ಮುಂಬರುವ ೨೦೨೩ ರ ರಾಜ್ಯ ವಿಧಾನಸಭೆಯ ಚುನಾವಣೆ ಅನೇಕ ಕಾರಣಗಳಿಂದ ಮಹತ್ವ ಪಡೆದಿದೆ. ಈ ಚುನಾವಣೆಯ ಫಲಿತಾಂಶವು ರಾಜ್ಯದ ಮುಂದಿನ ದಿನಗಳ ಭವಿಷ್ಯವನ್ನು ನಿರ್ಧರಿಸಲಿದೆ.
ಹೆಚ್ಚು ಓದಿದ ಸ್ಟೋರಿಗಳು
ಕಳೆದ ೧೫೦ ವರ್ಷಗಳ ದೇಶದ ಜನಗಣತಿಯ ಇತಿಹಾಸ ಈಗಾಗಲೆ ಬುಡಮೇಲಾಗಿದೆ. ೨೦೨೧ ರಲ್ಲಿ ಆಗಬೇಕಿದ್ದ ಜನಗಣತಿಯು ಈ ಬಾರಿ ಆಗಿಲ್ಲ ಮತ್ತು ಇನ್ನೊಂದು ವರ್ಷದಲ್ಲಿ ಆಗುವ ಸಂಭವವೂ ಇಲ್ಲ. ಅದರ ಹಿಂದಿನ ಉದ್ದೇಶ ಬಹಳ ಅಪಾಯದಿಂದ ಕೂಡಿದೆ. ಹಾಗಾಗಿˌ ಕರ್ನಾಟಕ ವಿಧಾನ ಸಭೆಯ ಚುನಾವಣೆಯ ಫಲಿತಾಂಶವು ಕೇವಲ ಕರ್ನಾಟಕದ ಭವಿಷ್ಯ ಮಾತ್ರವಲ್ಲದೆˌ ಅದು ೨೦೨೪ ರಲ್ಲಿ ನಡೆಯಲಿರುವ ದೇಶದ ಸಾಮಾನ್ಯ ಚುನಾವಣೆಗೆ ದಿಕ್ಸೂಚಿಯಾಗಲಿದ್ದು ಆ ಸಂಸತ್ ಚುನಾವಣೆಯ ಫಲಿತಾಂಶವು ಇಡೀ ದೇಶದ ಭವಿಷ್ಯವನ್ನು ನಿರ್ಧರಿಸಲಿದೆ.
ಸಾವಿರಾರು ವರ್ಷಗಳ ಭಾರತದ ಭವ್ಯ ಪರಂಪರೆˌ ಸೌಹಾರ್ದತೆˌ ಬಹುತ್ವ ಮತ್ತು ಸ್ವಾತಂತ್ರಾ ನಂತರ ದೇಶ ಸಾಧಿಸಿದ ಪ್ರಗತಿˌ ಜನತಂತ್ರ ವ್ಯವಸ್ಥೆ ˌ ಮುಂತಾದವುಗಳು ಕಳೆದ ಏಳು ವರ್ಷಗಳಲ್ಲಿ ಹಿಮ್ಮುಖ ಚಲನೆ ಕಂಡಿವೆ. ದೇಶದಲ್ಲಿ ಕಾರ್ಪೋರೇಟ್ ಕಳ್ಳೋದ್ಯಮಿಗಳು ಒಂದು ಕಡೆ ಸೊಕ್ಕುತ್ತಿದ್ದರೆ ಜನಸಾಮಾನ್ಯನ ಬದುಕು ನರಕವಾಗಿದೆ. ಆ ದೃಷ್ಟಿಯಿಂದ ೨೦೨೩ ರ ಕರ್ನಾಟಕ ವಿಧಾನಸಭಾ ಚುನಾವಣೆಯು ೨೦೨೪ ರ ದೇಶದ ಸಂಸತ್ತಿನ ಮಹಾ ಚುನಾವಣೆಗೆ ದಿಕ್ಸೂಚಿ ಆಗುವ ಮೂಲಕ ರಾಜ್ಯ ಮತ್ತು ದೇಶಗಳೆರಡರ ಭವಿಷ್ಯವನ್ನು ನಿರ್ಧರಿಸಲಿವೆ.
