ಮುರುಘಾ ಮಠದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಸೇರಿದ್ದ ಮುರುಘಾ ಶ್ರೀ ಇಂದು ಜೈಲಿನಿಂದ ಬಿಡುಗಡೆ ಆಗಿದ್ದಾರೆ.
ಜೈಲಿನಿಂದ ಹೊರಬಂದ ಮುರುಘಾಶ್ರೀ ನೇರವಾಗಿ ದಾವಣಗೆರೆಗೆ ತೆರಳಿದ್ದಾರೆ. ಶ್ರೀಗಳ ಅಭಿಮಾನಿಗಳು ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದರು. ಅಲ್ಲದೆ ಇದೇ ವೇಳೆ ಶ್ರೀಗಳ ಪರ ಘೋಷಣೆ ಕೂಗಿ, ಜೈಕಾರ ಹಾಕಿದರು.
ಹೈಕೋರ್ಟ್ ಆದೇಶದ ಪ್ರಕಾರ, ಷರತ್ತುಗಳನ್ನು ಪೂರೈಸಿದ ಕಾರಣ, ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಕಾನೂನು ಚೌಕಟ್ಟು ಪ್ರಕಾರ ನಡೆದಿದೆ.
ಪ್ರಕರಣದ ಸಾಕ್ಷ್ಯಾಧಾರ ನಾಶ ಮಾಡುವಂತಿಲ್ಲ, ಪ್ರಭಾವ ಬೀರುವಂತಿಲ್ಲ. ಇಂತಹ ಕೃತ್ಯ ಪುನರಾವರ್ತನೆ ಮಾಡುವಂತಿಲ್ಲ. ಇಬ್ಬರು ಶೂರಿಟಿ ನೀಡಬೇಕು. ಪಾಸ್‌ಪೋರ್ಟ್ ಕೋರ್ಟ್‌ಗೆ ಸಲ್ಲಿಸಬೇಕು. ಕೋರ್ಟ್‌ಗೆ ವಿಸಿ ಮೂಲಕ ಹಾಜರಾಗಬೇಕು. ಚಿತ್ರದುರ್ಗಕ್ಕೆ ಪ್ರವೇಶವಿಲ್ಲ. ವೀಡಿಯೋ ಕಾನ್ಫರೆನ್ಸ್ ಮೂಲಕವಾದರೂ ಪ್ರಕರಣದ ವಿಚಾರಣೆಗೆ ಹಾಜರಾಗಬೇಕು ಎಂಬ ಷರತ್ತುಗಳನ್ನು ಕೋರ್ಟ್ ಹಾಕಿದೆ.
ಮುರುಘಾಮಠದ ಪೀಠಾಧ್ಯಕ್ಷರಾಗಿದ್ದ ಮುರುಘಾ ಶ್ರೀ, ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಂಗ ಬಂಧನವಾಗಿದ್ದರು. ಮಠದಲ್ಲಿ ಅಪ್ರಾಪ್ತ ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪದಲ್ಲಿ ಬಂಧನವಾಗಿತ್ತು. 761 ಪುಟಗಳ ಚಾರ್ಜ್‌ಶೀಟ್ ಫೈಲ್ ಮಾಡಲಾಗಿತ್ತು. ನಿನ್ನೆ ಬೇಲ್ ಆದೇಶ ತಡವಾಗಿದ್ದರಿಂದ ನಿನ್ನೆಯ ಬದಲು ಇಂದು ರಿಲೀಸ್ ಆಗಿದ್ದಾರೆ.