ಕಳೆದ ಎರಡು ತಿಂಗಳಿಂದ ಕರಾವಳಿ ಜಿಲ್ಲೆಗಳಲ್ಲಿ ‘ಅನೈತಿಕ(ನೈತಿಕ) ಪೊಲೀಸ್ ಗಿರಿ’ ಮತ್ತೆ ತಲೆ ಎತ್ತಿದೆ.
ಎರಡು ತಿಂಗಳಲ್ಲಿ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಏಳೆಂಟು ಅನೈತಿಕ ಪೊಲೀಸ್ ಗಿರಿ ಪ್ರಕರಣಗಳು ವರದಿಯಾಗಿವೆ. ಕಳೆದ ಒಂದು ವರ್ಷದಲ್ಲಿ ಒಂದು ಅಂದಾಜಿನ ಪ್ರಕಾರ ಅಧಿಕೃತವಾಗಿ ವರದಿಯಾಗಿರುವ ಅನೈತಿಕ ಪೊಲೀಸ್ ಗಿರಿಯ ಪ್ರಕರಣಗಳ ಪ್ರಮಾಣ 20ಕ್ಕೂ ಹೆಚ್ಚು. ಇನ್ನು ದೂರು ದಾಖಲಾಗದೆ, ಮಾಧ್ಯಮಗಳಲ್ಲಿ ವರದಿಯಾಗದೆ ಹೋದ ಪ್ರಕರಣಗಳು ನೂರಾರು.
ಮೊನ್ನೆಯ ಸುರತ್ಕಲ್ ಅನೈತಿಕ ಪೊಲೀಸ್ ಗಿರಿ ಘಟನೆ, ಆ ಹಿಂದಿನ ಬೆಳ್ತಂಗಡಿ ಮತ್ತು ಪುತ್ತೂರು ಘಟನೆಗಳಲ್ಲಿ ದಾಳಿಕೋರರು ಮತ್ತು ಸಂತ್ರಸ್ತರ ವಿವರಗಳು ಹಾಗೂ ಆ ಪ್ರಕರಣಗಳಲ್ಲಿ ಮಂಗಳೂರು ಪೊಲೀಸರು ಕೈಗೊಂಡ ಕ್ರಮಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಬಹುತೇಕ ರಾಜ್ಯದಲ್ಲಿ ಬಿ ಎಸ್ ಯಡಿಯೂರಪ್ಪ ಅವರಂಥ ಕೆಲಮಟ್ಟಿಗೆ ಲಿಬರಲ್ ಹಿಂದುತ್ವವಾದಿ ನಾಯಕರು ಅಧಿಕಾರದಿಂದ ಇಳಿದ ಬಳಿಕ ಕಟ್ಟಾ ಹಿಂದುತ್ವವಾದಿ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಉಗ್ರ ಹಿಂದುತ್ವವಾದಿ ಶಕ್ತಿಗಳ ಆಡುಂಬೊಲವಾಗಿರುವ ಕರಾವಳಿಯಲ್ಲಿ ಯಾಕೆ ಅನೈತಿಕ ಪೊಲೀಸ್ ಗಿರಿ ಪ್ರಕರಣಗಳು ದಿಢೀರ್ ಹೆಚ್ಚಿದವು ಎಂಬುದನ್ನು ಊಹಿಸಬಹುದು.