ಯಡಿಯೂರಪ್ಪ ಹೊರತು ಪಡಿಸಿದ ೨೦೨೩ ರ ಚುನಾವಣೆ

ಯಡಿಯೂರಪ್ಪನವರು ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ರಾಜ್ಯದಲ್ಲಿ ನಡೆದ ಅನೇಕ ಚುನಾವಣೆಗಳ ಮುಖ್ಯ ಭಾಗವಾಗಿದ್ದರು. ಅವರ ಸತತ ಪ್ರಯತ್ನದಿಂದ ದೇಶದಲ್ಲಿ ಅಸ್ಪ್ರಶ್ಯವಾಗಿದ್ದ ಬಿಜೆಪಿ ದಕ್ಷಿಣ ಭಾರತದ ಹೆಬ್ಬಾಗಿಲೆಂದೆ ಗುರುತಿಸಲಾಗುವ ಕರ್ನಾಟಕದಲ್ಲಿ ಅಧಿಕಾರ ಹಿಡಿಯುವಲ್ಲಿ ಭಾಗಶಃ ಯಶಸ್ವಿಯಾಗಿದೆ. ಕೇವಲ ಯಡಿಯೂರಪ್ಪ ದೆಶೆಯಿಂದಲೆ ಬಿಜೆಪಿ ಸರಳ ಬಹುಮತದ ಹತ್ತಿರಕ್ಕೆ ಬಂದು ಎರಡು ಸಲ ಅನೈತಿಕ ಮಾರ್ಗದಿಂದ ಕರ್ನಾಟದಲ್ಲಿ ಅಧಿಕಾರ ಹಿಡಿದಾಗಲೂ ಪಾಪ ಯಡಿಯೂರಪ್ಪ ಎರಡೂ ಅವಧಿಯಲ್ಲಿ ಸಂಪೂರ್ಣ ಅಧಿಕಾರ ಅನುಭವಿಸದಂತೆ ಬಿಜೆಪಿಯನ್ನು ನಿಯಂತ್ರಿಸುವ ಅಸಂವಿಧಾನಿಕ ಮತೀಯವಾದಿ ಶಕ್ತಿಗಳು ತಡೆದಿವೆ. ಅದಕ್ಕೆ ಹಲವಾರು ಕಾರಣಗಳಿವೆ.
ಈ ಕುರಿತು ಮುಂದಿನ ದಿನಗಳಲ್ಲಿ ಇನ್ನಷ್ಟು ಸವಿಸ್ತಾರವಾಗಿ ಬರೆಯಲಿದ್ದೇನೆ. ಆದರೆ ಈ ಚುನಾವಣೆ ಕರ್ನಾಟಕದ ಪಾಲಿಗೆ ಮತ್ತು ಅದರಲ್ಲೂ ವಿಶೇಷವಾಗಿ ಬಿಜೆಪಿ ಪಾಲಿಗೆ ಯಡಿಯೂರಪ್ಪ ಹೊರತು ಪಡೆಸಿದ ಚುನಾವಣೆಯಾಗಲಿದೆ. ಸತತ ಹೋರಾಟದ ಹಿನ್ನೆಲೆ ಮತ್ತು ಮತೀಯವಾದಿ ಪಕ್ಷದಲ್ಲಿದ್ದೂ ಕೂಡ ಒಂದಷ್ಟು ಜಾತ್ಯಾತೀತ ಮನೋಭಾವ ಹೊಂದಿರುವ ಯಡಿಯೂರಪ್ಪನವರನ್ನು ಹೊರತು ಪಡಿಸಿ ನಡೆಯಲಿರುವ ಈ ಚುನಾವಣೆ ಬಿಜೆಪಿಯ ಮುಂದಿನ ಭವಿಷ್ಯವನ್ನು ನಿರ್ಣಯಿಸಲಿದೆ. ಹಾಗೆಯೇ ಈ ಚುನಾವಣೆಯಲ್ಲಿ ಬಿಜೆಪಿಯ ಭವಿಷ್ಯವನ್ನು ನಿರ್ಣಯಿಸುವವರೂ ಕೂಡ ಅದೇ ಯಡಿಯೂರಪ್ಪನವರು ಎನ್ನುವುದು ಮರೆಯಬಾರದು.
