ಕವಲು ಹಾದಿಯಲ್ಲಿರುವ ಒಂದು ದೇಶ ಅಥವಾ ಸಮಾಜ ಯಾವುದೋ ಒಂದು ಗಳಿಗೆಯಲ್ಲಿ ಮರಳಿ ಸರಿದಾರಿಗೆ ಬರುವ ಸಾಧ್ಯತೆಗಳಿರುತ್ತವೆ. ಆದರೆ ಹೊರಳು ಹಾದಿಯಲ್ಲಿರುವ ದೇಶ ಅಥವಾ ಸಮಾಜ, ಹಿಂತಿರುಗಿ ನೋಡುವ ವಿವೇಚನೆಯನ್ನೂ ಕಳೆದುಕೊಂಡು, ಸಾಂಸ್ಕೃತಿಕವಾಗಿ-ಸಾಮಾಜಿಕವಾಗಿ-ರಾಜಕೀಯವಾಗಿ ಹಿಮ್ಮುಖವಾಗಿ ಚಲಿಸತೊಡಗುತ್ತದೆ. ಭಾರತ ಬಹುಶಃ ಇಂತಹ ಒಂದು ಸನ್ನಿವೇಶವನ್ನು ಹಾದು ಹೋಗುತ್ತಿದೆ.

ಆರ್ಥಿಕವಾಗಿ ವಿಕಸಿತವಾಗುವ ಭಾರತ 2047ರ ವೇಳೆಗೆ ಸಾಮಾಜಿಕ-ಸಾಂಸ್ಕೃತಿಕ ನೆಲೆಯಲ್ಲಿ ತನ್ನ ಶತಮಾನಗಳ ಸಾಂಪ್ರದಾಯಿಕತೆ ಮತ್ತು ಮಧ್ಯಕಾಲೀನ ಜೀವನ ಲಕ್ಷಣಗಳಿಗೆ ಜಾರಿಬಿಡುವ ಅಪಾಯ ನಮ್ಮ ಮುಂದಿದೆ. ರಾಜಕೀಯವಾಗಿ ಸ್ವಾತಂತ್ರ್ಯದ ಪೂರ್ವಸೂರಿಗಳು ಕನಸು ಕಟ್ಟಿದ್ದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಯಥಾಸ್ಥಿತಿಯಲ್ಲಿ ಇರುವುದೋ ಇಲ್ಲವೋ ಎನ್ನುವುದು ಪ್ರಶ್ನೆಯಾಗಿಯೇ ಉಳಿಯಲಿದೆ.
21ನೆ ಶತಮಾನದ ಡಿಜಿಟಲ್ ಭಾರತ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಇರುವುದು ಮೇಲ್ನೋಟಕ್ಕೇ ತೋರುತ್ತದೆ. ಆರ್ಥಿಕ ಪ್ರಗತಿ ಅಥವಾ ಅಭಿವೃದ್ಧಿ ಎಂಬ ಅರ್ಥಶಾಸ್ತ್ರದ ಪರಿಭಾಷೆಯಲ್ಲಿ, ಕಾಣದೆ ಹೋಗುವ ಅಸಂಖ್ಯಾತ (ಬಹುಸಂಖ್ಯಾತ ಎಂದೂ ಹೇಳಬಹುದು ) ಜನರು, ವಿಭಿನ್ನ ಜಾತಿ, ಬುಡಕಟ್ಟು, ಸಮುದಾಯ, ಭಾಷೆ ಮತ್ತು ಧರ್ಮಗಳನ್ನು ಪ್ರತಿನಿಧಿಸುವ ಸಮಾಜಗಳು ಈ ಸಂದಿಗ್ಧತೆಗೆ ನೇರ ಮುಖಾಮುಖಿಯಾಗಲಿವೆ. ಇಲ್ಲಿ ಎದುರಿಸಬೇಕಾದ ಸಿಕ್ಕುಗಳು ಮತ್ತು ಸವಾಲುಗಳು ತಳಮಟ್ಟದ ಸಮಾಜಗಳನ್ನು ನಾಲ್ಕೂ ದಿಕ್ಕುಗಳಿಂದ ಕಾಡುತ್ತಿರುವಂತೆಯೇ, ಈ ಸಮಾಜದಲ್ಲಿ ಅವಕಾಶವಂಚಿತರಾಗಿ, ಭವಿಷ್ಯದ ಕನಸು ಕಟ್ಟಲಾಗದೆ ಜೀವನೋಪಾಯದ ಮಾರ್ಗಗಳನ್ನು ಮಾರುಕಟ್ಟೆಯ ಜಗುಲಿಯಲ್ಲೇ ಕಂಡುಕೊಳ್ಳಬೇಕಾದ ಸನ್ನಿವೇಶವನ್ನು ಎದುರಿಸಲಿದ್ದಾರೆ. ಈ ತಳಸಮಾಜಗಳ ತಲ್ಲಣಗಳಿಗೆ ಸ್ಪಂದಿಸುವ, ಸವಾಲುಗಳಿಗೆ ಎದೆಯೊಡ್ಡಿ ನಿಲ್ಲುವ, ಸಿಕ್ಕುಗಳನ್ನು ಬಿಡಿಸುವ , ಹೋರಾಟಗಳು ತಳಮಟ್ಟದಿಂದಲೇ ರೂಪುಗೊಳ್ಳಬೇಕಿದೆ.

