ಗುಡ್ಡಗಾಡು ಜಿಲ್ಲೆ ಕೊಡಗಿನಲ್ಲಿ ಸಹಕಾರ ಸಂಘಗಳು ಅದ್ಭುತ ಎನ್ನುವಂತಹ ಸಾಧನೆ ಮಾಡಿವೆ. ಇಲ್ಲಿ ರೈತಾಪಿ ವರ್ಗವೇ ಅಧಿಕವಾಗಿರುವುದರಿಂದ ಕೃಷಿಕರ ಬದುಕಿನಲ್ಲಿ ಸಹಕಾರಿ ಸಂಘಗಳು ಅವಿಭಾಜ್ಯ ಅಂಗವೇ ಅಗಿವೆ. ಜಿಲ್ಲೆಯಲ್ಲಿ ಸುಮಾರು 324 ನೋಂದಾಯಿತ ಸಹಕಾರ ಸಂಘಗಳಿದ್ದು ಇವುಗಳ ವಹಿವಾಟು ಉತ್ತಮವಾಗಿಯೇ ನಡೆಯುತ್ತಿದೆ. ಈ ಸಹಕಾರ ಸಂಘಗಳಲ್ಲಿ 17,166 ಲಕ್ಷ ರೂಪಾಯಿಗಳಷ್ಟು ಷೇರು ಬಂಡವಾಳವೂ ಇದೆ. ಕೊಡಗಿನ ಜನಸಂಖ್ಯೆ ಸುಮಾರು 6 ಲಕ್ಷ ಇದ್ದರೆ ಈ ಸಹಕಾರ ಸಂಘಗಳಲ್ಲಿ 2.83 ಲಕ್ಷ ಜನ ಸದಸ್ಯತ್ವ ಪಡೆದುಕೊಂಡಿದ್ದಾರೆ. ಬಹುತೇಕ ಜಿಲ್ಲೆಯ ಎಲ್ಲ ಸಹಕಾರ ಸಂಘಗಳೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಕೃಷಿಕರ ಜನಪ್ರಿಯ ಆರ್ಥಿಕ ನೆರವಿನ ಮೂಲಗಳೂ ಆಗಿವೆ.
ಆದರೆ ದಕ್ಷಿಣ ಕೊಡಗಿನ ವೀರಾಜಪೇಟೆ ನಗರದಲ್ಲಿ ಕಚೇರಿ ಹೊಂದಿರುವ ಕೊಡಗು ಮುಸ್ಲಿಂ ಸಹಕಾರ ಬ್ಯಾಂಕ್ ವಿರುದ್ದ ಈಗ ಸಾರ್ವಜನಿಕರ ಹಣ ವಂಚಿಸಿದ ಆರೋಪ ಕೇಳಿ ಬಂದಿದೆ. ಇಲ್ಲಿ ಖಾತೆ ಮತ್ತು ಠೇವಣಿ ಇಟ್ಟಿರುವವರೆಲ್ಲ ಬಹುತೇಕ ಬಡ ಮತ್ತು ಮದ್ಯಮ ವರ್ಗದ ಮುಸ್ಲಿಂ ಸಮುದಾಯದವರು. ಇಲ್ಲಿ ಹಣ ಇಡಲಿಕ್ಕೂ ಒಂದು ಬಲವಾದ ಕಾರಣವಿದೆ. ಅದೇನೆಂದರೆ ಈ ಬ್ಯಾಂಕು 1933 ರಲ್ಲೆ ಸ್ವಾತಂತ್ರ್ಯ ಪೂರ್ವದಲ್ಲೆ ಸ್ಥಾಪನೆ ಆಗಿತ್ತು. 88 ವರ್ಷಗಳ ಇತಿಹಾಸ ಹೊಂದಿರುವ ಈ ಬ್ಯಾಂಕ್ ವಿರುದ್ದ ಯಾವತ್ತೂ ಸಾರ್ವಜನಿಕರ ನಂಬಿಕೆಗೆ ಚ್ಯುತಿ ಆಗುವ ಸಣ್ಣ ಮಾತೂ ಕೇಳಿ ಬಂದಿರಲಿಲ್ಲ. ಇಲ್ಲಿ ಠೇವಣಿ ಇಡಲು ಮತ್ತೊಂದು ಪ್ರಮುಖ ಅಕರ್ಷಣೆಯೂ ಇದೆ. ಅದೇನೆಂದರೆ ಇತರೆ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಸಹಕಾರ ಸಂಘಗಳು ಠೇವಣಿಗಳಿಗೆ ವರ್ಷಕ್ಕೆ 6 ಪರ್ಸೆಂಟ ಬಡ್ಡಿ ಕೊಡಲು ತಿಣಕಾಡುವಾಗ ಈ ಬ್ಯಾಂಕು ಬರೋಬ್ಬರಿ 10.5 ಬಡ್ಡಿ ನೀಡುವ ಆಮಿಷ ವೊಡ್ಡಿ ಗ್ರಾಹಕರನ್ನು ಸೆಳೆಯಿತು. ಇದರಲ್ಲೆ ಮ್ಯಾನೇಜರ್ ಆಗಿದ್ದ ಮಹಿಳೆಯೊಬ್ಬರ ತಂದೆ 20 ಲಕ್ಷ ರೂಪಾಯಿ ಠೇವಣಿ ಮಾಡಿದ್ದರು. ಅದರೆ ಇಷ್ಟೊಂದು ದೊಡ್ಡ ಪ್ರಮಾಣದ ಬಡ್ಡಿಯನ್ನು ಬ್ಯಾಂಕು ಎಲ್ಲಿಂದ ಹೇಗೆ ಕೊಡುತ್ತದೆ ಎಂಬ ಕುರಿತು ಯಾವನೇ ಗ್ರಾಹಕ ತಲೆ ಕೆಡಿಸಿಕೊಳ್ಳಲಿಲ್ಲ. ಎಲ್ಲವೂ ಸುಸೂತ್ರವಾಗೇ ನಡೆಯುತಿತ್ತು. ಆದರೆ 2019-20 ರ ಆಡಳಿತ ಮಂಡಳಿಯು ಮಾತ್ರ ಠೇವಣಿದಾರರ ತಲೆಯ ಮೇಲೆ ಕಲ್ಲು ಚಪ್ಪಡಿಯನ್ನೇ ಎಳೆದು ಬಿಟ್ಟಿದೆ.
ಈ ಅವ್ಯವಾಹಾರಕ್ಕೆ ಇಲ್ಲಿ ಅದ್ಯಕ್ಷರಾಗಿ ಕಳೆದ 10 ವರ್ಷಗಳಿಂದ ಸೇವೆ ಸಲ್ಲಿಸುತಿದ್ದ ಮೊಯಿನುದ್ದೀನ್ ಮತ್ತು ಆಡಳಿತ ಮಂಡಳಿಯೇ ಕಾರಣ ಎಂದು 500 ಕ್ಕೂ ಹೆಚ್ಚು ಠೇವಣಿದಾರರು ಅರೋಪಿಸುತಿದ್ದಾರೆ. ಈ ಕುರಿತು ಮಾತನಾಡಿದ ಪತ್ರಕರ್ತ ಮತ್ತು ಠೇವಣಿದಾರ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು ಕಳೆದ ವರ್ಷದ ಮಾರ್ಚ್ ನಲ್ಲೆ ಮೊದಲ ಬಾರಿಗೆ ಇಲ್ಲಿನ ಅವ್ಯವಹಾರ ಬೆಳಿಕೆ ಬಂದಿತು ಎಂದರಲ್ಲದೆ ಠೇವಣಿ ಇಟ್ಟಿದ್ದವರಿಗೆ ಮೆಚೂರ್ ಆದರೂ ಬ್ಯಾಂಕು ಹಣ ಹಿಂತಿರುಗಿಸದೆ ಕುಂಟು ನೆಪ ಹೇಳತೊಡಗಿತು. ಕೊನೆಗೆ ಪಿಗ್ಮಿ ಕಟ್ಟಿದವರಿಗೂ ಹಣ ದೊರೆಯದಂತೆ ಆಗಿ ಬಿಟ್ಟಿತು. ಬ್ಯಾಂಕಿನ ಸಿಬ್ಬಂದಿಗಳನ್ನು ಕೇಳಿದರೆ ಹಣ ಕಡಿಮೆ ಇದೆ. ಮುಂದಿನ ತಿಂಗಳು ಹಣ ನೀಡುವ ಸಬೂಬು ಹೇಳತೊಡಗಿದರು ಎಂದರು. ಮಹೇಶ್ ಅವರು ಮಗಳ ಮದುವೆ ಗೆ ಎಂದು ಇಲ್ಲಿ 5 ಲಕ್ಷ ರೂಪಾಯಿ ಹಣ ಫಿಕ್ಸೆಡ್ ಡೆಪಾಸಿಟ್ ಮಾಡಿದ್ದರು. ಅದರೆ ಮುಂದಿನ ತಿಂಗಳು ಕೊಡುತ್ತೇವೆ, ಹಣ ಬಂದಿಲ್ಲ ಎಂದು ಸಬೂಬು ಹೇಳಿಕೊಂಡೇ ಬಂದ ಬ್ಯಾಂಕ್ ಈಗಲೂ ನಯಾಪೈಸೆ ನೀಡಿಲ್ಲ ಎಂದರು.
