ಇತ್ತೀಚೆಗೆ ಕರ್ನಾಟಕದ ಕರಾವಳಿ ಮತ್ತಿತರ ಜಿಲ್ಲೆಗಳಲ್ಲಿ ನಡೆಯುತ್ತಿರುವ ಮತಾಂಧರ ಧಾಳಿಯನ್ನು ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ “ಸಮಾಜದಲ್ಲಿ ಹಲವಾರು ಭಾವನೆಗಳ ಜನರಿದ್ದಾರೆ. ಈ ಭಾವನೆಗಳಿಗೆ ಧಕ್ಕೆ ಆಗದ ಹಾಗೆ ನಾವು ನಡೆದುಕೊಳ್ಳಬೇಕಾಗುತ್ತದೆ, ಆ ಭಾವನೆಗಳಿಗೆ ಧಕ್ಕೆ ಬಂದಾಗ ಸಹಜವಾಗಿ ಆಕ್ಷನ್ ರಿಯಾಕ್ಷನ್ ಆಗುತ್ತದೆ,,,” ಎಂದು ಹೇಳುವ ಮೂಲಕ ಹಿಂದೂ ಮತಾಂಧರ ನೈತಿಕಪೊಲೀಸ್‌ಗಿರಿಯನ್ನು ಸಮರ್ಥಿಸಿಕೊಂಡಿದ್ದಾರೆ. ತಾವು ಒಂದು ರಾಜ್ಯದ ಸಮಗ್ರ ಆಡಳಿತ ವ್ಯವಸ್ಥೆಯನ್ನು ನಿರ್ವಹಿಸಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿ ಇರುವುದನ್ನೂ ಮರೆತಿರುವ ಮುಖ್ಯಮಂತ್ರಿಗಳು, ಸಾಮಾಜಿಕ ಸ್ವಾಸ್ಥ್ಯ ಮತ್ತು ಕೋಮು ಸೌಹಾರ್ದತೆಯನ್ನು ಕೆಡಿಸುವ ಮತಾಂಧ ಶಕ್ತಿಗಳಿಗೆ ಅಧಿಕೃತವಾಗಿಯೇ ಮಾನ್ಯತೆ ನೀಡಿದ್ದಾರೆ. ಮತಾಂಧತೆ ಮತ್ತು ಕೋಮುದ್ವೇಷದ ನಡುವೆಯೇ ಸೋದರತ್ವಕ್ಕಾಗಿ, ಸೌಹಾರ್ದತೆಗಾಗಿ ಹಪಹಪಿಸುವ ಬಹುಸಂಖ್ಯೆಯ ಜನರ ಭಾವನೆಗಳು ಅರ್ಥವಾಗಿದ್ದರೆ ಬಹುಶಃ ಬೊಮ್ಮಾಯಿಯವರು ಹೀಗೆ ಹೇಳುತ್ತಿರಲಿಲ್ಲ.
ಆದರೆ ಬಲಪಂಥೀಯ ರಾಜಕಾರಣದ ತಳಪಾಯವೇ ಜನಸಮುದಾಯಗಳ ಭಾವನೆಗಳು. ಸಾಂಸ್ಕೃತಿಕ ರಾಷ್ಟ್ರೀಯತೆ, ಭೌಗೋಳಿಕ ಶ್ರೇಷ್ಠತೆ, ಮತೀಯ ಅಹಮಿಕೆ ಮತ್ತು ಜಾತಿ ಪಾರಮ್ಯದ ಸೂಕ್ಷ್ಮ ಭಾವನೆಗಳನ್ನೇ ಚಿಮ್ಮುಹಲಗೆಯನ್ನಾಗಿ ಮಾಡಿಕೊಂಡು ಅಧಿಕಾರಕ್ಕೆ ಬಂದಿರುವ ಬಿಜೆಪಿಯ ಆಂತರ್ಯವನ್ನು ಮುಖ್ಯಮಂತ್ರಿಗಳು ಹೊರಗೆಡಹಿದ್ದಾರೆ. ಆದರೆ ಇದರ ಪರಿಣಾಮ ಏನಾಗುವುದೆಂಬ ವಿವೇಚನೆ, ಮುಖ್ಯಮಂತ್ರಿಗಳಿಗೆ ಇರಬೇಕಿತ್ತು. ಭಾವನೆಗಳು ಮೇಲುಗೈ ಸಾಧಿಸಿದಂತೆಲ್ಲಾ ವಿವೇಚನೆ ಕ್ಷೀಣಿಸುತ್ತಲೇ ಹೋಗುತ್ತದೆ. ಜಾಗೃತವಾಗಿರುವ ವಿವೇಕವೂ ಸಹ ಇಲ್ಲವಾಗುತ್ತದೆ. ಇಂದು ಇಡೀ ಸಮಾಜವನ್ನು ಭಾವನೆಗಳು ಆಳುತ್ತಿವೆ. ಹಿಂದೂ, ಮುಸಲ್ಮಾನ್, ಕ್ರೈಸ್ತ ಮತಗಳನ್ನು ಆಶ್ರಯಿಸಿ ಬದುಕುತ್ತಿರುವ ಕೋಟ್ಯಂತರ ಜನತೆಗೆ ತಮ್ಮ ನಿತ್ಯ ಬದುಕೇ ಒಂದು ಸವಾಲಾಗಿರುವ ಸಂದರ್ಭದಲ್ಲಿ ಈ ಮತಗಳನ್ನು ಸಂರಕ್ಷಿಸುವ ಸಲುವಾಗಿ ಹುಟ್ಟಿಕೊಂಡಿರುವ ಉತ್ತರಾಧಿಕಾರಿಗಳು, ಜನಸಾಮಾನ್ಯರ ನಂಬಿಕೆಗಳನ್ನೇ ಉಪಯೋಗಿಸಿಕೊಂಡು “ಭಾವನೆಗಳ ಪ್ರಪಂಚ” ವನ್ನು ಸೃಷ್ಟಿಸಿದ್ದಾರೆ.
