ನೀವು ದೇವನೂರು ಮಹಾದೇವ ಅವರು ಬರೆದ ʼಆರ್‌ಎಸ್‌ಎಸ್: ಆಳ ಮತ್ತು ಅಗಲʼ ಪುಸ್ತಕವನ್ನು ಓದಿದ್ದರೆ, ಬಹುಷ ನಿಮಗಿದು ಗೊತ್ತಿರುತ್ತದೆ. ಅದರಲ್ಲಿ ದೇಮಾ ಅವರು ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಪ್ರಧಾನಿ ನೆಹರೂ ಹಾಗೂ ಗೃಹಸಚಿವ ಸರ್ದಾರ್ ಪಟೇಲರಿಗೆ ಬರೆದ ಪತ್ರದ ಆಯ್ದ ಭಾಗವನ್ನು ಉಲ್ಲೇಖಿಸುತ್ತಾರೆ. ಅದು ಇಂತಿದೆ:
“ಆರ್‌ಎಸ್‌ಎಸ್ ಮಂದಿ ಗಲಭೆ ಸೃಷ್ಟಿಸುವ ಯೋಜನೆಯೊಂದನ್ನು ಹಾಕಿಕೊಂಡಿದ್ದಾರೆಂದು ನನಗೆ ತಿಳಿಸಲಾಗಿದೆ, ಅವರು ಹಲವಾರು ಮಂದಿಗೆ ಮುಸ್ಲಿಮರ ವೇಷ ತೊಡಿಸಿ ಮುಸ್ಲಿಮರ ಹಾಗೆ ಕಾಣುವಂತೆ ಮಾಡಿದ್ದಾರೆ. ಇವರಿಗೆ ಹಿಂದೂಗಳ ಮೇಲೆ ದಾಳಿ ನಡೆಸಿ ಗಲಭೆ ಹುಟ್ಟು ಹಾಕಿ ಹಿಂದೂಗಳನ್ನು ಕೆರಳಿಸುವ ಕಾರ್ಯವನ್ನು ವಹಿಸಲಾಗಿದೆ. ಈ ಸಂದರ್ಭದಲ್ಲಿ ಆರ್‌ಎಸ್‌ಎಸ್ ಪ್ರೇರಿತ ಹಿಂದೂಗಳು ಮುಸ್ಲಿಮರ ಮೇಲೆ ದಾಳಿ ನಡೆಸಿ ಅವರನ್ನೂ ಕೆರಳಿಸಲಿದ್ದಾರೆ. ಹಿಂದೂಗಳು ಮತ್ತು ಮುಸ್ಲಿಮರ ಮಧ್ಯದ ತೆರನಾದ ಗಲಭೆ ಒಂದು ದಳ್ಳುರಿಯನ್ನು ಹುಟ್ಟು ಹಾಕಲಿದೆ”
ಇದು ಮಾಜಿ ರಾಷ್ಟ್ರಪತಿಯವರು ಆರ್‌ಎಸ್‌ಎಸ್ ಬಗ್ಗೆ ಅಂದೇ ನೀಡಿದ್ದ ಎಚ್ಚರಿಕೆ. ಇದನ್ನು ಇಲ್ಲಿ ಉಲ್ಲೇಖಿಸಲು ಕಾರಣವಿದೆ. ದೇಶದಲ್ಲಿ ಇತ್ತೀಚೆಗೆ ಸಾಮಾನ್ಯ ಎನಿಸಿಬಿಟ್ಟಂತಹ ಧ್ರುವೀಕರಣ, ಧ್ವೇಷ ಹರಡುವಿಕೆಯ ಸರಣಿಯ ಮುಂದುವರಿದ ಭಾಗವಾಗಿ ಏಷ್ಯಾದಲ್ಲೇ ದೊಡ್ಡ ಮಾಲ್ ಆದ ಲುಲು ಮಾಲ್ ವಿರುದ್ಧ ಹಿಂದೂ ಸಂಘಟನೆಗಳು ಅಭಿಯಾನ ನಡೆಸುತ್ತಿದೆ. ಕೇರಳ ಮೂಲದ ಯೂಸುಫ್ ಅಲಿ ಅವರ ಒಡೆತನದ ಲುಲು ಮಾಲ್‌ನಲ್ಲಿ ಗುಂಪೊಂದು ನಮಾಝ್ ಮಾಡಿದೆ ಎಂಬ ವಿಡಿಯೋ ಇಟ್ಟುಕೊಂಡು ಹಿಂದುತ್ವವಾದಿಗಳು ಲುಲು ಮಾಲ್‌ಗೆ ಬಹಿಷ್ಕಾರಕ್ಕೆ ಕರೆ ನೀಡಿದ್ದಾರೆ. ಮಾಲ್ ಒಳಗೆ ಹನುಮಾನ್ ಚಾಲಿಸಾ ಪಠಿಸಿ ವಿಡಿಯೋ ಹಂಚಿದ್ದಾರೆ. ಗುಂಪು ಕಟ್ಟಿ ರಾಮಾಯಣ ಪಾರಾಯಣ ಮಾಡುವುದಾಗಿ ಮಾಲ್ ಆವರಣದಲ್ಲಿ ಗಲಾಟೆ ಸೃಷ್ಟಿಸಿದ್ದಾರೆ. ಇದಕ್ಕೆಲ್ಲಾ ಅವರು ಮುಖ್ಯ ಕಾರಣ ನೀಡುತ್ತಿರುವುದು ಮಾಲ್ ಒಳಗೆ ಗುಂಪೊಂದು ನಮಾಝ್ ಮಾಡಿದೆ ಎನ್ನುವುದನ್ನು.
