ಪ್ರಧಾನಿ ನರೇಂದ್ರ ಮೋದಿಯವರು ಭಾರತದ ರಾಜಕಾರಣದ ವರಸೆಯನ್ನು ಹಲವು ರೀತಿಯಲ್ಲಿ ಬದಲಾಯಿಸಿದ್ದಾರೆ. ರಾಜಕೀಯ ಭಾಷೆ, ಚುನಾವಣಾ ತಂತ್ರಗಾರಿಕೆ, ಪ್ರತಿಪಕ್ಷಗಳನ್ನು ನಿಭಾಯಿಸುವುದು, ನೀತಿ-ನಿಲುವುಗಳನ್ನು ಜಾರಿಗೆ ತರುವುದು, ಹೀಗೆ ಹಲವು ಬಗೆಯಲ್ಲಿ ಭಾರತದ ಎಪ್ಪತ್ತು ವರ್ಷಗಳ ರಾಜಕಾರಣದಲ್ಲಿ ಹಿಂದೆಂದೂ ಕಂಡರಿಯದ ಪ್ರಮಾಣದ ಬದಲಾವಣೆಗಳನ್ನು ಮೋದಿಯವರು ಈ ಏಳು ವರ್ಷಗಳಲ್ಲಿ ತಂದಿದ್ದಾರೆ.
ಮೋದಿಯವರ ಅಂತಹ ಅನನ್ಯ ಕೊಡುಗೆಗಳಲ್ಲಿ ಬಹಳ ಮುಖ್ಯವಾದುದು ಆಡಳಿತಕ್ಕಾಗಿ ಅಧಿಕಾರ, ಅಧಿಕಾರಕ್ಕಾಗಿ ಚುನಾವಣೆ ಎಂಬ ರಾಜಕೀಯ ವ್ಯವಸ್ಥೆಯ ಮೂಲ ಸ್ವರೂಪವನ್ನು, ಚುನಾವಣೆಗಾಗಿ ಅಧಿಕಾರ, ಚುನಾವಣೆಗಾಗಿ ಆಡಳಿತ ಎಂದು ಬದಲಾಯಿಸಿರುವುದು ಬಹಳ ಮುಖ್ಯವಾದುದು ಮತ್ತು ದೇಶದ ಇಡೀ ರಾಜಕೀಯ, ಆರ್ಥಿಕ, ಸಾಮಾಜಿಕ ವ್ಯವಸ್ಥೆಯನ್ನು ಸಂಪೂರ್ಣ ತಿರುವು ಮುರುವು ಮಾಡುತ್ತಿರುವ ಅತ್ಯಂತ ಪ್ರಭಾವಶಾಲಿ ಸ್ಥಿತ್ಯಂತರ.
ವಾಸ್ತವವಾಗಿ ಇಂತಹ ಬದಲಾವಣೆಗಳ ಸಾರ್ವಜನಿಕ ಮುಖ ಮೋದಿಯವರಾದರೂ, ಆ ಮುಖದ ಹಿಂದೆ ಇರುವುದು ಬಿಜೆಪಿ ಮತ್ತು ಅದರ ಮಾತೃಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬುದು ಗುಟ್ಟೇನಲ್ಲ. ಆದರೆ, ಚುನಾವಣೆಗಾಗಿ ಚುನಾವಣೆ, ಚುನಾವಣೆಗಾಗಿ ಅಧಿಕಾರ, ಚುನಾವಣೆಗಾಗಿ ಆಡಳಿತ ಎಂಬ ಈ ಬದಲಾವಣೆ ಈ ಏಳು ವರ್ಷಗಳಲ್ಲಿ ಹೇಗೆ ಯಾರ ಅರಿವಿಗೂ ಬರದ ಹಾಗೆ ಆಗಿ ಹೋಗಿದೆ ಎಂಬುದು ಮಾತ್ರ ಬಹಳ ವ್ಯವಸ್ಥಿತವಾಗಿ, ಆಗಿಹೋಗಿರುವ ರಹಸ್ಯ ತಂತ್ರಗಾರಿಕೆ.
ಒಂದು ಕಡೆ ದ್ವೇಷದ, ನಿಂದನೆಯ, ಶಂಕೆಯ ರಾಜಕೀಯ ಭಾಷೆಯ ಮೂಲಕ ನಾವು/ ಅವರು, ದೇಶಭಕ್ತರು/ ದೇಶದ್ರೋಹಿಗಳು ಮುಂತಾದ ಭಿನ್ನತೆಯ ರಾಜಕೀಯ ಪರಿಭಾಷೆಯನ್ನು ಬಿಡುಬೀಸಾಗಿ ಚಾಲ್ತಿಗೆ ತಂದು, ದೇಶದ ಜನಸಮುದಾಯದ ನಡುವೆಯೇ ಶಂಕೆಯ, ದ್ವೇಷದ ಒಡಕು ಬಿತ್ತಿ ರಾಜಕೀಯ ಫಸಲು ತೆಗೆಯುವುದು ಹೇಗೆ ಎಂಬ ಗುಜರಾತ್ ಮಾದರಿಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಅವರು, ಮತ್ತೊಂದು ಕಡೆ ಯಾವ ಸದ್ದಿಲ್ಲದೆ ಸಾಧಿಸಿದ್ದು ಚುನಾವಣೆಗಾಗಿ ಎಲ್ಲವೂ ಎಂಬ ಹೊಸ ರಾಜಕೀಯ ವರಸೆ.
ಇದಕ್ಕೆ ತೀರಾ ತಾಜಾ ಉದಾಹರಣೆ, ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿರುವ ಉತ್ತರಪ್ರದೇಶದ ಲಖೀಮ್ ಪುರ್ ಖೇರಿಯ ಘಟನೆ. ಮೋದಿ ಸರ್ಕಾರ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸ್ವತಃ ದೇಶದ ಕೃಷಿಕರೇ ಸರಿಸುಮಾರು ಕಳೆದ ಒಂದು ವರ್ಷದಿಂದ ದೇಶದ ಉದ್ದಗಲಕ್ಕೆ ನಡೆಸುತ್ತಿರುವ ಹೋರಾಟದ ಭಾಗವಾಗಿ ಪ್ರತಿಭಟನೆನಿರತರಾಗಿದ್ದ ರೈತರ ಮೇಲೆ ಪ್ರಧಾನಮಂತ್ರಿಗಳ ಸಂಪುಟ ಸಹೋದ್ಯೋಗಿಯ ಪುತ್ರನೇ ಕಾರು ಚಲಾಯಿಸಿ ನಾಲ್ವರು ರೈತರು ಸೇರಿದಂತೆ ಎಂಟು ಮಂದಿಯ ಸಾವಿಗೆ ಕಾರಣನಾದ ಪೈಶಾಚಿತ ಘಟನೆ ಅದು.
ಇಂತಹದ್ದೊಂದು ಭೀಕರ ಘಟನೆ ನಡೆದಾಗ, ಆ ಘಟನೆಗೆ ಏನು ಕಾರಣ? ಯಾರು ಮಾಡಿದರು? ಹೇಗಾಯಿತು? ಅದರ ರಾಜಕೀಯ ಪರಿಣಾಮಗಳೇನು? ಚುನಾವಣಾ ಲಾಭನಷ್ಟದ ಲೆಕ್ಕಾಚಾರಗಳೇನು? ಎಂಬುದೆಲ್ಲಾ ಬದಿಗಿಟ್ಟು, ಯಾವುದೇ ಒಬ್ಬ ಕನಿಷ್ಟ ಮನುಷ್ಯತ್ವ ಇರುವ, ನಾಗರಿಕ ಪ್ರಜ್ಞೆ ಇರುವ ವ್ಯಕ್ತಿ ಆ ಘಟನೆಯನ್ನು ಮಡಿದವರಿಗಾಗಿ ಮಿಡಿಯುತ್ತಾರೆ. ಅದರಲ್ಲೂ ಪ್ರಧಾನಮಂತ್ರಿ, ಮುಖ್ಯಮಂತ್ರಿಯಂತಹ ಜವಾಬ್ಧಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳು ಇಂತಹ ದುರಂತಗಳಾದಾಗ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಬೇಕು, ಮಡಿದವರಿಗೆ ಸಂತಾಪ ಸೂಚಿಸಬೇಕು, ಮಡಿದವರ ಮನೆಮಂದಿಗೆ ಸಾಂತ್ವನದ ಮಾತನಾಡಬೇಕು ಎಂಬುದನ್ನು ನಾಗರಿಕ ಸಮಾಜ ನಿರೀಕ್ಷಿಸುತ್ತದೆ. ಅದು ಪ್ರಜಾಪ್ರಭುತ್ವದ ಪರಂಪರೆ ಕೂಡ.
