ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗ ಕಂಡ ಅದ್ಭುತ ನಟಿ ಬಿ. ಸರೋಜಾ ದೇವಿ ಇನಿಲ್ಲ..! ಹಲವು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ.. ಅಂದಿನ ಕಾಲದ ಎಲ್ಲಾ ಭಾಷೆಯ ಸೂಪರ್ ಸ್ಟಾರ್ ನಟರೊಂದಿಗೆ ತೆರೆಹಂಚಿಕೊಂಡಿದ್ದ ಬಿ ಸರೋಜಾ ದೇವಿ ಇಂದು ಕೊನೆಯುಸಿರೆಳೆದಿದ್ದಾರೆ.

ಬಿ. ಸರೋಜಾ ದೇವಿ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಬೆಳಗ್ಗೆ ಸುಮಾರು 9 ಗಂಟೆ ಸುಮಾರಿಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಬಿ ಸರೋಜಾ ದೇವಿ ಅವರಿಗೆ 87 ವರ್ಷ ವಯಸ್ಸಾಗಿತ್ತು.
ಬಿ. ಸರೋಜದೇವಿ ಕನ್ನಡದ ಹಿರಿಯ ಚಲನಚಿತ್ರತಾರೆಯರಲ್ಲಿ ಒಬ್ಬರು. ಒಂದು ಕಾಲದಲ್ಲಿ ಕನ್ನಡ ಬೆಳ್ಳಿತೆರೆಯಲ್ಲಿ ಬೆಳಗಿದ ಅಭಿನೇತ್ರಿ. ಕಿತ್ತೂರು ಚೆನ್ನಮ್ಮ ಚಿತ್ರದಲ್ಲಿ ಹೂಂಕರಿಸಿದ್ದ ಬಿ.ಸರೋಜಾದೇವಿ ಬಭ್ರುವಾಹನ ಚಿತ್ರದಲ್ಲಿ ಚಿತ್ರಾಂಗದೆಯಾಗಿದ್ದರು. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿರುವ ಭಾರತೀಯ ನಟಿ.

ಬಿ. ಸರೋಜದೇವಿ ಅವರು ಏಳು ದಶಕಗಳಲ್ಲಿ ಸುಮಾರು ೨೦೦ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಮನೋಜ್ಞ ಅಭಿನಯಕ್ಕೆ ಕನ್ನಡದಲ್ಲಿ “ಅಭಿನಯ ಸರಸ್ವತಿ” ಮತ್ತು ತಮಿಳಿನಲ್ಲಿ “ಕನ್ನಡತು ಪೈಂಗಿಲಿ” ಅಂದ್ರೆ ; ಕನ್ನಡದ ಗಿಳಿ ಎಂದೇ ಕರೆಯಲಾಗುತ್ತಿತ್ತು.
ಬಹುಭಾಷಾ ನಟಿ:

ಬಿ. ಸರೋಜದೇವಿ ಅವರು ಕನ್ನಡ ಸೇರಿದಂತೆ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದರು.
ಕನ್ನಡದಲ್ಲಿ ಡಾ.ರಾಜ್‌ಕುಮಾರ್, ಕಲ್ಯಾಣ್‌ಕುಮಾರ್, ಉದಯಕುಮಾರ್ ಅವರ ಜೊತೆ ನಟಿಸಿದರು. ತೆಲುಗಿನಲ್ಲಿ ಎ. ನಾಗೇಶ್ವರರಾವ್, ಎನ್.ಟಿ. ರಾಮರಾವ್ ಅವರ ಜೊತೆ ನಟಿಸಿದರು. ತಮಿಳಿನಲ್ಲಿ ಜೆಮಿನಿ ಗಣೇಶನ್, ಶಿವಾಜಿಗಣೇಶನ್ ಜೊತೆಗೆ ಸುಮಾರು ೨೨ ಹಿಟ್ ಚಿತ್ರಗಳಲ್ಲಿ ನಟಿಸಿದ್ದರು.

ಅಂದಿನ ತಮಿಳಿನ ಸೂಪ್ಪರ್ ಸ್ಟಾರ್ ನಟ ಎಂ.ಜಿ. ರಾಮಚಂದ್ರನ್ ಜೊತೆ ಸುಮಾರು ೨೬ ಹಿಟ್ ಚಿತ್ರಗಳಲ್ಲಿ ನಟಿಸಿದರು.
ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಬಿ. ಸರೋಜದೇವಿ ಅವರು ನಿರ್ವಹಿಸದ ಪಾತ್ರವೇ ಇಲ್ಲಾ.

ಹಿಂದಿಯಲ್ಲಿ ದಿಲೀಪ್ ಕುಮಾರ್, ರಾಜೇಂದ್ರಕುಮಾರ್, ಶಮ್ಮೀಕಪೂರ್, ಸುನಿಲ್‌ದತ್ ಜೊತೆ ನಟಿಸಿದ ಸರೋಜಾದೇವಿ, ಚತುರ್ಭಾಷಾ ತಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮೊದಲ ಕನ್ನಡ ನಟಿ ಎಂಬ ಕೀರ್ತಿಗೆ ಪಾತ್ರರಾಗಿದ್ದರು.

ಬಾಲ್ಯದಲ್ಲೇ ಕಲಾ ಸರಸ್ವತಿ ಕೈ ಹಿಡಿದಳು:
ಸರೋಜಾದೇವಿಯವರು ಬೆಂಗಳೂರಿನ್ನಲಿ ೭ ಜನವರಿ ೧೯೩೮ ರಂದು ಜನಿಸಿದರು. ಸರೋಜಾದೇವಿ ಅವರಿಗೆ ಬಾಲ್ಯದಿಂದಲೇ ಲಲಿತಕಲೆಗಳ ಬಗ್ಗೆ ಆಸಕ್ತಿ ಇತ್ತು. ಆಕೆಯ ತಂದೆ ಭೈರಪ್ಪ ಮೈಸೂರಿನಲ್ಲಿ ಪೊಲೀಸ್ ಅಧಿಕಾರಿಯಾಗಿದ್ದರು ಮತ್ತು ತಾಯಿ ರುದ್ರಮ್ಮ ಗೃಹಿಣಿಯಾಗಿದ್ದರು.

ಅವಳು ಅವರ ನಾಲ್ಕನೇ ಮಗಳು. ಭೈರಪ್ಪ ಆಕೆಗೆ ನೃತ್ಯ ಕಲಿಯಲು ಹೇಳಿದರು ಮತ್ತು ನಟನೆಯನ್ನು ವೃತ್ತಿಯಾಗಿ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಿದರು. ಯುವತಿಯಾದ ಸರೋಜಾ ದೇವಿಯು ತಂದೆ ಸ್ಟುಡಿಯೋಗಳಿಗೆ ಆಗಾಗ್ಗೆ ಜೊತೆಯಾಗುತ್ತಿದ್ದರು. ಬಿ. ಸರೋಜದೇವಿ ಅವರು ತಮ್ಮ ೧೭ ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಪ್ರವೇಶ ಪಡೆದಿದ್ದರು.
ಒಟ್ಟಾರೆ ಕನ್ನಡದ ಅಭಿನಯ ಸರಸ್ವತಿ ಬಿ. ಸರೋಜಾ ದೇವಿ ಇನ್ನಿಲ್ಲ ಎಂಬ ಸುದ್ದಿ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ ಎಂದೇ ಹೇಳಬಹುದು.