ಇಲ್ಲಿ ಸಾರ್ವಜನಿಕರಿಗೆ ವಂಚನೆ ಆಗಿರುವ ಹಣದ ಮೊತ್ತ ಸುಮಾರು 30 ಕೋಟಿ ರೂಪಾಯಿ ಎನ್ನಲಾಗಿದೆಯಾದರೂ ಅದಕ್ಕೆ ನಿಖರ ಮಾಹಿತಿ ಇಲ್ಲ. ಈ ವಂಚನೆಯು ಸಹಕಾರಿ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿಲ್ಲದೆ ನಡೆಯಲು ಸಾಧ್ಯವೇ ಇಲ್ಲ , ಅವರೂ ಸೇರಿದಂತೆ ಆಡಳಿತ ಮಂಡಳಿಯ ಎಲ್ಲರ ವಿರುದ್ದವೂ ಪೋಲೀಸ್ ಮೊಕದ್ದಮೆ ದಾಖಲು ಮಾಡಬೇಕು ಎಂದು ಠೇವಣಿದಾರರು ಒತ್ತಾಯಿಸುತಿದ್ದಾರೆ. ಆದರೆ ಲೆಕ್ಕ ಪರಿಶೋಧನೆ ನಡೆಯದೆ , ದುರುಪಯೋಗ ಖಚಿತವಾಗದೆ ಮೊಕದ್ದಮೆ ದಾಖಲು ಮಾಡಿಕೊಳ್ಳಲು ಅಗುವುದಿಲ್ಲ ಪೋಲೀಸ್ ಇಲಾಖೆ ಹೇಳುತ್ತಿದೆ.
ಬ್ಯಾಂಕಿನ ಲೆಕ್ಕ ಪರಿಶೋಧಕ ಮೈಸೂರಿನ ಎ.ಆರ್. ಜೋಶಿ ತನಿಖೆ ನಡೆಸುತ್ತಿದ್ದು ತನಿಖೆಗೆ ಸಂಘದ ಆಡಳಿತ ಮಂಡಳಿ ಹಾಗೂ ಕಾರ್ಯ ನಿರ್ವಹಣಾಧಿಕಾರಿ ಸಹಕರಿಸುತ್ತಿಲ್ಲ. ಈ ಕಾರಣಕ್ಕಾಗಿ ತನಿಖೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ಆಡಳಿತ ಮಂಡಳಿಗೆ ವರದಿ ನೀಡಿದ್ದು, ವರದಿಯ ಪ್ರತಿಯನ್ನು ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಿಗೆ ಹಾಗೂ ನಿರ್ದೇಶಕರಿಗೆ ಸಲ್ಲಿಸಿದ್ದಾರೆ. ಕಳೆದ ಒಂದು ವರ್ಷದ ಹಿಂದೆಯೇ ಸಂಘದ ಕಾರ್ಯ ನಿರ್ವಹಣಾಧಿಕಾರಿ ಖುದ್ದು ತನಿಖೆಗೆ ಸಹಕರಿಸಿ ದಾಖಲೆಗಳನ್ನು ಒದಗಿಸುವುದಾಗಿ ಜನವರಿಯಿಂದ ಏಪ್ರಿಲ್ 10ರ ತನಕ ಮೂರು ಬಾರಿ ದಿನಾಂಕಗಳನ್ನು ನೀಡಿದ್ದರೂ ತನಿಖೆಗೆ ಗೈರುಹಾಜರು ಹಾಗೂ ತನಿಖೆಗೆ ಆಡಳಿತ ಮಂಡಳಿಯ ನಿರ್ಲಕ್ಷ್ಯ ಕಾಣುತ್ತಿದೆ. ಮುಂದಿನ ಕ್ರಮಕ್ಕಾಗಿ ವರದಿಯನ್ನು ನಿಬಂಧಕರು, ನಿರ್ದೇಶಕರಿಗೆ ನೀಡಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ. ಲೆಕ್ಕ ಪರಿಶೋಧಕರಿಗೆ ಒದಗಿಸಿರುವ ಕೆಲವು ದಾಖಲೆಗಳಲ್ಲಿ ನ್ಯೂನತೆ ಕಂಡು ಬಂದಿದ್ದು