ಆದರೆ, ಕ್ರಿಕೆಟಿಗನೊಬ್ಬನ ಕಿರುಬೆರಳು ಉಳುಕಿದರೆ, ಸಿನಿಮಾ ತಾರೆಯೊಬ್ಬಳ ಬಾಲ್ಕನಿಯ ಹೂವಿನ ಗಿಡಗಳು ಬಾಡಿದರೆ ರಾಷ್ಟ್ರೀಯ ವಿಪತ್ತು ಸಂಭವಿಸಿಬಿಟ್ಟಿತು ಎಂಬಂತೆ ಟ್ವೀಟ್ ಮಾಡಿ, ಕಾಳಜಿ ವ್ಯಕ್ತಪಡಿಸುವ, ಆತಂಕಗೊಳ್ಳುವ ‘ಸೂಕ್ಷ್ಮ’ ಮನಸಿನ ಮೋದಿಯವರು, ಲಖೀಮ್ ಪುರ್ ಖೇರಿಯ ದಾರುಣ ಕಗ್ಗೊಲೆಯ ಬಗ್ಗೆ ಅಪ್ಪಿತಪ್ಪಿಯೂ ಪ್ರತಿಕ್ರಿಯಿಸುವುದಿಲ್ಲ. ಅಷ್ಟೇ ಅಲ್ಲ; ಆ ಘಟನೆ ನಡೆದ ಜಾಗದಿಂದ ಕೇವಲ 150 ಕಿ.ಮೀ ದೂರದ ಲಖನೌದಲ್ಲಿ ತಮ್ಮದೇ ಪಕ್ಷದ ಸರ್ಕಾರ ಮತ್ತು ಯೋಗಿ ಆದಿತ್ಯನಾಥರ ಸಾಧನೆಗಳ ಗುಣಗಾನ ಮಾಡುವ ಅವರು, 35 ನಿಮಿಷಗಳ ತಮ್ಮ ಆ ಭಾಷಣದಲ್ಲಿ ದುರಂತದ ಬಗ್ಗೆ ಒಂದೇ ಒಂದು ಸೊಲ್ಲು ಪ್ರಸ್ತಾಪ ಮಾಡಲಿಲ್ಲ!
ಹಾಗೆ ನೋಡಿದರೆ, ಮೋದಿಯವರ ಇಂತಹ ವರಸೆ ಹೊಸದೇನಲ್ಲ. ಗುಜರಾತ್ ಮುಖ್ಯಮಂತ್ರಿಯಾದಂದಿನಿಂದಲೂ ಅವರು ಯಾವಾಗಲೂ ತಮಗೆ ಪೂರಕವಲ್ಲದ ಯಾವುದರ ಬಗ್ಗೆಯೂ ಕನಿಷ್ಟ ಸಹಾನುಭೂತಿಯೊಂದಿಗೆ ಪ್ರತಿಕ್ರಿಯಿಸುವವರಲ್ಲ. ಅದರಲ್ಲೂ ಚುನಾವಣಾ ಲಾಭಕ್ಕೆ ಹೊಡೆತ ಬೀಳುತ್ತದೆ ಎಂದರಂತೂ ಅಂತಹ ವಿಷಯಗಳನ್ನು ಒಂದೋ ಎಂದಿನ ದಿವ್ಯ ನಿರ್ಲಕ್ಷ್ಯದ ಅಸೂಕ್ಷ್ಮತೆಯ ವರಸೆಯನ್ನು ಪ್ರದರ್ಶಿಸುತ್ತಾರೆ? ಇಲ್ಲವೇ ತೀರಾ ಅಂತಹ ಘಟನೆ- ವಿದ್ಯಮಾನಗಳನ್ನೇ ತಮ್ಮ ಚುನಾವಣಾ ಲಾಭಕ್ಕೆ ತಕ್ಕಂತೆ ತಿರುಚಿ ಹುಯಿಲೆಬ್ಬಿಸುತ್ತಾರೆ. ಅದು ಅವರ ರಾಜಕೀಯ ಜಾಯಮಾನ. ಅದಕ್ಕೆ ಗೋಧ್ರಾ ಮತ್ತು ಗೋಧ್ರೋತ್ತರ ಹತ್ಯಾಕಾಂಡಗಳಿಗಿಂತ ಬೇರೆ ಉದಾಹರಣೆ ಬೇಕಿಲ್ಲ.