ಬಹುತೇಕ ಎಲ್ಲಾ ಪ್ರಕರಣಗಳಲ್ಲೂ ದಾಳಿಕೋರರು ಭಜರಂಗದಳ ಮತ್ತಿತರ ಹಿಂದೂ ಸಂಘಟನೆಯವರೇ ಮತ್ತು ಆರೋಪಿತರು, ಈಗಾಗಲೇ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದವರು. ಹಾಗಾಗಿ ಆಯಾ ಘಟನೆ ನಡೆದ ವ್ಯಾಪ್ತಿಯ ಠಾಣೆಗಳ ಪೊಲೀಸರಿಗೆ ಬಹುತೇಕ ಒಂದು ರೀತಿಯಲ್ಲಿ ಚಿರಪರಿಚಿತರೆ. ಮತ್ತೊಂದು ಗಮನಿಸಬೇಕಾದ ಸಂಗತಿ ಎಂದರೆ; ಎಲ್ಲಾ ಪ್ರಕರಣಗಳಲ್ಲೂ ಪೊಲೀಸರು ದೂರು ದಾಖಲಿಸಿಕೊಳ್ಳುವ ಮುಂಚೆಯೇ ಈ ಹಿಂದುತ್ವವಾದಿ ಕಾರ್ಯಕರ್ತರು ಕಾನೂನು ಕೈಗೆ ತೆಗೆದುಕೊಂಡಿದ್ದಾರೆ. ಸ್ವಯಂ ಕಾನೂನು ಮತ್ತು ನೀತಿ ಮೀರಿ ತಮ್ಮದೇ ಕಾನೂನು ಹೇರಿ, ಸಂತ್ರಸ್ತರ ಮೇಲೆ ಹಲ್ಲೆ, ದಬ್ಬಾಳಿಕೆ ನಡೆಸಿದ್ದಾರೆ. ಆದರೆ, ಪೊಲೀಸರು ಸಂತ್ರಸ್ತರು ನೀಡಿದ ದೂರು ಸ್ವೀಕರಿಸಿ, ಆರೋಪಿಗಳ ಮೇಲೆ ಕ್ರಮಕೈಗೊಳ್ಳುವ ಮೊದಲು ಸಂತ್ರಸ್ತರಿಗೇ ನೀತಿಪಾಠ ಹೇಳಿ, ಎಚ್ಚರಿಕೆ ನೀಡಿ ಕಳಿಸಿದ್ದಾರೆ. ಬಳಿಕ ಮಾಧ್ಯಮ ಮತ್ತು ಸಾರ್ವಜನಿಕ ಒತ್ತಡ ಹೆಚ್ಚಾದ ಬಳಿಕ ಕಾಟಾಚಾರಕ್ಕೆ ದಾಳಿಕೋರರನ್ನು ಬಂಧಿಸಿದ್ದಾರೆ.
ಸುರತ್ಕಲ್ ಘಟನೆಯಲ್ಲಂತೂ, ದಾಳಿಕೋರ ಐವರು ಭಜರಂಗದಳದ ಕಾರ್ಯಕರ್ತರನ್ನು ವಶಕ್ಕೆ ಪಡೆದಷ್ಟೇ ವೇಗವಾಗಿ ಠಾಣೆ ಜಾಮೀನು ನೀಡಿ ರಾಜಮರ್ಯಾದೆಯಿಂದ ಕಳಿಸಿಕೊಡಲಾಗಿದೆ.
ದಾಳಿ ಘಟನೆಯಿಂದ ಹಿಡಿದು, ಆ ಘಟನೆಯ ತನಿಖೆ, ಆರೋಪಿಗಳ ಬಂಧ, ಬಿಡುಗಡೆ ಮತ್ತು ದಾಳಿಗೊಳಗಾದ ಸಂತ್ರಸ್ತರು ಮತ್ತು ಅವರ ಮನೆಮಂದಿಗೆ ನೀತಿ ಪಾಠ ಹೇಳುವವರೆಗೆ ಪ್ರತಿ ಹಂತದಲ್ಲೂ ಮಂಗಳೂರು ಪೊಲೀಸರು ‘ಸಾಮಾಜಿಕ ಕಾಳಜಿ’ ಎಷ್ಟು ಎಂಬುದು ಗೊತ್ತಾಗುತ್ತದೆ. ಅಂದರೆ ಮಂಗಳೂರು ಪೊಲೀಸರಿಗೆ ಅದು ನೈತಿಕ ಪೊಲೀಸ್ ಗಿರಿ ಇರಬಹುದು, ಇಲ್ಲವೇ ಗೋ ಸಾಗಣೆಯ ಪ್ರಕರಣಗಳಿರಬಹುದು, ದೇಶದ ಕಾನೂನು, ಸಂವಿಧಾನಕ್ಕಿಂತ ಮತಾಂಧತೆಯ ಹುಕುಂಗಳನ್ನು ಪಾಲಿಸುವುದೇ ಆದ್ಯತೆ ಎಂಬುದು ಈಗ ಮಾತ್ರವಲ್ಲ; ಕಳೆದ 20-25 ವರ್ಷಗಳಿಂದಲೂ ಮತ್ತೆ ಮತ್ತೆ ನಿರೂಪಿತವಾಗುತ್ತಿರುವ ಸಂಗತಿ.
