ಸದಾ ಒಂದಿಲ್ಲೊಂದು ವಿವಾದದಿಂದ ಸುದ್ದಿಯಲ್ಲಿರುವ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಇದೀಗ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ.
ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಿ ಬರುವ ಮುಂಚೆ ಕೂಡ ಕಳೆದ ಐದಾರು ವರ್ಷಗಳಿಂದ ಹಲವು ಸೆನ್ಸೇಷನಲ್ ಪ್ರಕರಣಗಳಲ್ಲಿ ಹೆಸರು ಕೇಳಿಬಂದಿದ್ದ ರೋಹಿಣಿ ಸಿಂಧೂರಿಯವರು, ಮೈಸೂರಿಗೆ ಬರುತ್ತಲೇ ಅಲ್ಲಿನ ಶಾಸಕರು, ಸಂಸದರು ಮತ್ತು ಇತರೆ ರಾಜಕೀಯ ಮುಖಂಡರೊಂದಿಗಿನ ತಮ್ಮ ಜಿದ್ದಾಜಿದ್ದಿಯ ಕಾರಣಕ್ಕೆ ನಿತ್ಯ ಸುದ್ದಿಯಾಗತ್ತಲೇ ಇದ್ದಾರೆ. ಇಷ್ಟು ದಿನ ಶಾಸಕ, ಮಾಜಿ ಸಚಿವ ಸಾ ರಾ ಮಹೇಶ್, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ಪ್ರಮುಖರು ಜಿಲ್ಲಾಧಿಕಾರಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಿದ್ದರು. ಅವರನ್ನು ಮೈಸೂರಿನಿಂದ ಎತ್ತಂಗಡಿ ಮಾಡುವಂತೆ ಸ್ವತಃ ಸಂಸದ ಪ್ರತಾಪ್ ಸಿಂಹ ಬಹಿರಂಗವಾಗಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದರು.

ಇದೀಗ, ಮಹತ್ವದ ಬೆಳವಣಿಗೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ವಿರುದ್ಧ ಸ್ವತಃ ಮತ್ತೊಬ್ಬ ಮಹಿಳಾ ಐಎಎಸ್ ಅಧಿಕಾರಿಯೇ ಗಂಭೀರ ಆರೋಪ ಮಾಡಿದ್ದು, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತೆಯಾಗಿ ಕೆಲಸ ಮಾಡಲು ತಮಗೆ ಅವರು ಅವಕಾಶ ನೀಡುತ್ತಿಲ್ಲ. ತಮ್ಮ ವಿರುದ್ಧ ವೈಯಕ್ತಿಕ ಹಗೆತನ ತೋರುತ್ತಿದ್ದಾರೆ. ಆ ಕಾರಣಕ್ಕೆ ಪಾಲಿಕೆಯ ವಿರುದ್ಧ ಸೇಡಿನ ವರಸೆ ತೋರುತ್ತಿದ್ದಾರೆ ಎಂಬ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಅದೂ ಕೂಡ ತುರ್ತು ಪತ್ರಿಕಾಗೋಷ್ಠಿ ಕರೆದು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಈ ಗಂಭೀರ ಆರೋಪ ಮಾಡಿದ್ದು, ಜಿಲ್ಲಾಧಿಕಾರಿಗಳ ವರ್ತನೆಯಿಂದ ಬೇಸತ್ತು ತಾವು ತಮ್ಮ ಹುದ್ದೆಗೆ ಮತ್ತು ಐಎಸ್ ಎಸ್ ವೃತ್ತಿಗೇ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಕೋವಿಡ್ ನಿರ್ವಹಣೆ ವಿಷಯದಲ್ಲಿ ಪಾಲಿಕೆಯ ವ್ಯಾಪ್ತಿಯಲ್ಲಿ ತಾವು ನಿರ್ವಹಿಸಿದ ಕಾರ್ಯಕ್ಕಾಗಿ ಮಾಧ್ಯಮಗಳಲ್ಲಿ ತಮ್ಮ ಮತ್ತು ಪಾಲಿಕೆಯ ಕುರಿತು ಬಂದ ಸದಭಿಪ್ರಾಯದಿಂದ ಜಿಲ್ಲಾಧಿಕಾರಿಗಳು ಈರ್ಷೆಗೊಳಗಾಗಿದ್ದಾರೆ. ಆ ಕಾರಣದಿಂದಲೇ ತಮ್ಮನ್ನು ಗುರಿಯಾಗಿಸಿಕೊಂಡು ಪಾಲಿಕೆ ವಿರುದ್ಧ ಸಮರ ಸಾರಿದ್ದಾರೆ. ಕೋವಿಡ್ ಮಾರ್ಗಸೂಚಿಯ ವಿಷಯದಲ್ಲಿ ನಗರಕ್ಕೆ ಒಂದು ಮಾನದಂಡ, ಗ್ರಾಮೀಣ ಪ್ರದೇಶಕ್ಕೆ ಒಂದು ಮಾನದಂಡ ಮಾಡಿ ತಾರತಮ್ಯ ಮಾಡಲಾಗುತ್ತಿದೆ. ಸ್ವತಃ ಜಿಲ್ಲಾಧಿಕಾರಿಯಾಗಿ, ಪಾಲಿಕೆ ಆಯುಕ್ತರು ಕರೋನಾ ನಿಯಂತ್ರಣದಲ್ಲಿ ವಿಫಲರಾಗಿದ್ದಾರೆ ಎಂದು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ತಾವೇನು ಕೆಲಸ ಮಾಡಿಲ್ಲ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ಪತ್ರಿಕಾಗೋಷ್ಠಿಯಲ್ಲಿ ನೇರ ಆರೋಪ ಮಾಡಿದ್ದಾರೆ.
ಕೋವಿಡ್ ವಿಷಯದಲ್ಲಿ ಜಿಲ್ಲಾಡಳಿತದಿಂದ ಪಾಲಿಕೆಗೆ ಯಾವ ಸಹಕಾರವಾಗಲೀ, ಬೆಂಬಲವಾಗಲೀ ಸಿಕ್ಕಿಲ್ಲ. ಸಿಎಸ್ ಆರ್ ಫಂಡ್ ಮೂಲಕ ಪಾಲಿಕೆ ತನ್ನ ಮಿತಿಯಲ್ಲಿ ಎಲ್ಲಾ ಪ್ರಯತ್ನ ನಡೆಸುತ್ತಿದೆ. ಆದರೆ, ಸಿಎಸ್ ಆರ್ ಫಂಡ್ ಕೂಡ ಪಡೆಯದಂತೆ ಜಿಲ್ಲಾಧಿಕಾರಿಗಳು ಅಡ್ಡಿಪಡಿಸುತ್ತಿದ್ದಾರೆ. ಅವರ ಸ್ವಪ್ರತಿಷ್ಠೆಯಿಂದಾಗಿ ನಾವು ಮಾಡುವ ಕೆಲಸಕ್ಕೆ ಬೆಲೆ ಇಲ್ಲದಂತಾಗಿದೆ. ನನ್ನನ್ನು ತುಳಿಯುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಪ್ರತಿನಿತ್ಯ ನೋಟೀಸ್, ಅವಮಾನ ಎದುರಿಸಬೇಕಾಗಿದೆ. ನಿತ್ಯದ ಈ ದಬ್ಬಾಳಿಕೆಯಿಂದ ಬೇಸತ್ತು ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ಧೇನೆ. ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ರಾಜೀನಾಮೆ ಪತ್ರ ಸಲ್ಲಿಸುತ್ತಿದ್ದೇನೆ ಎಂದು ಐಎ ಎಸ್ ಅಧಿಕಾರಿ ಶಿಲ್ಪಾ ನಾಗ್ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟಿದ್ದಾರೆ.

ಕರೋನಾ ವಿಷಯದಲ್ಲಿ ಜಿಲ್ಲಾಧಿಕಾರಿಗಳ ಏಕಪಕ್ಷೀಯ ನಿರ್ಧಾರಗಳು ಮತ್ತು ಕರೋನಾ ಸಂಕಷ್ಟದ ನಡುವೆ ಐಷಾರಾಮಿ ಸ್ವಿಮ್ಮಿಂಗ್ ಫೂಲ್ ನಿರ್ಮಾಣಕ್ಕೆ ಆದ್ಯತೆ ನೀಡಿದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಸಂಸದ ಪ್ರತಾಪ್ ಸಿಂಹ, ರೋಹಿಣಿ ಸಿಂಧೂರಿ ವಿರುದ್ಧ ಸಾರ್ವಜನಿಕವಾಗಿ ಕಿಡಿಕಾರಿದ್ದರು. ಅವರನ್ನು ಕೂಡಲೇ ವರ್ಗಾವಣೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದರು. ಆದರೆ, ಅದೇ ವೇಳೆ ಜಿಲ್ಲೆಯ ಹಿರಿಯ ರಾಜಕಾರಣ ಜಿ ಟಿ ದೇವೇಗೌಡ, ಜಿಲ್ಲಾಧಿಕಾರಿ ಪರ ಬ್ಯಾಟಿಂಗ್ ಮಾಡಿ, ತಾಕತ್ತಿದ್ದರೆ ಜಿಲ್ಲಾಧಿಕಾರಿಗಳನ್ನು ಎತ್ತಂಗಡಿ ಮಾಡಿಸಿ ಎಂದು ಸಿಂಹಗೆ ಸವಾಲು ಹಾಕಿದ್ದರು.
