿ. ಅದು ಸದನದಲ್ಲಿ ಮತ್ತು ಅಕಾಡೆಮಿಕ್ ವಲಯದಲ್ಲಿ ಚರ್ಚೆಯಾಗಬೇಕು. ವಿದ್ಯಾರ್ಥಿಗಳ ಅಭಿಮತವೂ ಇಲ್ಲಿ ಮುಖ್ಯ ಎಂದು ಹೇಳಿದ್ದರು.
ಈ ನೀತಿಯ ಜಾರಿ ಹೇಗೆ?
ಬಿ.ಎ ಅಥವಾ ಬಿಎಸ್ಸಿ ಸೇರುವ ವಿದ್ಯಾರ್ಥಿಗಳು ಎರಡು ಮುಖ್ಯ ವಿಷಯಗಳನ್ನು ಆಯ್ದುಕೊಳ್ಳಬೇಕು. ಮೂರನೇ ಅಂದರೆ ಅಂತಿಮ ವರ್ಷದಲ್ಲಿ ಅವರು ಒಂದು ವಿಷಯವನ್ನು ಮೇಜರ್ ಎಂದು ಆಯ್ಕೆ ಮಾಡಿಕೊಂಡು, ಇನ್ನೊಂದು ವಿಷಯವನ್ನೂ ಆಯ್ಕೆ ಮಾಡಿಕೊಳ್ಳಬೇಕು. ಇದರ ನಡುವೆ ಮುಕ್ತ ಆಯ್ಕೆ ಮತ್ತು ಶಿಸ್ತಿನ ಆಯ್ಕೆ ಎಂಬ ಗೊಂದಲ ಬೇರೆ ಇದೆ. ಪಿಯುಸಿಯಲ್ಲಿ ಕನ್ನಡ ಓದದ ವಿದ್ಯಾರ್ಥಿಗಳಿಗಾಗಿ ಕನ್ನಡ ಸಿಲಬಸ್ ರೂಪಿಸಬೇಕು.
ಮೂಲಭೂತ ಸೌಕರ್ಯಗಳ ಕೊರತೆ :
ಬಹುತೇಕ ಕಾಲೇಜುಗಳು ಎತ್ತುತ್ತಿರುವ ಪ್ರಶ್ನೆ ಏನೆಂದರೆ, ವಿದ್ಯಾರ್ಥಿಗಳಿಗೆ ಆಯ್ಕೆಯ ಸ್ವಾತಂತ್ರ್ಯ ನೀಡಿದ್ದು ಓಕೆ, ಆದರೆ ಪ್ರಯೋಗಾಲಯ ಮತ್ತು ಇತರ ಮೂಲಭೂತ ಸೌಕರ್ಯಗಳ ಕೊರತೆ ಇದಕ್ಕೆ ಅಡ್ಡಿಯಾಗಲಿದೆ ಎಂಬುದು.
ಇಲ್ಲಿ ಟೈಮ್ ಅಥವಾ ಅವಧಿ ಕೂಡ ಸಮಸ್ಯೆ. ಇನ್ನೊಂದು ಕಡೆ ಹೊಸ ನೀತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ತಿಳುವಳಿಕೆ ಇಲ್ಲ. ಈ ಬಗ್ಗೆ ವ್ಯಾಪಕ ಚರ್ಚೆಯೂ ಆಗಿಲ್ಲ. ಹೀಗಾಗಿ ಏಕಾಏಕಿ ಈ ನೀತಿಯ ಜಾರಿ ಅಸಾಧ್ಯ. ಜಾರಿ ಆದರೂ ಅದು ವಿದ್ಯಾರ್ಥಿ ಮತ್ತು ಅಧ್ಯಾಪಕರಿಗೆ ತಲೆನೋವೇ ಆಗಲಿದೆ ಎನ್ನುತ್ತಾರೆ ನುರಿತ ಹಿರಿಯ ಅಧ್ಯಾಪಕರು.
ಸ್ಪಷ್ಟ ಮಾರ್ಗಸೂಚಿಗಳೇ ಇಲ್ಲ!
ಬಿಕಾಂ, ಬಿಬಿಎ, ಬಿಸಿಎ, ಬಿಬಿಎಂ ಸಂದರ್ಭದಲ್ಲಿ ಈ ನೀತಿ ಜಾರಿ ಸುಲಭ. ಆದರೆ ವಿಶಾಲ ವ್ಯಾಪ್ತಿ ಹೊಂದಿರುವ ಬಿಎ ಮತ್ತು ಬಿಎಸ್ಸಿ ಸಂದರ್ಭದಲ್ಲಿ ತುಂಬ ಕಷ್ಟಕರ. ಈಗ ನೀಡಿರುವ ಮಾರ್ಗಸೂಚಿಗಳೂ ಸ್ಪಷ್ವವಾಗಿಲ್ಲ ಎಂದು ಕಾಲೇಜು ಮಂಡಳಿಗಳು ಅಪಸ್ವರ ಎತ್ತಿವೆ.
