ಸ್ವಾತಂತ್ರ್ಯ ದಿನಾಚರಣೆ ಹತ್ತಿರ ಬರುತ್ತಿದ್ದಂತೆಯೇ ದೆಹಲಿಯ ಕೆಂಪು ಕೋಟೆಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಹಲವು ಹಂತಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಸುಮಾರು 5000ಕ್ಕೂ ಹೆಚ್ಚು ಸಿಬ್ಬಂದಿಗಳು ಈ ಬಾರಿ ಕೆಂಪು ಕೋಟೆಯ ಸುತ್ತ ಬಿಗಿ ಪಹರೆ ಕಾಯ್ದುಕೊಳ್ಳಲಿವೆ.
NSG ಸ್ನೈಪರ್ಸ್ ಪಡೆ, SWAT ಕಮಾಂಡೊ, ಕೈಟ್ ಕ್ಯಾಚರ್ಸ್ ಪಡೆ, ಶ್ವಾನ ದಳ ಮತ್ತು ಶಾರ್ಪ್ ಶೂಟರ್ಸ್ ಪಡೆಗಳನ್ನು ಕೆಂಪು ಕೋಟೆಯ ಸುತ್ತಲಿರುವ ಎತ್ತರದ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಇತ್ತೀಚಿಗೆ ಜಮ್ಮು ಏರ್ಪೋರ್ಟ್’ನಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ಡ್ರೋನ್ ಬಳಸಿ ಬಾಂಬ್ ದಾಳಿ ನಡೆಸಿದ ಕಾರಣಕ್ಕೆ, ಕೆಂಪು ಕೋಟೆಯ ಸುತ್ತ ಡ್ರೋನ್ ನಿರೋಧಕ ವ್ಯವಸ್ಥೆಯನ್ನು ಕೂಡಾ ಅಳವಡಿಸಿಕೊಳ್ಳಲಾಗಿದೆ.
ಎರಡು ಪೊಲೀಸ್ ಕಂಟ್ರೋಲ್ ರೂಮ್ ಬಳಸಿಕೊಂಡು 350 ಕ್ಯಾಮೆರಾಗಳ ಮುಖಾಂತರ ಪ್ರತಿಕ್ಷಣದ ಚಲನವಲನಗಳ ಮೇಲೆ ನಿಗಾ ಇರಿಸಲಾಗುತ್ತಿದೆ. ಕೋವಿಡ್ ನಿಯಮಗಳ ಪಾಲನೆಯನ್ನು ಅನುಷ್ಠಾನಗೊಳಿಸಲು ಹಾಗೂ ಭದ್ರತೆಯನ್ನು ಕಾಪಾಡಲು 5000ದಷ್ಟು ಭದ್ರತಾ ಪಡೆಯ ಸಿಬ್ಬಂದಿಗಳು ಕೆಂಪು ಕೋಟೆಯಲ್ಲಿ ಇರಲಿದ್ದಾರೆ.
ಹಿಂದೆಂದೂ ಕೈಗೊಳ್ಳದ ವಿಶೇಷ ಭದ್ರತಾ ಕ್ರಮವೊಂದನ್ನು ಈ ಬಾರಿ ಕೈಗೊಳ್ಳಲಾಗಿದೆ. ಜನವರಿ 26ರಂದು ರೈತರ ಟ್ರ್ಯಾಕ್ಟರ್ ಮೆರವಣಿಗೆಯ ವೇಳೆ ನಡೆದಂತಹ ಅನಾಹುತಕಾರಿ ಘಟನೆ ಮರುಕಳಿಸಬಾರದು ಎಂಬ ಕಾರಣಕ್ಕೆ, ಬೃಹತ್ ಕಂಟೈನರ್’ಗಳನ್ನು ಕೆಂಪು ಕೋಟೆಯ ಪ್ರವೇಶ ದ್ವಾರದ ಬಳಿ ಇಡಲಾಗಿದೆ. ಆಮಂತ್ರಿತ ಅತಿಥಿಗಳ ಹೊರತಾಗಿ ಬೇರೆ ಯಾರೂ ಸ್ವಾತಂತ್ರ್ಯ ದಿನಾಚರಣೆಯ ಸ್ಥಳ ಪ್ರವೇಶಿಸದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಇದರೊಂದಿಗೆ, ದೆಹಲಿಯ ಚಾಂದನಿ ಚೌಕ್ ಹಾಗೂ ಆಸುಪಾಸಿನ ಪ್ರದೇಶದಿಂದ ಕೆಂಪುಕೋಟೆಯ ಒಳಗೆ ಏನು ನಡೆಯುತ್ತಿದೆ ಎಂಬುದು ಕಾಣಿಸದಷ್ಟು ಎತ್ತರಕ್ಕೆ ಈ ಕಂಟೈನರ್’ಗಳನ್ನು ಇಡಲಾಗಿದೆ.

