ಕಾಪು ಮಾರಿಗುಡಿ ಜಾತ್ರೆಯಲ್ಲಿ ಮುಸ್ಲಿಮರ ವ್ಯಾಪಾರಕ್ಕೆ ನಿಷೇಧ ಹೇರಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ‘ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಇಡುವ ಯತ್ನಿಸುತ್ತಿದೆ’ ಎಂದು ಕಿಡಿಕಾರಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, ಈ ಬಗ್ಗೆ ಮೂರು ನಾಲ್ಕು ತಿಂಗಳ ಹಿಂದೆಯೇ ಹೇಳಿದ್ದೆ. ಭಾವನಾತ್ಮಕ ವಿಚಾರಗಳಲ್ಲಿ ಸೃಷ್ಟಿಸಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಾರೆಂದು ಪ್ರಿಡಿಕ್ಟ್ ಮಾಡಿದ್ದೆ. ಉತ್ತರ ಭಾರತದ ಚುನಾವಣಾ ತಂತ್ರಗಾರಿಕೆಯನ್ನು ಕರ್ನಾಟಕದಲ್ಲಿ ಪ್ರಯೋಗಿಸಲು ಬಿಜೆಪಿ ಮುಂದಾಗಿದೆ. ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಇಡುವ ಪ್ರಯತ್ನ ಮಾಡುತ್ತಿದ್ದಾರೆ. ಕರಾವಳಿಯಲ್ಲಿದ್ದ ಕೋಮು ದ್ವೇಷವನ್ನು ರಾಜ್ಯಾದ್ಯಂತ ಅಳವಡಿಸಿಕೊಳ್ಳುತ್ತಿದ್ದಾರೆ.ಇದೆಲ್ಲವನ್ನು ಜನರು ನೋಡುತಿದ್ದಾರೆ ಎಂದು ಹೇಳಿದ್ಧಾರೆ.

ಗ್ಯಾಸ್,ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಅವರ ಜನಪರ ಕೆಲಸಗಳು ದೇಶವನ್ನು ಉದ್ದಾರ ಮಾಡಿದ್ದಾರಂತೆ. ಅದಕ್ಕಾಗಿ ಜನರೂ ಅವರ ನೀತಿಗಳ ವಿರುದ್ಧ ಹೋರಾಟ ಮಾಡುತ್ತಿಲ್ಲ ಎನ್ನುತ್ತಿದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿ ನೀತಿಗಳನ್ನು ಕುಮಾರಸ್ವಾಮಿ ಖಂಡಿಸಿದರು.