ಬೆಂಗಳೂರು : ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಸರ್ಕಾರ ಶಾಕ್ ನೀಡಿದೆ. ರೆಡ್ಡಿ ಮಾಲೀಕತ್ವದ ಬ್ರಾಹ್ಮಣಿ ಸ್ಟೀಲ್ಸ್ಗೆ ನೀಡಲಾಗಿದ್ದ ಸುಮಾರು 14 ಸಾವಿರ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ.

ಈ ಪ್ರಕರಣದಲ್ಲಿ ಸುದೀರ್ಘ 18 ವರ್ಷಗಳ ಕಾನೂನು ಹೋರಾಟದ ನಂತರ ಆಂಧ್ರಪ್ರದೇಶ ಸರ್ಕಾರ ಸ್ವಾಧೀನಪಡಿಸಿಕೊಂಡಿದೆ ಎಂಬುವುದಾಗಿ ಅಧಿಕಾರಿಗಳ ಮಾಹಿತಿಯಿಂದ ತಿಳಿದು ಬಂದಿದೆ.
ವೈಎಸ್ಆರ್ ಕಡಪ ಜಿಲ್ಲೆಯ ಜಮ್ಮಲಮಡುಗು ಮಂಡಲದ ಅಂಬಾವರಂನಲ್ಲಿ ರೆಡ್ಡಿ ಒಡತನದ ಕಂಪನಿಗೆ ಮಂಜೂರಾತಿಯಾಗಿದ್ದ 14 ಸಾವಿರ ಎಕರೆ ಭೂಮಿಯನ್ನು ಅನ್ಯ ಕಾರ್ಯಕ್ಕೆ ಉಪಯೋಗ ಮಾಡಿಕೊಂಡಿದ್ದಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ : ದಿ. ಎಂ.ಪಿ. ಪ್ರಕಾಶ್ ಪ್ರತಿಮೆ ಅನಾವರಣಗೊಳಿಸಿದ ಮಾಜಿ ಸಿಎಂ ಸಿದ್ದರಾಮಯ್ಯ..
ಪ್ರಮುಖವಾಗಿ ಭೂಮಿಯನ್ನು ಯಾವ ಉದ್ದೇಶಕ್ಕೆ ಪಡೆಯಲಾಗಿತ್ತೋ ಆದರೆ ಅದಕ್ಕೆ ಬಳಸಿಕೊಳ್ಳದ ಕಾರಣಕ್ಕೆ ಕಂದಾಯ ಅಧಿಕಾರಿಗಳು ಈ ಕಠಿಣ ನಿರ್ಧಾರ ಮಾಡಿದ್ದಾರೆ. ಸ್ವಾಧೀನಪಡಿಸಿಕೊಂಡ ಭೂಮಿಯ ಪ್ರಸ್ತುತ ಮೌಲ್ಯ ಸುಮಾರು 5 ಸಾವಿರ ಕೋಟಿ ರೂಪಾಯಿ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಸ್ಥಳೀಯ ಜಿಲ್ಲಾಧಿಕಾರಿ ಚೆರುಕುರಿ ಶ್ರೀಧರ್ ಆದೇಶದ ಅನ್ವಯ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇದರಿಂದ ಭವಿಷ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಯ ವಿಚಾರದಲ್ಲಿ ಈ ಭೂಮಿಯನ್ನು ಬಳಸಲು ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟಿದೆ.
ಕಳೆದ 2011ರಲ್ಲಿ ಈ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಆಗಿನ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಕಾರಣಾಂತರಗಳಿಂದ ಸ್ವಾಧೀನ ಪ್ರಕ್ರಿಯೆ ಸಾಧ್ಯವಾಗಿರಲಿಲ್ಲ. ಬಳಿಕ ನಡೆದ ಕಾನೂನು ಸಮರದಲ್ಲಿ ಜಿಲ್ಲಾಧಿಕಾರಿ ಎಲ್ಲ ವಿವಾದಗಳನ್ನು ಪರಿಹರಿಸಲು ಪೂರ್ವ ತಯಾರಿ ಮಾಡಿಕೊಂಡು ಅಂತಿಮವಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಜನಾರ್ದನ ರೆಡ್ಡಿಗೆ ತೀವ್ರ ಹಿನ್ನಡೆಯಾದಂತಾಗಿದೆ.