ಇಂತಹದ್ದೊಂದು ಹೇಯ ಕೃತ್ಯ ನಡೆದಾಗ ಆ ಕೃತ್ಯಕ್ಕೆ ಬಲಿಯಾದವರ ಬಗ್ಗೆ ಮಿಡಿಯುವುದು, ಅದರಲ್ಲೂ ಅನ್ನದಾತರು ಸಾವು ಕಂಡಿರುವಾಗ ಅವರಿಗಾಗಿ ಒಂದು ಸಂತಾಪದ ಮಾತು ಆಡುವುದು, ಘಟನೆಯ ಕುರಿತು ತನಿಖೆಯಾಗಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಆ ನಿಟ್ಟಿನಲ್ಲಿ ಸಂಬಂಧಪಟ್ಟ ರಾಜ್ಯ ಸರ್ಕಾರ ಮತ್ತು ಪೊಲೀಸ್ ತುರ್ತು ಕ್ರಮಕೈಗೊಳ್ಳಬೇಕು ಎಂಬುದನ್ನು ಹೇಳಲು ಕೂಡ ಒಬ್ಬ ಪ್ರಧಾನಿಯ ಎದೆಯಲ್ಲಿ ರವಷ್ಟು ಮಾನವೀಯ ಸ್ಪಂದನೆ ಇಲ್ಲವೆಂದಾದರೆ, ಅಂತಹದ್ದೊಂದು ನಡೆ ಪ್ರಧಾನಮಂತ್ರಿಯಂತಹ ಸ್ಥಾನಕ್ಕೆ ಯಾವ ಘನತೆ ತರಬಲ್ಲದು? ಏಕೆಂದರೆ, ಒಮ್ಮೆ ಬಹುಮತ ಗಳಿಸಿ, ಸಂಸದೀಯ ಪಕ್ಷದ ನಾಯಕರಾಗಿ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೇಲೆ ಆ ಸ್ಥಾನಕ್ಕೇರಿದವರು ದೇಶದ ಎಲ್ಲರನ್ನೂ ಸಮಾನ ಕಾಳಜಿಯಿಂದ, ಸಮಾನ ಪ್ರೀತಿಯಿಂದ ಕಾಣಬೇಕು. ಕನಿಷ್ಟ ಇಂತಹ ಮಾನವೀಯ ದುರಂತಗಳ ಸಂದರ್ಭದಲ್ಲಾದರೂ ಪಕ್ಷ ರಾಜಕಾರಣ, ಚುನಾವಣಾ ಲಾಭನಷ್ಟಗಳನ್ನು ಮೀರಿ ದೇಶದ ಚುಕ್ಕಾಣಿ ಹಿಡಿದವರು ನಡೆದುಕೊಳ್ಳಬೇಕು ಎಂದು ನಿರೀಕ್ಷಿಸುವುದು ನಾಗರಿಕ ಸಮಾಜದ ಸಹಜತೆ. ಹಾಗೇ ಪ್ರಜಾಪ್ರಭುತ್ವ ವ್ಯವಸ್ಥೆಯ ಘನತೆ ಕೂಡ.
