ಮಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿದೆ. ಕರಾವಳಿ ಭಾಗವು ಬಿಜೆಪಿ ಭದ್ರಕೋಟೆ ಆಗಿದ್ದರೂ ಸಹ ಈ ಬಾರಿ ಹಿಂದೂ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಬಳಿಕ ಕೇಸರಿ ಪಾಳಯ ಕೂಡ ಈ ಭಾಗದಲ್ಲಿ ವಿರೋಧವನ್ನು ಎದುರಿಸಿದೆ. ಇದಕ್ಕೆ ಪ್ರವೀಣ್ ನೆಟ್ಟಾರು ಅಂತಿಮ ದರ್ಶನದ ಸಂದರ್ಭದಲ್ಲಿ ನಡೆದ ಕೆಲವು ಘಟನೆಗಳೆ ಸಾಕ್ಷಿ.
ಪ್ರವೀಣ್ ನೆಟ್ಟಾರು ಭೀಕರ ಹತ್ಯೆ ಪ್ರಕರಣದ ಬಳಿಕ ವ್ಯಾಪಕ ವಿರೋಧವನ್ನು ಎದುರಿಸಿರುವ ಬಿಜೆಪಿಯು ಇದೀಗ ಚುನಾವಣೆಯ ಹೊತ್ತಿಗೆ ಸರಿಯಾಗಿ ಹೊಸ ಅಸ್ತ್ರವೊಂದನ್ನು ಉಪಯೋಗಿಸಿದೆ. ಎಲೆಕ್ಷನ್ ಟೈಮ್ ನೋಡಿಕೊಂಡು ಪ್ರವೀಣ್ ನೆಟ್ಟಾರು ನೂತನ ಮನೆಯ ಗೃಹ ಪ್ರವೇಶ ಕಾರ್ಯವನ್ನು ನಿಗದಿಪಡಿಸಲಾಗಿದೆ. ಹೀಗಾಗಿ ಪ್ರವೀಣ್ ನೆಟ್ಟಾರು ನೂತನ ನಿವಾಸದ ಗೃಹ ಪ್ರವೇಶ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಬಹುದು ಎಂಬುದು ರಾಜಕೀಯ ನಿಪುಣರ ಲೆಕ್ಕಾಚಾರವಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಈ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಈಗಾಗಲೇ 90 ಪ್ರತಿಶತ ಮನೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. 2022ರ ನವೆಂಬರ್ 2ರಂದು ನಳೀನ್ ಕುಮಾರ್ ಕಟೀಲ್ ಪ್ರವೀಣ್ ನೆಟ್ಟಾರು ಕನಸಿನ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿದ್ದರು. ಇದೀಗ ಏಪ್ರಿಲ್ 27ರಂದು ಈ ಮನೆಯ ಗೃಹ ಪ್ರವೇಶಕ್ಕೆ ಮುಹೂರ್ತ ಫಿಕ್ಸ್ ಮಾಡಲಾಗಿದೆ.
ಪ್ರವೀಣ್ ನೂತನ ನಿವಾಸಕ್ಕೆ ಪ್ರವೀಣ್ ಎಂದೇ ಹೆಸರಿಡಲಾಗಿದೆ. ಸರಿ ಸುಮಾರು 60 ಲಕ್ಷ ರೂಪಾಯಿ ಬಜೆಟ್ನಲ್ಲಿ ಈ ಮನೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. 2700 ಅಡಿ ಚದರ ವಿಸ್ತೀರ್ಣದಲ್ಲಿ ಈ ಮನೆ ನಿರ್ಮಾಣಗೊಂಡಿದೆ. ಸದ್ಯ ಪ್ರವೀಣ್ ನೆಟ್ಟಾರು ಪತ್ನಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಈ ಎಲ್ಲಾ ಸೌಕರ್ಯಗಳನ್ನು ನೀಡುವ ಮೂಲಕ ಬಿಜೆಪಿ ಕರಾವಳಿ ಭಾಗದಲ್ಲಿ ಡ್ಯಾಮೇಜ್ ಕಂಟ್ರೋಲ್ಗೆ ಯತ್ನಿಸುತ್ತಿರೋದಂತೂ ಸತ್ಯ.