ಅಂದರೆ; ಮಂಗಳೂರು ಪೊಲೀಸರ ಖಾಕಿಯೊಳಗೇ ಕೇಸರಿಯ ವಸ್ತ್ರ ಅವಿತುಕೊಂಡಿದೆ. ಹಾಗಾಗಿಯೇ ಅಲ್ಲಿನ ಬಹುತೇಕ ಪೊಲೀಸರು, ಯಾವುದೇ ಅಪರಾಧ ಘಟನೆಯನ್ನು ಕಾನೂನು ಚೌಕಟ್ಟಿನಲ್ಲಿ ಒಂದು ಕಾನೂನುಬಾಹಿರ ಕೃತ್ಯವಾಗಿ, ಸಮಾಜಘಾತಕ ಕೃತ್ಯವಾಗಿ ನೋಡುವ ಬದಲಾಗಿ, ಅದನ್ನು ಧರ್ಮರಕ್ಷಣೆಯ, ಧಾರ್ಮಿಕ ಸಮುದಾಯದ ಪ್ರತಿಷ್ಠೆ, ಘನತೆ ರಕ್ಷಣೆಯ ದೃಷ್ಟಿಯಿಂದಲೇ ನೋಡಿ, ಅದಕ್ಕೆ ತಕ್ಕಂತೆ ಕಾರ್ಯಪ್ರವೃತ್ತರಾಗುತ್ತಾರೆ. ಅವರ ಇಂತಹ ಸಂವಿಧಾನಬಾಹಿರ ನಡವಳಿಕೆಗಳಿಗೆ ಕುಖ್ಯಾತ ಪಬ್ ದಾಳಿ ಪ್ರಕರಣ, ಚರ್ಚ್ ದಾಳಿ ಪ್ರಕರಣ, ಜೋಕಟ್ಟೆಯ ಹುಸೇನಬ್ಬ ಗೋ ಸಾಗಣೆ ಪ್ರಕರಣ ಸೇರಿ ಸಾಲು ಸಾಲು ಪ್ರಕರಣಗಳನ್ನು ಉದಾಹರಿಸಬಹುದು. ಇದೀಗ ಸುರತ್ಕಲ್ ಅನೈತಿಕ ಪೊಲೀಸ್ ಗಿರಿ ಪ್ರಕರಣ ಆ ಸಾಲಿಗೆ ತೀರಾ ಇತ್ತೀಚಿನ ತಾಜಾ ಸೇರ್ಪಡೆ.
ಮಂಗಳೂರು ಪೊಲೀಸರ ಇಂತಹ ನಡೆಯ ಕಾರಣಕ್ಕಾಗಿಯೇ, ಭೀಕರ ಜೋಕಟ್ಟೆ ಹುಸೇನಬ್ಬ ಹತ್ಯೆ ಪ್ರಕರಣದಲ್ಲಿ ಸ್ವತಃ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿಯೇ ಭಜರಂಗದಳದ ಸ್ವಯಂಘೋಷಿತ ಗೋರಕ್ಷಕರೊಂದಿಗೆ ಕೈ ಮಿಲಾಯಿಸಿದ ಘಟನೆ ಬೆಳಕಿಗೆ ಬಂದಾಗ, ಇಡೀ ಕರಾವಳಿ ಪೊಲೀಸ್ ಪಡೆಯ ಕೇಸರಿಕರಣದ ಚರ್ಚೆ ಮುನ್ನೆಲೆಗೆ ಬಂದಿತ್ತು. ಆ ಹಿನ್ನೆಲೆಯಲ್ಲಿಯೇ ಕಳೆದ ಎರಡು ದಶಕಗಳಲ್ಲಿ ಕರಾವಳಿಯ ಪೊಲೀಸ್ ಪಡೆ ಹೇಗೆ ಹಂತಹಂತವಾಗಿ ಸಂಪೂರ್ಣ ಒಂದು ಧರ್ಮದ ಪರ ಮತ್ತು ಇನ್ನೊಂದು ಧರ್ಮದ ವಿರುದ್ಧ ಕೆಲಸ ಮಾಡುತ್ತಿದೆ. ಹಿಂದೂ ಸಂಘಟನೆಯ ಕಾರ್ಯಕರ್ತರಂತೆ ಅಲ್ಲಿನ ತಳಮಟ್ಟದ ಸಿಬ್ಬಂದಿ ಹೇಗೆ ಕಾನೂನು, ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಪ್ರತಿ ಸೂಕ್ಷ್ಮ ಪ್ರಕರಣವನ್ನು ಮತಾಂಧತೆಯ ನೆಲೆಯಲ್ಲೇ ನಿರ್ವಹಿಸುತ್ತಿದ್ದಾರೆ ಎಂಬುದು ಚರ್ಚೆಗೊಳಗಾಗಿತ್ತು. ಆ ಹಿನ್ನೆಲೆಯಲ್ಲೇ ಮಂಗಳೂರು ಮತ್ತು ಉಡುಪಿಯ ಪೊಲೀಸ್ ಸಿಬ್ಬಂದಿಯ ಸಾಮೂಹಿಕ ವರ್ಗಾವಣೆಯ ಮಾತುಗಳೂ ಕೇಳಿಬಂದಿದ್ದವು.
ಆ ಬಳಿಕ ಮಂಗಳೂರು ವಿಮಾನ ನಿಲ್ದಾಣ ಬಾಂಬ್ ಪ್ರಕರಣ ಮತ್ತು ಸಿಎಎ-ಎನ್ ಆರ್ ಸಿ ಪ್ರತಿಭಟನೆ ವೇಳೆ ಭುಗಿಲೆದ್ದ ಹಿಂಸಾಚಾರ ಘಟನೆಗಳನ್ನು ಮಂಗಳೂರು ಪೊಲೀಸರು ನಿಭಾಯಿಸಿದ ರೀತಿ ಮತ್ತು ಆ ವಿಷಯದಲ್ಲಿ ಅಲ್ಲಿನ ಅಂದಿನ ಪೊಲೀಸ್ ಕಮೀಷನರ್ ಸಮರ್ಥಿಸಿಕೊಂಡ ವರಸೆಗಳು, ಕರಾವಳಿಯಲ್ಲಿ ಖಾಕಿ ಕೇಸರೀಕರಣ ಎಂಬುದು ಕೇವಲ ತಳಮಟ್ಟದ ಸಿಬ್ಬಂದಿ ಮಟ್ಟಕ್ಕೆ ಮಾತ್ರ ಸೀಮಿತವಾಗಿಲ್ಲ ಎಂಬ ಸಂದೇಶವನ್ನು ರಾಜ್ಯಾದ್ಯಂತ ರವಾನಿಸಿತ್ತು.
ಕರೋನಾ ಅಲೆಯ ಕಾರಣಕ್ಕೆ ಬಹುತೇಕ ಕೆಲವು ದಿನಗಳ ಕಾಲ ಗೋ ಸಾಗಣೆ ಮತ್ತು ಅನೈತಿಕ ಪೊಲೀಸ್ ಗಿರಿಯ ಪ್ರಕರಣಗಳು ತಗ್ಗಿದ್ದವು. ಇದೀಗ ಜನಜೀವನ ಬಹುತೇಕ ಸಹಜ ಸ್ಥಿತಿಗೆ ಮರಳುತ್ತಿದ್ದಂತೆ, ಶಾಲಾ ಕಾಲೇಜುಗಳು ಆರಂಭವಾಗುತ್ತಿದ್ದಂತೆ, ವ್ಯಾಪಾರ ವಹಿವಾಟು, ಬೀಚುಗಳು ತೆರೆಯುತ್ತಿದ್ದಂತೆ ಮತ್ತೆ ಧರ್ಮ ಮತ್ತು ಕೋಮು ಹೆಸರಿನ ಸ್ವೇಚ್ಚಾಚಾರ ಮತ್ತು ದಬ್ಬಾಳಿಕೆಗಳು ಗರಿಬಿಚ್ಚಿವೆ. ಬಹುತೇಕ ಪ್ರಕರಣಗಳಲ್ಲಿ ಪೊಲೀಸರು ಮತ್ತು ದಾಳಿಕೋರರು ಪರಸ್ಪರ ಕೈಜೋಡಿಸಿಯೇ ಇಂತಹ ದಾಳಿಗಳನ್ನು ನಡೆಸುತ್ತಿದ್ದಾರೆ. ಗೋಸಾಗಣೆ ಪ್ರಕರಣಗಳಲ್ಲಿ ಸಾಗಣೆದಾರರು, ಮಾಲೀಕರು, ವಾಹನ ಚಾಲಕರನ್ನು ಹೊಡೆದು, ಬಡಿದು ಹಣ ವಸೂಲಿ ದೋಚುವುದು ಇಂತಹ ದಾಳಿಗಳ ಹಿಂದಿನ ಉದ್ದೇಶವಾಗಿರುತ್ತದೆ. ಒಂದು ಕಡೆ ನಿರ್ದಿಷ್ಟ ದಾಳಿಯಲ್ಲಿ ವಸೂಲಿ ಮತ್ತು ದಾಳಿ ನಡೆಯುತ್ತದೆ ಎಂದು ಹೇಳಿಯೇ ಇತರೆ ಸಾಗಣೆಗಾರರಿಂದ(ಅದು ಅಕ್ರಮವಿರಲಿ, ಸಕ್ರಮವೇ ಇರಲಿ) ವಸೂಲಿ ಮಾಡುವುದು ಇಂತಹ ದಾಳಿಗಳ ಉದ್ದೇಶ.
ಅಲ್ಲದೆ, ಅನೈತಿಕ ಪೊಲೀಸ್ ಗಿರಿ ಪ್ರಕರಣಗಳಲ್ಲಿ ಕೂಡ ಪೊಲೀಸರು ಮತ್ತು ದಾಳಿ ಕೋರರು ಶಾಮೀಲಾಗಿ ಅಮಾಯಕ ಯುವಕ-ಯುವತಿಯರನ್ನು ಹೆದರಿಸಿ ಬೆದರಿಸಿ ನಗದು, ಚಿನ್ನಾಭರಣ ದೋಚಿದ ನಿದರ್ಶನಗಳೂ ಇವೆ. ಇಂತಹ ಸಂದರ್ಭಗಳಲ್ಲಿ ಸಂತ್ರಸ್ತರು ಏಕಾಂಗಿಯಾಗಿರುವಾಗ ದಾಳಿ ನಡೆಸಿ ಫೋಟೋ ಅಥವಾ ವೀಡಿಯೋ ತೆಗೆದು ಬ್ಲಾಕ್ ಮೇಲ್ ಮಾಡಿ ದೋಚುವುದೇ ಹೆಚ್ಚು. ಹಾಗೆ ದೋಚಿದ್ದರಲ್ಲಿ ಆಯಾ ವ್ಯಾಪ್ತಿಯ ಪೊಲೀಸರಿಗೂ ಪಾಲು ಇರುತ್ತದೆ ಎಂಬುದು ಕರಾವಳಿಯಲ್ಲಿ ಬಹಿರಂಗ ಗುಟ್ಟು.
