ನಂಜನಗೂಡು : ವರುಣ ವಿಧಾನಸಭಾ ಕ್ಷೇತ್ರದಲ್ಲಿ ವಿಶೇಷ ಚೇತನ ಮಹಿಳೆಯೋರ್ವರು ಸ್ವಂತ ಸೂರಿಗಾರಿ ಕಣ್ಣೀರಿಡುತ್ತಿದ್ದು, ಇವರಿಗೆ ಮನೆ ನಿರ್ಮಿಸಿಕೊಡಲು ಅಧಿಕಾರಿಗಳು, ಜನಪ್ರತಿನಿಧಿಗಳು ಮುತುವರ್ಜಿ ವಹಿಸಬೇಕಾಗಿದೆ.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹನುಮನಪುರ ಗ್ರಾಮದಲ್ಲಿ ವಿಶೇಷ ಚೇತನ ಮಹಿಳೆಗೆ ವಾಸಿಸಲು ಮನೆ ಇಲ್ಲ, ತಿನ್ನಲು ಆಹಾರವಿಲ್ಲ, ತಗಡಿನ ಮನೆಗೆ ರೇಷ್ಮೆ ಗೂಡಿನ ತಟ್ಟೆಯೇ ಬಾಗಿಲು, ವಿದ್ಯುತ್ ದೀಪವಿಲ್ಲ. ಪಿಂಚಣಿ ಹಣದಲ್ಲೇ ಜೀವನ ಸಾಗಿಸುವ ಮಹಿಳೆಯ ರೋಧನೆ ಮನ ಕಲಕುವಂತಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸಿದ್ದ ಹಾಗೂ ಹಾಲಿ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹನುಮನಪುರ ಗ್ರಾಮದ ಜಯಮ್ಮ ಎಂಬ ವಿಶೇಷ ಚೇತನ ಮಹಿಳೆ ಬೀದಿಗೆ ಬಿದ್ದಿದ್ದಾಳೆ.
ಇವರ ಬಗ್ಗೆ ಜನಸಂಗ್ರಾಮ ಪರಿಷತ್ ರಾಜ್ಯಾಧ್ಯಕ್ಷ ನಗರ್ಲೆ ಎಂ ವಿಜಯಕುಮಾರ್ ಬೆಳಕು ಚೆಲ್ಲಿದ್ದಾರೆ. ಜನಸಂಗ್ರಾಮ ಪರಿಷತ್ ನ ಪದಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದಾರೆ.

ಸ್ವಂತ ಸೂರಿಗಾಗಿ ಕಣ್ಣೀರು ಹಾಕುತ್ತಿರುವ ಮಹಿಳೆಗೆ ಬಂಧು ಬಳಗದವರು ಯಾರು ಇಲ್ಲದೆ ಅನಾಥೆಯಾಗಿದ್ದಾಳೆ. ಕಳೆದ 15 ವರ್ಷಗಳಿಂದ ಕಣ್ಣೀರಿಡುತ್ತಿರುವ ಮಹಿಳೆ, ಮನೆ ಇಲ್ಲದೆ ಪರದಾಡುತ್ತಿದ್ದಾಳೆ. ಅಲ್ಲೇ ಗ್ರಾಮದ ಮಧು ಎಂಬ ಯುವಕ ಆ ಅಂಗವಿಕಲೆಯ ಕಷ್ಟಕ್ಕೆ ಮಿಡಿದು, ಮಹಿಳೆಗೆ ತಗಡಿನಿಂದ ತಾತ್ಕಾಲಿಕವಾಗಿ ಗುಡಿಸಲು ನಿರ್ಮಾಣ ಮಾಡಿಕೊಟ್ಟಿದ್ದಾರೆ.
