2011ರ ಪಶ್ಚಿಮ ಬಂಗಾಳ ಚುಣಾವಣೆಯಲ್ಲಿ ಟಿಎಂಸಿ ಪಕ್ಷವು ಅಭೂತಪೂರ್ವ ಯಶಸ್ಸು ಸಾಧಿಸಲು ಕಾರಣಕರ್ತರಾದವರಲ್ಲಿ ಮುಕುಲ್ ರಾಯ್ ಕೂಡಾ ಒಬ್ಬರು. 67 ವರ್ಷದ ಈ ಅನುಭವಿ ರಾಜಕಾರಣಿ, ಕಳೆದ ಒಂದು ದಶಕಗಳ ಕಾಲ ಮಮತಾ ಬ್ಯಾನರ್ಜಿ ನಂತರ ಅತೀ ಹೆಚ್ಚು ಚರ್ಚೆಗೆ ಒಳಪಟ್ಟ ವ್ಯಕ್ತಿ. ತಾನು ಹೋದ ಪಕ್ಷದಲ್ಲೆಲ್ಲಾ, ಅಭೂತಪೂರ್ವ ಯಶಸ್ಸು ದೊರಕಿದ್ದೇ, ಇವರ ರಾಜಕೀಯ ಚಾಣಕ್ಷತೆಗೆ ಹಿಡಿದ ಕೈಗನ್ನಡಿ.
ಯುವ ಕಾಂಗ್ರೆಸ್’ನಿಂದ ರಾಜಕೀಯ ಯಾನ ಬೆಳೆಸಿದ ಮುಕುಲ್ ರಾಯ್, ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರು. 1998ರ ನಂತರ ಮಮತಾ ಬ್ಯಾನರ್ಜಿ ಅವರ ಬಲಗೈ ಬಂಟನಾಗಿ ಪಕ್ಷಕ್ಕಾಗಿ ಅವಿರತ ಶ್ರಮಿಸಿದ ರಾಯ್, ಏಕಾಏಕಿ ಬಿಜೆಪಿ ಸೇರಿದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು. ಆದರೆ, ಈಗ ಅವರು ಮತ್ತೆ ‘ಘರ್ ವಾಪ್ಸಿ’ ಮಾಡಿದ್ದಾರೆ. ಸುಮಾರು ನಾಲ್ಕು ವರ್ಷಗಳ ಕಾಲ ಬಿಜೆಪಿಯಲ್ಲಿದ್ದು, ಈಗ ಮತ್ತೆ ಟಿಎಂಸಿ ಸೇರಿರುವ ಮುಕುಲ್ ರಾಯ್ ಅವರ ಈ ನಿರ್ಧಾರದ ಸಾಧಕ ಬಾಧಕಗಳ ಸ್ಥೂಲ ವಿಶ್ಲೇಷಣೆ ಇಲ್ಲಿದೆ.
ಟಿಎಂಸಿ ಪಕ್ಷ ಆರಂಭವಾದಾಗಿಂದಲೂ, ಮಮತಾ ಬ್ಯಾನರ್ಜಿ ಅವರು ಪಕ್ಷದ ಮುಖ್ಯಸ್ಥೆಯಾಗಿದ್ದರು. ಭಾವನಾತ್ಮಕವಾದ ರೀತಿಯಲ್ಲಿ ಪಕ್ಷದ ನೇತಾರರಾಗಿದ್ದ ಮಮತಾ ಹಿಂದುಗಡೆ ನಿಂತು ಪಕ್ಷದ ಕಾರ್ಯಕರ್ತರನ್ನು ಸಂಭಾಳಿಸುತ್ತಿದ್ದವರು ಮುಕುಲ್ ರಾಯ್. ಮುಕುಲ್ ರಾಯ್ ಮೇಲೆ ದೀದಿಗೆ ಎಷ್ಟು ವಿಶ್ವಾಸವಿತ್ತೆಂದರೆ, 2012ರಲ್ಲಿ ಆಗಿನ ಕೇಂದ್ರ ರೈಲ್ವೇ ಮಂತ್ರಿಯಾಗಿದ್ದ ದಿನೇಶ್ ತ್ರಿವೇದಿ ಅವರನ್ನು ಮಂತ್ರಿಸ್ಥಾನದಿಂದ ತೆಗೆದು ಆ ಸ್ಥಾನಕ್ಕೆ ಮುಕುಲ್ ರಾಯ್ ಆಯ್ಕೆಯಾಗುವವರೆಗೂ ಮಮತಾ ಪಟ್ಟು ಬಿಟ್ಟಿರಲಿಲ್ಲ.