ತಾವು ನಂಬಿದ ಮತಗಳ ತಾತ್ವಿಕ ಬೋಧನೆಗಳನ್ನು, ಸೂತ್ರಗಳನ್ನು ಮತ್ತು ಆಚರಣೆಗಳನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುತ್ತಲೇ, ತಮ್ಮ ನೆರೆಹೊರೆಯವರೊಂದಿಗೆ ಸೌಹಾರ್ದ ಬದುಕನ್ನು ಕಟ್ಟಿಕೊಳ್ಳುವ ಅನಿವಾರ್ಯತೆಯೂ ಜನಸಾಮಾನ್ಯರಿಗೆ ಇದ್ದೇ ಇರುತ್ತದೆ. ಬದುಕಿನ ನಿರ್ವಹಣೆಯಲ್ಲಿ ನಿತ್ಯ ಎದುರಿಸುವ ಜಟಿಲ ಸಮಸ್ಯೆಗಳಿಗೆ ಧರ್ಮ ಗ್ರಂಥಗಳಲ್ಲಿ ಕಾಣಲಾಗದ ಸಾಂತ್ವನ-ಪರಿಹಾರಗಳನ್ನು ಮನುಜ ಸಂಬಂಧಗಳ ಮೂಲಕ ಕಾಣಬಹುದು ಎಂಬ ಅರಿವು ಈ ಜನತೆಯಲ್ಲಿ ಇದ್ದೇ ಇರುತ್ತದೆ. ಆದರೆ ಈ ಜನತೆಯ ನಂಬಿಕೆ ಆಚರಣೆಗಳನ್ನೇ ಭಾವನೆಗಳನ್ನಾಗಿ ಪರಿವರ್ತಿಸುವ ಮೂಲಕ ಮತಾಂಧ ಶಕ್ತಿಗಳು ತಮ್ಮ ಸಾಂಸ್ಕೃತಿಕ ಪಾರಮ್ಯ ಮತ್ತು ಸಾಮುದಾಯಿಕ ಪ್ರಾಬಲ್ಯವನ್ನು ಸ್ಥಾಪಿಸಲು ಸದಾ ಹೆಣಗಾಡುತ್ತಿರುತ್ತವೆ. ಈ ಪ್ರಕ್ರಿಯೆಗೆ ಇಸ್ಲಾಂ, ಹಿಂದೂ ಮತ್ತು ಕ್ರೈಸ್ತ ಮತಗಳ ರಕ್ತಸಿಕ್ತ ಚರಿತ್ರೆಯೇ ಸಾಕ್ಷಿಯನ್ನೂ ಒದಗಿಸುತ್ತದೆ. ಆಫ್ಘಾನಿಸ್ತಾನದ ತಾಲಿಬಾನ್‌ನಿಂದ ಭಾರತದ ಸಂಘಪರಿವಾರದವರೆಗೆ ಈ ಸಾಂಸ್ಕೃತಿಕ ಪಾರಮ್ಯ ತನ್ನದೇ ಆದ ನೆಲೆಗಳನ್ನು ಸೃಷ್ಟಿಸಿಕೊಳ್ಳುತ್ತಾ ಜನಸಮುದಾಯಗಳನ್ನು ಭಾವನೆಗಳ ಚೌಕಟ್ಟಿನಲ್ಲಿ ಬಂಧಿಸಲು ಪ್ರಯತ್ನಿಸುತ್ತವೆ.
ಇಲ್ಲಿ ಸೃಷ್ಟಿಯಾಗುವ ಅಥವಾ ಸೃಷ್ಟಿಮಾಡಲಾಗುವ “ ಭಾವನೆಗಳ ವಾರಸುದಾರರು ” ಇಡೀ ಸಮಾಜದ ಹಿತಾಸಕ್ತಿ ರಕ್ಷಕರಾಗಿ ಕಂಡುಬರುತ್ತಾರೆ. ಉತ್ತರದಾಯಿತ್ವ ಇಲ್ಲದ ಈ ಸಾಂಸ್ಕೃತಿಕ ಉತ್ತರಾಧಿಕಾರಿಗಳು ಭಾವನೆಗಳ ತಳಹದಿಯ ಮೇಲೆಯೇ ಸಾಮುದಾಯಿಕ ಅಸ್ತಿತ್ವಗಳನ್ನು ನಿರ್ಧರಿಸುತ್ತಾರೆ. ಯಾವುದೇ ಒಂದು ಪ್ರಜ್ಞಾವಂತ ಸಮಾಜ ಒಪ್ಪಿಕೊಳ್ಳಲಾಗದ ಈ ಪ್ರಕ್ರಿಯೆ ಎಲ್ಲ ಮತಗಳ ಸುಶಿಕ್ಷಿತ ವಲಯವನ್ನೂ ಆಕ್ರಮಿಸಿರುವುದಷ್ಟೇ ಅಲ್ಲ, ಈ ಮತಗಳ ಆಂತರಿಕ ಸಾಮಾಜಿಕ-ಸಾಂಸ್ಕೃತಿಕ ಸಂಕಥನಗಳ ಮೇಲೆಯೂ ಈ ಪ್ರಕ್ರಿಯೆ ತನ್ನ ಪ್ರಭಾವ ಬೀರಿದೆ. ಕಾಶ್ಮೀರದ ಕಣಿವೆಗಳಲ್ಲಿ, ಬಾಂಗ್ಲಾದೇಶದ ಬೀದಿಗಳಲ್ಲಿ, ಕರ್ನಾಟಕದ ಕರಾವಳಿಯಲ್ಲಿ ಈ ಭಾವನಾ ವಲಯದ ಅಟ್ಟಹಾಸವನ್ನು ನಾವಿಂದು ಕಾಣುತ್ತಿದ್ದೇವೆ. ಜನಸಾಮಾನ್ಯರ ಧಾರ್ಮಿಕ ನಂಬಿಕೆಗಳನ್ನು ಮತೀಯ ಭಾವನೆಗಳಾಗಿ ಪರಿವರ್ತಿಸುವ ಮೂಲಕ ಸ್ಥಾಪಿತ ಮತೀಯ ಹಿತಾಸಕ್ತಿಗಳು ಸಮುದಾಯದ ಮೇಲೆ ತಮ್ಮ ಪಾರಮ್ಯ ಸಾಧಿಸಲು ಈ ಪ್ರಕ್ರಿಯೆ ನೆರವಾಗುತ್ತಿದೆ.