ಲೇಟ್ ಮಣಿಯಯ್ಯ ಎಂಬುವರ ಪುತ್ರಿ ಜಯಮ್ಮ ಹುಟ್ಟುತ್ತಲೇ ವಿಶೇಷ ಚೇತನರಾಗಿದ್ದಾರೆ. ತಂದೆ ಇರುವ ತನಕ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದರು. ತಂದೆ ಸಾವನ್ನಪ್ಪಿದ ಬಳಿಕ ಇವರ ಜೀವನ ಹೇಳತೀರದು. ಇರೋದಕ್ಕೆ ಮನೆನು ಇಲ್ಲ, ಜಾಗವೂ ಇಲ್ಲ, ಕುಡಿಯೋಕೆ ನೀರಿನ ವ್ಯವಸ್ಥೆಯು ಇಲ್ಲ, ಮನೆಗೆ ವಿದ್ಯುತ್ ದೀಪವು ಇಲ್ಲ, ಶೌಚಾಲಯ ಅಂತೂ ಇಲ್ಲವೇ ಇಲ್ಲ. ತಗಡಿನಲ್ಲಿ ಪುಟ್ಟದಾದ ಮನೆ ಮಾಡಿಕೊಂಡು ಜೀವನವನ್ನು ಸಾಗಿಸುತ್ತಿರುವ ಅಂಗವಿಕಲ ಮಹಿಳೆಯನ್ನು ಚುನಾವಣೆಯ ಸಂದರ್ಭದಲ್ಲಿ ಓಟಿಗಾಗಿ ಜನಪ್ರತಿನಿಧಿಗಳು ಬಳಸಿಕೊಳ್ಳುತ್ತಾರೆ. ನನಗೆ ಯಾವುದೇ ಸೌಲಭ್ಯವನ್ನು ನೀಡಿಲ್ಲ ಎಂದು ಕಣ್ಣೀರಿಟ್ಟಿದ್ದಾಳೆ.
ಅಕ್ಕ ಪಕ್ಕದ ಮನೆಯವರು ಊಟ ಕೊಟ್ಟರಷ್ಟೇ ಮಾಡುತ್ತೇನೆ ಇಲ್ಲದಿದ್ದರೆ ಉಪವಾಸ ಮಲಗುತ್ತೇನೆ. ವಿಶೇಷ ಚೇತನರಿಗೆ ಪ್ರತಿ ತಿಂಗಳು ಬರುವ ಪಿಂಚಣಿ ಹಣದಲ್ಲಿ ಜೀವನ ಸಾಗಿಸುತ್ತೇನೆ.

ಪಿಂಚಣಿ ಹಣ ಕೊಡಲು ಲಂಚ
ಪಿಂಚಣಿ ಹಣ ಪ್ರತಿ ತಿಂಗಳು ಬರುವುದಿಲ್ಲ. ಮೂರ್ನಾಲ್ಕು ತಿಂಗಳಿಗೆ ಬರುತ್ತದೆ. ಪಿಂಚಣಿ ನೀಡಲು ಚುಂಚನಹಳ್ಳಿ ಪೋಸ್ಟ್ ಮ್ಯಾನ್ ಲಂಚ ಕೇಳುತ್ತಿದ್ದಾರೆ. ಹಣವನ್ನು ಕೊಡುವಾಗ 200 ರಿಂದ 300 ಲಂಚ ತೆಗೆದುಕೊಂಡು ಪಿಂಚಣಿ ಹಣ ನೀಡುತ್ತಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಸ್ವಂತ ಮನೆಯನ್ನು ನಿರ್ಮಾಣ ಮಾಡಿಕೊಡಿ ಎಂದು ಮನವಿ ಮಾಡಿದರು ಯಾರು ಕೂಡ ನನಗೆ ಕರುಣೆ ತೋರುತ್ತಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಸ್ಥಳೀಯ ಜನಪ್ರತಿನಿಧಿಗಳ ಬಳಿ ಹೇಳಿಕೊಂಡರು ಯಾರು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಕೂಡಲೇ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ವಿಶೇಷ ಚೇತನ ಮಹಿಳೆಯ ನೋವಿಗೆ ಸ್ಪಂದಿಸಬೇಕು ಎಂಬುದು ನಮ್ಮ ವಾಹಿನಿಯ ಆಶಯವಾಗಿದೆ.