ಬಿಜೆಪಿಯ ಪರಮಾಪ್ತ ಉದ್ಯಮಿ ಗೌತಮ್ ಅದಾನಿ ಒಡೆತನದ ಗುಜರಾತಿನ ಮುಂದ್ರಾ ಬಂದರಿನಲ್ಲಿ ಬರೋಬ್ಬರಿ ಮೂರು ಟನ್ ನಷ್ಟು ಹೆರಾಯಿನ್ ಪತ್ತೆಯಾದ ಕೆಲವೇ ದಿನಗಳಲ್ಲಿ, ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮಾದಕ ದ್ರವ್ಯ ಸೇವನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾನೆ.
ಮುಂಬೈ ಕರಾವಳಿಯಲ್ಲಿ ಗೋವಾದತ್ತ ಹೊರಟಿದ್ದ ಐಷಾರಾಮಿ ಹಡಗಿನ ಮೇಲೆ ಶನಿವಾರ (ಅ.2) ತಡರಾತ್ರಿ ಎನ್ಸಿಬಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಆರ್ಯನ್ ಸೇರಿದಂತೆ ಎಂಟು ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು. ಅವರೆಲ್ಲರನ್ನೂ ನಿರಂತರವಾಗಿ ವಿಚಾರಣೆ ಮಾಡಿ, ಅಂತಿಮವಾಗಿ ಸಂಜೆ ವೇಳೆಗೆ ಎಲ್ಲರ ಬಂಧನವನ್ನು ಅಧಿಕೃತಗೊಳಿಸಲಾಗಿದೆ.
ಸೂಪರ್ ಸ್ಟಾರ್ ಪುತ್ರನ ಬಂಧನದೊಂದಿಗೆ ನಿರ್ದಿಷ್ಟವಾಗಿ ಈ ಪ್ರಕರಣವಷ್ಟೇ ಅಲ್ಲದೆ, ಬಹುತೇಕ ಪ್ರಧಾನಿ ಮೋದಿಯವರ ತವರು ರಾಜ್ಯ ಗುಜರಾತ್ ಮೂಲಕ ದೇಶದೊಳಗೆ ಪ್ರವೇಶಿಸುತ್ತಿರುವ, ಮೋದಿಯವರ ಆಪ್ತ ಮಿತ್ರರಲ್ಲಿ ಒಬ್ಬರಾದ ಅದಾನಿ ಒಡೆತನದ ಮುಂದ್ರಾ ಬಂದರಿನ ಮೂಲಕವೇ ದೇಶದ ಮೂಲೆಮೂಲೆಗೆ ತಲುಪುತ್ತಿರುವ ವಾರ್ಷಿಕ ನೂರಾರು ಟನ್ ಮಾದಕ ದ್ರವ್ಯದ ವಿಷಯದಲ್ಲಿ ಬಹುತೇಕ ಜಾಣಕುರುಡುತನ ತೋರುವ ಎನ್ ಸಿಬಿ ಕೂಡ ಭಾರೀ ಸುದ್ದಿಗೆ ಗ್ರಾಸವಾಗಿದೆ.
ಏಕೆಂದರೆ, ಶಾರುಖ್ ಪುತ್ರನ ಮೋಜುಮಸ್ತಿಯ ವಿಷಯ ಹೊಸದೇನಾಗಿರಲಿಲ್ಲ. ಆತನ ಡ್ರಗ್ಸ್ ಪಾರ್ಟಿಗಳು ಕೂಡ ಬಾಲಿವುಡ್ ಬಲ್ಲವರಿಗೆ ಗೊತ್ತಿರದ ಸಂಗತಿಯೇನಾಗಿರಲಿಲ್ಲ. ಆದರೆ, ಕಳೆದ ಹದಿನೈದು ದಿನಗಳ ಹಿಂದೆ ಅದಾನಿ ಮಾಲೀಕತ್ವದ ಮುಂದ್ರಾ ಬಂದರಿನ ಮೂಲಕ ದೇಶದೊಳಗೆ ಬರುತ್ತಿದ್ದ ಮೂರು ಟನ್ ಹೆರಾಯಿನ್ ಅಚಾನಕ್ಕಾಗಿ ಎನ್ ಸಿಬಿ ಅಧಿಕಾರಿಗಳ ತಪಾಸಣೆವೇಳೆ ಸಿಕ್ಕುಬಿದ್ದ ನಂತರ, ಎದ್ದಿದ ಹಲವು ಪ್ರಶ್ನೆಗಳನ್ನು, ಅನುಮಾನಗಳ ಹಿನ್ನೆಲೆಯಲ್ಲಿ, ಎನ್ ಸಿಬಿ ಇದೀಗ ದಿಢೀರ್ ಎದ್ದುಕೂತಿರುವುದು ಮಾತ್ರ ವಿಶೇಷವೇ.