ಸಹಜವಾಗಿಯೇ ಸಮಾಜದ ಚಿಂತನಾ ಲಹರಿಯನ್ನೂ ಈ ನಿರೂಪಣೆಗಳೇ (Narratives) ನಿರ್ಧರಿಸುತ್ತವೆ. ಒಂದು ದೇವಸ್ಥಾನ, ಪೂಜಾ ಮಂದಿರ, ಮಸೀದಿ, ಚರ್ಚು, ಆಧ್ಯಾತ್ಮಿಕ ಕೇಂದ್ರ ಈ ಎಲ್ಲ ಸಾಂಸ್ಥಿಕ ಮತಕೇಂದ್ರಗಳ ಮೂಲಕ ಜನರ ಮೂಲಭೂತ ನಂಬಿಕೆಗಳನ್ನು ಘನೀಕರಿಸುವ ನಿಟ್ಟಿನಲ್ಲಿ ಮತೀಯ ಭಾವನೆಗಳು ಯಶಸ್ವಿಯಾಗುತ್ತವೆ. ಇದರ ಸ್ಪಷ್ಟ ಉದಾಹರಣೆಯನ್ನು ಕಾಶ್ಮೀರದ ಕಣಿವೆಗಳಲ್ಲಿ ಕಾಣಬಹುದು. ಅಥವಾ ಕರ್ನಾಟಕದ ಕರಾವಳಿಯಲ್ಲಿ ಕಾಣಬಹುದು. ಅನ್ಯ ಮತದ ಜನರ ನಂಬಿಕೆಗಳೇ ಒಂದು ನಿರ್ದಿಷ್ಟ ಮತದ ಆಚರಣೆಗಳಿಗೆ ನಂಬಿಕೆಗಳಿಗೆ ಧಕ್ಕೆ ಉಂಟುಮಾಡುತ್ತದೆ ಎನ್ನುವುದು ಭಾವನಾತ್ಮಕ ನೆಲೆಯಲ್ಲಷ್ಟೇ ಸತ್ಯ. ವಾಸ್ತವಿಕ ನೆಲೆಯಲ್ಲಿ ಇದು ಎಂದೂ ಎಲ್ಲಿಯೂ ಆಗುವುದಿಲ್ಲ. ಹಾಗೊಮ್ಮೆ ಆಗಿದ್ದರೆ ಭಾರತ ಇಷ್ಟು ವರ್ಷ ತನ್ನ ಬಹುತ್ವವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ ಸಾಂಸ್ಥೀಕರಣಕ್ಕೊಳಗಾಗದ ಧರ್ಮದ ನಂಬಿಕೆಗಳು ವ್ಯಕ್ತಿಗತವಾಗಿಯೇ ಉಳಿಯುತ್ತವೆ.
ಆದರೆ ಹಿಂದೂ ಮತದ ಸಮಸ್ತ ಅನುಯಾಯಿಗಳನ್ನು ಒಂದೇ ಸಮರೂಪದ ಸಮೂಹವನ್ನಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ಸಂಘಪರಿವಾರ ಮತ್ತು ವಿಶ್ವಹಿಂದೂ ಪರಿಷತ್ತು ಹಿಂದೂ ಜನಸಮುದಾಯಗಳ ಧಾರ್ಮಿಕ ಹಾಗೂ ಆಚರಣಾತ್ಮಕ ನಂಬಿಕೆಗಳನ್ನು ಧೃವೀಕರಿಸುವುದರಲ್ಲಿ ಯಶಸ್ವಿಯಾಗಿದೆ. ಹಾಗಾಗಿಯೇ ತಳಸಮುದಾಯಗಳೂ ಸಹ ಗಣೇಶೋತ್ಸವದಂತಹ ಆಚರಣೆಗಳ ಮೂಲಕ ತಮ್ಮ ಮತೀಯ ಅಸ್ಮಿತೆಯನ್ನು ಸ್ಥಾಪಿಸಿಕೊಳ್ಳಲು ಯತ್ನಿಸುತ್ತವೆ. ಮತ್ತೊಂದೆಡೆ ಈ ಆಚರಣೆಗಳಿಗೆ ಇಸ್ಲಾಂ ಮತದ ಮೂಲ ತತ್ವಗಳು ಯಾವುದೇ ರೀತಿಯ ಅಡ್ಡಿ ಉಂಟುಮಾಡುವುದಿಲ್ಲವಾದರೂ, ಮುಸಲ್ಮಾನರ ಆಚರಣೆಗಳೇ, ಹಿಂದೂ ನಂಬಿಕೆ/ಆಚರಣೆಗಳಿಗೆ ಭಂಗ ತರುತ್ತವೆ ಎಂದು ನಂಬಿಸುವಲ್ಲಿ ಮತೀಯ ಸಂಘಟನೆಗಳು ಯಶಸ್ವಿಯಾಗುತ್ತವೆ. ಹಾಗಾಗಿಯೇ ಮಸೀದಿಯ ಮುಂದೆ ಹಾದು ಹೋಗುವ ಒಂದು ದೇವರ ಮೆರವಣಿಗೆಯೂ ಅಪಚಾರವಾಗಿಬಿಡುತ್ತದೆ. ಇಲ್ಲಿ ಮೂಲ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳಿಗಿAತಲೂ, ಕಲ್ಪಿತ ಮತ್ತು ಸೃಷ್ಟಿಸಲ್ಪಟ್ಟ ಭಾವನೆಗಳು ಮೇಲುಗೈ ಸಾಧಿಸುತ್ತವೆ.
ಧಾರ್ಮಿಕ ನಂಬಿಕೆಗಳನ್ನು ಭಾವನೆಗಳನ್ನಾಗಿ ಪರಿವರ್ತಿಸುವ ಮತಾಂಧ ಶಕ್ತಿಗಳ ಯಶಸ್ವಿ ಕಾರ್ಯಾಚರಣೆ ಸಾಮಾಜಿಕ/ಸಾರ್ವಜನಿಕ ಬದುಕಿಗೂ ಪ್ರವೇಶಿಸಿದಾಗ ಕಾಶ್ಮೀರ ಸೃಷ್ಟಿಯಾಗುತ್ತದೆ, ಬಾಂಗ್ಲಾದೇಶದ ಢಾಕಾ ತಲೆಎತ್ತುತ್ತದೆ, ಕರ್ನಾಟಕದ ಕರಾವಳಿ ಉದ್ಭವಿಸುತ್ತದೆ. ಮನುಜ ಸಂಬಂಧಗಳನ್ನು ಬೆಸೆಯುವುದನ್ನೇ ಮೂಲ ತತ್ವವನ್ನಾಗಿ ಸ್ವೀಕರಿಸುವ ಹಿಂದೂ, ಇಸ್ಲಾಂ ಅಥವಾ ಕ್ರೈಸ್ತ ಮತಗಳು ಆಚರಣೆಯ ನೆಲೆಯಲ್ಲಿ ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳನ್ನೇ ಅವಲಂಬಿಸಿರುವುದರಿಂದಲೇ ಈ ಮತದ ಅನುಯಾಯಿಗಳು ಅನ್ಯ ಮತದ ಜನರ ಧಾರ್ಮಿಕ ನಂಬಿಕೆಗಳನ್ನೇ ಕೇಂದ್ರೀಕರಿಸಿ ತಮ್ಮ ಮತೀಯ ಸಾಮ್ರಾಜ್ಯವನ್ನು ವಿಸ್ತರಿಸಲು ಪ್ರಯತ್ನಿಸುತ್ತಾರೆ. ಈ ಮತಗಳ ಸಾಂಸ್ಥೀಕರಣಗೊಂಡಂತೆಲ್ಲಾ ಜನಸಾಮಾನ್ಯರ ನಂಬಿಕೆಗಳು ಭಾವನೆಗಳಾಗಿ ಪರಿವರ್ತನೆಗೊಳಗಾಗುತ್ತವೆ.
ಹೀಗೆ ಸೃಷ್ಟಿಸಲಾದ ಭಾವನೆಗಳು ಒಂದೆಡೆ ಮತೀಯ ಅಸ್ಮಿತೆಯನ್ನೂ ಮತ್ತೊಂದೆಡೆ ಸಾಮುದಾಯಿಕ ಅಸ್ಮಿತೆಯನ್ನೂ ನಿರ್ಧರಿಸುವ ಮಾನದಂಡಗಳಾಗಿಬಿಡುತ್ತವೆ. ಒಬ್ಬ ಹಿಂದೂ ಯುವಕ/ಯುವತಿ, ಮುಸ್ಲಿಂ ಯುವತಿ/ಯುವಕನೊಡನೆ ಓಡಾಡುವುದೇ ಅಪರಾಧ ಎನ್ನುವ ಒಂದು ಸನ್ನಿವೇಶ ಕರಾವಳಿಯಲ್ಲಿ, ಬೆಂಗಳೂರಿನಂತಹ ಮೆಟ್ರೋಪಾಲಿಟನ್ ನಗರದಲ್ಲಿ ಸೃಷ್ಟಿಯಾಗಿರುವುದನ್ನು ಈ ಹಿನ್ನೆಲೆಯಲ್ಲೇ ನೊಡಬೇಕಿದೆ. ಪರಸ್ಪರ ಹಂಚಿಕೊಳ್ಳಬಹುದಾದ ಮನುಜ ಪ್ರೀತಿಗೆ, ಮಾನವ ಸಹಜ ವಾತ್ಸಲ್ಯಗಳಿಗೆ ಮತಾವಲಂಬಿತ ನಂಬಿಕೆಗಳು ಯಾವುದೇ ರೀತಿಯಲ್ಲೂ ಅಡ್ಡಿಯಾಗುವುದಿಲ್ಲ. ಮೂಲ ಮತದ ತಾತ್ವಿಕ ನೆಲೆಗಳಲ್ಲಿ ಯಾವುದೇ ಪ್ರತ್ಯೇಕ ಅಸ್ತಿತ್ವ ಇರುವುದಿಲ್ಲ. ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆ ಇದಕ್ಕೆ ಅಪವಾದವೆನ್ನಬಹುದು.