ಇದರೊಂದಿಗೆ, 70 ಪಿಸಿಆರ್ ವಾಹನಗಳು, ಪ್ರಹಾರ್ ವಾಹನಗಳು ಮತ್ತು ತುರ್ತು ರಕ್ಷಣಾ ಘಟಕದ ವಾಹನಗಳು ಕೂಡಾ ಕೆಂಪು ಕೋಟೆಯ ಸುತ್ತ ನಿಯೋಜಿಸಲಾಗಿವೆ. ಕೋಟೆಯ ಆಸುಪಾಸಿನ ಪ್ರದೇಶಗಳಲ್ಲಿ ಪೊಲೀಸ್ ಸಿಬ್ಬಂದಿಗಳು ಬೈಕುಗಳ ಮೇಲೆ ಗಸ್ತು ತಿರುಗಲಿದ್ದಾರೆ. ಯಮುನಾ ನದಿಯಲ್ಲಿಯೂ ಬೊಟ್ ಮೂಲಕ ಪೊಲೀಸ್ ಪಡೆಗಳು ಗಸ್ತು ತಿರುಗಲಿದ್ದು, ಯಾವುದೇ ಅಚಾತುರ್ಯ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಕೃಷಿ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ದೆಹಲಿಯ ಗಡಿ ಭಾಗಗಳಲ್ಲಿ ಬೀಡು ಬಿಟ್ಟಿರುವ ಪ್ರತಿಭಟನಾ ನಿರತ ರೈತರು ನಗರದೊಳಗೆ ಪ್ರವೇಶಿಸದಂತೆಯೂ ಭದ್ರತೆಯನ್ನು ಹೆಚ್ಚಿಸಲಾಗಿದೆ. ದೆಹಲಿಯೊಳಗೆ ಪ್ರವೇಶಿಸಿರುವ ವ್ಯಕ್ತಿಗಳ ಕುರಿತು ಮಾಹಿತಿ ದೃಢೀಕರಣ ಪ್ರಕ್ರಿಯೆ ನಡೆಸಲಾಗಿದೆ. ದೆಹಲಿಯ ನಿವಾಸಿಗಳ ಹಾಗೂ ಇಲ್ಲಿ ಬಾಡಿಗೆಗೆ ಇರುವವರ ಗುರುತು ಪತ್ತೆ ಕೂಡಾ ಮಾಡಲಾಗಿದೆ.
ನಾಳೆ ಕೆಂಪು ಕೋಟೆಯಲ್ಲಿ ಕಾರ್ಯಕ್ರಮ ನಡೆಯುತ್ತಿರುವ ವೇಳೆ ದೆಹಲಿಯ ಎಂಟು ರಸ್ತೆಗಳಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಯಾವುದೇ ರೀತಿಯ ಭೌತಿಕ ವಸ್ತುಗಳ ಹಾರಾಟವನ್ನು ಆಗಸ್ಟ್ 16ರ ವರೆಗೆ ನಿರ್ಬಂಧಿಸಲಾಗಿದೆ. ನಿಯಮ ಮೀರಿ ಡ್ರೋನ್ ಹಾರಾಟ ನಡೆಸಿದ ವೆಬ್ ಸಿರೀಸ್ ತಂಡವೊಂದರ ವಿರುದ್ದ ಈಗಾಗಲೇ ಪ್ರಕರಣವನ್ನೂ ದಾಖಲಿಸಲಾಗಿದೆ