ಬೆಂಗಳೂರು: ವೀರಶೈವ ಲಿಂಗಾಯತ ಸಮಾಜವು ತನ್ನೊಳಗೆ ಮಾತ್ರ ಒಗ್ಗಟ್ಟು ಕಾಯ್ದುಕೊಳ್ಳದೆ, ರಾಜ್ಯದ ಎಲ್ಲ ಸಮಾಜಗಳನ್ನು ಒಗ್ಗೂಡಿಸಿಕೊಂಡು ಸಾಗುವ ಜವಾಬ್ದಾರಿ ವಹಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು.
ಬೆಂಗಳೂರಿನ ವಿಜಯನಗರದಲ್ಲಿರುವ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ನಡೆದ ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜಗಜ್ಯೋತಿ ಬಸವಣ್ಣನವರ ತತ್ವಗಳು ಸಮಾಜಕ್ಕೆ ದಾರಿ ತೋರಿಸಿವೆ ಎಂದು ಹೇಳಿದರು.

ಬಸವಣ್ಣನವರು ಸಮಾನತೆ ಹಾಗೂ ಮಾನವ ಧರ್ಮದ ಪರಿಕಲ್ಪನೆಗೆ ಒತ್ತು ನೀಡಿದ್ದರು. ‘ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು’ ಎಂಬ ಬಸವತತ್ವವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಿವಕುಮಾರ್ ಹೇಳಿದರು.
ನಾಡಿನ ವಿವಿಧ ಮಠಗಳು ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಮಾಡುತ್ತಿರುವ ಸೇವೆಯನ್ನು ಶ್ಲಾಘಿಸಿದ ಅವರು, ಜಾತಿ-ಧರ್ಮದ ಭೇದವಿಲ್ಲದೆ ವಿದ್ಯಾರ್ಥಿಗಳಿಗೆ ಶಿಕ್ಷಣ, ಜ್ಞಾನ ಮತ್ತು ಸಂಸ್ಕಾರ ನೀಡುತ್ತಿರುವ ಮಠಗಳ ಕೊಡುಗೆ ಮಹತ್ವದ್ದಾಗಿದೆ ಎಂದು ತಿಳಿಸಿದರು. ಮಠಗಳ ಶೈಕ್ಷಣಿಕ ಸಂಸ್ಥೆಗಳ ಮೂಲಕ ಶಿಕ್ಷಣ ಪಡೆದ ಅನೇಕರು ದೇಶ-ವಿದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ ಎಂದರು.

ಧರ್ಮ ಮತ್ತು ಸಂಸ್ಕೃತಿಯ ಮಹತ್ವವನ್ನು ವಿವರಿಸಿದ ಶಿವಕುಮಾರ್, ಮನುಷ್ಯನ ಜೀವನದ ಹಲವು ಹಂತಗಳಲ್ಲಿ ಧರ್ಮ, ಸಂಸ್ಕೃತಿ ಮತ್ತು ಆಚರಣೆಗಳು ಪ್ರಭಾವ ಬೀರುತ್ತವೆ. ಕಾಲ ಬದಲಾದರೂ ನೈತಿಕ ಮೌಲ್ಯಗಳು ಮತ್ತು ಉಪಕಾರ ಸ್ಮರಣೆಯಂತಹ ಮೌಲ್ಯಗಳು ಬದಲಾಗಬಾರದು ಎಂದು ಹೇಳಿದರು.
ಬೆಂಗಳೂರಿಗೆ ಹೊರ ಜಿಲ್ಲೆಗಳಿಂದ ಆಗಮಿಸುವ ಮಠಾಧೀಶರು ಹಾಗೂ ಭಕ್ತಾದಿಗಳ ವಾಸ್ತವ್ಯಕ್ಕೆ ಅನುಕೂಲವಾಗುವಂತೆ ನಗರದ ಹೊರವಲಯದಲ್ಲಿ ಎರಡು ಎಕರೆ ಜಾಗ ನೀಡುವುದಾಗಿ ಶಿವಕುಮಾರ್ ಪ್ರಕಟಿಸಿದರು.ಜಾಗ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಅಲ್ಲಿ ಕಟ್ಟಡ ನಿರ್ಮಿಸುವುದು ಸಮಾಜದ ಜವಾಬ್ದಾರಿ ಎಂದು ಅವರು ಹೇಳಿದರು. ಬಸವಣ್ಣನವರ ‘ಕಾಯಕವೇ ಕೈಲಾಸ’ ಹಾಗೂ ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಎಂಬ ತತ್ವಗಳಲ್ಲಿ ನಂಬಿಕೆ ಹೊಂದಿರುವುದಾಗಿ ತಿಳಿಸಿದ ಅವರು, ಸಮಾಜದ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.ಸಮ್ಮೇಳನದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು, ಸಚಿವರು ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.