ಈ ವಾಸ್ತವವನ್ನು ಅರಿತೇ ಆರೆಸ್ಸೆಸ್‌ನಂತಹ ಮತೀಯ ಸಂಘಟನೆಗಳು, ತಾಲಿಬಾನ್ ನಂತಹ ಸಂಘಟನೆಗಳು ಸಮಾಜದ ಮೇಲೆ ತಮ್ಮ ನಿಯಂತ್ರಣ ಸಾಧಿಸಲು ಧಾರ್ಮಿಕ ಭಾವನೆಗಳ ಚೌಕಟ್ಟುಗಳನ್ನು ನಿರ್ಮಿಸುತ್ತವೆ. ಈ ಚೌಕಟ್ಟುಗಳೊಳಗೆ ಸಿಲುಕುವ ಮನಸುಗಳಿಗೆ ತಮ್ಮ ಮೂಲ ಮತದ ತಾತ್ವಿಕ ನೆಲೆಗಳಿಗಿಂತಲೂ ಧಾರ್ಮಿಕ ನಂಬಿಕೆಗಳೇ ಅಸ್ತಿತ್ವದ ಪ್ರಶ್ನೆಗಳಾಗುತ್ತವೆ. ಒಬ್ಬ ಹಿಂದೂ ಯುವತಿ ಮುಸ್ಲಿಂ ಯುವಕನೊಡನೆ ಓಡಾಡಿದರೆ ಅಥವಾ ಪ್ರೇಮಿಸಿದರೆ ಅಥವಾ ವಿವಾಹವಾಗುವುದಾದರೆ ಅದು ಹಿಂದೂ ಮತದ ಅಸ್ತಿತ್ವಕ್ಕೇ ಧಕ್ಕೆ ಉಂಟುಮಾಡುತ್ತದೆ ಎಂಬ ಭಾವನೆಯನ್ನು ಸೃಷ್ಟಿಸಲಾಗುತ್ತದೆ. ಮುಸಲ್ಮಾನರಲ್ಲೂ ಇದೇ ರೀತಿಯ ಭಾವನೆಗಳು ಸ್ಫುರಿಸುತ್ತವೆ. ಇಲ್ಲಿ ಇಸ್ಲಾಂ ಅಥವಾ ಹಿಂದೂ ಮತಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಬದಲಾಗಿ, ಈ ಮತಗಳ ಮೂಲ ನೆಲೆಯನ್ನು ಸುರಕ್ಷಿತವಾಗಿರಿಸಲು ಹೆಣಗಾಡುವ ಸ್ಥಾಪಿತ ಮತೀಯ ಹಿತಾಸಕ್ತಿಗಳು ಸೃಷ್ಟಿಸುವ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ.
ಈ ಭಾವನೆಗಳ ವಾರಸುದಾರರಾದರೂ ಯಾರು ? ಇದೇ ಮತೀಯ ಹಿತಾಸಕ್ತಿಗಳು, ಮತಾಂಧ ಶಕ್ತಿಗಳು ಮತ್ತು ಮತ ಕೇಂದ್ರಗಳನ್ನು ನಿಯಂತ್ರಿಸುವ ಸಾಂಸ್ಥಿಕ ಶಕ್ತಿಗಳು. ಸಾಮಾನ್ಯ ಜನತೆ ಈ ಭಾವನೆಗಳನ್ನೂ ಲೆಕ್ಕಿಸದೆ ತಮ್ಮ ನಿತ್ಯ ಜೀವನದಲ್ಲಿ ನಿರತರಾಗಿರುತ್ತಾರೆ. ಆದರೆ ಸಾಂಸ್ಥಿಕ ಮತಾಂಧ ಶಕ್ತಿಗಳು ವ್ಯಕ್ತಿಗತ ಬದುಕಿನಲ್ಲೂ ಈ ಭಾವನೆಗಳೇ ಪ್ರಧಾನವಾಗಿರುವಂತಹ ಸನ್ನಿವೇಶವನ್ನು ಸೃಷ್ಟಿಸುತ್ತವೆ. ಹಾಗಾಗಿಯೇ ಕರ್ನಾಟಕದ ಖಾನಾಪುರದಲ್ಲಿ ಹಿಂದೂ ಹುಡುಗಿಯನ್ನು ಪ್ರೇಮಿಸಿದ ಮುಸ್ಲಿಂ ವ್ಯಕ್ತಿಯ ಶಿರಚ್ಚೇದನ ಮಾಡಲೂ ಹಿಂದೂ ಸೇನೆಯ ಮತಾಂಧರು ಹೇಸುವುದಿಲ್ಲ. ಬೆಳಗಾವಿಯಲ್ಲಿ ಹಿಂದೂ ಯುವತಿಯೊಂದಿಗೆ ಆಟೋದಲ್ಲಿ ಚಲಿಸುತ್ತಿದ್ದ ಮುಸ್ಲಿಂ ಯುವಕನ ಮೇಲೆ ಮುಸ್ಲಿಂ ಮತಾಂಧರು ಧಾಳಿ ನಡೆಸಿ ಕೊಲೆಬೆದರಿಕೆಯನ್ನೂ ಹಾಕಿದ್ದಾರೆ. ಅಂದರೆ ಎರಡು ಭಿನ್ನ ಧರ್ಮಗಳ ಜೀವಗಳು ಬೆರೆಯುವುದಕ್ಕೆ ಧಾರ್ಮಿಕ ನಂಬಿಕೆಗಳು ಅಡ್ಡಿ ಬರುವುದಿಲ್ಲ ಆದರೆ ಈ ನಂಬಿಕೆಗಳು ಭಾವನೆಗಳಾಗಿ ಪರಿವರ್ತನೆ ಹೊಂದಿದಾಗ, ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ ಎಂಬ ಹುಯಿಲೆಬ್ಬಿಸಲಾಗುತ್ತದೆ.