೨೦೦೮ ರಲ್ಲಿ ಬಿಜೆಪಿಯಿಂದ ಅಧಿಕಾರ ವಂಚಿತರಾಗಿದ್ದ ಯಡಿಯೂರಪ್ಪನವರು ಅವರದೇ ಪಕ್ಷದವರ ಕುಟಿಲ ಹುನ್ನಾರದಿಂದ ಜೈಲು ಪಾಲಾಗಿದ್ದರು ಮತ್ತು ಅದಕ್ಕೆ ಪ್ರತಿಕಾರವೆನ್ನುವಂತೆ ೨೦೧೩ ರ ಚುನಾವಣೆಯಲ್ಲಿ ಕೆಜೆಪಿ ಸ್ಥಾಪಿಸಿ ಬಿಜೆಪಿಯ ನೈಜ ಯೋಗ್ಯತೆಯನ್ನು ಹೊರಗೆಡವಿದ ಸಂಗತಿ ನಾವು ಬಲ್ಲೆವು. ಈಗ ಮತ್ತೆ ಅಂತದ್ದೆ ಅವಮಾನಕ್ಕೆ ಯಡಿಯೂರಪ್ಪ ಈಡಾಗಿದ್ದಾರೆ. ಈಗಲೂ ಅವರು ಮತ್ತೊಮ್ಮೆ ಪ್ರಾದೇಶಿಕ ಪಕ್ಷ ಕಟ್ಟಿ ಬಿಜೆಪಿಯನ್ನು ಮಕಾಡೆ ಮಲಗಿಸುವ ಯೋಚನೆ ಹೊಂದಿದ್ದರೂ ಕೂಡˌ ಹಾಗೆ ಮಾಡದಂತೆ ಕೆಲವು ದುಷ್ಟ ಶಕ್ತಿಗಳು ಅವರನ್ನು ಬ್ಲ್ಯಾಕ್ಮೇಲ್ ಮಾಡುವ ಮೂಲಕ ತಡೆಯೊಡ್ಡುತ್ತಿವೆ ಎನ್ನುವ ಸಂಗತಿ ಎಲ್ಲರಿಗೆ ತಿಳಿದದ್ದೆ.
ಹಾಗೆಂದು ಯಡಿಯೂರಪ್ಪ ಸುಮ್ಮನೆ ಕೂಡುವ ಜಾಯಮಾನದವರಲ್ಲ. ಅವರು ಈ ಸಲ ತಮ್ಮ ಪಕ್ಷದೊಳಗಿನ ಎದುರಾಳಿಗಳಷ್ಟೆ ಸೂಕ್ಷ್ಮವಾದ ಪ್ರತಿತಂತ್ರವನ್ನು ಹೆಣೆದಿರುವಂತಿದೆ. ಇಲ್ಲಿ ಬಿಜೆಪಿ ಹೈಕಮಾಂಡ್ ಮತ್ತು ಅದನ್ನು ನಿಯಂತ್ರಿಸುವ ಅಸಂವಿಧಾನಿಕ ಮತೀಯವಾದಿ ಶಕ್ತಿಗಳು ತಮ್ಮ ಎದುರಾಳಿ ಪಕ್ಷಕ್ಕಿಂತ ಯಡಿಯೂರಪ್ಪನವರನ್ನು ನಿಯಂತ್ರಿಸಲು ತಮ್ಮೆಲ್ಲ ಶಕ್ತಿಯನ್ನು ಕ್ರೂಢೀಕರಿಸುತ್ತಿವೆ ಎನ್ನುವ ಸಂಗತಿ ಗುಟ್ಟಿನದೇನಲ್ಲ. ಆದರೆ ಕರ್ನಾಟಕವನ್ನು ಉತ್ತರಪ್ರದೇಶದಂತೆ ಚಿಂತನಾಹೀನ ಮಾಡಬೇಕೆನ್ನುವ ಧರ್ಮಾಂಧರ ಹುನ್ನಾರ ಅಷ್ಟು ಸುಲಭವಾಗಿ ಈಡೇರಲು ಕರ್ನಾಟಕದ ರಾಜಕಾರಣ ಅನುವು ಮಾಡಿಕೊಡಲಾರದು ಎನ್ನುವ ಸಂಗತಿ ಆ ಅಸಂವಿಧಾನಿಕ ಶಕ್ತಿಗಳಿಗೂ ತಿಳಿದಿದೆ.
ಯಡಿಯೂರಪ್ಪನವರಿಗೆ ಈಗ ಯವಸ್ಸಾಗಿದ್ದರೂ ಕೂಡ ಇನ್ನೂ ಕರ್ನಾಟಕದ ಮತದಾರರ ಮೇಲೆ ತಮ್ಮ ಗಣನೀಯವಾದ ಬಿಗಿ ಹಿಡಿತವನ್ನು ಹೊಂದಿದ್ದಾರೆ. ಕಳೆದ ಏಳೆಂಟು ವರ್ಷಗಳಲ್ಲಿನ ಬೆಳವಣಿಗೆಗಳು ಅವರನ್ನು ಇನ್ನಿಲ್ಲದಂತೆ ಘಾಸಿಗೊಳಿಸಿವೆ. ೨೦೧೮ ರ ಚುನಾವಣೆಯಲ್ಲಿ ತಮ್ಮ ಮಗನಿಗೆ ವಿಧಾನಸಭೆಗೆ ಸ್ಪರ್ಧಿಸಲು ನಿರಾಕರಿಸಿದ ಶಕ್ತಿಗಳು ಈಗ ಪಕ್ಷದ ಮೇಲೆ ಇನ್ನಷ್ಟು ಹಿಡಿತವನ್ನು ಸಾಧಿಸಿವೆ. ಈಗಲೂ ಪಕ್ಷದ ಮೆಲಿನ ಯಡಿಯೂರಪ್ಪ ನಿಯಂತ್ರಣವನ್ನು ತೆಗೆದು ಹಾಕುತ್ತಲೆ ಅವರನ್ನು ಮತ ಬೇಟೆಗೆ ಬಳಸಿಕೊಳ್ಳುವ ಸನಾತನರ ಕೊಳಕು ಹುನ್ನಾರಗಳು ನಡೆಯುತ್ತಿವೆ. ಇದೆಲ್ಲವನ್ನು ಬಲ್ಲ ಯಡಿಯೂರಪ್ಪನವರು ಈಗ ಹೊಸ ಪಕ್ಷವನ್ನು ಕಟ್ಟಿ ತೊಂದರೆಗೀಡಾಗುವ ಬದಲಿಗೆ ಪಕ್ಷದೊಳಗಡೆ ಇದ್ದುಕೊಂಡೆ ಬಿಜೆಪಿಗೆ ಬಲವಾದ ಪೆಟ್ಟು ಕೊಡಲು ಏನೆಲ್ಲ ಸಿದ್ದತೆಗಳು ಮಾಡಿಕೊಳ್ಳಬೇಕೊ ಅವನ್ನು ಮಾಡಿಕೊಂಡಿದ್ದಾರೆ ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ಅವರ ಬೆಂಬಲಿಗರು.
ಇದರ ನಡುವೆˌ ಬಳ್ಳಾರಿಯ ಜನಾರ್ಧನ ರೆಡ್ಡಿ ಬಿಜೆಪಿ ತನ್ನನ್ನು ಬಳಸಿ ಬೀಸಾಡಿತು ಎಂದು ವ್ಯಘ್ರಗೊಂಡಿದ್ದಾರೆ. ತನಗೆ ಆಶ್ವಾಸನೆ ನೀಡಿಯೂ ಉಪಮುಖ್ಯಮಂತ್ರಿ ಮಾಡಲಿಲ್ಲವೆಂದು ಒಳಗೊಳಗೆ ಕುದಿಯುತ್ತಿರುವ ರೆಡ್ಡಿ ಆಪ್ತ ಶ್ರೀರಾಮಲು ಕೂಡ ಬಿಜೆಪಿಯನ್ನು ಮಣಿಸಲು ರೆಡ್ಡಿಗೆ ಗುಪ್ತವಾಗಿ ಬೆಂಬಲಿಸಬಹುದು ಎನ್ನಲಾಗುತ್ತಿದೆ. ಒಟ್ಟಾರೆ ಬಿಜೆಪಿ ಮತ್ತು ಅದನ್ನು ನಿಯಂತ್ರಿಸುವ ಅಸಂವಿಧಾನಿಕ ಮತೀಯವಾದಿ ಶಕ್ತಿಗಳು ತಮ್ಮೆಲ್ಲ ಶಕ್ತಿಯನ್ನು ಕರ್ನಾಟಕದ ಚುನಾವಣೆಯಲ್ಲಿ ವಿನಿಯೋಗಿಸಲು ಹೊಂಚು ಹಾಕುತ್ತಿವೆ. ಚುನಾವಣಾ ದಿನಾಂಕ ಘೋಷಣೆಯಾದ ಮೇಲೆ ಇದರ ಚಿತ್ರಣ ಇನ್ನಷ್ಟು ಸ್ಪಷ್ಟವಾಗಲಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಇನ್ನಷ್ಟೂ ರಾಜಕೀಯ ವಿಶ್ಲೇಷಣೆಗಳನ್ನು ನಿಮಗೆ ನೀಡಲಿದ್ದೇನೆ.