ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿದ್ದ ಜಟಾಪಟಿ ಕೊನೆಗೂ ಅಂತ್ಯ ಕಂಡಿದೆ. ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರಾಗಿರುವ ಶ್ರೀನಿವಾಸ್ ಬಿ ವಿ ಅವರು, ಈ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಸೋಮವಾರದಂದು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಶ್ರೀನಿವಾಸ್ ಅವರು, ಈಗಾಗಲೇ ಯುವ ಕಾಂಗ್ರೆಸ್ ಅಧ್ಯಕ್ಷರಾಗಿರುವ ರಕ್ಷಾ ರಾಮಯ್ಯ ಅವರು 31 ಜನರಿ 2022ರ ವರೆಗೆ ತಮ್ಮ ಸ್ಥಾನದಲ್ಲಿ ಮುಂದುವರೆಯುತ್ತಾರೆ. ಆ ಬಳಿಕ ಮೊಹಮ್ಮದ್ ನಲಪಾಡ್ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
2021ರ ಜನವರಿಯಲ್ಲಿ ಚುನಾವಣೆ ನಡೆಸಲಾಗಿತ್ತು. ನಲಪಾಡ್ ಅವರು ಅತ್ಯಧಿಕ ಮತಗಳನ್ನು ಪಡೆದುಕೊಂಡಿದ್ದರೂ, ರಕ್ಷಾ ರಾಮಯ್ಯ ಅವರಿಗೆ ಅಧ್ಯಕ್ಷ ಸ್ಥಾನ ಕೊಡಲಾಗಿತ್ತು. ಚುನಾವಣೆಯ ನಿಯಮಗಳ ಪ್ರಕಾರ ಚುನಾವಣೆ ನಿರ್ವಹಣಾ ಸಮಿತಿಯ ತೀರ್ಮಾನ ಅಂತಿಮವೆಂದು ಸ್ಪಷ್ಟವಾಗಿ ಹೇಳಲಾಗಿತ್ತು. ನಲಪಾಡ್ ಗೆ ಹೆಚ್ಚಿನ ಮತ ಬಂದಿದ್ದರೂ, ಕ್ರಿಮಿನಲ್ ಹಿನ್ನೆಲೆ ಇರುವ ಕಾರಣ ಅವರ ಆಯ್ಕೆ ಸೂಕ್ತವಲ್ಲ ಎಂದು ಸಮಿತಿ ತೀರ್ಮಾನಿಸಿತ್ತು.
ಸಮಿತಿಯ ತೀರ್ಮಾನದ ವಿರುದ್ದ ಕಾಂಗ್ರೆಸ್ ನಾಯಕರ ಬಳಿ ಲಾಬಿ ನಡೆಸಿದ್ದರು. ಅಧ್ಯಕ್ಷ ಸ್ಥಾನ ತಮಗೇ ಲಭಿಸಬೇಕೆಂದು ಹಠಹಿಡಿದಿದ್ದರು. ಕಳೆದ ಆರು ತಿಂಗಳಿನಿಂದಲೂ, ರಾಜ್ಯ ಯುವ ಕಾಂಗ್ರೆಸ್ ಘಟಕಕ್ಕೆ ನಾಯಕತ್ವದ ಕುರಿತಾಗಿ ಗೊಂದಲಮಯ ಸನ್ನಿವೇಶಗಳು ಸೃಷ್ಟಿಯಾಗಿದ್ದವು. ಈಗ ರಕ್ಷಾ ರಾಮಯ್ಯ ಅವರ ಅಧಿಕಾರ ಅವಧಿಯನ್ನು ಕೇವಲ ಒಂದು ವರ್ಷಕ್ಕೆ ಮೊಟಕುಗೊಳಿಸಲಾಗಿದೆ. ಉಳಿದ ಅಧಿಕಾರಾವಧಿಯನ್ನು ನಲಪಾಡ್ ಅವರಿಗೆ ನೀಡಿ, ಸಂಧಾನ ಸೂತ್ರ ಅನುಸರಿಸಲಾಗಿದೆ.
ಪಸ್ತುತ ರಾಜ್ಯ ಕಾಂಗ್ರೆಸ್ ನಲ್ಲಿ ಎದ್ದಿರುವ ಡಿಕೆಶಿ vs ಸಿದ್ದು ಬಣ ರಾಜಕೀಯವನ್ನು ಗಮನಿಸಿದಾಗ, ಯುವ ಕಾಂಗ್ರೆಸ್ ವಿಚಾರದಲ್ಲಿ ಡಿಕೆಶಿ ಬಣಕ್ಕೆ ಜಯ ದೊರೆತಂತಾಗಿದೆ.