ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸಾಕಷ್ಟು ಸಿನಿಮಾ ಕಲಾವಿದರು ತಮಗೆ ಬೇಕಾದ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ. ಅದರಲ್ಲಿ ಬಿಜೆಪಿ ಮೊದಲ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದೆ. ಜೆಡಿಎಸ್ಗೆ ಹೇಳಿಕೊಳ್ಳುವಂತಹ ಸ್ಟಾರ್ ಪ್ರಚಾರಕರು ಇಲ್ಲದಿದ್ದರೂ ಅಲ್ಲಲ್ಲಿ ಕೆಲವು ಅಭ್ಯರ್ಥಿಗಳ ಪರವಾಗಿ ಸಿನಿಮಾ ನಟ, ನಟಿಯರು ಮತಯಾಚನೆ ಮಾಡುತ್ತಿದ್ದಾರೆ. ಕಳೆದ ಶುಕ್ರವಾರ ಕನ್ನಡದಲ್ಲಿ ಯಾವುದೇ ಸಿನಿಮಾ ಬಿಡುಗಡೆ ಕೂಡ ಆಗಿಲ್ಲ. ಅಂದರೆ ಇಡೀ ಚಿತ್ರರಂಗ ಸ್ತಬ್ಧವಾಗಿದೆ ಎಂದೇ ಅರ್ಥ. ಎಲ್ಲಾ ನಟ ನಟಿಯರು ಚುನಾವಣೆ ಮಾಡುವುದರಲ್ಲಿ ನಿರತರಾಗಿದ್ದು ಸಿನಿಮಾಗಿಂತಲೂ ರಾಜಕೀಯದಲ್ಲೇ ಹೆಚ್ಚಾಗಿ ಹಣ ಸಂಪಾದನೆ ಮಾಡುತ್ತಿದ್ದಾರಾ..? ಅನ್ನೋ ಚರ್ಚೆಗಳು ಸೃಷ್ಟಿಯಾಗಿದೆ.
ಬಿಜೆಪಿಗಾಗಿ ಇಡೀ ರಾಜ್ಯ ಸುತ್ತುತ್ತಿರುವ ಕಿಚ್ಚ ಸುದೀಪ್..!
ರಾಜ್ಯದಲ್ಲಿ ವಾಲ್ಮೀಕಿ ಸಮುದಾಯವನ್ನು ಗುರಿಯಾಗಿಸಿಕೊಂಡು ನಟ ಕಿಚ್ಚ ಸುದೀಪ್ರನ್ನು ಭಾರತೀಯ ಜನತಾ ಪಾರ್ಟಿ ಚುನಾವಣಾ ಅಖಾಡಕ್ಕೆ ಕರೆದುಕೊಂಡು ಬಂದಿದೆ. ಇನ್ನು ಕಿಚ್ಚ ಸುದೀಪ್ ಪ್ರಚಾರಕ್ಕೆ ಬಂದರೆ ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳು ಸೇರಲಿದ್ದಾರೆ ಎನ್ನುವ ಕಾರಣಕ್ಕೆ ರಾಜ್ಯಾದ್ಯಂತ ಪ್ರಚಾರಕ್ಕೆ ಅಭ್ಯರ್ಥಿಗಳು ಮುಗಿಬೀಳ್ತಿದ್ದಾರೆ. ಇನ್ನು ಕಾಂಗ್ರೆಸ್ನಿಂದ ಶಿವರಾಜ್ ಕುಮಾರ್, ದುನಿಯಾ ವಿಜಿ, ನಿಶ್ವಿಕಾ ನಾಯ್ಡು ಸೇರಿದಂತೆ ಅಬ್ಬರದ ಪ್ರಚಾರ ನಡೆಯುತ್ತಿದೆ. ಇನ್ನುಳಿದಂತೆ ನಟಿ ಶೃತಿ, ತಾರಾ ಬಿಜೆಪಿ ಪರ ಪ್ರಚಾರ ಮಾಡ್ತಿದ್ರೆ, ನಟಿ ಉಮಾಶ್ರೀ, ಸಾಧುಕೋಕಿಲಾ ಕಾಂಗ್ರೆಸ್ ಪರವಾಗಿ ಮತಯಾಚನೆ ಮಾಡ್ತಿದ್ದಾರೆ. ಆದರೆ ಇಡೀ ಕರ್ನಾಟಕದಲ್ಲಿ ಸಿನಿಮಾ ಸ್ಟಾರ್ಗಳನ್ನು ಕರೆತಂದು ಅಬ್ಬರದ ಪ್ರಚಾರ ಮಾಡ್ತಿರೋದು ಚಿಕ್ಕಬಳ್ಳಾಪುರ ಕ್ಷೇತ್ರದ ಡಾ ಸುಧಾಕರ್.
ಸುಧಾಕರ್ ಕ್ಷೇತ್ರದಲ್ಲಿ ಸಿನಿಮಾ ಸ್ಟಾರ್ಗಳ ಅಬ್ಬರ..!