ಆದರೆ, ಯಾವಾಗ ಮುಕುಲ್ ರಾಯ್ ಮೇಲೆ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದವೋ,ದೀದಿ ಮತ್ತು ರಾಯ್ ನಡುವೆ ಮನಸ್ತಾಪ ಹುಟ್ಟುಕೊಂಡಿತು. ನಾರದ ಹಗರಣ ಮತ್ತು ಶಾರದಾ ಚಿಟ್ ಫಂಡ್ ಹಗರಣದಲ್ಲಿ ರಾಯ್ ಅವರ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತು. ಕೊನೆಗೂ 2017ರ ಸೆಪ್ಟೆಂಬರ್’ನಲ್ಲಿ ಮುಕುಲ್ ರಾಯ್ ಅವರು ಆರು ವರ್ಷಗಳ ಕಾಲ ತೃಣಮೂಲ ಕಾಂಗ್ರೆಸ್’ನಿಂದ ಉಚ್ಚಾಟಿಸಲ್ಪಟ್ಟರು.
ಆ ನಂತರ ಡೋಲಾಯಮಾನವಾಗಿದ್ದ ಮುಕುಲ್ ರಾಯ್ ಅವರ ರಾಜಕೀಯ ಜೀವನದ ಬಹುಮುಖ್ಯ ತಿರುವೆಂದರೆ, ಅದು ಬಿಜೆಪಿ ಸೇರ್ಪಡೆ.
2017ರ ನವೆಂಬರ್’ನಲ್ಲಿ ಬಿಜೆಪಿ ಸೇರಿದ್ದ ರಾಯ್, ತಮ್ಮೊಂದಿಗೆ ಪಶ್ಚಿಮ ಬಂಗಾಳ ರಾಜಕೀಯ ಹಾಗೂ ಆಡಳಿತ ವ್ಯವಸ್ಥೆಯ ಜ್ಞಾನವನ್ನೂ ಹೊತ್ತು ತಂದರು. ಆ ಹೊತ್ತಿಗೆ ಲೋಕಸಭಾ ಚುನಾವಣೆಯೂ ಸಮೀಪಿಸುತ್ತಿದ್ದರಿಂದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು ತನ್ನ ನೆಲೆ ವಿಸ್ತರಿಸಿಕೊಳ್ಳಲು ಬಲಿಷ್ಟ ನಾಯಕನ ಹುಡುಕಾಟದಲ್ಲಿತ್ತು. ಬಂಗಾಳದಲ್ಲಿ ಪಕ್ಷ ಸಂಘಟನೆ ಹಾಗೂ ಚುನಾವಣಾ ತಂತ್ರಗಾರಿಕೆ ರೂಪಿಸಲು ಮುಕುಲ್ ರಾಯ್ ಬಿಜೆಪಿಯ ಪ್ರಮುಖ ಅಸ್ತ್ರವಾದರು.
