ಸಾಮಾನ್ಯ ಜನರ ರೂಢಿಗತ ಭಾಷೆಯಲ್ಲಿ ವೈರಾಗ್ಯವೆಂದರೆ ಲೌಕಿಕದ ಭೋಗಗಳಿಂದ ವಿಮುಕ್ತಿ ಹೊಂದುವುದೇ ಆಗಿದೆ. ಹೀಗೆ ಪ್ರಾಪಂಚಿಕವಾಗಿರುವ ವಿಷಯಾಸಕ್ತಿಯಲ್ಲಿ ನಿರಾಸಕ್ತಿ ಹೊಂದಿ ಸಂಸಾರˌ ಊರುಕೇರಿˌ ಜನ ಜಂಗುಳಿಗಳಿಂದ ದೂರ ಸರಿದು ಕಾಡು ಅಥವಾ ಪ್ರಶಾಂತ ಪರ್ವತಗಳಲ್ಲಿ ನೆಲೆಸುವುದೆ ವೈರಾಗ್ಯ ಬದುಕು. ಅಲ್ಲಿ ಕಠಿಣ ತಪಸ್ಸನ್ನು ಆಚರಿಸಿ ದೇವರ ಸಾಕ್ಷಾತ್ಕಾರಕ್ಕಾಗಿ ಹಂಬಲಿಸುವು ಮತ್ತು ಪಾರಮಾರ್ಥ ಸಾಧಿಸಿ ಮೋಕ್ಷ ಅಥವ ನಿರ್ವಿಕಲ್ಪ ತಲುಪುವುದು. ಭಕ್ತಿ ಸಾಧನೆಗೆ ಭವದ ಜಂಜಡಗಳಿಂದ ದೂರ ಸರಿದು ಏಕಾಗ್ರತೆಗೆ ಜಾರುವುದು.
ಆದರೆˌ ಬಸವಾದಿ ಶರಣರ ಪ್ರಕಾರ ಅನುಭಾವ ಸಾಧನೆಗೆ ಹೀಗೆ ಏಕಾಂಗಿಯಾಗಿ ಜನರಿಂದ ದೂರವಾಗಿ ದೇವರಿಗೆ ಹತ್ತಿರವಾಗುತ್ತೇವೆಂದ ವೈರಾಗ್ಯ ಅದೊಂದು ಯಾವುದೇ ಫಲ ನೀಡದ ನಿಲುವು. ಮನುಷ್ಯನ ಸಾಧನೆ ಎಷ್ಟೇ ಮಹತ್ವದ್ದಾಗಿರಲಿ ಅದು ಜೀವಸಂಕುಲದ ಒಳಿತಿಗೆ ವಿನಿಯೋಗವಾಗದಿದ್ದರೆ ಅದೊಂದು ನಿರುಪಯೋಗಿ. ಆ ಕಾರಣದಿಂದಲೇ ಶರಣರು ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ “ಕಾಯಕ” ಮತ್ತು “ದಾಸೋಹ” ಎಂಬೆರಡು ವಿನೂತನ ಹಾಗೂ ಭಾರತೀಯ So Called ಸನಾತನ ಉಚ್ಛ ಪರಂಪರೆಯಲ್ಲಿ ಕಾಣಸಿಗದ ಅಪರೂಪದ ಪರಿಕಲ್ಪನೆಗಳನ್ನು ಮಾನವ ಜನಾಂಗಕ್ಕೆ ನೀಡುವ ಮೂಲಕ ಇಡೀ ಜೀವಸಂಕುಲದ ಒಳಿತನ್ನು ಬಯಸುವ ಮಹಾನ್ ಸೂತ್ರಗಳ ಪ್ರತಿಪಾದಕರಾಗಿ ಗುರುತಿಸಿಕೊಂಡರು.
ಜನರಿಂದ ವಿಮುಖರಾಗಿ ಏಕಾಂತದಲ್ಲಿ ಸಾಧಿಸಿಕೊಂಡ ಸಾಧನೆ ಜನ ಸಾಮಾನ್ಯರ ಬದುಕಿಗೆ ಉಪಯೋಗುವುದಿಲ್ಲದ್ದನ್ನು ಮನಗಂಡ ಶರಣರು ಜನರೊಡನಿದ್ದೇ ಅವರಿಗೆ ಉಪಯೋಗವಾಗಬಲ್ಲ ಭಕ್ತಿಯ ಸಾಧನೆ ಜನಜನಿತಗೊಳಿಸಿದರು. ಶರಣರ ಅನುಭಾವ ಎನ್ನುವ ಪದ ಜನರ ಒಳಿತನ್ನು ಬಯಸುವ ತಪಸ್ಸು ಎಂಬ ತಾತ್ವಿಕ ನಿಲುವು. ಈ ಅನುಭಾವ ಎಂಬ ವಿನೂತನ ಸಾಧನೆ ವಿಶ್ವದ ಯಾವುದೇ ಧಾರ್ಮಿಕ ಚಳುಗಳಲ್ಲಿ ಕಾಣಸಿಗದ ಅಸಾಧಾರಣ ಗ್ರಹಿಕೆ.
ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದಲ್ಲಿ ಘಟಿಸಿದ ಈ ಸರ್ವಾಂಗೀಣ ಶರಣ ಚಳುವಳಿಯ ಮೂಲ ಪ್ರೇರಕ ಶಕ್ತಿಯಾಗಿದ್ದ ಬಸವಣ್ಣನವರು ಪುರಾತನ ಭಾರತದ ಯಾವೂದೇ ಅಧ್ಯಾತ್ಮ ಸಾಧಕರಿಗೂ ಕಡಿಮೆಯಲ್ಲದಷ್ಟು ಪ್ರಾಪಂಚಿಕ ಹಾಗೂ ಪಾರಮಾರ್ಥಿಕ ಎರಡರಲ್ಲೂ ಸಾಧನೆಗೈದ ವಿರಳ ಸಾಧಕರು. ಭವದ ದೃಷ್ಟಿಯಲ್ಲಿ ಬಸವಣ್ಣನವರು ಎರಡು ಪತ್ನಿಯರನ್ನು ಹೊಂದಿರುವ ಗೃಹಸ್ತರು. ವೃತ್ತಿಯಲ್ಲಿ ಪ್ರಧಾನಮಂತ್ರಿಗಳುˌ ಪ್ರವೃತ್ತಿಯಲ್ಲಿ ಸಮಾಜ ಸುಧಾರಣೆˌ ಆ ಮೂಲಕ ದೇವರ ಅನ್ವೇಷಣೆ ಅವರ ಸಿದ್ಧಾಂತ.
ಲೌಕಿಕ ಜೀವನದ ಜಂಜಡಗಳ ಜೊತೆಯಲ್ಲಿಯೇ ಅನುಭಾವವನ್ನು ಸಾಧಿಸಿದ ಅಪರೂಪದ ಅಧ್ಯಾತ್ಮ ಸಾಧಕರು ಮತ್ತು ಪರಮ ವೈರಾಗ್ಯಮೂರ್ತಿಗಳು ಪ್ರವಾದಿ ಬಸವಣ್ಣನವರು. ಹಾಗಾಗಿಯೆ ಬಸವಣ್ಣನವರನ್ನು ಜಗತ್ತಿನ ಪ್ರಥಮ ಸಂಸಾರಿಕ ಜಗದ್ಗುರು ಎಂದು ಪ್ರಾಜ್ಞರು ಗುರುತಿಸಿದ್ದಾರೆ.

ಚಲನಶೀಲ ಸಮಾಜ ನಿರ್ಮಾಣದ ಪರಿಕಲ್ಪನೆ ಹಿಮಾಲಯದ ತಪ್ಪಲಿನಲ್ಲಿ ಮೂಗು ಹಿಡಿದು ತಪಸ್ಸಿಗೆ ಕುಳಿತ ಮಹಾನ್ ಸಾಧಕನ ಮಿದುಳಿನಲ್ಲಿ ಜನ್ಮ
ತಳೆಯದೇˌ ಅದು ಜನಸಾಮಾನ್ಯರ ಬವಣೆಗಳೊಡನೆ ನಿರಂತರ ಸಂಪರ್ಕವಿರಿಸಿಕೊಂಡಿರುವ ಸಮಾಜಮುಖಿ ಚಿಂತನೆಯ ಶರಣರ ಶ್ರಮದಿಂದ ಚಿಗುರೊಡೆದದ್ದು.