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ದಿನಕ್ಕೆ ಒಬ್ಬರು ಸ್ಟಾರ್ ಪ್ರಚಾರಕರು ಎನ್ನುವಂತೆ ಇಡೀ ಕ್ಷೇತ್ರದಾದ್ಯಂತ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ನಟ ರಘು ಮುಖರ್ಜಿ, ನಟಿ ಅನುಪ್ರಭಾಕರ್ ಮನೆ ಮನೆಗೆ ಪ್ರಚಾರ ಮಾಡಿದ್ದಾರೆ. ತೆಲುಗು ಚಿತ್ರರಂಗದ ಹಾಸ್ಯ ನಟ ಬ್ರಹ್ಮಾನಂದ ರೋಡ್ ಶೋ ಮೂಲಕ ಸುಧಾಕರ್ಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ. ನಟ ದಿಗಂತ್, ನೆನಪಿರಲಿ ಪ್ರೇಮ್ , ನಟಿ ಹರ್ಷಿಕಾ ಪೂಣಚ್ಚ, ನಟ ಭುವನ್, ದಿವ್ಯಾ ಉರುಡುಗ ಸೇರಿದಂತೆ ಕನ್ನಡ, ತೆಲುಗು ಸಿನಿಮಾ ಸ್ಟಾರ್ಗಳು ಮನೆ ಮನೆಗೆ ತೆರಳಿ ಸುಧಾಕರ್ ಗೆಲ್ಲಿಸುವಂತೆ ಮನವಿ ಮಾಡುತ್ತಿರುದ್ದಾರೆ. ಈ ಸ್ಟಾರ್ಗಳು ಅಭಿಮಾನಕ್ಕೆ ಬಂದಿರಬಹುದು ಎನ್ನುವ ಮಾತು ಒಂದು ಕಡೆ ಆದರೆ ಹಣಕ್ಕಾಗಿ ಬಂದಿದ್ದಾರೆ ಎನ್ನುವ ಚರ್ಚೆಗಳು ಶುರು ಆಗಿದೆ.
ಶಿವಣ್ಣನನ್ನು ಕೆಣಕಿದ ಪ್ರಶಾಂತ್ ಸಂಬರ್ಗಿ, ಜನರ ಟೀಕಾಸ್ತ್ರ..!
ಸಾಮಾಜಿಕ ಕಾರ್ಯಕರ್ತರ ಎಂದು ಹಿಂದೂಪರ ಹೋರಾಟದಲ್ಲೂ ಭಾಗಿಯಾಗುವ ಪ್ರಶಾಂತ ಸಂಬರ್ಗಿ ನಟ ಶಿವಣ್ಣ ಯಾವುದೇ ಸ್ಕ್ರಿಪ್ಟ್ ನೋಡಿ ಸಿನಿಮಾ ಒಪ್ಪಿಕೊಳ್ಳುವುದಿಲ್ಲ. ಬದಲಿಗೆ ಹಣವನ್ನು ನೋಡಿ ಸಿನಿಮಾ ಒಪ್ಪಿಕೊಳ್ತಾರೆ. ಹಾಗೆಯೇ ರಾಜಕೀಯಲ್ಲಿ ಪ್ರಚಾರಕ್ಕೆ ಅಭ್ಯರ್ಥಿಗಳು ಯಾರೆಂದು ನೋಡುವುದಿಲ್ಲ ಹಣವನ್ನು ಮಾತ್ರ ನೋಡುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲೇ ಪ್ರಶಾಂತ್ ಸಂಬರ್ಗಿಯವರಿಗೆ ಜನ ಗಾಳಿ ಬಿಡಿಸುವ ಕೆಲಸ ಮಾಡಿದ್ದರು. ಈಗಾಗಲೇ ಒಮ್ಮೆ ರಾಜಕುಮಾರ್ ಫ್ಯಾಮಿನಿಲಿ ಬಗ್ಗೆ ಮಾತನಾಡಿ ಅನುಭವಿಸಿದ್ಯಾ..! ಈಗ ಮತ್ತೊಮ್ಮೆ ಅನುಭವಿಸ್ತೀಯಾ..! ಎಂದು ಎಚ್ಚರಿಸಿದ್ದರು. ಈ ಪ್ರಶ್ನೆಗೆ ಗರಂ ಆಗಿರುವ ನಟ ಶಿವಣ್ಣ, ನಮ್ಮ ಬಳಿ ಹಣ ಇಲ್ವಾ..? ನಾವು ರಾಜಕಾರಣಿಗಳ ಪರ ಪ್ರಚಾರ ಮಾಡಿ ಹಣ ಸಂಪಾದನೆ ಮಾಡಬೇಕಾ..? ಎಂದು ಉತ್ತರಿಸಿದ್ದಾರೆ. ಸಾಕಷ್ಟು ಆಕ್ರೋಶ ವ್ಯಕ್ತವಾದ ಬಳಿಕ ಸಂಬರಗಿ ಕೂಡ ಪೋಸ್ಟ್ ಡಿಲೀಟ್ ಮಾಡಿದ್ದಾರೆ.
ಕೃಷ್ಣಮಣಿ