ಸಾಮಾಜಿಕ-ಆರ್ಥಿಕ ಅಸಮಾನತೆಯು ಹೆಚ್ಚಾಗಿದ್ದು, ಸಾಂಸ್ಕೃತಿಕವಾಗಿ ಸನಾತನ ಧರ್ಮದ ಪಳೆಯುಳಿಕೆಗಳನ್ನು ಮರುಸ್ಥಾಪಿಸುವ ಮೂಲಕ ಇಡೀ ಹಿಂದೂ ಸಮಾಜವನ್ನು ಹಿಂದಕ್ಕೆ ಕೊಂಡೊಯ್ಯುವ ಪ್ರಯತ್ನಗಳು , ಸಮಾಜದ ಎಲ್ಲ ಸ್ತರಗಳಲ್ಲೂ, ವ್ಯವಸ್ಥಿತವಾಗಿ ನಡೆಯುತ್ತಿದೆ. ಧಾರ್ಮಿಕ ಮೂಲಭೂತವಾದ ಸಂವಿಧಾನದ ಅಶಯಗಳಿಗೆ ತದ್ವಿರುದ್ಧವಾಗಿ, ಆಳವಾಗಿ ಬೇರೂರುತ್ತಿದ್ದು, ಇದಕ್ಕೆ ಪೂರಕವಾದ ಮೂಢ ನಂಬಿಕೆಗಳು, ಅಂಧ ಶ್ರದ್ಧೆ ಮತ್ತು ಮೌಢ್ಯಾಚರಣೆಗಳು ಸಮಾಜದ ಎಲ್ಲ ವರ್ಗಗಳನ್ನೂ ಆವರಿಸಿದೆ. ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವ ಗ್ರಾಂಥಿಕವಾಗಿ ಉಳಿದಿದ್ದು, ಪ್ರಾಚೀನ ಆಚರಣೆಗಳಿಗೆ ಮುಕ್ತ ಅವಕಾಶ ಕಲ್ಪಿಸಿದೆ. ಈ ಹಲವು ಅಪಾಯಗಳನ್ನು ಹೆಗಲಮೇಲೆ ಹೊತ್ತಿರುವ ಭಾರತ ʼವಿಕಸಿತ ʼ ಆಗುವ ದಿಕ್ಕಿನಲ್ಲಿ ಚಲಿಸುತ್ತಿದೆ. ಈ ಮನ್ವಂತರಗಳ ವಿರುದ್ಧ,, ಸಂಭಾವ್ಯ ಪ್ರತಿಕ್ರಾಂತಿಯ ವಿರುದ್ಧ , ಸಮ ಸಮಾಜ ಮತ್ತು ಬಹುತ್ವವನ್ನು ಸಾಕಾರಗೊಳಿಸುವ ಕನಸು ಎಲ್ಲ ಪ್ರಜಾಪ್ರಭುತ್ವ ಪ್ರೇಮಿಗಳದ್ದೂ ಆಗಿರುತ್ತದೆ.