ಉದ್ದನೆಯ ಗಡ್ಡ ಬೆಳೆಸಿˌ ದಂಡ ಕಮಂಡಲವಿಡಿದುˌ ಮೂಗುಹಿಡಿದು ನೀರಲ್ಲಿ ಮುಳುಗಿˌ ಕಲ್ಲು ಮುಳ್ಳುಗಳ ಮೆಟ್ಟುತ್ತ ˌ ಕಾಡು ಮೇಡುಗಳನ್ನು ಅಲೆದುˌ ದೇಹ ದಂಡಿಸಿˌ ಕಠಿಣ ವ್ರತಗಳ ಆಚರಣೆಯ ಮೂಲಕ ದೇವರನ್ನು ಹುಡುಕುತ್ತೇನೆಂಬ ಸ್ಥಾಪಿತ ಸಿದ್ಧಾಂತಗಳಿಂದ ಜನಸಾಮನ್ಯನಿಗಾಗುವ ಲಾಭವೇನು ಎಂಬ ಮೂಲಭೂತ ಪ್ರಶ್ನೆ ಎತ್ತುವ ಮೂಲಕ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾದವರು ಬಸವಾದಿ ಶರಣರು.
ಅಧ್ಯಾತ್ಮˌ ಭಕ್ತಿ ˌ ಪಾರಮಾರ್ಥ ಸಾಧನೆˌ ಮೋಕ್ಷ ಅಥವಾ ನಿರ್ವಿಕಲ್ಪ ಮುಂತಾದ ಜಠಿಲವಾದ ವಿವಾದಂಶಗಳಿಗೆ “ಕಾಯಕ” ಮತ್ತು “ದಾಸೋಹ” ಎಂಬ ಶ್ರಮ ಸಂಸ್ಕೃತಿ ಹಾಗು ದುರ್ಬಲರಿಗೆ ಸಹಾಯವಾಗುವ ಪರಂಪರೆಗಳ ಸರಳ ಮತ್ತು ವೈಜ್ಞಾನಿಕ ಸೂತ್ರಗಳು ಪರಿಚಯಿಸುವ ಮೂಲಕ ಹೊಸ ವ್ಯಾಖ್ಯಾನವನ್ನು ಬರೆದವರು ನಮ್ಮ ಬಸವಾದಿ ಶರಣರು. ಸಮಾಜದ ಕಟ್ಟಕಡೆಯ ಶೋಷಿತರನ್ನು ತಲುಪದˌ ಹಾಗು ಜೀವಸಂಕುಲದ ಒಳಿತಿಗೆ ಕಿಂಚಿತ್ತೂ ಶ್ರಮಿಸದ ಯಾವುದೇ ಘನ ಸಾಧನೆಗಳನ್ನು ಶರಣರು ಮಾನ್ಯ ಮಾಡುವುದಿಲ್ಲ. ಅಂಥ ಜನಪರವಲ್ಲದ ಪರಿಣಾಮಹೀನ ಪೊಳ್ಳು ಆಚರಣೆಗಳನ್ನು ಗೊಡ್ಡು ಸಂಪ್ರದಾಯಗಳೆಂದೇ ಶರಣರು ಪರಿಗಣಿಸಿದ್ದರು. ಹಾಗಾಗಿಯೇ ಶರಣರ ಈ ಅದ್ಭುತವಾದ ಚಲನಶೀಲ ವಿಚಾರಗಳು ಜನಮಾನಸವನ್ನು ತಲುಪಿ ಕ್ಷಣಾರ್ಧದಲ್ಲಿ ಪಸರಿಸಲಾಂಭಿಸಿದವು. ಶರಣರ ಪ್ರಗತಿಪರ ವಿಚಾರಗಳು ಜನ ಸಾಮಾನ್ಯನ ಮೇಲೆ ಅಘಾದ ಪರಿಣಾಮಗಳನ್ನು ಬೀರಿ ಸ್ಥಾಪಿತ ಜಡ್ಡು ಸಂಪ್ರದಾಯಗಳಿಗೆ ಪರ್ಯಾಯವಾಗಿ ವೈಚಾರಿಕ ತಳಹದಿಯ ಚಲನಶೀಲ ಸಿಂದ್ಧಾಂತಗಳ ಆಶಯಗಳಿಗೆ ಜೀವನೀಡಿದವು.