ಎಡ ಪಕ್ಷಗಳ ತೀವ್ರವಾದ ಪ್ರಭಾವ ಇರುವ ರಾಜ್ಯದಲ್ಲಿ ಬಿಜೆಪಿಯು ಅಧಿಕೃತ ವಿರೋಧ ಪಕ್ಷದಲ್ಲಿ ಕೂರುವಂತೆ ಮಾಡುವಲ್ಲಿ ಮುಕುಲ್ ರಾಯ್ ಪಾತ್ರ ಮಹತ್ವದ್ದು ಎಂದು ಬಿಜೆಪಿ ನಾಯಕರೇ ಒಪ್ಪಿಕೊಳ್ಳುತ್ತಾರೆ. ಇದಕ್ಕೂ ಮಿಗಿಲಾಗಿ, 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 18 ಸ್ಥಾನ ಗೆಲ್ಲಿಸಿಕೊಡುವಲ್ಲಿ ಮಹತ್ವ ಪಾತ್ರ ವಹಿಸಿದ್ದ ರಾಯ್ ಅವರನ್ನು ಇದೇ ಬಿಜೆಪಿ ನಾಯಕರು ‘ಬಂಗಾಳ ಚುನಾವಣೆಯ ಚಾಣಕ್ಯ’ ಎಂದು ಹೊಗಳಿ ಅಟ್ಟಕ್ಕೇರಿಸಿದ್ದರು.
ಇದೇ ವೇಳೆ, ಕೇಂದ್ರ ಮಂತ್ರಿಮಂಡಲದಲ್ಲಿ ಸ್ಥಾನ ಪಡೆಯುವ ತಮ್ಮ ಆಕಾಂಕ್ಷೆಯನ್ನು ರಾಯ್ ವ್ಯಕ್ತಪಡಿಸಿದ್ದರು. ಆದರೆ, ಅವರ ಮೇಲಿರುವ ಭೃಷ್ಟಾಚಾರದ ಆರೋಪಗಳ ಕಾರಣಕ್ಕೆ ಆ ಸ್ಥಾನ ಅವರಿಗೆ ದಕ್ಕಲಿಲ್ಲ. ಮಿಗಿಲಾಗಿ ವಲಸೆ ಬಂದಿರುವ ನಾಯಕರಾಗಿರುವುದರಿಂದ, ಬಂಗಾಳ ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಳ್ಳುವ ಸಾಧ್ಯತೆಗಳೂ ಇದ್ದವು. ಬಿಜೆಪಿಯ ರಾಷ್ಟ್ರೀಯ ನಾಯಕ ವಿಜಯವರ್ಗೀಯ ಅವರ ಪಟ್ಟು ಬಿಡದೇ, ರಾಯ್ ಅವರಿಗೆ ಬಿಜೆಪಿ ರಾಷ್ಟ್ರ ಉಪಾಧ್ಯಕ್ಷ ಸ್ಥಾನ ಗಿಟ್ಟಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು.
ಇಷ್ಟೆಲ್ಲಾ ಅಧಿಕಾರ ಅನುಭವಿಸುವ ಅವಕಾಶ ಸಿಕ್ಕರೂ, ಬಂಗಾಳ ಬಿಜೆಪಿಯಲ್ಲಿ ತಮ್ಮಷ್ಟು ವರ್ಚಸ್ಸು ಇರುವ ಬೇರೆ ನಾಯಕರು ಇಲ್ಲವೆನ್ನುವ ಖಾತರಿ ಇದ್ದರೂ, ಪಕ್ಷ ತೊರೆಯಲು ಇರುವ ಕಾರಣಗಳೇನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಬಾರಿಯ ವಿಧಾನಸಭೆ ಚುನಾವಣೆಗೂ ಮುನ್ನವೇ, ಟಿಎಂಸಿ ವಿರುದ್ದ ರಾಯ್ ಶಸ್ತ್ರತ್ಯಾಗ ಮಾಡಿದ್ದರು. ಚುನಾವಣೆಯಲ್ಲಿ ಸ್ಪರ್ಧಿಸಲೇ ಬಾರದು ಎಂಬ ನಿರ್ಧಾರವನ್ನು ಕೈಗೊಂಡಿದ್ದರು. ಆದರೆ, ರಾಷ್ಟ್ರ ನಾಯಕರ ಒತ್ತಡದ ಮೇರೆಗೆ ಕೃಷ್ಣನಗರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಬಂದರು.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಪಟ್ಟದ ರೇಸ್’ನಲ್ಲಿರುವ ವ್ಯಕ್ತಿಯೆಂದು ಬಿಂಬಿತವಾಗಿದ್ದ ರಾಯ್, ಚುನಾವಣೆ ವೇಳೆ ಏಕಾಏಕಿ ತೆರೆಯ ಮರೆಗೆ ಸರಿದುಬಿಟ್ಟರು. ಇದಕ್ಕೆ ಕಾರಣ ಸುವೆಂಧು ಅಧಿಕಾರಿ.ದೀದಿ ಮತ್ತು ಅಧಿಕಾರಿ ನಡುವೆ ನಡುವೆ ನಡೆದ ರಾಜಕೀಯ ಜಟಾಪಟಿ, ಸಂಪೂರ್ಣ ದೇಶವೇ ನಂದಿಗ್ರಾಮದೆಡೆಗೆ ನೋಡುವಂತೆ ಮಾಡಿತು. ಇದು ಪಶ್ಚಿಮ ಬಂಗಾಳದ ಚುನಾವಣೆಯಲ್ಲ ಬದಲಾಗಿ ನಂದಿಗ್ರಾಮದ ಚುನಾವಣೆ ಎಂಬಂತೆ ಮಾಧ್ಯಮಗಳು ಚಿತ್ರ ವಿಚಿತ್ರ ತಲೆಬರಹದೊಂದಿಗೆ ವರದಿ ಪ್ರಕಟಿಸಿದವು.
ಚುನಾವಣೆಯಲ್ಲಿ ಹಿಂದಿಗಿಂತಲೂ ಹೆಚ್ಚು ಸ್ಥಾನಗಳನ್ನು ಪಡೆದರೂ, ಪಕ್ಷದ ಸಭೆಗಲಿಂದ ರಾಯ್ ದೂರವಾಗಿದ್ದರು. ಚುನಾವಣೆಯ ನಂತರದ ಎರಡು ಸಭೆಗಳಿಗೆ ರಾಯ್ ಗೈರಾಗುತ್ತಿದ್ದಂತೆಯೇ, ಅವರು ಬಿಜೆಪಿ ತೊರೆಯುವ ಕುರಿತು ಸುದ್ದಿಗಳು ಹರಡಲಾರಂಭಿಸಿದವು. ಆದರೆ, ಮೇ 8ರಂದು ಈ ಕುರಿತು ಸ್ಪಷ್ಟನೆ ನಿಡಿದ್ದ ರಾಯ್, ನಾನು ಬಿಜೆಪಿಯ ಸೈನಿಕನಾಗಿ ನನ್ನ ಕೆಲಸ ಮುಂದುವರೆಸುತ್ತೇನೆ. ನನ್ನ ರಾಜಕೀಯ ಹಾದಿಯ ನನಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ,” ಎಂದಿದ್ದರು. ಇದಾಗಿ ಒಂದೇ ತಿಂಗಳಲ್ಲಿ ಈ ಮಾತುಗಳು ಸುಳ್ಳೆಂದು ಸಾಬೀತಾದವು.
ರಾಯ್ ಅವರು ಬಿಜೆಪಿ ತೊರೆಯಲು ಸಿಕ್ಕ ಪ್ರಮುಖ ‘ನೆಪ’ವೆಂದರೆ, ವಿರೋಧ ಪಕ್ಷದ ನಾಯಕರಾಗಿ ಸುವೆಂದು ಅಧಿಕಾರಿ ಆಯ್ಕೆಯಾಗಿದ್ದು. ಲೋಕಸಭಾ ಚುನಾವಣೆಯಲ್ಲಿ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗಾಗಿ ದುಡಿದರೂ, ಕೇವಲ ಆರು ತಿಂಗಳಲ್ಲಿ ಬಿಜೆಪಿಯ ಶಾಸಕಾಂಗ ಸಭೆಯ ನಾಯಕರಾಗಿ ಸುವೆಂದು ಅವರನ್ನು ಆಯ್ಕೆ ಮಾಡಿದ್ದು ಮುಕುಲ್ ರಾಯ್’ಗೆ ಪಥ್ಯವಾಗಲಿಲ್ಲ. ಇಬ್ಬರೂ ಪಕ್ಷಕ್ಕಾಗಿ ದುಡಿದರು, ಇಬ್ಬರೂ ಚುನಾವಣೆ ಗೆದ್ದರು ಆದರೆ, ಮರ್ಯಾದೆ ದೊರಕಿದ್ದು ‘ಒಬ್ಬರಿಗೆ’ ಮಾತ್ರ ಎಂದು ಟಿಎಂಸಿ ನಾಯಕರು ಆಡಿಕೊಂಡರು.
