
ಸಿಎಂ ಸಿದ್ದರಾಮಯ್ಯ ಅಕ್ರಮವಾಗಿ ಮುಡಾದಿಂದ ಬದಲಿ ನಿವೇಶನ ಪಡೆದ ಆರೋಪದಲ್ಲಿ ಲೋಕಾಯುಕ್ತ ತನಿಖೆ ಮಹತ್ವದ ಘಟ್ಟ ತಲುಪಿದೆ. ಎ4 ಆಗಿರುವ ಭೂ ಮಾಲೀಕ ದೇವರಾಜುಗೆ ಲೋಕಾಯುಕ್ತರು ಮತ್ತೆ ನೋಟಿಸ್ ಕೊಟ್ಟಿದ್ದಾರೆ.

ನಾಳೆ ಲೋಕಾಯುಕ್ತ ಕಚೇರಿಗೆ ಆಗಮಿಸವಂತೆ ನೋಟಿಸ್ ಜಾರಿ ಮಾಡಲಾಗಿದೆ. ಈ ಹಿಂದೆ ದಿನ ಪೂರ್ತಿ ದೇವರಾಜು ವಿಚಾರಣೆ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಎರಡನೇ ಬಾರಿಗೆ ದೇವರಾಜುಗೆ ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಮಾಡಲಾಗಿದೆ.
ಹಿಂದಿನ ಮುಡಾ ಆಯುಕ್ತ ಕಾಂತರಾಜು ಹಾಗೂ ಮಾಜಿ ಅಧ್ಯಕ್ಷ ಡಿ ಧೃವಕುಮಾರ್‌ಗೂ ನೋಟಿಸ್ ಜಾರಿ ಆಗಿದೆ. ಆದರೆ ನಾಳೆ ವಿಚಾರಣೆಗೆ ಬರುವುದಕ್ಕೆ ಸಾಧ್ಯವಿಲ್ಲ ಎಂದು ದೃವಕುಮಾರ್ ಇಂದೇ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿದ್ದರು. ಆ ಬಳಿಕ ಸಿಎಂ ಹಾಗೂ ಪತ್ನಿ ಬದಲಿ ಭೂಮಿ ಕೇಳಿರಲಿಲ್ಲ, ಆದರೆ ನಾವೇ ಅವರಿಗೆ ಬದಲಿ ನಿವೇಶನ ಕೊಟ್ಟಿದ್ದೆವು ಎಂದು ಮುಡಾ ಮಾಜಿ ಅಧ್ಯಕ್ಷ ಧ್ರುವಕುಮಾರ್ ಹೇಳಿಕೆ ನೀಡಿದ್ದಾರೆ.
ಮೈಸೂರಿನ ಲೋಕಾಯುಕ್ತ ಕಚೇರಿ ಬಳಿ ಮಾತನಾಡಿ ನಾವೇ ಖುದ್ದು ಸಿಎಂ ಅವರನ್ನ ಭೇಟಿ ಮನವಿ ಮಾಡಿದ್ವಿ. ಭೂಮಿಗೆ ಬದಲಾಗಿ ಸೈಟ್ ತೆಗೆದುಕೊಳ್ಳಿ ಎಂದಿದ್ದೆವು. ಮುಡಾದಲ್ಲಿ ನಾವೇ ಸಭೆ ಮಾಡಿ ಸೈಟ್ ಕೊಟ್ಟಿದ್ದೆವು ಎಂದು ಸೈಟ್ ಹಂಚಿಕೆ ವೇಳೆ ಅಧ್ಯಕ್ಷರಾಗಿದ್ದ ಡಿ. ದ್ರುವಕುಮಾರ್ ಹೇಳಿಕೆ ನೀಡಿದ್ದಾರೆ. ಆದರೆ ಪಾರ್ವತಿ ಅವ್ರು ಬದಲಿ ನಿವೇಶ ಕೇಳಿದ್ದಾರೆ ಎಂದು ಈ ಹಿಂದೆ ಪ್ರಾಧಿಕಾರದ ಸಭೆಗೆ ತಿಳಿಸಿದ್ದರು. 40:60 ಅನುಪಾತದ ಜಾಗಕ್ಕೆ ಪಾರ್ವತಿ ಅವ್ರು ಒಪ್ಪುತ್ತಿಲ್ಲ. ಬದಲಿ ಜಮೀನು ಬೇಕೆಂದು ಒತ್ತಾಯಿಸಿದ್ದರು.