ಸಾಮಾಜಿಕ ವೈಪರಿತ್ಯಗಳು ತಾರಕದಲ್ಲಿದ್ದ ಆ ಸಂಕೀರ್ಣ ಕಾಲಘಟ್ಟದಲ್ಲಿ ತಾನಿರುವ ಉಸಿರು ಕಟ್ಟಿದ ವಾತಾವರಣದಿಂದ ವಿಮೋಚನೆಗಾಗಿ ತುಡಿಯುತ್ತಿದ್ದ ಶೂದ್ರಾತಿ ಶೂದ್ರನಿಗೆ ಶರಣರ ಚಿಂತನಶೀಲ ಮತ್ತು ಚಲನಶೀಲ ವಿಚಾರಗಳು ಆಶಾಕಿರಣಗಳಾಗಿ ಕಂಡದ್ದರಲ್ಲಿ ಆಶ್ಚರ್ಯವಿಲ್ಲ. ಸಮಾಜದಲ್ಲಿನ ಸಕಾರಾತ್ಮಕ ಪರಿವರ್ತನೆಗಳನ್ನು ಎಂದಿಗೂ ಸಹಿಸದ ಸ್ಥಾಪಿತ ಸ್ವಹಿತಾಸಕ್ತ ಕರ್ಮಟ ಶಕ್ತಿಗಳು ಶರಣರ ಚಲನಶೀಲ ಹೊಸ ವಿಚಾರಗಳಿಗೆ ತಡೆಯೊಡ್ಡುವ ಸರ್ವ ಪ್ರಯತ್ನಗಳನ್ನು ಆರಂಭಿಸಿದವು. ಪರಿವರ್ತನೆಯಿಂದ ಜನ ಜಾಗೃತರಾದರೆ ತಮ್ಮ ಬೇಳೆ ಬೇಯಲಾರದು ಎಂಬ ದಿಗಿಲು ಕರ್ಮಟರನ್ನು ಕಾಡಿತು.
ಶರಣರ ವಿಚಾರಗಳು ಜನರನ್ನು ಮುಟ್ಟಲಾರದಂತೆ ಷಡ್ಯಂತ್ರಗಳು ಮೊದಲ್ಗೊಂಡವು. ತಮ್ಮ ಸ್ವಹಿತಾಸಕ್ತಿಯನ್ನು ಉಳಿಸಿಕೊಳ್ಳಲೋಸುಗ ಕರ್ಮಟರು ಅಂದು ಶರಣರು ಬರೆದ ವಚನ ಸಾಹಿತ್ತದ ನಾಶ ತಮ್ಮ ಪ್ರಥಮ ಗುರಿಯಾಗಿಸಿಕೊಂಡಿದ್ದರು.
ಶರಣರ ಸಂಘಟನಾತ್ಮಕ ಹೋರಾಟದ ಫಲದಿಂದ ವಚನ ಸಾಹಿತ್ಯವು ಮುಂದಿನ ಪೀಳಿಗೆಗೆ ಮುಟ್ಟಲು ಸಾಧ್ಯವಾಯಿತು. ಜಗತ್ತು ಇಂದು ವಿಜ್ಞಾನದ ಅವಿಷ್ಕಾರಗಳಿಂದ ಉದ್ಭವಿಸಿದ ಅಧುನಿಕ ಸೌಲಭ್ಯಗಳಿಂದ ಮುಂದುವರೆದಿದೆ. ಮಾನವನು ಜಾಗತಿಕ ನಿರ್ಭಂದಗಳಿಂದ ವಿಮುಕ್ತನಾಗಿ ವಿಶ್ವತೋಮುಖ ಅಭಿವ್ರದ್ಧಿಯತ್ತ ದಾಪುಗಾಲಿಡುತ್ತಿದ್ದಾನೆ. ಅದಾಗ್ಯೂ ಈ ಸ್ಥಾಪಿತ ಕರ್ಮಠ ಶಕ್ತಿಗಳು ಬೇರೆ ಬೇರೆ ರೂಪಗಳಲ್ಲಿ ನಮ್ಮ ನಡುವೆ ಇಂದಿಗೂ ಜೀವಂತವಾಗಿದ್ದು ˌ ಅವು ಪ್ರಗತಿಪರ ವಿಚಾರಗಳಿಗೆˌ ವೈಚಾರಿಕ ಚಿಂತನೆ ಹಾಗು ಆಚರಣೆಗಳಿಗೆˌ ಮತ್ತು ಪರಿವರ್ತನಾ ಚಲನಶೀಲತೆಗೆ ಬಹುದೊಡ್ಡ ಅಡಚಣೆಗಳಾಗುತ್ತಿರುವುದು ಬಹು ವಿಷಾದನೀಯ ಸಂಗತಿಯಾಗಿದೆ.