ಈ ಧಕ್ಕೆ ಉಂಟಾಗುವುದು ಪ್ರೀತಿಸುವ ಹೃದಯಗಳಿಗಲ್ಲ ಅವರ ಅವರು ಪ್ರತಿನಿಧಿಸುವ ಮತದ ಮೂಲ ತತ್ವಗಳಿಗೂ ಅಲ್ಲ. ಬದಲಾಗಿ ಈ ಮತಗಳ ಸಾಂಸ್ಥಿಕ ನೆಲೆಗಳ ಮೇಲೆ ಹಿಡಿತ ಸಾಧಿಸಿರುವ ಮತಾಂಧ ಶಕ್ತಿಗಳ ಭಾವನೆಗಳಿಗೆ. ಈ ಭಾವನೆಗಳೇ ಸಾಂಸ್ಥೀಕರಣಕ್ಕೊಳಗಾದಾಗ ಮತಾಂಧ ಶಕ್ತಿಗಳು ಸಮಾಜದ ಮೇಲೆ ತಮ್ಮ ಆಧಿಪತ್ಯ ಸಾಧಿಸಲು ಸಾಧ್ಯವಾಗುತ್ತದೆ. ಕಾಶ್ಮೀರದ ಪಂಡಿತರು ಇಂತಹ ಮುಸ್ಲಿಂ ಮತಾಂಧ ಶಕ್ತಿಗಳ ಗುಂಡೇಟಿಗೆ ಬಲಿಯಾಗುತ್ತಿದ್ದಾರೆ. ಬಾಂಗ್ಲಾದೇಶದ ಹಿಂದೂಗಳು ಅಲ್ಲಿನ ಮತಾಂಧ ಮುಸ್ಲಿಂ ಮೂಲಭೂತವಾದಿಗಳ ಕುಕೃತ್ಯಕ್ಕೆ ಬಲಿಯಾಗುತ್ತಿದ್ದಾರೆ. ಕಾಶ್ಮೀರದ ಪಂಡಿತರು ಮತ್ತು ಬಾಂಗ್ಲಾದೇಶದ ಹಿಂದೂಗಳ ಬಗ್ಗೆ ಅನುಕಂಪ ತೋರುವ ಮನಸುಗಳಿಗೆ ಖಾನಾಪುರದ ಶಿರಚ್ಚೇದನಕ್ಕೊಳಗಾದ ಅಮಾಯಕ ಮುಸ್ಲಿಂ ಯುವಕನಾಗಲೀ, ಕರಾವಳಿಯಲ್ಲಿ ನಿರಂತರ ಹಲ್ಲೆಗೊಳಗಾಗುತ್ತಿರುವ ಮುಸ್ಲಿಂ ಬಡ ಜನತೆಯಾಗಲೀ ಕಾಣುವುದೇ ಇಲ್ಲ.
ಇದು ಭಾವನೆಗಳ ಪ್ರಪಂಚ ಸೃಷ್ಟಿಸುವ ಒಂದು ವಿಕೃತ ಸಮಾಜದ ಪರಿಣಾಮ. ಈ ಭಾವನೆಗಳು ಕೆರಳಲು ಅಥವಾ ಭಾವನೆಗಳಿಗೆ ಧಕ್ಕೆ ಉಂಟಾಗಲು ಒಂದು ಸಣ್ಣ ಘಟನೆಯೂ ಸಾಕಾಗುತ್ತದೆ. ಅಯೋಧ್ಯೆ ವಿವಾದದ ಸಂದರ್ಭಗಳಲ್ಲಿ ಮಸೀದಿಯ ಮುಂದೆ ಹಂದಿ ಮಾಂಸದ ತುಂಡು ಎಸೆಯುವ ಘಟನೆಗಳನ್ನು ಕಂಡಿದ್ದೇವೆ. ಹಾಗೆಯೇ ದೇವರ ಪ್ರತಿಮೆಗಳಿಗೆ ಚಪ್ಪಲಿ ಹಾರ ತೊಡಿಸುವ ಘಟನೆಗಳನ್ನೂ ಕಂಡಿದ್ದೇವೆ. ಬಾಂಗ್ಲಾದೇಶದಲ್ಲಿ ಈಗ ನಡೆಯುತ್ತಿರುವ ಗಲಭೆಗಳ ಮೂಲವೂ ಇದೇ ಆಗಿದೆ. ಮುಸ್ಲಿಂ ಯುವಕನೊಬ್ಬ ಪವಿತ್ರ ಖುರಾನ್ ಗ್ರಂಥವನ್ನು ಪೂಜಾ ವಿಗ್ರಹದ ಮೇಲಿರಿಸಿದ್ದು ಕೊಮಿಲಾದ ಗಲಭೆಗಳಿಗೆ, ಹತ್ಯೆಗಳಿಗೆ ಕಾರಣವಾಗಿದೆ. ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳಲು, ತಮ್ಮ ಸಾಂಸ್ಥಿಕ ಮತೀಯ ಅಸ್ಮಿತೆಯನ್ನು ರಕ್ಷಿಸಿಕೊಳ್ಳಲು ಮತೀಯ ಶಕ್ತಿಗಳಿಗೆ ಈ ಭಾವನಾತ್ಮಕ ಸನ್ನಿವೇಶಗಳಿಗೆ ಪ್ರತಿಕ್ರಯಿಸುವುದು ಅನಿವಾರ್ಯವೂ ಆಗುತ್ತದೆ. ಈ ನೆಲೆಯಲ್ಲೇ ಕರ್ನಾಟಕದ ಮುಖ್ಯಮಂತ್ರಿಗಳು ಹೇಳಿದ ‘ ಕ್ರಿಯೆ ಪ್ರತಿಕ್ರಿಯೆಯೂ ’ ಅನಾವರಣಗೊಳ್ಳುತ್ತದೆ. ಧಕ್ಕೆಗೊಳಗಾಗುವ ಭಾವನೆಗಳ ವಾರಸುದಾರರಿಗೆ ತಮ್ಮ ರಾಜಕೀಯ ಅಸ್ತಿತ್ವ ಹಾಗೂ ಸಾಮಾಜಿಕ ಸಾಂಸ್ಥಿಕ ಅಸ್ಮಿತೆಯನ್ನು ರಕ್ಷಿಸಿಕೊಳ್ಳಲು ಈ ಕ್ರಿಯೆ-ಪ್ರತಿಕ್ರಿಯೆಯ ಸಮೀಕರಣಗಲು ನೆರವಾಗುತ್ತವೆ.