“ಟಿಎಂಸಿಯಲ್ಲಿ ವೈಚಾರಿಕ ಚಿಂತನೆಗಳಲ್ಲಿ ವ್ಯತ್ಯಾಸವಿರಬಹುದು. ಆದರೆ, ನಮಗೆ ಮುಕುಲ್ ರಾಯ್ ಅಗತ್ಯತೆ ಬಗ್ಗೆ ಅರಿವಿದೆ. ಬಿಜೆಪಿಯಲ್ಲಿ ಸುವೆಂದು ಅಧಿಕಾರಿಗೆ ಮಾತ್ರ ಅಮಿತ್ ಶಾ, ಪ್ರಧಾನಿ ಮೋದಿಯವರನ್ನು ಭೇಟಿಯಾಗುವ ಅವಕಾಶವಿದೆ,” ಎಂದು ಹೇಳಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಪ್ರಯತ್ನವನ್ನು ಟಿಎಂಸಿ ನಾಯಕರು ಮಾಡಿದ್ದರು.
ಇಷ್ಟೊತ್ತಿಗಾಗಲೇ, ಮುಕುಲ್ ರಾಯ್ ಅವರ ಬಗ್ಗೆ ಟಿಎಂಸಿಯಲ್ಲಿಯೂ ಮೇದು ಧೋರಣೆ ಹುಟ್ಟಿಕೊಂಡಿತ್ತು. ರಾಯ್ ಟಿಎಂಸಿ ಬಿಟ್ಟದ್ದು ಮಮತಾ ಬ್ಯಾನರ್ಜಿ ಅವರಿಗೆ ನೋವುಂಟು ಮಾಡಲಿಲ್ಲ. ಮತ್ತೆ ಹೋಂದಾಣಿಕೆ ಮಾಡಿಕೊಳ್ಳಲು ಅವಕಾಶವಿದೆ. ಆದರೆ, ಸುವೆಂದು ಅಧಿಕಾರಿ ಅವರ ದುರ್ನಡತೆ ದೀದಿ ಮನಸ್ಸಿಗೆ ನೋವುಂಟು ಮಾಡಿದೆ, ಎಂದು ಟಿಎಂಸಿ ನಾಯಕರು ಬಹಿರಂಗವಾಗಿ ಹೇಳಿದ್ದರು.