ಇಡೀ ಜಗತ್ತಿನಲ್ಲೇ ಮೊಟ್ಟಮೊದಲ ಬಾರಿಗೆ ಒಂದೇ ದಾಳಿಯಲ್ಲಿ ಮತ್ತು ಒಂದೇ ಸ್ಥಳದಲ್ಲಿ ಬರೋಬ್ಬರಿ ಮೂರು ಟನ್ ಹೆರಾಯಿನ್ ವಶಪಡಿಸಿಕೊಂಡ ಆ ಪ್ರಕರಣ ನಿಜಕ್ಕೂ ದೇಶದ ಎನ್ ಸಿಬಿ ಸೇರಿದಂತೆ ಭದ್ರತಾ ಮತ್ತು ಕಸ್ಟಮ್ಸ್ ವ್ಯವಸ್ಥೆಯ ಲೋಪಗಳನ್ನು ಜಗಜ್ಜಾಹೀರು ಮಾಡಿತ್ತು. ಆದರೆ, ಆ ಅಷ್ಟೊಂದು ಅಗಾಧ ಪ್ರಮಾಣದ ಮಾದಕವಸ್ತು ಪತ್ತೆಯಾದರೂ ಆ ಬಂದರಿನ ಆಡಳಿತದ ವಿರುದ್ಧ ಎನ್ ಸಿಬಿ ಯಾವುದೇ ಪ್ರಕರಣ ದಾಖಲಿಸಿಲ್ಲ. ಜೊತೆಗೆ ಬಂದರು ಮಾಲೀಕರು ಕೂಡ ಬಂದರಿಗೆ ಬರುವ ಕಂಟೇನರುಗಳನ್ನು ಪರಿಶೀಲಿಸುವ, ತಪಾಸಣೆ ಮಾಡುವ ಮತ್ತು ಅವುಗಳಲ್ಲಿ ಏನಿದೆ ಎಂಬುದನ್ನು ತಿಳಿಯುವ ಹೊಣೆ ನಮ್ಮದಲ್ಲ ಎಂದು ಒಂದೇ ಹೇಳಿಕೆ ನೀಡಿ ನುಣುಚಿಕೊಂಡಿತ್ತು. ಅಷ್ಟೇ ಅಲ್ಲ; ಇಷ್ಟೊಂದು ಪ್ರಮಾಣದ ಮಾದಕ ದ್ರವ್ಯ ಕಂಟೇನರುಗಟ್ಟಲೆ ಬಂದು ದೇಶದೊಳಗೆ ಬೀಳುತ್ತಿದ್ದರೂ, ಮತ್ತು ಕಳೆದ ಆರು ತಿಂಗಳಲ್ಲೇ ಗುಜರಾತಿನ ಅದೇ ಬಂದರಿನ ಮೂಲಕವೇ ಹತ್ತಾರು ಬಾರಿ ಭಾರೀ ಪ್ರಮಾಣದ ಮಾದಕ ವಸ್ತು ದೇಶದೊಳಗೆ ಬಂದಿರುವುದು ಪತ್ತೆಯಾಗಿದ್ದರೂ, ಗುಜರಾತ್ ಮೂಲದವರೇ ಆದ ಪ್ರಧಾನಿ ಮೋದಿಯಾಗಲೀ, ಗೃಹ ಸಚಿವ ಅಮಿತ್ ಶಾ ಆಗಲೀ ಆ ಬಗ್ಗೆ ಚಕಾರವೆತ್ತಿರಲಿಲ್ಲ!

ದೇಶದ ಅಧಿಕಾರದ ಚುಕ್ಕಾಣಿ ಹಿಡಿದ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಹೊಣೆ ಹೊತ್ತ ಈ ಇಬ್ಬರು ನಾಯಕರ ಮೌನವನ್ನು ಪ್ರಶ್ನಿಸಿದ್ದ ಕಾಂಗ್ರೆಸ್, ದೇಶದ ಸಾವಿರಾರು ಮೈಲಿ ಕರಾವಳಿಯಲ್ಲಿ ಕೇವಲ ಮುಂದ್ರಾ ಬಂದರಿನ ಮೂಲಕವೇ ಕಳೆದ ಕೆಲವು ವರ್ಷಗಳಿಂದ ಲಕ್ಷಾಂತರ ಕೋಟಿ ಮೊತ್ತದ 25 ಸಾವಿರ ಕೆಜಿಗೂ ಅಧಿಕ ಮಾದಕ ವಸ್ತು ದೇಶದ ಒಳಗೆ ಪ್ರವೇಶಿಸಿದೆ. ಆ ಬಗ್ಗೆ ದೇಶದ ಗೃಹ ಸಚಿವರಾಗಲೀ, ಪ್ರಧಾನಿಗಳಾಗಲೀ ಯಾವುದೇ ಪ್ರತಿಕ್ತಿಯೆ ನೀಡುತ್ತಿಲ್ಲ. ಜೊತೆಗೆ ಅಂತಹ ದಂಧೆಗೆ ಪೂರಕವೋ ಎಂಬಂತೆ ಕಳೆದ ಒಂದೂವರೆ ವರ್ಷದಿಂದ ಎನ್ ಸಿಬಿ ಮುಖ್ಯಸ್ಥರ ಹುದ್ದೆಯನ್ನು ಖಾಲಿ ಉಳಿಸಲಾಗಿದೆ. ಆ ಹಿನ್ನೆಲೆಯಲ್ಲಿ ಇಡೀ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಾಧೀಶರಿಂದ ತನಿಖೆಯಾಗಬೇಕು ಮತ್ತು ದೇಶದ ವಿದ್ಯಾರ್ಥಿಗಳು ಮತ್ತು ಯುವಜನತೆಯ ಜೀವ ಮತ್ತು ಜೀವನ ಕಾಪಾಡಲು ನ್ಯಾಯಾಲಯ ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿತ್ತು.