ನಮಾಝ್ ಮಾಡಿದವರ ವಿರುದ್ಧ ಈಗಾಗಲೇ ಮಾಲ್ ನೀಡಿದ ದೂರಿನನ್ವಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆ ಮಾಡಿದ ಪೊಲೀಸರಿಗೆ ಕುತೂಹಲಕಾರಿ ಅಂಶಗಳು ಗಮನಕ್ಕೆ ಬಂದಿವೆ. ಮಾಲ್ ವ್ಯವಸ್ಥಾಪಕರಿಂದ ಪಡೆದುಕೊಂಡ ಸಿಸಿಟಿವಿ ದೃಶ್ಯದಲ್ಲಿ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣಕರ್ತರಾದ “ನಮಾಝಿಗರ” ಎಲ್ಲಾ ಚಟುವಟಿಕೆಗಳು ದಾಖಲಾಗಿವೆ.
“ಆತುರ ಆತುರವಾಗಿ ಮಾಲ್ ಪ್ರವೇಶಿಸಿದ ಎಂಟು ಮಂದಿಯ ತಂಡ, ನಮಾಝ್ ನಿರ್ವಹಿಸಲು ಸೂಕ್ತ ಸ್ಥಳಕ್ಕಾಗಿ ಸ್ಥಳ ಹುಡುಕುತ್ತಾರೆ. ಈ ಪ್ರಯತ್ನದಲ್ಲಿ ಮೊದಲು ನೆಲಮಹಡಿಯಲ್ಲಿ ಮತ್ತು ನಂತರ ಮೊದಲ ಮಹಡಿಯಲ್ಲಿ ನಮಾಝ್ ಮಾಡಲು ಹೊರಟ ತಂಡವನ್ನು ಭದ್ರತಾ ಸಿಬ್ಬಂದಿಗಳು ತಡೆದಿದ್ದಾರೆ. ಇದೆಲ್ಲವೂ ಸಿಸಿಟಿವಿ ದೃಶ್ಯದಲ್ಲಿ ದಾಖಲಾಗಿದೆ. ಅಲ್ಲಿಗೆ, ನಮಾಝ್ ಮಾಡಲು ಮಾಲ್ ಸಿಬ್ಬಂದಿಗಳು ತಡೆ ಮಾಡಿದ್ದಾರೆ ಅನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಅಲ್ಲಿಂದ ತರಾತುರಿಯಾಗಿ ಎರಡನೇ ಮಹಡಿಗೆ ತಲುಪಿದ ತಂಡ, ಅಲ್ಲಿ ಜನಸಂದಣಿ ಕಡಿಮೆ ಇರುವುದನ್ನೇ ಪ್ರಯೋಜನ ಮಾಡಿಕೊಂಡು ಅಲ್ಲೇ ನಮಾಝ್ ಮಾಡಲು ನಿಂತಿದ್ದಾರೆ, ಅಲ್ಲಿ ಭದ್ರತಾ ಸಿಬ್ಬಂದಿಗಳು ಇಲ್ಲದ್ದರಿಂದ ಅಲ್ಲಿ ಅವರು ನಮಾಝ್ ಭಂಗಿಯಲ್ಲಿ ನಿಂತುಕೊಳ್ಳುವುದು, ಕುಳಿತುಕೊಳ್ಳುವುದು ಮಾಡುತ್ತಾರೆ. ಕುತೂಹಲಕಾರಿ ಎಂಬಂತೆ, ತಂಡದ ಎಂಟು ಮಂದಿಯಲ್ಲಿ ಆರು ಮಂದಿ ನಮಾಝ್ ಭಂಗಿಯಲ್ಲಿ ನಿಂತುಕೊಂಡರೆ, ಉಳಿದಿಬ್ಬರು ಅದನ್ನು ಚಿತ್ರೀಕರಿಸುವಲ್ಲಿ ನಿರತರಾಗಿದ್ದಾರೆ.”
ಸಾಮಾನ್ಯವಾಗಿ ‘ನಮಾಝ್’ ಪೂರ್ಣಗೊಳಿಸಲು ಏಳೆಂಟು ನಿಮಿಷಗಳಾದರೂ ಬೇಕು, ಆತುರ ಆತುರವಾಗಿ ನಿರ್ವಹಿಸಿದರೆ ಕನಿಷ್ಟ ಮೂರು-ನಾಲ್ಕು ನಿಮಿಷವಾದರೂ ತೆಗೆದುಕೊಳ್ಳುತ್ತದೆ, ಆದರೆ ಈ ಗುಂಪು ಅದನ್ನು ಕೇವಲ 18 ಸೆಕೆಂಡುಗಳ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಿದೆ. ಮಾತ್ರವಲ್ಲದೆ, ಮುಸ್ಲಿಮರು ನಮಾಝ್ ಮಾಡಲು ಪಶ್ಚಿಮ ದಿಕ್ಕಿಗೆ ಅಭಿಮುಖವಾಗಿ ನಿಲ್ಲುತ್ತಾರೆ. ಆದರೆ, ಆ ಕನಿಷ್ಟ ತಿಳುವಳಿಕೆಯೂ ಈ ಗುಂಪಿನ ಸದಸ್ಯರಿಗೆ ಗೊತ್ತಿರಲಿಲ್ಲ ಎಂದು ಸಾಮಾಜಿಕ ಕಾರ್ಯಕರ್ತೆ ತಾಹಿರಾ ಹಸನ್ ಅವರು ಹೇಳಿರುವುದಾಗಿ ನ್ಯಾಷನಲ್ ಹೆರಾಲ್ಡ್ ವರದಿ ಮಾಡಿದೆ.
ಏಷ್ಯಾದಲ್ಲೇ ದೊಡ್ಡ ಮಾಲ್ ಆಗಿರುವ ಲಕ್ನೋ ಲುಲು ಮಾಲ್‌ನಲ್ಲಿ ಬಹುತೇಕರು ಸೆಲ್ಫಿ ತೆಗೆದುಕೊಳ್ಳಲು ಹಾಗೂ ಫೋಟೋ ಕ್ಲಿಕ್ಕಿಸಲು ಮತ್ತು ಮಾಲ್ ಸುತ್ತಿ ನೋಡುತ್ತಿದ್ದರೆ, ಈ ಎಂಟು ಮಂದಿಗೆ ಅದರಲ್ಲಿ ಯಾವುದೇ ಆಸಕ್ತಿ ಇರಲಿಲ್ಲ. ನಮಾಝ್ ಭಂಗಿಯಲ್ಲಿ ಕುಳಿತೂ, ನಿಂತೂ ವಿಡಿಯೋ ಚಿತ್ರೀಕರಿಸಿ ಬಂದ ವೇಗದಲ್ಲಿ ಮರಳಿದ್ದಾರೆ.
ಈ ಎಲ್ಲಾ ಸನ್ನಿವೇಶಗಳು ಹಲವು ಪ್ರಶ್ನೆಗಳು ಏಳಲು ಕಾರಣವಾಗಿದೆ.
1) ನಮಾಝ್ ನಿರ್ವಹಿಸಿದವರು ಯಾರು?
2) ಮಾಲ್ ಸುತ್ತಿ ನೋಡಲೋ, ಖರೀದಿಸಲೋ ಬರದವರು ಮಾಲ್ ಒಳಗೆ ಬಂದದ್ದೇಕೆ?
3) ಮಾಲ್ ಅಲ್ಲಿ ನಮಾಝ್ ಮಾಡಿ ಆತುರ ಆತುರವಾಗಿ ಹೊರಟದ್ದೇಕೆ?
4) ಕೆಲವು ನಿಮಿಷಗಳಾದರೂ ಬೇಕಾಗುವ ನಮಾಝನ್ನು 18 ಸೆಕೆಂಡುಗಳಲ್ಲಿ ಮುಗಿಸಿದ್ದು ಹೇಗೆ?
5) ಎಂಟು ಮಂದಿಯಲ್ಲಿ ಆರು ಮಂದಿ ಮಾತ್ರ ನಮಾಝ್ ಮಾಡಿದ್ದೇಕೆ? ಉಳಿದಿಬ್ಬರು ಚಿತ್ರೀಕರಣ ಮಾಡಿದ್ದೇಕೆ?
6) ಉದ್ದೇಶಪೂರಿತವಾಗಿ ನಮಾಝ್ ಮಾಡುವ ದೃಶ್ಯಗಳನ್ನು ವೈರಲ್ ಮಾಡಲಾಯಿತೇ?
ಬಹುಷ, ಈ ನಮಾಝ್ ನಿರ್ವಹಿಸುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಹಿಂದೂ ಬಲಪಂಥೀಯ ಸಂಘಟನೆಗಳು ಲುಲು ಮಾಲ್ ವಿರುದ್ಧ ನಡೆಸಿದ ಅಭಿಯಾನ, ಅಲ್ಲಿ ಸೃಷ್ಟಿಸಿದ ಉದ್ವಿಗ್ನತೆಯನ್ನೆಲ್ಲಾ ಗಮನಿಸುವಾಗ ಈ ಮೇಲಿನ ಪ್ರಶ್ನೆಗೆ ಸರಳವಾಗಿ ಉತ್ತರವನ್ನು ಊಹಿಸಬಹುದು. ಅಥವಾ “ಹಲವಾರು ಮಂದಿಗೆ ಮುಸ್ಲಿಮರ ವೇಷ ತೊಡಿಸಿ ಮುಸ್ಲಿಮರ ಹಾಗೆ ಕಾಣುವಂತೆ ಮಾಡಿದ್ದಾರೆ” ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರ ಪತ್ರದ ಉಲ್ಲೇಖವನ್ನು ಈ ಘಟನೆಗೆ ಅನ್ವಯಿಸಬಹುದು.
ಇದಕ್ಕೆ ಪೂರಕವಾಗಿ , ನಿನ್ನೆ (17 ಜುಲೈ) ನಡೆದ ಒಂದು ಬಂಧನದ ವರದಿಯನ್ನು ಗಮನಿಸಿ.
“ಕೊಡವರ ಕುಲದೇವಿ, ಕೊಡಗಿನ ಆರಾಧ್ಯ ದೇವತೆ ಕಾವೇರಮ್ಮ ಮಾತೆ ಮತ್ತು ಕೊಡವ ಸಮುದಾಯದ ಹೆಣ್ಣು ಮಕ್ಕಳನ್ನು ಮುಸ್ಲಿಮ್ ಯುವಕನ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಅವಮಾನ ಮಾಡಿ ಪೋಸ್ಟ್ ಹಾಕಿದ ಯುವಕನನ್ನು ಕೊಡಗಿನ ಪೊಲೀಸರು ಬಂಧಿಸಿದ್ದಾರೆ. ಸಿದ್ದಾಪುರದ ಯುವಕ ಮೊಹಮದ್ ಅಷ್ಫಾಕ್ ಎಂಬ ವಿದ್ಯಾರ್ಥಿಯ ಹೆಸರಿನಲ್ಲಿ ತಾಯಿ ಕಾವೇರಿ ಮತ್ತು ಕೊಡವ ಹೆಣ್ಣು ಮಕ್ಕಳ ಬಗ್ಗೆ ವಿರಾಜಪೇಟೆ ಪಾಲಂಗಾಲ ನಿವಾಸಿ ಕೆ ಸಿ ದಿವಿನ್ ದೇವಯ್ಯ ಎಂಬ ಯುವಕ ಅವಮಾನಕಾರಿಯಾಗಿ ಪೋಸ್ಟ್ ಹಾಕಿದ್ದ. ದಿವಿನ್ ದೇವಯ್ಯನ ತಂದೆ ಹೆಸರು ಪೊನ್ನಣ್ಣ”
ಕೆಲವು ವರ್ಷಗಳ ಹಿಂದೆ, ಸಿಂದಗಿಯ ತಹಶೀಲ್ದಾರ್ ಕಚೇರಿ ಮೇಲೆ ಶ್ರೀರಾಮ ಸೇನೆ ಕಾರ್ಯಕರ್ತರು ಪಾಕಿಸ್ತಾನ ಧ್ವಜ ಹಾರಿಸಿ ಮುಸ್ಲಿಮರ ತಲೆ ಮೇಲೆ ಅದನ್ನು ಹಾಕಿದ್ದು ಸೇರಿದಂತೆ ಹಲವು ಘಟನೆಗಲನ್ನು ಉಲ್ಲೇಖಿಸುತ್ತಲೇ ಹೋಗಬಹುದು.