ನಿರ್ವಾತದಲ್ಲಿ ನೆನಪಾಗುವ ಜೀವ
ಈ ಕನಸು ಮನದಲ್ಲಿ ಮೂಡಿದ ಕ್ಷಣವೇ ಮೈಸೂರಿನ ಪುರೋಗಾಮಿ ಆಲೋಚನೆಗಳ ಸಮಾಜಕ್ಕೆ ನೆನಪಾಗುವುದು ಕೆಲವು ವರ್ಷಗಳ ಮುನ್ನ ನಮ್ಮೆಲ್ಲರನ್ನೂ ಬಿಟ್ಟು ಹೋದ ಒಂದು ಹಿರಿಯ ಜೀವ, ಪ. ಮಲ್ಲೇಶ್. ತಾತ್ವಿಕವಾಗಿ ಗಾಂಧಿವಾದಿ, ಲೋಹಿಯಾವಾದಿ, ಸಮಾಜವಾದಿ ಮುಂತಾಗಿ ಬಣ್ಣಿಸಲ್ಪಡುವ ಮಲ್ಲೇಶ್ ಈ ಎಲ್ಲ ವಾದಗಳನ್ನೂ ಮೀರಿ ನಿಲ್ಲುವಂತಹ ಜನಪರ ಜೀವ ಎನ್ನುವುದು ನಿರ್ವಿವಾದ. ಏಕೆಂದರೆ ಕನ್ನಡ ಹೋರಾಟಗಾರರಾಗಿ, ಗಾಂಧಿ ತತ್ವಗಳಿಗೆ ಕೊನೆಯ ಉಸಿರಿರುವವರೆಗೂ ಬದ್ಧರಾಗಿದ್ದು, ಸಮ ಸಮಾಜದ ಕನಸುಗಳನ್ನು ನನಸು ಮಾಡಲು ನಿರಂತರ ಹೋರಾಟದಲ್ಲಿ ತೊಡಗಿದ್ದ ಮಲ್ಲೇಶ್, ಮೂಲತಃ ಸಾಮಾನ್ಯ ಜನರು ಎದುರಿಸುವ ಅನ್ಯಾಯ, ಅಸಮಾನತೆ, ದೌರ್ಜನ್ಯ, ತಾರತಮ್ಯ, ಹಿಂಸೆ ಮತ್ತು ಇಂದು ಭಾರತವನ್ನು ಅಷ್ಟ ದಿಕ್ಕುಗಳಿಂದ ಕಾಡುತ್ತಿರುವ ಮತಾಂಧತೆ-ಮತೀಯವಾದ , ಇವುಗಳ ವಿರುದ್ಧ ಸದಾ ದನಿ ಎತ್ತುವ, ವಿಶಾಲ ಹಂದರದ ಕ್ರಿಯಾಶೀಲ ವ್ಯಕ್ತಿಯಾಗಿ ಬಾಳಿದವರು.
ಮಲ್ಲೇಶ್ ಪದೇ ಪದೇ ಏಕೆ ನೆನಪಾಗುತ್ತಾರೆ ? ರಾಜಕೀಯ ಆಕಾಂಕ್ಷೆಗಳು ಅಥವಾ ಸಾರ್ವಜನಿಕ ಸ್ಥಾನ ಮಾನಗಳ ನೆಲೆಯಲ್ಲಿ ಖಂಡಿತವಾಗಿಯೂ ಅಲ್ಲ. ಅಥವಾ ಸಾರ್ವಜನಿಕ ಸಭೆ, ಸಮಾರಂಭ, ವಿಚಾರ ಸಂಕಿರಣಗಳ ವೇದಿಕೆಗಳ ನೆಲೆಯಲ್ಲಿ ಅಲ್ಲ. ಸಮ್ಮಾನ, ಸನ್ಮಾನ ಮತ್ತು ಸ್ಥಾನ ಇದಾವುದನ್ನೂ ಬಯಸದೆ ಬದುಕಿದ್ದು, ಇನ್ನು ಯಾರಿಂದಲೂ ತುಂಬಲಾಗದ ನಿರ್ವಾತವನ್ನು ಜನಪರ ಹೋರಾಟಗಳ ನಡುವೆ ಸೃಷ್ಟಿಸಿ ಕಣ್ಮರೆಯಾದ ಪ. ಮಲ್ಲೇಶ್, ಇಡೀ ಸಮಾಜದಲ್ಲಿ ಸೃಷ್ಟಿಸಿ ಹೋದ ಶೂನ್ಯವೂ ಬಹುಶಃ ತುಂಬಲಸಾಧ್ಯ.

