ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ಕೇಳಿಬಂದಿರೋ ಮುಡಾ ಹಗರಣ ಆರೋಪ ಸಂಬಂಧ ಇಡಿ ಮುಡಾದ ಮಾಜಿ ಅಧ್ಯಕ್ಷ ಮರಿಗೌಡಗೆ ಸೇರಿದ 10 ಸ್ಥಿರ ಆಸ್ತಿಗಳು ತಾತ್ಕಾಲಿಕ ಮುಟ್ಟುಗೋಲು ಹಾಕಿಕೊಂಡಿದೆ.
ಮುಡಾ ತನಿಖೆಯಲ್ಲಿ ಮರಿಗೌಡ ಕೂಡ ಅಕ್ರಮವಾಗಿ ಸೈಟ್ ಪಡೆದಿರುವುದು ಗೊತ್ತಾಗಿದೆ. ಹೀಗಾಗಿ ಮರಿಗೌಡಗೆ ಸೇರಿದ 6 ಅಕ್ರಮ ಮುಡಾ ನಿವೇಶನಗಳು, 3 ಸ್ಥಿರ ಆಸ್ತಿಗಳು ಮತ್ತು 20.85 ಕೋಟಿ ರೂ. ಮಾರುಕಟ್ಟೆ ಮೌಲ್ಯದ ಒಂದು ವಾಣಿಜ್ಯ ಕಟ್ಟಡ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಪ್ರಕರಣ ಸಂಬಂಧ ಇಡಿ ದಾಳಿ ವೇಳೆ ಸೈಟ್‌ಗಳ ಹಂಚಿಕೆಯಲ್ಲಿ ನಿಯಮಗಳನ ಉಲ್ಲಂಘನೆ ಕಂಡುಬಂದಿತ್ತು. ಮಾಜಿ ಆಯುಕ್ತ ಜಿ ಟಿ ದಿನೇಶ್ ಕುಮಾರ್ ಸೈಟ್ ಅಕ್ರಮ ಹಂಚಿಕೆಯಲ್ಲಿ ಮರೀಗೌಡಗೆ ಸಹಾಯ ಮಾಡಿದ್ದ. ದಿನೇಶ್ ಕುಮಾರ್ ಸಹಾಯದಿಂದಲೇ ಮರಿಗೌಡ ಅಕ್ರಮವಾಗಿ ಸೈಟ್ ಪಡೆದಿದ್ದರು.. ಈ ಸಂಬಂಧ ಹಿಂದೆ ಮರಿಗೌಡ ಇಡಿ ವಿಚಾರಣೆಗೆ ಹಾಜರಾಗಿದ್ದರು. ತನಿಖೆ ಮುಂದುವರಿಸಿದ್ದ ಇಡಿ ಅಧಿಕಾರಿಗಳು ಈಗ ಮರಿಗೌಡಗೆ ಸೇರಿದ ಆಸ್ತಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಈ ಹಿಂದೆ 283 ಮುಡಾ ಸೈಟ್‌ಗಳು ಮತ್ತು 03 ವೈಯಕ್ತಿಕ ಆಸ್ತಿಗಳನ್ನು ತಾತ್ಕಾಲಿಕವಾಗಿ ಇಡಿ ಮುಟ್ಟುಗೋಲು ಹಾಕಿಕೊಂಡಿತ್ತು. ಇದರಿಂದ ಪ್ರಕರಣದಲ್ಲಿ ಇದುವರೆಗೆ 460 ಕೋಟಿ ರೂ. ಮೌಲ್ಯದ ಅಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಂಡಂತಾಗಿದೆ.












