
ಜಾಮೀನಿನ ಮೇಲೆ ಬಂಧನದಿಂದ ಹೊರಗಿದ್ದ ಮುರುಘಾ ಸ್ವಾಮೀಜಿ ಮತ್ತೆ ಜೈಲು ಸೇರಲಿದ್ದಾರೆ. ಪೋಕ್ಸೋ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ.
ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕೇಸ್ನಲ್ಲಿ ಮುರುಘಾ ಮಠದ ಡಾ. ಶಿವಮೂರ್ತಿ ಶರಣರಿಗೆ ಹೈಕೋರ್ಟ್ ನೀಡಿದ್ದ ಜಾಮೀನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಆದೇಶಿಸಿದೆ. ಮುಂದಿನ ಒಂದು ವಾರದಲ್ಲಿ ನ್ಯಾಯಾಂಗ ಬಂಧನಕ್ಕೆ ತೆರಳುವಂತೆ ಆರೋಪಿ ಮುರುಘಾ ಶ್ರೀಗಳಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.ಈ ಹಿಂದೆ ಮುರುಘಾ ಶ್ರೀಗಳಿಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀಜು ನೀಡಿತ್ತು. ಇವರು ಜೈಲಿನಿಂದ ಹೊರಗೆ ಇದ್ದರೆ ಸಾಕ್ಷ ನಾಶ ಮಾಡಬಹುದು ಎಂದು ರಾಜಪ್ಪ ಎಂಬುವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.ಶ್ರೀಗಳ ಜಾಮೀನು ರದ್ದು ಕೋರಿ ರಾಜಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಆದೇಶ ಹೊರಡಿಸಿದೆ. ನ್ಯಾ. ವಿಕ್ರಮ್ ನಾಥ್ ನೇತೃತ್ವದ ದ್ವಿಸದಸ್ಯ ಪೀಠ ಆದೇಶ ಹೊರಡಿಸಿ ಜಾಮೀನು ರದ್ದುಗೊಳಿಸಿದೆ.ಇನ್ನು 4 ತಿಂಗಳಲ್ಲಿ ತನಿಖೆ ಪೂರ್ಣಗೊಳ್ಳದಿದ್ದರೆ ಶ್ರೀಗಳ ನ್ಯಾಯಾಂಗ ಬಂಧನದ ಅವಧಿ ಮತ್ತೆ 2 ತಿಂಗಳ ಕಾಲ ವಿಸ್ತರಣೆ ಮಾಡಬಹುದು. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಮುರುಘಾ ಶ್ರೀ 1 ವಾರದೊಳಗೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಬೇಕು ಎನ್ನಲಾಗಿದೆ.
ಮುರುಘಾ ಶರಣರ ವಿರುದ್ಧ 2022 ಆಗಸ್ಟ್ 31 ರಂದು ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಸೆಪ್ಟೆಂಬರ್ 1ರಂದು ಬಂಧನವಾಗಿತ್ತು. ಸುಮಾರು 14 ತಿಂಗಳ ಕಾಲ ಜೈಲಿನಲ್ಲಿದ್ದ ಶ್ರೀಗಳು 2023 ನವೆಂಬರ್ 16ರಂದು ಷರತ್ತು ಬದ್ಧ ಜಾಮೀನಿನ ಮೇಲೆ ಹೊರಗೆ ಬಂದಿದ್ದರು