ಚಾಮುಂಡೇಶ್ವರಿ ದೇವಸ್ಥಾನದ ಚರ-ಸ್ಥಿರ ಆಸ್ತಿ ವಿಲೇವಾರಿ ಮಾಡದಂತೆ ಪ್ರಾಧಿಕಾರಕ್ಕೆ ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದೆ. ಪ್ರಮೋದಾ ದೇವಿರವರಿಗೆ ಪ್ರಾಧಿಕಾರವು ನೋಟಿಸ್ ನೀಡಬೇಕು. ಸಭೆಯಲ್ಲಿ ಭಾಗವಹಿಸದಿದ್ದರೆ ಪ್ರಾಧಿಕಾರ ಕಾನೂನಿನ ಅನ್ವಯ ಸೂಕ್ತ ನಿರ್ಧಾರ ಕೈಗೊಳ್ಳಲು ಸ್ವತಂತ್ರವಾಗಿರುತ್ತದೆ ಎಂದು ಕೋರ್ಟ್ ಆದೇಶದಲ್ಲಿ ತಿಳಿಸಲಾಗಿದೆ.
ಶ್ರೀ ಚಾಮುಂಡೇಶ್ವರಿ ದೇವಾಲಯದ ನಿರ್ವಹಣೆಗಾಗಿ ರೂಪಿಸಲಾಗಿರುವ ಪ್ರಾಧಿಕಾರ, ಸೆಕ್ಷನ್ 16 ಅಥವಾ 17ರ ಅಡಿ ಯಾವುದೇ ತೀರ್ಮಾನ ಕೈಗೊಳ್ಳುವ ಮುನ್ನ ನ್ಯಾಯಾಲಯದ ಅನುಮತಿ ಪಡೆಯಬೇಕು ಅಂತಾನು ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ತಿಳಿಸಲಾಗಿದೆ.
ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾಯಿದೆ 2024 ಅಸಾಂವಿಧಾನಿಕ ಎಂದು ಘೋಷಿಸಬೇಕು ಕೋರಿ ಪ್ರಮೋದಾ ದೇವಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ಅವರ ಏಕಸದಸ್ಯ ಪೀಠ, ಅರ್ಜಿ ವಿಚಾರಣೆ ನಡೆಸಿ ಅರ್ಜಿ ಇತ್ಯರ್ಥ ಆಗುವವರೆಗೆ ಚಾಮುಂಡೇಶ್ವರಿ ದೇವಾಲಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಪ್ರಾಧಿಕಾರವು ವಿಲೇವಾರಿ ಮಾಡುವಂತಿಲ್ಲ ಎಂದು ತಿಳಿಸಿದೆ.
ವಿಧಾನಸಭೆ ನಿಯಮಗಳಿಗೆ ವಿರುದ್ಧವಾಗಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾಯಿದೆ ಜಾರಿಗೊಳಿಸಲಾಗಿದೆಯೇ ಎಂಬುದನ್ನು ಪರಿಗಣಿಸಬೇಕಿದೆ. ಹಾಲಿ ದೇವಾಲಯದಲ್ಲಿ ಜಾರಿಯಲ್ಲಿರುವ ಸಂಪ್ರದಾಯದಲ್ಲಿ ಬದಲಾವಣೆ ಅಥವಾ ಹಸ್ತಕ್ಷೇಪ ಮಾಡಬಾರದು. ಸಭೆಯಲ್ಲಿ ಭಾಗವಹಿಸುವಂತೆ ಪ್ರಮೋದಾ ದೇವಿ ಅವರಿಗೆ ಪ್ರಾಧಿಕಾರವು ನೋಟಿಸ್ ನೀಡಬೇಕು ಎಂದಿದೆ.