ಇದರ ಒಂದು ವಿಕಾರ ಸ್ವರೂಪವನ್ನು, ವಿಶಾಲ ನೆಲೆಯಲ್ಲಿ ೨೦೦೨ರ ಗುಜರಾತ್ ಹತ್ಯಾಕಾಂಡದಲ್ಲಿ ಕಂಡಿದ್ದೇವೆ. ಆ ಸಂದರ್ಭದಲ್ಲಿ ಗುಜರಾತ್ನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಸಹ ಗೋಧ್ರಾ ಘಟನೆಯನ್ನು ಉಲ್ಲೇಖಿಸಿ ‘ ಕ್ರಿಯೆ ಪ್ರತಿಕ್ರಿಯೆ’ ಸಮೀಕರಣವನ್ನೇ ಪ್ರಸ್ತಾಪಿಸಿದ್ದನ್ನು ಸ್ಮರಿಸಬಹುದು. ಈ ಭಾವನೆಗಳ ವಾರಸುದಾರರು ಕ್ರಮೇಣ ಕೋಮುದ್ವೇಷದ ವಕ್ತಾರರಾಗಿ ರೂಪುಗೊಂಡಾಗ ಭಾವನೆಗಳೇ ನಂಬಿಕೆಗಳಾಗಿ ಪರಿಣಮಿಸುತ್ತವೆ. ಖಾನಾಪುರದ ಶಿರಚ್ಚೇದನ ಅಥವಾ ಗೌರಿ ಲಂಕೇಶ್ ಹತ್ಯೆ ಈ ಪರಾಕಾಷ್ಠೆಯ ಸ್ಪಷ್ಟ ಉದಾಹರಣೆಗಳಾಗಿ ಕಾಣುತ್ತವೆ. ೨೦೧೭ರಲ್ಲಿ ಕೇರಳದ ಜೋಸೆಫ್ ಎಂಬ ಅಧ್ಯಾಪಕರು ಪ್ರವಾದಿಯನ್ನು ಅಪಮಾನಗೊಳಿಸಿದರು ಎಂಬ ಕಾರಣಕ್ಕೆ ಮುಸ್ಲಿಂ ಮತಾಂಧರು ಅವರ ಕೈಗಳನ್ನೇ ಕತ್ತರಿಸಿದ್ದರು. ಈ ಸಾಂಸ್ಥಿಕ ಕ್ರೌರ್ಯ ಅನಾವರಣಗೊಳ್ಳುವುದು ಮತಾಂಧತೆಯ ಸಾಂಸ್ಥೀಕರಣದ ಮೂಲಕವೇ ಎನ್ನುವುದನ್ನು ಹಿಂದೂ ಮತ್ತು ಮುಸ್ಲಿಂ ಮೂಲಭೂತವಾದಿ ಸಂಘಟನೆಗಳು ತಮ್ಮ ಕೃತ್ಯಗಳ ಮೂಲಕವೇ ನಿರೂಪಿಸಿವೆ.
ಈ ವಿಕೃತ ಭಾವನೆಗಳ ಪ್ರಪಂಚವನ್ನು ಭೇದಿಸುವ ಪ್ರಯತ್ನಗಳನ್ನು ಎಲ್ಲ ಸಾಂಸ್ಥಿಕ ಮತ ಕೇಂದ್ರಗಳೂ ಮಾಡಬೇಕಲ್ಲವೇ ? ಇದು ಯಾವುದೇ ಮತಗಳ ಸಂದರ್ಭದಲ್ಲೂ ಪರಿಣಾಮಕಾರಿಯಾಗಿ ಆಗುತ್ತಿಲ್ಲ. ಮತೀಯ ಅಸ್ಮಿತೆಗಳೇ ಸಾಮಾಜಿಕ ಅಸ್ತಿತ್ವದ ಬುನಾದಿಯಾಗುವಂತಹ ಒಂದು ಪರಿಸ್ಥಿತಿಯನ್ನು ಭಾರತದಲ್ಲಿ ಹಿಂದುತ್ವ ರಾಜಕಾರಣ ಸೃಷ್ಟಿಸಿದೆ. ಕಾಶ್ಮೀರದ ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆಗಳು ಇದೇ ಹಾದಿಯಲ್ಲಿ ಸಾಗುತ್ತಲೇ ಅಲ್ಲಿನ ಕಾಶ್ಮೀರಿ ಅಸ್ಮಿತೆಯನ್ನೇ ನಗಣ್ಯ ಮಾಡಿಬಿಟ್ಟಿವೆ. ಕಾಶ್ಮೀರಿಯತ್‌ಗಾಗಿ ಹೋರಾಡುವ ಮತ್ತು ಇಂದಿಗೂ ಹೋರಾಡುತ್ತಿರುವ ಜನಸಮುದಾಯಗಳೂ ಸಹ ಈ ಮೂಲಭೂತವಾದಿಗಳ ದುಷ್ಕೃತ್ಯಗಳಿಗೆ ಬಲಿಯಾಗುತ್ತಿದ್ದಾರೆ. ಪನ್ಸಾರೆ, ಧಬೋಲ್ಕರ್, ಗೌರಿಲಂಕೇಶ್, ಕಲಬುರ್ಗಿ ಮುಂತಾದವರು ಇಂತಹ ಮತಾಂಧ ಶಕ್ತಿಗಳಿಗೇ ಬಲಿಯಾಗಿದ್ದಾರೆ. ಇಲ್ಲಿ ಅಟ್ಟಹಾಸ ಮೆರೆಯುವುದು ಧಾರ್ಮಿಕ ನಂಬಿಕೆಗಳಿಗಿಂತಲೂ ಹೆಚ್ಚಾಗಿ ಭಾವನೆಗಳು. ವ್ಯಕ್ತಿಗತವಾಗಿ, ಸಾಮುದಾಯಿಕ ನೆಲೆಯಲ್ಲಿ ಇರಬೇಕಾದ ಧಾರ್ಮಿಕ ನಂಬಿಕೆಗಳನ್ನು ಸಾಂಸ್ಥೀಕರಿಸುವ ಪ್ರಕ್ರಿಯೆಯಲ್ಲಿ ಈ ವಿಕೃತ ಭಾವನಾ ಲೋಕವೂ ಸೃಷ್ಟಿಯಾಗುತ್ತದೆ.