ಹೀಗೆ ಲಾಭಕ್ಕಾಗಿ ಧರ್ಮ, ಸಂಸ್ಕೃತಿಯನ್ನು ಬಳಸುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ರಾಜಕಾರಣಕ್ಕಾಗಿ ಧರ್ಮದ್ವೇಷ ಬಿತ್ತಲು ಇಂತಹ ದಾಳಿಗಳನ್ನು ಬಳಸಲಾಗುತ್ತದೆ ಮತ್ತು ಆಗಲೂ ಕೂಡ ಪೊಲೀಸರು, ಖಾಕಿ ತೊಟ್ಟ ಹಿಂದುತ್ವ ಕಾರ್ಯಕರ್ತರಂತೆಯೇ ಪರೋಕ್ಷವಾಗಿ ವರ್ತಿಸುತ್ತಾರೆ ಎಂಬುದು ಕೂಡ ಗುಟ್ಟೇನಲ್ಲ. ಇದೀಗ ಕಳೆದ ಒಂದು ತಿಂಗಳಿನಿಂದ ದಿಢೀರನೇ ಎರಡು ವಿಭಿನ್ನ ಧರ್ಮಗಳ ಗಂಡು-ಹೆಣ್ಣುಗಳು ಒಟ್ಟಿಗೇ ಬಸ್, ಕಾರು, ಬೈಕುಗಳಲ್ಲಿ ಓಡಾಡುವುದು, ಬೀಚ್, ಆಟದ ಮೈದಾನ, ಕೋರ್ಟು-ಕಚೇರಿಗಳಲ್ಲಿ ಒಟ್ಟಿಗೇ ಕೂರುವುದು, ಮಾತನಾಡುವುದು ಕೂಡ ಧರ್ಮರಕ್ಷಕ ಅನೈತಿಕ ಪೊಲೀಸ್ ಗಿರಿ ದಾಳಿಗೆ ಗುರಿಯಾಗುತ್ತಿರುವುದರ ಹಿಂದೆ ಕೂಡ ರಾಜಕೀಯ ತುರ್ತು ಇದೆ. ರಾಜ್ಯದಲ್ಲಿ ಲವ್ ಜಿಹಾದ್ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಸಂಘಪರಿವಾರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ. ಆದರೆ, ಸರ್ಕಾರ ಪ್ರತಿಪಕ್ಷಗಳು ಮತ್ತು ಜನರ ವಿರೋಧದ ಹಿನ್ನೆಲೆಯಲ್ಲಿ ಹಿಂದೇಟು ಹಾಕುತ್ತಿದೆ. ಹಾಗಾಗಿ, ಸರ್ಕಾರದ ಮೇಲೆ ಪರೋಕ್ಷ ಒತ್ತಡ ಹಾಕಿ, ಮತ್ತು ಕಾಯ್ದೆಯನ್ನು ಸಮರ್ಥಿಸಿಕೊಳ್ಳಲು ಅದಕ್ಕೆ ಕೆಲವು ಪ್ರಕರಣಗಳ ಸಾಕ್ಷ್ಯವನ್ನು ಒದಗಿಸಲು ಸಂಘಪರಿವಾರವೇ ಛೂ ಬಿಟ್ಟು ಅನೈತಿಕ ಪೊಲೀಸ್ ಗಿರಿ ದಾಳಿಗಳನ್ನು ನಡೆಸಲಾಗುತ್ತಿದೆ. ಅದಕ್ಕೆ ಕೇಸರೀಕರಣಗೊಂಡಿರುವ ಮಂಗಳೂರು ಪೊಲೀಸರ ಕುಮ್ಮಕ್ಕು ಕೂಡ ಇದೆ ಎಂಬ ಅಭಿಪ್ರಾಯ ಪ್ರಗತಿಪರ ಚಿಂತಕರಿಂದ ಕೇಳಿಬಂದಿದೆ.
ಹಾಗಾಗಿ, ಕರಾವಳಿಯಲ್ಲಿ ಇದೀಗ ದಿಢೀರನೇ ಹೆಚ್ಚಿರುವ ಅನೈತಿಕ ಪೊಲೀಸ್ ಗಿರಿ ಪ್ರಕರಣಗಳು, ಮಂಗಳೂರಿನ ಕಡಲ ಉಬ್ಬರದಂತೆ ಸ್ವಾಭಾವಿಕವಂತೂ ಅಲ್ಲ; ಬದಲಾಗಿ ಅವುಗಳ ಹಿಂದೆ ಒಂದು ಸ್ಪಷ್ಟ ಮತ್ತು ನಿರ್ದಿಷ್ಟ ಅಜೆಂಡಾ ಇದೆ ಮತ್ತು ಪೊಲೀಸ್ ಸೇರಿದಂತೆ ಇಡೀ ವ್ಯವಸ್ಥೆ ಅಂತಹ ಅಜೆಂಡಾದ ಭಾಗವಾಗಿ ಕೆಲಸ ಮಾಡುತ್ತಿವೆ. ಅಂದರೆ, ಯಾವ ದಾಳಿಗಳು ಕೇವಲ ಕಾಕತಾಳೀಯವಲ್ಲ!