ನನ್ನ ಮಗ ರಾಜಕಾರಣಕ್ಕೆ ಬರಲ್ಲ. ಅವನಿಗೆ ಅದು ಆಸಕ್ತಿಯೂ ಇಲ್ಲ. ನಾನು ಕರೆದರೂ ಬರಲ್ಲ ಎಂದು ಉದ್ಯಮಿಯಾಗಿರುವ ಮಗ ವಿಜಯ್ ನಿರಾಣಿ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು.
ನವನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ , ನಮ್ಮ ಕುಟುಂಬದಲ್ಲಿ ಮುರುಗೇಶ ನಿರಾಣಿ ಮತ್ತು ಹನುಮಂತ ನಿರಾಣಿ ಮಾತ್ರ ರಾಜಕಾರಣದಲ್ಲಿ ಇರುತ್ತೇವೆ. ನಮ್ಮಿಬ್ಬರನ್ನು ಬಿಟ್ಟು ಮೂರನೇಯವರು ಸ್ಪರ್ಧೆ ಮಾಡಿಲ್ಲ. ಮನೆಯಲ್ಲಿ ಯಾರಾದರೂ ಸ್ಪರ್ಧೆ ಮಾಡ್ತೇನೆ ಅಂದ್ರೆ ನಾನು ನಿವೃತ್ತಿ ಹೊಂದುತ್ತೇನೆ ಎಂದರು.ನನಗೂ ಇಪ್ಪತ್ತು ವರ್ಷ ಜನರು ಆಶೀರ್ವಾದ ಮಾಡಿದ್ದಾರೆ. ನಾನು ಫ್ಯಾಕ್ಟರಿ ನೋಡಿಕೊಂಡು ಹೋಗುತ್ತೇನೆ. ಸಂಗಮೇಶ ನಿರಾಣಿ ಬೇಕಿದ್ರೆ ಸ್ಪರ್ಧೆ ಮಾಡಲಿ.
ಮಗನಿಗೆ ಒಂದು ಟಾರ್ಗೆಟ್ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರ ಅವರಂತೆ ದೇಶದಲ್ಲಿ 101 ಕಾರ್ಖಾನೆ ಸ್ಥಾಪಿಸುವ ಗುರಿ ಹೊಂದಿದ್ದಾನೆ. ಈಗ ನನ್ನ ಅವಧಿಯಲ್ಲಿ 50 ಮಾಡಿಕೊಡಿ. ಉಳಿದಿದ್ದು ನಾನು ಮಾಡುತ್ತೇನೆ ಅಂತಾನೆ. ಅದರಿಂದ ಲಕ್ಷಾಂತರ ಜನರಿಗೆ ಉದ್ಯೋಗ ಕೊಡಬಹುದು. ಸದ್ಯ ನನ್ನ ಮಗ ನಿರಾಣಿ ಗ್ರೂಪ್ ಗೆ ಎಂಡಿ ಆಗಿದ್ದಾನೆ. ಈಗ ನಾನು ನಿವೃತ್ತಿ ಆಗಿದ್ದೇನೆ. ನಾನು ಏನು ಇಲ್ಲ. ಎಲ್ಲ ಹೊರಹಾಕ್ತಿದ್ದಾರೆ ಎಂದು ಹಾಸ್ಯ ಮಾಡಿದ ಸಚಿವ ನಿರಾಣಿ ಅವರು, ಈಗ ನನ್ನ ಮಗ ದುಬೈನಲ್ಲಿ ಆಮದು-ರಫ್ತು ವಹಿವಾಟು ಶುರು ಮಾಡಿದ್ದಾನೆ ಎಂದರು.
ಇದೇ ಸಮಯದಲ್ಲಿ ಮಾತನಾಡಿದ ಅವರು, ಹಲಕುರ್ಕಿಯಲ್ಲಿ ಸರ್ಕಾರದ 2000 ಎಕರೆ ಜಮೀನು ಖರೀದಿಸಿ ಸುಮಾರು 15 ಸಾವಿರ ಕೋಟಿ ಬಂಡವಾಳ ಹೂಡಲು ಖಾಸಗಿ ಕಂಪನಿಗಳು ಮುಂದೆ ಬಂದಿದೆ.ಬಾಗಲಕೋಟೆ ಜಿಲ್ಲೆಯ 25 ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ದೂರಕುತ್ತದೆ. ಅಲ್ಲದೆ ಇತರ ಜನರಿಗೆ ಅನುಕೂಲಕರವಾಗಲಿದೆ. ವಿಮಾನ ನಿಲ್ದಾಣ ಸೇರಿದಂತೆ ಇತರ ಕೈಗಾರಿಕೆಗಳು ಬರುತ್ತದೆ. ಹಲಕುರ್ಕಿ ರೈತರು ಹೋರಾಟ ಮಾಡುತ್ತಿದ್ದಾರೆ.900 ಎಕರೆ ಜಮೀನು ಕೂಡಲು ಮುಂದೆ ಬಂದಿದ್ದಾರೆ. ಆದರೆ ಕೆಲವು ರೈತರು ವಿರೋಧ ವ್ಯಕ್ತ ಪಡಿಸಿದ್ದು,ಪ್ರತಿ ಏಕರೆ 19 ಲಕ್ಷ ಕೂಡುತ್ತೇವೆ ಎಂದು ತಿಳಿಸಿದ್ದೇವೆ. ರೈತರು ಜಮೀನು ನೀಡಲು ಮುಂದಾದರೆ,ಹಲಕುರ್ಕಿ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಆಗಲಿದೆ ಎಂದು ತಿಳಿಸಿದರು.