ಈ “,,,,,ಭಾವನೆಗಳಿಗೆ ಧಕ್ಕೆ ಉಂಟುಮಾಡಿದರೆ ಕ್ರಿಯೆಗೆ ಪ್ರತಿಕ್ರಿಯೆ ಸಹಜವಾಗಿ ಉಂಟಾಗುತ್ತದೆ, ಹಾಗಾಗದಂತೆ ಎಚ್ಚರವಹಿಸಬೇಕು ” ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳುತ್ತಾರೆ. ಎರಡೂ ಹಿಂಸಾತ್ಮಕವಾದಾಗ ಇಲ್ಲೊಂದು ಕರಾವಳಿ ಅಲ್ಲೊಂದು ಕಾಶ್ಮೀರ ಅಲ್ಲೊಂದು ಢಾಕಾ ಸೃಷ್ಟಿಯಾಗುತ್ತದೆ. ಈ ಭಾವನೆಗಳ ವಾರಸುದಾರರು ಇಡೀ ಸಮಾಜದ ಮೇಲೆ ನಿಯಂತ್ರಣ ಸಾಧಿಸಲೆತ್ನಿಸುತ್ತಾರೆ. ಉತ್ತರದಾಯಿತ್ವವಿಲ್ಲದೆಯೇ ಉತ್ತರಾಧಿಕಾರಿಗಳಂತೆ ವರ್ತಿಸುವ ಮತೀಯ ಮೂಲಭೂತವಾದಿಗಳು ಈ ಭಾವನಾ ವಲಯದಲ್ಲಿ ತಮ್ಮ ಆಧಿಪತ್ಯ ಸಾಧಿಸಲು ಸಾಧ್ಯವಾಗುತ್ತದೆ. ಭಾರತದಲ್ಲಿ ಹಿಂದೂ ಮೂಲಭೂತವಾದಿ ಸಂಘಟನೆಗಳು ಈ ನಿಟ್ಟಿನಲ್ಲಿ ಸಾಗಿವೆ. ಈ ಕ್ರಿಯೆಯನ್ನು ನಿಯಂತ್ರಿಸಲಾಗದೆ ಆಳುವ ವರ್ಗಗಳೇ ಕೈಚೆಲ್ಲಿದಾಗ ಸಾಧಾರಣ ಪ್ರತಿರೋಧವೂ ಪ್ರತಿಕ್ರಿಯೆಯಂತೆಯೇ ಕಾಣುತ್ತದೆ. ಸಾಮಾನ್ಯ ಜನತೆಯ ಈ ಸುಪ್ತ ನಂಬಿಕೆಗಳನ್ನು ಮುಕ್ತ ಭಾವನೆಗಳನ್ನಾಗಿ ಪರಿವರ್ತಿಸುವ ಮತಾಂಧ ಶಕ್ತಿಗಳಿಗೆ ಕಡಿವಾಣ ಹಾಕುವುದು ಒಂದು ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯ ಆದ್ಯತೆ ಮತ್ತು ಕರ್ತವ್ಯ.
ಭಾರತದ ದುರಂತ, ತಮ್ಮ ರಾಜಕೀಯ ಹಿತಾಸಕ್ತಿಗಳಿಗಾಗಿ ಆಳುವ ವರ್ಗಗಳು ಈ ಪ್ರಯತ್ನ ಮಾಡಲು ಪ್ರಜ್ಞಾಪೂರ್ವಕವಾಗಿಯೇ ಹಿಂಜರಿಯುತ್ತಿವೆ. ಇದರ ದುಷ್ಪರಿಣಾಮವನ್ನು ಅಮಾಯಕ ಜನರು ಅನುಭವಿಸುತ್ತಿದ್ದಾರೆ. ಧಕ್ಕೆ ಉಂಟಾಗುತ್ತಿರುವುದು ನಮ್ಮೊಳಗಿನ ಮಾನವೀಯ ಪ್ರಜ್ಞೆಗೆ, ಸಂವೇದನೆಗೆ, ವಿವೇಕ ವಿವೇಚನೆಗಳಿಗೆ ಮತ್ತು ಮನುಜ ಸೂಕ್ಷ್ಮಮತೆಗಳಿಗೆ. ಭಾವನೆಗಳ ವಾರಸುದಾರರ ವಿಕೃತಿ ಮೆರೆಯುತ್ತಿರುವಂತೆಯೇ ಸಂವೇದನಾಶೀಲ ಮಾನವೀಯ ಮೌಲ್ಯಗಳು ನಶಿಸುತ್ತಲೇ ಹೋಗುತ್ತಿದೆ. ಎಲ್ಲ ಮತಗಳ ನೇತಾರರೂ ಯೋಚಿಸಬೇಕಾದ ವಿಚಾರ ಇದು.