ಸಂಗೀತ ನಿರ್ದೇಶಕ, ಗಾಯಕ ಹಾಗೂ ಈಗ ನಾಯಕನಾಗೂ ಚಂದನ್ ಶೆಟ್ಟಿ ಜನಪ್ರಿಯ. ಕಳೆದ ಎಂಟು ವರ್ಷಗಳ ಹಿಂದೆ ಚಂದನ್ ಶೆಟ್ಟಿ ತಮ್ಮ ಹುಟ್ಟುಹಬ್ಬದ ದಿನ ತಮ್ಮ ಮೊದಲ ಹಾಡು ಬಿಡುಗಡೆ ಮಾಡಿದ್ದರು. ಈ ಬಾರಿಯ ಹುಟ್ಟುಹಬ್ಬದಂದು ನಾದಯೋಗಿ ಎಂಬ ಯೂಟ್ಯೂಬ್ ಚಾನಲ್ ಆರಂಭಿಸಿದ್ದಾರೆ. ಈ ನೂತನ ಯೂಟ್ಯೂಬ್ ಚಾನಲ್ ಗೆ ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ ಚಾಲನೆ ನೀಡಿದರು. ಗಣಪತಿ ಹಬ್ಬದ ಸಂದರ್ಭದಲ್ಲಿ ಗಣಪತಿಯನ್ನು ಕುರಿತಾದ “ಗಂ ಗಣಪತಿ” ಹಾಡಿನೊಂದಿಗೆ ಚಾನಲ್ ಆರಂಭವಾಗಿದೆ. ಈ ಕುರಿತು ಚಂದನ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಳೆದ ಎಂಟು ವರ್ಷಗಳ ಹಿಂದೆ ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ನನ್ನ ಮೊದಲ ಹಾಡು ಬಿಡುಗಡೆಯಾಗಿತ್ತು. ಈಗ ಮತ್ತೊಂದು ಹೊಸ ಹೆಜ್ಜೆ ಇಟ್ಟಿದ್ದೇನೆ. “ನಾದ ಯೋಗಿ” ಎಂಬ ಹೊಸ ಯೂಟ್ಯೂಬ್ ಚಾನಲನ್ನು ಜೀರೋ ಸಬ್ ಸ್ಕ್ರೈಬರ್ ನೊಂದಿಗೆ ಆರಂಭಿಸಿದ್ದೇನೆ. ಈ ಚಾನಲ್ ಬರೀ ಭಕ್ತಿಗೀತೆಗಳಿಗೆ ಮೀಸಲು. ಈಗಿನ ಯುವಜನತೆಗೆ ಆಧ್ಯಾತ್ಮಿಕತೆಯನ್ನು ಪರಿಚಯಿಸುವ ಸಲುವಾಗಿ “ನಾದಯೋಗಿ” ಚಾನಲನ್ನು ಆರಂಭಿಸಿದ್ದೇನೆ.
ಇದಕ್ಕೆ ನನಗೆ ಮೈಸೂರಿನ ಅರ್ಜುನ್ ಅವದೂತರು ಪ್ರೇರಣೆ. ಇದರ ಮೊದಲ ಗೀತೆಯಾಗಿ “ಗಂ ಗಣಪತಿ” ಎಂಬ ಹಾಡನ್ನು ಬಿಡುಗಡೆ ಮಾಡಿದ್ದೇವೆ. ಮುಂದೆ ಕೂಡ ಹನುಮ, ಶಿವ ಸೇರಿದಂತೆ ಅನೇಕ ದೇವರುಗಳ ಹಾಡುಗಳನ್ನು ಬಿಡುಗಡೆ ಮಾಡುತ್ತೇವೆ. ಈಗ ಬಿಡುಗಡೆಯಾಗಿರುವ ಗಣಪತಿ ಹಾಡಿನಲ್ಲಿ ನಲವತ್ತೆಂಟು ಗಣಪತಿ ನಾಮಗಳಿದೆ. ನನ್ನ ತಮ್ಮ ಪುನೀತ್ ಅದ್ಭುತವಾಗಿ ಈ ಹಾಡಿನ ವಿಡಿಯೋ ಮಾಡಿದ್ದಾನೆ. ನಾನೇ ಹಾಡಿದ್ದೇನೆ. ಮುಂದೆ “ನಾದ ಯೋಗಿ” ಯಲ್ಲಿ ಸಾಕಷ್ಟು ಪ್ರತಿಭೆಗಳಿಗೆ ಅವಕಾಶ ನೀಡಲಾಗುವುದು ಎಂದು ಚಂದನ್ ಶೆಟ್ಟಿ ತಿಳಿಸಿದರು.
ಚಂದನ್ ಶೆಟ್ಟಿ ಅವರ ನೂತನ ಪ್ರಯತ್ನಕ್ಕೆ ಶುಭಕೋರಲು ನಿರ್ಮಾಪಕರಾದ ಸಂಜಯ್ ಗೌಡ, ಗೋವಿಂದರಾಜು, ನವರಸನ್ ಮುಂತಾದ ಗಣ್ಯರು ಆಗಮಿಸಿ ಶುಭ ಕೋರಿದರು. ಪುನೀತ್ ಶೆಟ್ಟಿ ಅವರು ಹಾಡಿನ ಬಗ್ಗೆ ಮಾತನಾಡಿದರು. ಸಮಾರಂಭದ ನಂತರ ಕೇಕ್ ಕಟ್ ಮಾಡುವ ಮೂಲಕ ಚಂದನ್ ಶೆಟ್ಟಿ ಅವರ ಹುಟ್ಟುಹಬ್ಬ ಆಚರಿಸಲಾಯಿತು.