ಅಲ್ಲದೆ, ಕಳೆದ ತಿಂಗಳು ಆಮ್ಲಜನಕದ ಕೊರತೆಯಿಂದ ಚಾಮರಾಜನಗರ ಆಸ್ಪತ್ರೆಯಲ್ಲಿ ಸಂಭವಿಸಿದ್ದ 29 ಮಂದಿಯ ಸಾವಿನ ಹಿನ್ನೆಲೆಯಲ್ಲಿ ಕೂಡ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರ ಹೆಸರು ಕೇಳಿಬಂದಿತ್ತು. ಚಾಮರಾಜನಗರ ಜಿಲ್ಲಾಧಿಕಾರಿ ರವಿ ಅವರು ಅಗತ್ಯ ಪ್ರಮಾಣದ ಆಮ್ಲಜನಕ ಸರಬರಾಜಿಗೆ ಮನವಿ ಮಾಡಿದ್ದರೂ, ಆ ಜಿಲ್ಲೆಯ ಕೋಟಾದಂತೆ ಆಮ್ಲಜನಕ ನೀಡಲು ಮೈಸೂರು ಡಿಸಿ ನಿರಾಕರಿಸಿದ್ದರು. ಹಾಗಾಗಿಯೇ ಸಕಾಲದಲ್ಲಿ ಆಮ್ಲಜನಕ ಸಿಗದೆ ಒಂದೇ ದಿನ 29 ಮಂದಿ ಕೋವಿಡ್ ಸೋಂಕಿತರು ಸಾವು ಕಂಡರು. ಆ ಸಾವುಗಳಿಗೆ ಮೈಸೂರು ಜಿಲ್ಲಾಧಿಕಾರಿಯ ಅಮಾನುಷ ನಿರ್ಧಾರವೇ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.

ಈ ಹಿಂದೆ ಹಾಸನದ ಜಿಲ್ಲಾಧಿಕಾರಿಯಾಗಿದ್ದಾಗಲೂ ಮತ್ತು ಮಂಡ್ಯ ಮತ್ತು ತುಮಕೂರಿನಲ್ಲಿ ವಿವಿಧ ಹುದ್ದೆಗಳಲ್ಲಿದ್ದಾಗಲೂ ರೋಹಿಣಿ ಸಿಂಧೂರಿ ಒಂದಿಲ್ಲೊಂದು ವಿವಾದಗಳ ಮೂಲಕ ಸುದ್ದಿಯಲ್ಲಿದ್ದವರು. ಮುಖ್ಯವಾಗಿ ಐಎಎಸ್ ಅಧಿಕಾರಿ ಡಿ ಕೆ ರವಿ ಸಾವಿನ ಪ್ರಕರಣದಲ್ಲಿ ಕೂಡ ಅವರ ಹೆಸರು ಕೇಳಿಬಂದಿತ್ತು. ಇದೀಗ ಸಹ ಐಎ ಎಸ್ ಅಧಿಕಾರಿ ಶಿಲ್ಪಾ ನಾಗ್ ಅವರು ನೇರವಾಗಿ, ಇವರ ದುರಹಂಕಾರ ಮತ್ತು ಸ್ವಪ್ರತಿಷ್ಠೆಯಿಂದಾಗಿಯೇ ತಮಗೆ ಕೆಲಸ ಮಾಡಲು ಆಗುತ್ತಿಲ್ಲ ಎಂಬ ಕಾರಣವನ್ನು ಬಹಿರಂಗಪಡಿಸಿ, ಕಣ್ಣೀರಿಟ್ಟಿದ್ದಾರೆ.