ಶೇ. 40 ರಷ್ಟು ಶಿಕ್ಷಣವನ್ನು ವಿದ್ಯಾರ್ಥಿ ಆನ್ಲೈನ್ ಮೂಲಕ ಪಡೆದುಕೊಳ್ಳಬಹುದು ಎಂದು ನೀತಿ ಹೇಳುತ್ತದೆ. ಆದರೆ ಅಂತಹ ಬೋಧನಾ-ಕಲಿಕಾ ವಿಧಾನಕ್ಕೆ ಬೇಕಾದ ಸೌಲಭ್ಯಗಳು ಬಹುತೇಕ ಕಾಲೇಜುಗಳಲ್ಲಿ ಇಲ್ಲವೇ ಇಲ್ಲ.
ಪ್ರಿನ್ಸಿಪಾಲ್ಗಳು ಹೇಳುವುದೇನು?
ತಳಮಟ್ಟದಿಂದ ಈ ನೀತಿಯನ್ನು ಜಾರಿ ಮಾಡಬೇಕಿತ್ತು. ಆದರೆ ಡಿಗ್ರಿ ಮಟ್ಟದಿಂದ ಜಾರಿ ಮಾಡುತ್ತಿದ್ದಾರೆ. ಇಲ್ಲಿ ಯಾವುದೇ ತಯ್ಯಾರಿ ಇಲ್ಲ ಎಂದು ಒಂದು ಕಾಲೇಜಿನ ಪ್ರಿನ್ಸಿಪಾಲ್ ಹೇಳುತ್ತಾರೆ.
ಇನ್ನೊಬ್ಬ ಪ್ರಿನ್ಸಿಪಾಲ್ ಪ್ರಕಾರ, ಇದನ್ನು ಮುಂದಿನ ವರ್ಷದಿಂದ ಜಾರಿ ಮಾಡಬಹುದಿತ್ತು. ಇಲ್ಲವೇ ಕಳೆದ ವರ್ಷವೇ ವಿದ್ಯಾರ್ಥಿಗಳಿಗೆ ಈ ಬಗ್ಗೆ ತಿಳುವಳಿಕೆ ನೀಡಬೇಕಿತ್ತು. ಚರ್ಚೆ-ಸಂಚಾದಗಳ ಜೊತೆಗೆ ಹೊಸ ನೀತಿಯ ಬಗ್ಗೆ ವ್ಯಾಪಕ ಅರಿವು ಮೂಡಿಸದೇ ಈಗ ನೀತಿ ಜಾರಿ ಮಾಡಿದರೆ ಅದು ವಿದ್ಯಾರ್ಥಿ ಮತ್ತು ಅಧ್ಯಾಪಕರ ಮೇಲೆ ಹೊರೆ ಆಗುತ್ತದೆ’ ಎನ್ನುತ್ತಾರೆ.
ಗುಣಮಟ್ಟದ ಶಿಕ್ಷಣ ಎನ್ನುತ್ತಿದೆ ಸರ್ಕಾರ
ಉನ್ನತ ಶಿಕ್ಷಣ ಸಚಿಬ ಅಶ್ವಥ್ ನಾರಾಯಣ್ ಅವರ ಪ್ರಕಾರ, ಗುಣಮಟ್ಟದ ಶಿಕ್ಷಣಕ್ಕೆ ಈ ನೀತಿ ಪೂರಕವಾಗಿದೆ. ವಿದ್ಯಾರ್ಥಿಗಳು ತಮ್ಮ ಸ್ಥಳೀಯ ಅಸ್ಮಿತೆಯನ್ನು ಉಳಿಸಿಕೊಂಡೇ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲ್ಲು ಈ ನೀತಿ ಸಹಕಾರಿ ಎನ್ನುತ್ತಾರೆ.
ಈ ಹೊಸ ಶಿಕ್ಷಣ ನೀತಿ ಬಗ್ಗೆ ತಿಳುವಳಿಕೆ ಮೂಡಿಸಲು ವಿಶ್ವ ವಿದ್ಯಾಲಯಗಳು ಸಹಾಯವಾಣಿಗಳನ್ನು ಆರಂಭಿಸಬೇಕು ಮತ್ತು ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಫಂಡ್ಗಳನ್ನು ಪಡೆದುಕೊಳ್ಳಬೇಕು’ ಎಂದು ರಾಜ್ಯ ಕಾಲೇಜ್ ಶಿಕ್ಷಣ ನಿರ್ದೇಶಾನಲಯ ಸೂಚನೆ ನೀಡಿದೆ.