ಲಾಡ್ಜ್ ವೊಂದರಲ್ಲಿ ಬೇರೆ ಬೇರೆ ಕೋಮಿನ ಯುವಕ -ಯುವತಿ ರೂಮ್ ಮಾಡಿ ಉಳಿದುಕೊಂಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಭಜರಂಗ ದಳ ಕಾರ್ಯಕರ್ತರು ಹೋಟೆಲ್ ಮೇಲೆ ದಾಳಿ ಮಾಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಲಾಡ್ಜ್ ನಲ್ಲಿ ಬೇರೆ ಊರಿನಿಂದ ಬಂದ ಯುವಕ-ಯುವತಿ ಉಳಿದುಕೊಂಡಿದ್ದ ವಿಷಯ ತಿಳಿದು, ಸ್ಥಳಕ್ಕೆ ತೆರಳಿದ ಭಜರಂಗದ ಕಾರ್ಯಕರ್ತರು ಇಬ್ಬರನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ್ದರು. ಆದರೆ ಪೊಲೀಸರು ವಿಚಾರಣೆ ನಡೆಸದೇ ಅವರನ್ನ ಬಿಟ್ಟು ಕಳಿಸಿದ್ದಾರೆ ಎನ್ನುವ ಆರೋಪ ಭಜರಂಗ ದಳದ ಕಾರ್ಯಕರ್ತರದ್ದಾಗಿದೆ.
ಅಲ್ಲದೆ ಯಾವುದೇ ಪೂರ್ವಪರ ವಿಚಾರಿಸದೇ ರೂಮ್ ಮಾಡಿ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟ ಲಾಡ್ಜ್ ಬಂದ್ ಮಾಡಿಸಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.
ಈವರೆಗೆ ಮಂಗಳೂರು, ಉಡುಪಿಯಂತಹ ಕರಾವಳಿಗೆ ಸೀಮಿತವಾಗಿದ್ದ ನೈತಿಕ ಪೊಲೀಸ್ ಗಿರಿಯ ಇಂತಹ ಕೃತ್ಯಗಳು ಇದೇ ಮೊದಲ ಬಾರಿಗೆ ಶಿವಮೊಗ್ಗದಲ್ಲೂ ನಡೆದಿದೆ. ಬೇರೆ ಬೇರೆ ಕೋಮಿನ ವಯಸ್ಕ ಹೆಣ್ಣು ಮತ್ತು ಗಂಡು ಸ್ವಯಂ ಇಚ್ಛೆಯಿಂದ ಹೋಟೆಲ್ ನಲ್ಲಿ ತಂಗಿರುವುದು ಕಾನೂನು ಬಾಹಿರವೇ? ಒಂದು ವೇಳೆ ಅವರು ಜೊತೆಯಲ್ಲಿ ಲಾಡ್ಜ್ ನಲ್ಲಿ ಇರುವುದು ಕಾನೂನುಬಾಹಿರವಾಗಿದ್ದರೆ ಪೊಲೀಸರು ಅವರನ್ನು ಸುಮ್ಮನೆ ಬಿಟ್ಟು ಕಳಿಸುತ್ತಿದ್ದರೆ? ಅವರು ಕಾನೂನುಬಾಹಿರವಾಗಿ ನಡೆದುಕೊಂಡಿಲ್ಲ ಎಂದಾದರೆ ಮತ್ತು ಅವರಿಬ್ಬರೂ ವಯಸ್ಕರು ಎಂದಾದರೆ ಭಜರಂಗದಳದವರಿಗೆ ಅವರ ಮೇಲೆ ದಾಳಿ ನಡೆಸಲು ಅಧಿಕಾರವೇನಿದೆ? ಶಿವಮೊಗ್ಗ ಪೊಲೀಸರು ಈ ವಿಷಯದಲ್ಲಿ ಮೌನವಾಗಿರುವುದು ಯಾಕೆ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.