ಉತ್ತರಕನ್ನಡ(Uttara Kannada) ಜಿಲ್ಲೆಯ ಭಟ್ಕಳದಲ್ಲಿ ಮಹಿಳೆಯೊಬ್ಬರನ್ನು ತನಿಖೆ ನಡೆಸಿ ತೆರಳಿದ್ದಾರೆ ಮುಂಬೈ(Mumbai) ಎಟಿಎಸ್(SIT) ತಂಡ. ಭಟ್ಕಳದ ಆಜಾದ್ ನಗರದ ನಿವಾಸಿಯಾಗಿರುವ ಆಯಿಷಾ ಎಂಬ ಮಹಿಳೆಯನ್ನು ತನಿಖೆ ನಡೆಸಿ ತೆರಳಿದೆ ಎಟಿಎಸ್ ಟೀಂ. ಮುಂಬೈನಲ್ಲಿ ಬಂಧನಕ್ಕೊಳಗಾದ ಉಗ್ರ ಸಂಘಟನೆಯ ವ್ಯಕ್ತಿಯ ಜತೆ ಸಂಪರ್ಕ ಇರುವ ಹಿನ್ನೆಲೆಯಲ್ಲಿ ತನಿಖೆ ಮಾಡಲಾಗಿದೆ. ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಹಾಗೂ ಸಿರಿಯಾ ಸಂಘಟನೆ ಸಂಪರ್ಕದ ಶಂಕೆಯ ಮೇಲೆ ಮುಂಬೈನಲ್ಲಿ ಎಂಜಿನಿಯರ್ ಯುವಕನ ಬಂಧನವಾಗಿತ್ತು. 32 ವರ್ಷದ ಹುಸೇನ್ ಅಬ್ದುಲ್ ಅಜೀಜ್ ಶೇಖ್ ಎಂಬಾತನನ್ನು ಬಂಧಿಸಲಾಗಿತ್ತು. ಈ ಶಂಕಿತ ಉಗ್ರನ ಜತೆ ಭಟ್ಕಳ ಮಹಿಳೆಯ ಸಂಪರ್ಕವಿದ್ದ ಹಿನ್ನೆಲೆ ಎಟಿಎಸ್ ತಂಡ ಭಟ್ಕಳಕ್ಕೆ ಆಗಮಿಸಿ ಮಹಿಳೆಯನ್ನು ತನಿಖೆ ಮಾಡಿದೆ.
ಭಟ್ಕಳ ಪೊಲೀಸರ ಸಹಾಯ ಪಡೆದು ಎರಡು ದಿನ ವಿಚಾರಣೆ ನಡೆಸಿರುವ ಎಟಿಎಸ್ ಟೀಂ, ಬಂಧಿತ ಶಂಕಿತ ಉಗ್ರನಿಗೆ ವಿವಿಧ ಹಂತಗಳಲ್ಲಿ ಹಣ ವರ್ಗಾವಣೆ ಮಾಡಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ. ಬಂಧಿತ ಉಗ್ರನ ಜೊತೆ ಭಟ್ಕಳದ ಮಹಿಳೆಗೆ ನೇರ ಸಂಪರ್ಕ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಮಹಿಳೆಯಿಂದ ಮೊಬೈಲ್ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಮುಂಬೈ ಎಸ್‌ಐಟಿ ವಶಕ್ಕೆ ಪಡೆದುಕೊಂಡು ಹೋಗಿದೆ ಎನ್ನುವ ಮಾಹಿತಿ ಸಿಕ್ಕಿದೆ.