ಇತ್ತೀಚೆಗೆ 9 ವರ್ಷದ ಅಲೆಮಾರಿ ಕೂಸು, ಬಲೂನು ಮಾರುವ ಬಾಲೆ ಅತ್ಯಾಚಾರಕ್ಕೀಡಾಗಿ ಜೀವ ತೆತ್ತ ಸಂದರ್ಭದಲ್ಲಿ ಸಾಂಸ್ಕೃತಿಕ ನಗರಿಯನ್ನು ಆವರಿಸಿದ್ದ ಸನ್ನಿವೇಶ ನೆನಪಾದಾಗ, ಮಲ್ಲೇಶ್ ಸಹಜವಾಗಿ ಮನದಲ್ಲಿ ಹಾದು ಹೋಗುತ್ತಾರೆ. ಮಲ್ಲೇಶ್ ಇರುತ್ತಿದ್ದರೆ , ಈಗ ವಿಸ್ಮೃತಿಗೆ ಜಾರಿರುವ ಆ ಹತಭಾಗ್ಯ ಬಾಲೆಯನ್ನು , ನ್ಯಾಯಕ್ಕಾಗಿ ಹೋರಾಡುವ ಮೂಲಕ ತಾತ್ವಿಕವಾಗಿ ನಮ್ಮ ನಡುವೆ ಜೀವಂತವಾಗಿರಿಸುತ್ತಿದ್ದರು. ಬಲೂನು ಮಾರುವ ಬಾಲೆ ನಮ್ಮ ಪ್ರಜ್ಞೆಯನ್ನು ಕದಡುತ್ತಲೇ ಇರುತ್ತಿದ್ದಳು. ಆದರೆ ಈಗ ಆ ಘಟನೆ ನಡೆದೇ ಇಲ್ಲ ಎನ್ನುವಂತೆ ಮರೆಯಾಗಿಬಿಟ್ಟಿದೆ. ಇದು ಮಲ್ಲೇಶ್ ಅವರಲ್ಲಿ ನಾವು ಗುರುತಿಸಬೇಕಾದ ವಿಶೇಷ ಲಕ್ಷಣ.
ಯಾವುದೇ ರೀತಿಯ ದೌರ್ಜನ್ಯವಾದರೂ, ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾದರೂ, ಕ್ಷಣಮಾತ್ರದಲ್ಲಿ ಸ್ಪಂದಿಸುವುದೇ ಅಲ್ಲದೆ, ನೊಂದ ಜನರಿಗೆ, ಅನ್ಯಾಯಕ್ಕೊಳಗಾದ ಸಮುದಾಯಗಳಿಗೆ ʼ ನಿಮ್ಮೊಡನೆ ನಾನಿದ್ದೇನೆ ʼ ಎಂಬ ಅಭಯ ನೀಡುತ್ತಿದ್ದ ಮಲ್ಲೇಶ್, ಗುರಿ ತಲುಪುವವರೆಗೂ ಹೋರಾಡುವ ಛಲ, ಕ್ಷಮತೆ ಮತ್ತು ಸಾಮರ್ಥ್ಯ ಹೊಂದಿದ್ದರು. ಅವರ ದೃಷ್ಟಿಯಲ್ಲಿ ಸಂಘಟನೆ ಎನ್ನುವುದು ನಿಮಿತ್ತ ಮಾತ್ರವಾಗಿತ್ತು. ಇಲ್ಲಿ ಅವರಿಗೆ ಸಿದ್ಧಾಂತಗಳ, ರಾಜಕಾರಣದ ಅಥವಾ ಜಾತಿ-ಮತಗಳ ಅಡ್ಡ ಬೇಲಿಗಳು ನಗಣ್ಯವಾಗುತ್ತಿದ್ದವು. ಆದರೆ ಭಾರತದಲ್ಲಿ ತಳ ಊರುತ್ತಿರುವ ಬಲಪಂಥೀಯ ಸಾಂಸ್ಕೃತಿಕ ರಾಜಕಾರಣವನ್ನು ಹತ್ತಿಕ್ಕಲು ಅವರ ಮನಸ್ಸು ಸದಾ ತುಡಿಯುತ್ತಿತ್ತು. ಪ್ರಜಾಪ್ರಭುತ್ವ, ಸಂವಿಧಾನ, ಜಾತ್ಯತೀತತೆ ಈ ಮೌಲ್ಯಗಳಿಗೆ ಸದಾ ನಿಷ್ಠರಾಗಿದ್ದ ಮಲ್ಲೇಶ್ , ಕನ್ನಡ ಭಾಷೆಯ ಉಳಿವಿಗಾಗಿ, ಬೆಳವಣಿಗೆಗಾಗಿ ಸದಾ ತುಡಿಯುತ್ತಿದ್ದವರು. ಅವರ ಆಶಯಗಳು ಕೇವಲ ಹಾಳೆಯ ಮೇಲಿರುತ್ತಿರಲಿಲ್ಲ ಅಥವಾ ಪುಸ್ತಕದ ಪುಟಗಳಲ್ಲಿ ಅಡಗಿರುತ್ತಿರಲಿಲ್ಲ. ಸದಾ ರಸ್ತೆಯಲ್ಲೇ ಸದ್ದು ಮಾಡುತ್ತಿದ್ದವು. ಒಬ್ಬ ಹೋರಾಟಗಾರರಾಗಿ ಮಲ್ಲೇಶ್ ಕನಸು ಕಟ್ಟುತ್ತಲೇ ಬದುಕಿದವರು, ಕನಸು ನನಸಾಗಿಸಲು ಅವಿರತ ಹೋರಾಡುತ್ತಲೇ ಜೀವನ ಸವೆಸಿದವರು.
ತಾತ್ವಿಕವಾಗಿ ಭಿನ್ನ ವ್ಯಕ್ತಿತ್ವ
ಯಾವುದೇ ಜಟಿಲ ಸಮಸ್ಯೆಗಳ ಸುತ್ತ ವಿಚಾರ ಸಂಕಿರಣ ನಡೆದರೂ, ಎಲ್ಲವೂ ಮುಗಿದ ಮೇಲೆ ಅವರು ಖಾಸಗಿ ಮಾತುಕತೆಗಳ ನಡುವೆ,ಕೇಳುತ್ತಿದ್ದ ಪ್ರಶ್ನೆ ʼ What Next ́ ! ಅಂದರೆ ಸಾರ್ವಜನಿಕ ಪ್ರತಿಭಟನೆ, ಧರಣಿ, ಮುಷ್ಕರ, ಹೋರಾಟ ಇವೆಲ್ಲಕ್ಕೆ ಕಾರಣವಾಗುತ್ತಿದ್ದ ಜನಸಾಮಾನ್ಯರ, ಕಾರ್ಮಿಕರ, ರೈತರ, ಮಹಿಳೆಯರ ಹಾಗೂ ಶೋಷಿತ ಸಮುದಾಯಗಳ ಸಂಕಟಗಳು ಕೊನೆಯಾಗುವವರೆಗೂ ಹೋರಾಡುವ ಛಲ ಅವರಲ್ಲಿತ್ತು. ಅದು ಈಡೇರಿತೋ ಇಲ್ಲವೋ ಎನ್ನುವುದು ಮುಖ್ಯವಲ್ಲ ಆದರೆ ಒಂದು ಹೋರಾಟ ತಾರ್ಕಿಕ ಅಂತ್ಯ ತಲುಪುವವರೆಗೂ ಮುಂದುವರೆಸುವ ಕ್ಷಮತೆ ಮತ್ತು ದೃಢ ನಿಶ್ಚಯ ಅವರಲ್ಲಿ ಸದಾ ಇರುತ್ತಿತ್ತು. ಮೈಸೂರಿನ ಎನ್‌ಟಿಎಮ್‌ಎಸ್ ಹೆಣ್ಣುಮಕ್ಕಳ ಶಾಲೆಯನ್ನು ಉಳಿಸಲು ನಡೆಸಿದ 75 ದಿನಗಳ ನಿರಂತರ ಮುಷ್ಕರ, ಶಾಸ್ತ್ರೀಯ ಕನ್ನಡ ಕೇಂದ್ರದ ಸ್ವಾಯತ್ತತೆಗಾಗಿ ನಡೆಸಿದ ದಶಕಕ್ಕೂ ಹೆಚ್ಚು ಕಾಲದ ಹೋರಾಟ, ರಂಗಾಯಣ ಉಳಿಸಿ ಹೋರಾಟ, ರೈತರ ಭೂಮಿಗಾಗಿ ಹೋರಾಟಗಳು ಅವರ ಈ ಧೋರಣೆಗೆ ಇತ್ತೀಚಿನ ಸಾಕ್ಷಿಗಳು.
