ಬೆಂಗಳೂರು ;ದೆಹಲಿಯಲ್ಲಿ ನಂದಿನಿ ಹಾಲಿನ ವ್ಯಾಪಾರವನ್ನು ಯಶಸ್ವಿಯಾಗಿ ಮುಂದುವರಿಸುತ್ತಿರುವ ಬೆನ್ನಲ್ಲೇ ಕರ್ನಾಟಕ ಹಾಲು ಮಹಾಮಂಡಳ (ಕೆಎಮ್‌ಎಫ್), ಇದೀಗ ಸಂಕ್ರಾಂತಿ ಹಬ್ಬದ ನಂತರ ರಾಜಸ್ಥಾನದಲ್ಲಿ ಹಾಲು ಮಾರಾಟವನ್ನು ವಿಸ್ತರಿಸಲು ತಯಾರಿ ನಡೆಸುತ್ತಿದೆ.
ಮೊದಲು ರಾಜಾಸ್ಥಾನದ ರಾಜಧಾನಿ ಜೈಪುರದಲ್ಲಿ ಹಾಲು ಮಾರಾಟವನ್ನು ಪ್ರಾರಂಬಿಸಲಾಗುತ್ತದೆ. ಇಲ್ಲಿ ಹಾಲನ್ನು ಸ್ಥಳೀಯವಾಗಿ ಪ್ಯಾಕಿಂಗ್ ಮಾಡಿಸಿ, ಗ್ರಾಹಕರಿಗೆ ತಲುಪಿಸಲಾಗುವುದು ಎಂಬ ಮಾಹಿತಿ ಕೆಎಮ್‌ಎಫ್ ಮೂಲಗಳಿಂದ ಬಂದಿದೆ.”ದೆಹಲಿಯಲ್ಲಿ ನಂದಿನಿ ಹಾಲಿನ ಪ್ಯಾಕೆಟ್ ಅರಬರಾಜು ಮಾಡುವ ಒಂದು ಕಂಪನಿಯವರು ರಾಜಸ್ಥಾನದಲ್ಲಿಯೂ ಹಾಲಿನ ಮಾರಾಟಕ್ಕೆ ಉತ್ಸಾಹವನ್ನು ತೋರಿಸಿದ್ದಾರೆ. ಪ್ರಾಥಮಿಕವಾಗಿ, ಪ್ರತಿ ದಿನ 20,000 ಲೀಟರ್ ಹಾಲು ಮಾರಾಟ ಮಾಡಲು ಅವರಲ್ಲಿ ವಿಶ್ವಾಸವಿದೆ. ಸಂಕ್ರಾಂತಿ ಹಬ್ಬದ ನಂತರ ಆ ಪ್ರದೇಶದಲ್ಲಿ ಹಾಲು ಪೂರೈಕೆಗೆ ಅಗತ್ಯ ಸಿದ್ಧತೆಗಳು ನಡೆಯುತ್ತಿವೆ” ಎಂದು ಕೆಎಮ್‌ಎಫ್ ಅಧ್ಯಕ್ಷ ಭೀಮಾನಾಯ್ಕ್ ಮಾಧ್ಯಮಗಳಿಗೆ ಹೇಳಿದರು.
ಉತ್ತರ ಭಾರತದ ಜನಪ್ರಿಯ ಬ್ರಾಂಡ್ ಗಳಾದ ಅಮುಲ್ , ಮದರ್ ಡೈರಿ , ಹೆರಿಟೇಜ್ ಕಂಪೆನಿಗಳ ಹಾಲಿನ ದರ ನಂದಿನಿಯ ಬೆಲೆಗಿಂತ ಸ್ವಲ್ಪ ಹೆಚ್ಚು ಇದೆ. ಹೀಗಾಗಿ, ರಾಜಸ್ಥಾನದಲ್ಲಿ ಸ್ಪರ್ಧಾತ್ಮಕ ದರದಲ್ಲಿ ನಂದಿನಿ ಹಾಲು ಮಾರಾಟ ಮಾಡುವ ಯೋಚನೆಯಲ್ಲಿದೆ. ಗ್ರಾಹಕರ ಪ್ರತಿಕ್ರಿಯೆ ನೋಡಿ ದರ ಪರಿಷ್ಕರಣೆಯ ಬಗ್ಗೆ ಚರ್ಚೆ ಮಾಡಲಾಗುವುದು” ಎಂದರು.
ನವೆಂಬರ್ 21ರಿಂದ ದೆಹಲಿಯ ಅನೇಕ ಸ್ಥಳಗಳಲ್ಲಿ ನಂದಿನಿ ಹಾಲು ಪೂರೈಕೆ ಕಾರ್ಯಾಚರಣೆ ಆರಂಭವಾಗಿದೆ. ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್‌ಮುಲ್) ಹೆಸರಿನ ಅಡಿಯಲ್ಲಿ, ಆಯ್ಕೆಯಾದ ಸಗಟು ಹಾಲು ಸಂಗ್ರಹ ಕೇಂದ್ರಗಳಿಂದ ಗುಣಮಟ್ಟದ ಹಾಲು ಸಂಗ್ರಹಿಸಿ, ಶೇ 1 ಡಿಗ್ರಿ ತಾಪಮಾನದಲ್ಲಿ ಇನ್ಸುಲೇಟೆಡ್ ಟ್ಯಾಂಕರ್ ಮೂಲಕ ದಿನಕ್ಕೆ 15,000 ಲೀಟರ್ ಹಾಲು ದೆಹಲಿಗೆ ಸಾಗಿಸಲಾಗುತ್ತಿದೆ.
“ಇಷ್ಟು ದಿನಗಳಲ್ಲಿ ನಂದಿನಿ ಹಾಲು ದೆಹಲಿಯ ತಲುಪುತ್ತಿದೆ. ಅಲ್ಲಿಂದಲೇ ಪ್ಯಾಕಿಂಗ್ ಮಾಡಿ ಗ್ರಾಹಕರಿಗೆ ತಲುಪಿಸಲಾಗುತ್ತಿದೆ. ರಾಜಸ್ಥಾನದಲ್ಲಿ ಹಾಲು ಮಾರಾಟ ಶುರುವಾದಾಗ, ಅಲ್ಲಿ ಸಹ ಇದೇ ವಿಧಾನದಲ್ಲಿ ಹಾಲು ಪೂರೈಸಲಾಗುವುದು” ಎಂದು ಮನ್‌ಮುಲ್‌ನ ಅಧಿಕಾರಿಯೊಬ್ಬರು ತಿಳಿಸಿದರು.ದೆಹಲಿಯಲ್ಲಿ ಪ್ರಸ್ತುತ ನಾಲ್ಕು ಮಾದರಿಯ ಹಾಲು ಮಾರಾಟವಾಗುತ್ತಿದೆ.
ಇನ್ನೂ ಹದಿನೈದು ರಿಂದ ಇಪ್ಪತ್ತು ದಿನಗಳ ಒಳಗೆ ಹೆಚ್ಚುವರಿಯಾಗಿ ನಾಲ್ಕು ಹೊಸ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗುವುದು ಎಂದು ಮನ್‌ಮುಲ್ ಮೂಲಗಳು ಮಾಹಿತಿ ನೀಡಿವೆ.