ಹಾಗೆ ನೋಡಿದರೆ, ಪ್ರಧಾನಮಂತ್ರಿಗಳು ಸದಾ ಅತೀವ ಗೌರವ ಮತ್ತು ಹೆಮ್ಮೆಯಿಂದ ಬಣ್ಣಿಸುವಂತೆ ಭಾರತೀಯ ಸನಾತನ ಸಂಸ್ಕೃತಿಯ ಸಾರವೇ ಪರರ ನೋವಿಗೆ ಮಿಡಿಯುವುದು. ದುಃಖಕ್ಕೆ ಸ್ಪಂದಿಸುವುದು ಮತ್ತು ಸಾವು ಮತ್ತು ನೋವಿನಲ್ಲಿ ಎಲ್ಲಾ ಭಿನ್ನತೆ, ಸೇಡು, ದ್ವೇಷ, ಹಗೆತನಗಳನ್ನು ಮೀರಿ ಮಾನವೀಯತೆ ತೋರಿಸುವುದು ಭಾರತೀಯ ಸಂಸ್ಕೃತಿಯ ಹೆಚ್ಚುಗಾರಿಕೆ. ಆದರೆ, ಭಾರತೀಯತೆ ಮತ್ತು ಹಿಂದುತ್ವದ ಹೆಸರಿನಲ್ಲಿಯೇ ರಾಜಕಾರಣ ಮಾಡುವವರು ಮತ್ತು ಅವರ ಪಕ್ಷಗಳು ನಿಜವಾಗಿಯೂ ಆ ಮೌಲ್ಯಗಳನ್ನು ಎಷ್ಟರಮಟ್ಟಿಗೆ ಅಳಡಿಸಿಕೊಂಡಿದ್ದಾರೆ ಎಂಬುದಕ್ಕೆ ಇಂತಹ ಹೊತ್ತಲ್ಲಿ ಅವರು ಸ್ಪಂದನೆಗಳು ಸಾಣೆ ಹಿಡಿಯುತ್ತವೆ. ಪ್ರತಿಭಟನಾನಿರತರ ಮೇಲೆ ಕಾರು ಹತ್ತಿ ಸಾವು ಕಂಡವರಿಗೆ ಸಂತಾಪ ಸೂಚಿಸುವುದು ಪ್ರತಿಪಕ್ಷಗಳ ಮುಂದೆ ಮಂಡಿಯೂರಿದಂತೇನೂ ಅಲ್ಲ; ಅಥವಾ ಆ ಒಂದು ಸಂತಾಪ ಚುನಾವಣಾ ಕಣದಲ್ಲಿ ಸೋಲಿನ ಬಿರುಗಾಳಿ ಎಬ್ಬಿಸಿಬಿಡುತ್ತದೆ ಎಂದೂ ಅಲ್ಲ. ಹಾಗೆ ಸಂತಾಪ ವ್ಯಕ್ತಪಡಿಸುವುದು ಮತ್ತು ಘಟನೆಯ ಕುರಿತು ನಿಷ್ಪಕ್ಷಪಾತ ತನಿಖೆಗೆ ಸೂಚಿಸುವುದು ಅಧಿಕಾರ ಸ್ಥಾನದಲ್ಲಿರುವವರ ಘನತೆ ಮತ್ತು ಗೌರವ ತರುವ ನಡತೆ. ಅದರಲ್ಲೂ ತಾನು ಪ್ರಧಾನಿಯಲ್ಲ; ಜನರ ಸೇವಕ, ಫಕೀರ ಎಂದು ಸ್ವಯಂಘೋಷಿಸಿಕೊಂಡವರಿಗಂತೂ ಇಂತಹ ವಿಷಯಗಳು ಅವರನ್ನು ಜನರ ಮನಸಿನಲ್ಲಿ ಇನ್ನಷ್ಟು ಉನ್ನತ ಮಟ್ಟಕ್ಕೆ ಏರಿಸುತ್ತವೆ. ಅದರಲ್ಲೂ ಪ್ರಧಾನಿಯಾದವರು ಎಲ್ಲವನ್ನೂ ಚುನಾವಣೆಯ ಕಣ್ಣಿನಿಂದಲೇ ನೋಡುವುದ ಸಣ್ಣತನವಾಗುತ್ತದೆ. ಚುನಾವಣೆ, ಪಕ್ಷ ರಾಜಕಾರಣವನ್ನು ಮೀರಿ ಕನಿಷ್ಟ ಇಂತಹ ದುರಂತಗಳ ಹೊತ್ತಲ್ಲಾದರೂ ಮಿಡಿಯದೇ ಹೋದರೆ, ದೊಡ್ಡತನವೆನಿಸದು.