ಈ ನಿಟ್ಟಿನಲ್ಲಿ ಸಾಫಲ್ಯ ವೈಫಲ್ಯಗಳನ್ನು ಹೆಕ್ಕಿ ತೆಗೆಯಬೇಕಿಲ್ಲ ಬದಲಾಗಿ, ಸಮಾಜದ ಪ್ರಬಲ ಶಕ್ತಿಗಳ ವಿರುದ್ಧ, ದುಷ್ಟ ಸಾಂಸ್ಕೃತಿಕ ಶಕ್ತಿಗಳ ವಿರುದ್ಧ, ಸರ್ಕಾರಗಳ ವಿರುದ್ಧ ಹೋರಾಟಗಳು ನಡೆದಾಗ ಕಿಂಚಿತ್ತೂ ಹಿಂಜರಿಯದೆ, ಯಾವುದೇ ಸೈದ್ಧಾಂತಿಕ-ತಾತ್ವಿಕ ಭಿನ್ನತೆಗಳನ್ನೂ ಲೆಕ್ಕಿಸದೆ, ಕ್ರಿಯಾಶೀಲರಾಗಿ ಹಗಲು ರಾತ್ರಿ ಎನ್ನದೆ ಮುನ್ನುಗ್ಗುತ್ತಿದ್ದುದನ್ನು. ಗೋಕಾಕ್ ಚಳುವಳಿಯಿಂದ ಎನ್‌ಟಿಎಮ್‌ಎಸ್‌ವರೆಗಿನ ಚರಿತ್ರೆಯಲ್ಲಿ ಗುರುತಿಸಬಬಹುದು. ಡಿಜಿಟಲ್ ಯುಗದ ಯುವ ಸಮಾಜ ಈ ಹೆಜ್ಜೆಗಳನ್ನು ಗುರುತಿಸಬೇಕಿದೆ. . ಸೋಲಿಗೆ ಎದೆಗುಂದದೆ, ಗೆಲುವನ್ನು ಸಂಭ್ರಮಿಸದೆ, ನಾಯಕತ್ವದ ಫಲಾಪೇಕ್ಷೆಗಳಿಲ್ಲದೆ, ಎಲ್ಲರೊಳಗೊಂದಾಗಿ, ಅಂತಿಮ ನ್ಯಾಯವೊಂದೇ ಗುರಿ ಎಂಬ ಮನೋಭಾವದೊಡನೆ ಹೋರಾಟದ ಅಖಾಡಕ್ಕೆ ಧುಮುಕುತ್ತಿದ್ದ ಮಲ್ಲೇಶ್ ಈ ದೃಷ್ಟಿಯಿಂದ ಆದರ್ಶಪ್ರಾಯರೂ , ಅನುಕರಣೀಯರೂ ಆಗುತ್ತಾರೆ.

