ಬಿಜೆಪಿಯಲ್ಲಿ ಮುಂದಿನ ಮುಖ್ಯಮಂತ್ರಿಯಾಗುವ ಪೈಕಿ ಸಚಿವ ಮುರುಗೇಶ್ ನಿರಾಣಿ ಹೆಸರು ಹೆಚ್ಚು ಚಾಲ್ತಿಯಲ್ಲಿದೆ. ಈ ಹಿಂದೆ ಕೂಡ ಮುಖ್ಯಮಂತ್ರಿ ಬದಲಾವಣೆ ಕೂಗು ಕೇಳಿ ಬಂದಾಗ ನಿರಾಣಿ ಹೆಸರೇ ಮೊದಲಿತ್ತು. ಶಿವಮೊಗ್ಗದಲ್ಲಿ ಸಚಿವ ಈಶ್ವರಪ್ಪ ಕೂಡ ನಿರಾಣಿಯವರೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೆ ಕೊಟ್ಟಾಗಿಂದ ಸಿಎಂ ಬದಲಾವಣೆಯ ಚರ್ಚೆ ಮತ್ತೆ ಆರಂಭವಾಗಿದ್ದು, ಈ ಬಗ್ಗೆ ಖುದ್ದು ಮುರುಗೇಶ್ ನಿರಾಣಿ ಸ್ಪಷ್ಟನೆ ನೀಡಿದ್ದಾರೆ.
ಶುಕ್ರವಾರ ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣ ಪಂಚಾಯತಿಯಲ್ಲಿ ವಿಧಾನ ಪರಿಷತ್ ಚುನಾವಣೆಗೆ ಮತ ಚಲಾಯಿಸಿ ಸುದ್ದಿಗಾರರೊಂದಿಗೆ ಮಾತನಾಡಿ, “ನಾನೂ ಮುಖ್ಯಮಂತ್ರಿಯಾಗುತ್ತೇನೆಂದು ಎಲ್ಲಿಯೂ ಹೇಳಿಲ್ಲ. ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಸಮರ್ಥವಾಗಿ ಆಡಳಿತ ನಡೆಸುತ್ತಿದ್ದಾರೆ.. ಅವರ ನೇತೃತ್ವದಲ್ಲಿ ಉತ್ತಮ ಕೆಲಸಗಳು ರಾಜ್ಯದಲ್ಲಿ ನಡೆಯುತ್ತಿವೆ,” . ಎಂದು ಹೇಳುವ ಮೂಲಕ ಎಲ್ಲ ವದಂತಿಗಳಿಗೆ ಸದ್ಯಕ್ಕೆ ತೆರೆ ಎಳೆದಿದ್ದಾರೆ.

ಒಂದೂವರೆ ವರ್ಷಗಳ ಕಾಲ ನಾನು ಮಂತ್ರಿಯಾಗಿರಲಿಲ್ಲ. ಈಗ ನಮ್ಮ ಪಕ್ಷದ ನಾಯಕರು ಮಂತ್ರಿ ಜವಾಬ್ದಾರಿ ನೀಡಿದ್ದಾರೆ. ಅದನ್ನು ಸರಿಯಾಗಿ ನಿಭಾಯಿಸಲು ಕೆಲಸ ಮಾಡುತ್ತಿದ್ದೇನೆ. ನನ್ನ ಬಗ್ಗೆ ಕೆಲವರು ಮಾತನಾಡುತ್ತಾರೆ. ಅದಕ್ಕೆಲ್ಲ ಉತ್ತರ ಕೊಡುವ ಅಗತ್ಯ ವಿಲ್ಲ ಎಂದರು.
ಸಮಸ್ತ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಜನರಿಗೆ ಸೌಲಭ್ಯ ಸಿಗುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದೇನೆ. ಮಠಾಧೀಶರ ಒಕ್ಕೂಟದ ಕುರಿತು ನನಗೆ ಯಾವುದೇ ಮಾಹಿತಿಯಿಲ್ಲ. ನನ್ನನ್ನು ಯಾರೊಬ್ಬರೂ ಸಭೆಗೆ ಕರೆದಿಲ್ಲ. ಒಕ್ಕೂಟದ ಸಭೆಗೆ ನಾನು ಹೋಗಿಲ್ಲ ಎಂದು ತಿಳಿಸಿದರು.
ಬರುವ ಚುನಾವಣೆಯಲ್ಲಿ ಬೀಳಗಿ ಬಿಟ್ಟು ಬೇರೆ ಕಡೆಯಿಂದ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಬೀಳಗಿ ಮತಕ್ಷೇತ್ರ ಬಿಟ್ಟು ಎಲ್ಲಿಯೂ ಸ್ಪರ್ಧೆ ಮಾಡಲ್ಲ.ಬೀಳಗಿಯಲ್ಲೇ ನನ್ನ ರಾಜಕೀಯ ಶುರು ಮಾಡಿದ್ದೇನೆ. ಇಲ್ಲಿಯ ಮತದಾರರಿಂದಲೇ ಶಾಸಕನಾಗಿ, ಮಂತ್ರಿಯಾಗಿದ್ದೇನೆ. ಈ ವಿಧಾನ ಪರಿಷತ್ ಚುನಾವಣೆಯಲ್ಲಿ ೧೫ ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ ಎಂದರು.