ಮುಕುಲ್ ರಾಯ್ ಟಿಎಂಸಿಗೆ ವಾಪಾಸ್ಸಾಗುವ ಮುಂಚೆಯೇ, ಈಗಾಗಲೇ ಬಿಜೆಪಿ ಸೇರಿದ್ದ ಹಲವು ಟಿಎಂಸಿ ನಾಯಕರು ಘರ್ ವಾಪ್ಸಿಗೆ ಸರತಿ ಸಾಲಿನಲ್ಲಿ ನಿಂತಿದ್ದರು. ಕೆಲವರು ಬಹಿರಂಗವಾಗಿ ಮನವಿ ಮಾಡಿಕೊಂಡಿದ್ದರೆ, ಕೆಲವರು ಸದದ್ದಿಲ್ಲದೇ ಪ್ರಯತ್ನಿಸುತ್ತಿದ್ದರು. ಇವರಲ್ಲಿ ಬಹುತೇಕರು ಟಿಎಂಸಿಗೆ ಮರಳುವಲ್ಲಿ ರಾಯ್ ಕೈವಾಡ ಇದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಟಿಎಂಸಿಗೆ ಸೇರಿದ ನಂತರ ಹೇಳಿಕೆ ನೀಡಿರುವ ಮುಕುಲ್ ರಾಯ್, ಈಗಿನ ಪರಿಸ್ಥಿತಿಯಲ್ಲಿ ಯಾರೂ ಬಿಜೆಪಿಯಲ್ಲಿ ಉಳಿಯುವುದಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಇದು ಮತ್ತಷ್ಟು ಜನ ಟಿಎಂಸಿ ಸೇರ್ಪಡೆಗೊಳ್ಳುವ ಮುನ್ಸೂಚನೆ ಎಂದೇ ಹೇಳಲಾಗುತ್ತಿದೆ. ಆದರೆ, ಏಪ್ರಿಲ್ ಮೇ ತಿಂಗಳಲ್ಲಿ ನಡೆದ ಚುನಾವಣೆಯ ವೇಳೆ ಟಿಎಂಸಿ ತೊರೆದವರನ್ನು ಮತ್ತೆ ಪಕ್ಷಕ್ಕೆ ಸೇರ್ಪಡೆಗೊಳಿಸುವುದಿಲ್ಲ ಎಂದು ದೀದಿ ಖಚಿತವಾಗಿ ಹೇಳಿದ್ದು ಮುಕುಲ್ ರಾಯ್ ಒಟ್ಟಿಗೆ ಬಿಜೆಪಿ ಸೇರಿದ್ದ ಟಿಎಂಸಿ ನಾಯಕರಿಗೆ ಪಕ್ಷಕ್ಕೆ ಮರಳಲು ನೀಡಿರುವ ಆಹ್ವಾನವೆಂದೇ ಪರಿಗಣಿಸಲಾಗಿದೆ.
ಈಗ ಟಿಎಂಸಿ ಪಕ್ಷವೇನೋ ಹಿಂದಿಗಿಂತಲೂ ಸದೃಢವಾಗಿ ಹೊರಹೊಮ್ಮಬಹುದು. ಆದರೆ, ಈಗಾಗಲೇ ಅಭಿಷೇಕ್ ಬ್ಯಾನರ್ಜಿ ಎಂಬ ಎರಡನೇ ತಲೆಮಾರಿ ನಾಯಕ ಪಕ್ಷದಲ್ಲಿ ಭದ್ರವಾಗಿ ತಳವೂರಿದ್ದಾನೆ. ಟಿಎಂಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಅವರನ್ನು ಆಯ್ಕೆ ಮಾಡಲಾಗಿದೆ. ದೀದಿ ನಂತರ ಅಭಿಷೇಕ್ ಟಿಎಂಸಿ ಪಕ್ಷದ ನಾಯಕ ಎಂಬುದು ವಿಧಾನಸಭಾ ಚುನಾವಣಾ ವೇಳೆಯಲ್ಲಿಯೂ ಬಿಂಬಿತವಾದ ವಿಚಾರ.
ಈಗ ಮುಕುಲ್ ರಾಯ್ ಅವರಿಗೆ ಟಿಎಂಸಿಯಲ್ಲಿ ಯಾವ ಸ್ಥಾನ ದೊರಕುತ್ತದೆ? ಹೊಸ ತಲೆಮಾರಿನ ನಾಯಕತ್ವವನ್ನು ಎದುರು ನೋಡುತ್ತಿರುವ ಟಿಎಂಸಿಯಲ್ಲಿ ಅವರು ಯಾವ ರೀತಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ? ಮಮತಾ ಬ್ಯಾನರ್ಜಿ ಅವರ ಮತ್ತೆ ರಾಯ್ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿ ವಹಿಸುತ್ತಾರಾ? ರಾಯ್ ಅವರಿಗೆ ಶೀಘ್ರದಲ್ಲಿಯೇ ಮಂತ್ರಿ ಸ್ಥಾನ ಸಿಗಲಿದೆಯೇ? ಎಂಬೆಲ್ಲಾ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ಕಾಲವೇ ನೀಡಬೇಕಿದೆ.