ಆದರೆ, ಚುನಾವಣಾ ಲಾಭವನ್ನಷ್ಟೇ ದೃಷ್ಟಿಯಲ್ಲಿಟ್ಟುಕೊಂಡಿರುವ ಅವರು, ಇಂತಹ ದುರಂತದ ನಡುವೆಯೂ ಆ ಘಟನಾ ಸ್ಥಳದಿಂದ ಕೇವಲ 150 ಕಿ.ಮೀ ದೂರದಲ್ಲಿ ನಿಂತು ಯೋಗಿ ಆದಿತ್ಯನಾಥರ ಆಡಳಿತದ ಬಗ್ಗೆ, ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ, ಅವರ ಜನಪರ ನೀತಿಗಳ ಬಗ್ಗೆ ಮತ್ತು ಅದರಿಂದಾಗಿ ಉತ್ತರಪ್ರದೇಶದಲ್ಲಿ ಸೃಷ್ಟಿಯಾಗುತ್ತಿರುವ ರಾಮರಾಜ್ಯದ ಬಗ್ಗೆ ಬರೋಬ್ಬರಿ ಅರ್ಧ ತಾಸು ಮಾತನಾಡಿದರು. ನಾಲ್ವರು ರೈತರ ಮೇಲೆ ತಮ್ಮದೇ ಸಚಿವನ ಪುತ್ರನ ಕಾರು ಹತ್ತಿದ್ದು ಮತ್ತು ರಕ್ತದ ಕೋಡಿಯಲ್ಲಿ ಅವರು ಶವವಾಗಿ ಬೀದಿಯಲ್ಲಿ ಬಿದ್ದಿರುವಾಗಲೇ ಪ್ರಧಾನಿಯೊಬ್ಬರು ಅಲ್ಲಿ ಆಡಳಿತದ ಗುಣಗಾನ ಮಾಡುತ್ತಾ ಅಧಿಕಾರಸ್ಥರ ಬೆನ್ನು ತಟ್ಟುತ್ತಾ ಹೆಮ್ಮೆ ಮತ್ತು ಸಂಭ್ರಮದಲ್ಲಿ ಬೀಗಿದರು!
ದಾರುಣ ದುರಂತದ ಎದುರು ಹೀಗೆ ಸಂಭ್ರಮಿಸುವುದು, ಬೀಗುವುದು ಸಾಧ್ಯವಾಗಿರುವುದು ಚುನಾವಣೆಗಾಗಿ ಅಧಿಕಾರ, ಚುನಾವಣೆಗಾಗಿ ಆಡಳಿತ, ಚುನಾವಣೆಯೇ ಎಲ್ಲವೂ ಎಂಬ ಮೂಲ ಮನೋಧರ್ಮದ ಕಾರಣದಿಂದ. ಕಾನೂನು- ಕಾಯ್ದೆ, ನೀತಿ- ನಿರೂಪಣೆಯಿಂದ ಹಿಡಿದು ಬಜೆಟ್ ವರೆಗೆ ಎಲ್ಲವೂ ಚುನಾವಣಾ ಗೆಲುವು ಮತ್ತು ಶಾಶ್ವತ ಅಧಿಕಾರದ ಹಪಾಹಪಿಯಿಂದಲೇ ನಿರ್ಧಾರಿತವಾಗಿರುವಾಗ, ಯಾವ ದುರಂತವೂ ಆಳುವ ಮಂದಿಯಲ್ಲಿ ಅಂತಃಕರಣ ಕೆದಕಲಾರವು ಎಂಬುದಕ್ಕೆ ಲಖೀಮ್ ಪುರ್ ಖೇರಿ ಘಟನೆ ಒಂದು ನಿದರ್ಶನ!