ಆ ಕುರಿತು ಅದಾನಿ ಬಂದರು ದೇಶದ ಮಾದಕವಸ್ತು ಆಮದಿನ ಕೇಂದ್ರವಾಗಿದೆ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಥೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಎರಡೇ ದಿನದಲ್ಲಿ ಮುಂಬೈ ಹಡಗಿನ ಮೇಲೆ ಎನ್ ಸಿಬಿ ದಾಳಿ ನಡೆದಿದೆ ಮತ್ತು ಸೂಪರ್ ಸ್ಟಾರ್ ಪುತ್ರ ಮಾದಕ ದ್ರವ್ಯ ಪ್ರಕರಣದಲ್ಲಿ ಅಂದರ್ ಆಗಿದ್ದಾನೆ.
ಇದೀಗ, ಈ ದಾಳಿ ಕೂಡ ನಿಜವಾಗಿಯೂ ಮಾದಕ ದ್ರವ್ಯದ ಪಿಡುಗಿನ ವಿರುದ್ಧದ ಕಾರ್ಯಾಚರಣೆಯಲ್ಲ; ಬದಲಾಗಿ ಅದಾನಿ ಬಂದರಿನ 21 ಸಾವಿರ ಕೋಟಿ ಮೌಲ್ಯದ ಭಾರೀ ಮಾದಕದ್ರವ್ಯ ವಶ ಪ್ರಕರಣದಲ್ಲಿ ದೇಶದ ಜನತೆ ಪ್ರಶ್ನಿಸತೊಡಗಿದ ಹಿನ್ನೆಲೆಯಲ್ಲಿ, ಅವರ ಗಮನವನ್ನು ಬೇರೆಡೆ ಸೆಳೆಯಲು ನಡೆಸಿದ ಕಣ್ಣೊರೆಸುವ ಯತ್ನ ಎಂದು ಕಾಂಗ್ರೆಸ್ ಟೀಕಿಸಿದೆ. ಅದೇ ವೇಳೆ ಬಂದರಿನಲ್ಲಿ ಡ್ರಗ್ಸ್ ಸಾಗಣೆಯ ಕುರಿತು ಸುಪ್ರೀಂಕೋರ್ಟ್ ಮೇಲ್ವಿಚಾರಣೆಯ ತನಿಖೆಯಾಗಬೇಕು ಎಂದೂ ಪಕ್ಷ ಪುನರುಚ್ಛರಿಸಿದೆ.
“ಬಾಲಿವುಡ್ ನಟನ ಮಗನನ್ನು ಬಂಧಿಸಲಾಗಿದೆ ಎಂಬ ಸುದ್ದಿಯಿದೆ. ಈ ಡ್ರಗ್ಸ್ ಎಲ್ಲಿಂದ ಬಂತು? ಎನ್ಸಿಬಿ ಇದ್ದಕ್ಕಿದ್ದಂತೆ ಕ್ರೂಸ್ ಹಡಗಿನಿಂದ ಡ್ರಗ್ಸ್ ಹಿಡಿಯಲಾಗಿದೆ ಎಂದು ಹೇಳಿದೆ. ಅವರು ನಿಜವಾದ ಸಮಸ್ಯೆಯಿಂದ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ. ನಿಜವಾದ ಸಮಸ್ಯೆಯೆಂದರೆ ಮುಂದ್ರಾ ಬಂದರು, ದೇಶದ ಡ್ರಗ್ ಕಂಪನಿಗಳು ಮತ್ತು ಅಫ್ಘಾನಿಸ್ತಾನದಿಂದ ಕಳ್ಳಸಾಗಣೆ ಮಾಡುವ ಡ್ರಗ್ಸ್”ಎಂದು ಕಾಂಗ್ರೆಸ್ ವಕ್ತಾರ ಶಮಾ ಮೊಹಮದ್ ಹೇಳಿದ್ದಾರೆ.