ಆರು ದಶಕಗಳ ಕಾಲ ಕನ್ನಡ ನಾಡಿನ ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತಹ ಹೋರಾಟಗಳನ್ನು ಮುನ್ನಡೆಸಿರುವ ಪ.. ಮಲ್ಲೇಶ್, ಶೈಕ್ಷಣಿಕವಾಗಿ ಬಡ ಮಕ್ಕಳಿಗೆ ನೆರವಾಗುವಂತಹ ಶಾಲೆಯನ್ನೂ ತೆರೆದು ಆದರ್ಶ ಮೆರೆದಿದ್ದರು. ನೃಪತುಂಗ ಶಾಲೆಯಲ್ಲಿ ಓದುವ ಬಡ ಮಕ್ಕಳಿಗೆ ಶುಲ್ಕ ವಿಧಿಸದೆ, ಅದೇ ಮೊತ್ತವನ್ನು ನೂರಾರು ಸಹೃದಯ ಗೆಳೆಯರಿಂದ ಸಂಗ್ರಹಿಸಿ ಮುನ್ನಡೆಸುವುದು ಸುಲಭಸಾಧ್ಯವಲ್ಲ. ಪಾರದರ್ಶಕತೆ, ನಿಷ್ಪಕ್ಷಪಾತತೆ, ಶೋಷಿತರ ಬಗ್ಗೆ ಕಳಕಳಿ ಮತ್ತು ಸಮಾಜ ಮುಖಿ ಮನೋಭಾವ ಇವೆಲ್ಲವೂ ಮೇಳೈಸಿದ್ದ ವ್ಯಕ್ತಿಯಾಗಿ ಬಾಳಿದ ಪ. ಮಲ್ಲೇಶ್ ತಮ್ಮ ಹೆಜ್ಜೆ ಗುರುತುಗಳನ್ನು ಲಿಖಿತವಾಗಿ ದಾಖಲಿಸಿದ್ದರೆ, ಬಹುಶಃ ಬೃಹತ್ ಗ್ರಂಥಗಳೇ ಇರುತ್ತಿದ್ದವು. ನಿಮ್ಮ ʼ ಆತ್ಮಕತೆ ʼ ಏಕೆ ಬರೆಯುತ್ತಿಲ್ಲ ಎಂದು ಖಾಸಗಿಯಾಗಿ ಕೇಳಿದಾಗ ಅವರಿಂದ ಬಂದ ಉತ್ತರ, ಆತ್ಮಕತೆ ಎಂದರೆ ಸತ್ಯವನ್ನೇ ಬರೆಯಬೇಕು, ನಾನು ಕಂಡಿರುವ ಸತ್ಯವನ್ನು ಬಹಿರಂಗವಾಗಿ ಹೇಳಲಾಗದಂತಹ ಪರಿಸ್ಥಿತಿಯಲ್ಲಿದ್ದೇನೆ ಎಂದು ಹೇಳುತ್ತಿದ್ದರು.
ಸಾಹಿತ್ಯಿಕವಾಗಿ ಮಲ್ಲೇಶ್ ಅವರು ಕೆಲವೇ ಕೃತಿಗಳನ್ನು ಬರೆದಿದ್ದರೂ, ಅವರ ಅನುಭವ ಮತ್ತು ಸಾಂಸ್ಕೃತಿಕ ಅರಿವು ಇನ್ನೂ ನೂರಾರು ಕೃತಿಗಳಿಗೆ ಮೂಲ ಧಾತುವಾಗುಷ್ಟಿತ್ತು. ಗಾಂಧಿವಾದಿಯಾಗಿದ್ದರೂ ಸಹ ಇತರ ಯಾವುದೇ ಸಿದ್ಧಾಂತಗಳನ್ನು ನಿರಾಕರಿಸದೆ ನಡೆಯುವ ಔದಾತ್ಯಕ್ಕೆ ಮಲ್ಲೇಶ್ ಉದಾಹರಣೆಯಾಗಿ ಕಾಣುತ್ತಾರೆ. ಅವರ ಸವೆಸಿದ ಹೆಜ್ಜೆಗಳನ್ನೇ ಲಿಖಿತವಾಗಿ ದಾಖಲಿಸಿದ್ದರೆ, ಆರು ದಶಕಗಳ ಕರ್ನಾಟಕದ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಚಿತ್ರಣವನ್ನು ಕಟ್ಟಿಕೊಡಬಹುದಾಗಿತ್ತು. ಆದರೆ ಅವರ ಬಹಳಷ್ಟು ಸಮಯ ಹೋರಾಟಗಳಲ್ಲೇ ಕಳೆದಿದ್ದುದರಿಂದ ಇಂದು ಆ ಹೋರಾಟಗಳನ್ನು ಮುಂದುವರೆಸಬೇಕಾದ ಹಿರಿಯ-ಕಿರಿಯ ತಲೆಮಾರಿನ ಪುರೋಗಾಮಿ ಚಿಂತಕರ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಈ ನೆನಪನ್ನು ಮತ್ತೆ ಮತ್ತೆ ಸಾರ್ವಜನಿಕರ ಮುಂದೆ ತೆರೆದಿಡಬೇಕಾದ ಅವಶ್ಯಕತೆ ನಮಗಿದೆ.

ಏಕೆಂದರೆ, ವರ್ತಮಾನದ ಭಾರತ ನವ ಉದಾರವಾದಿ ಆರ್ಥಿಕ ನೀತಿಗಳಿಂದ ಜರ್ಝರಿತವಾಗಿದೆ, ಸಾಮಾಜಿಕವಾಗಿ ಜಾತಿ-ಧರ್ಮಗಳ ನೆಲೆಯಲ್ಲಿ ವಿಭಜನೆಯನ್ನು ಕಾಣುತ್ತಲೇ ಇದೆ. ಸಾಂಸ್ಕೃತಿಕವಾಗಿ ಪ್ರಾಚೀನ ಸಮಾಜದ ಎಲ್ಲ ಅನಿಷ್ಠಗಳೂ ನವ ಸಮಾಜದಲ್ಲಿ ರೂಪಾಂತರ ಹೊಂದಿ ಜೀವ ತಳೆದಿವೆ. ಮಹಿಳಾ ದೌರ್ಜನ್ಯಗಳು, ಅಸ್ಪೃಶ್ಯತೆಯಂತಹ ಹೀನಾಚರಣೆಗಳು ಕೇವಲ ಕಾನೂನು ಸುವ್ಯವಸ್ಥೆಯ ಪ್ರಶ್ನೆಯಾಗಿ ಕಾಣುತ್ತಿದೆ. ಸಾಂಸ್ಕೃತಿಕ ನಗರಿ ಇದಾವುದಕ್ಕೂ ಹೊರತಾಗಿಲ್ಲ. ಈ ಸಂದಿಗ್ಧತೆಯ ನಡುವೆ, ಮೈಸೂರಿನ ಪುರೋಗಾಮಿ ಸಂಘಟನೆಗಳು ಅವರನ್ನು ಸ್ಮರಿಸುವ ವಿಚಾರ ಸಂಕಿರಣವನ್ನು , ದಿನಾಂಕ 21ರಂದು ಹಮ್ಮಿಕೊಂಡಿವೆ. ಇಲ್ಲಿ ಚರ್ಚೆಯಾಗುವ ವಿಚಾರಗಳೇನೇ ಇರಲಿ, ಈ ಸಮಾವೇಶದ ಆಶಯ ಮಲ್ಲೇಶ್ ಅವರು ಕಟ್ಟಿದ ಕನಸುಗಳನ್ನು, ಈಡೇರಿಸಲಾಗದೆ ಬಿಟ್ಟುಹೋದ ಆಶಯಗಳನ್ನು ಸಾಕಾರಗೊಳಿಸುವುದೇ ಆಗಿದೆ.
ಈ ಗುರಿಯೊಂದಿಗೆ ಸಮಾವೇಶವನ್ನು ಯಶಸ್ವಿಗೊಳಿಸಲು ಮುಂದಾಗೋಣ. ಮಲ್ಲೇಶ್ ಭೌತಿಕವಾಗಿ ಇಲ್ಲವಾಗಿದ್ದಾರೆ ಅಷ್ಟೆ. ಅವರ ಕನಸುಗಳ ಮೂಲಕ ನಮ್ಮ ನಡುವೆ ಉಸಿರಾಡುತ್ತಿದ್ದಾರೆ. ಈ ಉಸಿರು ನಿಲ್ಲುವುದಿಲ್ಲ.