ಸಂಘದ ಆದಾಯ, ವೆಚ್ಚ ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಮಾರ್ಚ್ 26ರೊಳಗೆ ಲೆಕ್ಕ ಪರಿಶೋಧನೆಗೆ ಅಗತ್ಯವಾದ ಎಲ್ಲ ದಾಖಲೆಗಳನ್ನು ಸರಿ ಹೊಂದಿಸಿಕೊಡುವುದಾಗಿ ಕಾರ್ಯ ನಿರ್ವಹಣಾಧಿಕಾರಿ ತಿಳಿಸಿದರೂ ಏಪ್ರಿಲ್ 10 ರತನಕ ಯಾವುದೇ ಸರಿಯಾದ ಪ್ರಮುಖ ದಾಖಲೆಯನ್ನು ಹಾಜರುಪಡಿಸದೆ ಸತಾವಣೆ ನೀಡುತ್ತಿದ್ದಾರೆ. ಆಡಳಿತ ಮಂಡಳಿಯ ಸಹಿ ಇರುವ ಸಂಘದ ಕುಳವಾರು ಪಟ್ಟಿಯ ದಾಖಲೆ ನೀಡಿಲ್ಲ. ಎಲ್ಲ ರೀತಿಯಿಂದಲೂ ಸಂಘದ ಲೆಕ್ಕ ಪರಿಶೋಧನೆಗೆ ಹಿನ್ನಡೆ ಉಂಟಾಗಿದೆ ಎಂದು ವರದಿ ತಿಳಿಸಿದೆ.
ಸಂಘದ ನಿರ್ದೇಶಕರಾಗಿರುವ ಏಜಾಜ್ ಅಹಮ್ಮದ್ ಕಳೆದ 19-20ನೇ ಸಾಲಿಗೆ ಈ ಸಂಘದಲ್ಲಿ ಪಿಗ್ಮಿ ಹಣ ಸಂಗ್ರಹ, ನಿರಖು ಠೇವಣಿ, ಷೇರು ಬಂಡವಾಳ, ಡಿ.ಸಿ.ಸಿ. ಬ್ಯಾಂಕ್ನಿಂದ ಹೊಂದಿಕೊಂಡ ಸಾಲ ರೂ. 1 ಕೋಟಿ 50 ಲಕ್ಷ, ವಾಣಿಜ್ಯ ಮಳಿಗೆಗಳ ಮುಂಗಡ ಸೇರಿದಂತೆ ಒಟ್ಟು ಆರು ಕೋಟಿ ನಗದು ಸಂಘದ ಲೆಕ್ಕದಲ್ಲಿ ವ್ಯತ್ಯಾಸ ಉಂಟಾಗಿದೆ. ಠೇವಣಿದಾರರಿಗೆ ಪಾವತಿಗೆ ಹಣವಿಲ್ಲ. ಸಂಘದಲ್ಲಿ ಸಿಬ್ಬಂದಿಗಳ ಹಾಜರಾತಿ ಸಂಖ್ಯೆ ಕಡಿಮೆಯಾಗುತ್ತಿದ್ದು ಸಂಘದ ಕಾರ್ಯನಿರ್ವಹಣಾಧಿಕಾರಿ ಮೈಸೂರಿ ನಲ್ಲಿ ಠಿಕಾಣಿ ಹೂಡಿದ್ದಾರೆ. ಇದರಲ್ಲಿ ವೀರಾಜಪೇಟೆ ಸಂಘವು ತನ್ನ ಗೋಣಿಕೊಪ್ಪ ಶಾಖೆಯಿಂದ ರೂ. 1,40,000 ಹಣ ಸಾಲ ಪಡೆದು ಈ ತನಕ ಮರುಪಾವತಿ ಮಾಡದಿರುವು ದರಿಂದ ಈ ಶಾಖೆಯು ಮುಚ್ಚುವ ಪರಿಸ್ಥಿತಿಯಲ್ಲಿದೆ. ಮುಸ್ಲಿಂ ಸಹಕಾರ ಸಂಘದ ಲೆಕ್ಕದಲ್ಲಿ ಕೋಟಿಗಟ್ಟಲೆ ಹಣ ವ್ಯತ್ಯಾಸವಾಗಿರುವುದರ ಕುರಿತು ಸಹದ್ಯೋಗಿ ನಿರ್ದೇಶಕರುಗಳು ಇದನ್ನು ಕೂಲಂಕಷ ತನಿಖೆಯಿಂದ ಬೆಳಕಿಗೆ ತಂದು ಹಣದಲ್ಲಿ ವ್ಯತ್ಯಾಸ ಮಾಡಿರುವವರ ಕುರಿತು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಮಾಜಿ ಅದ್ಯಕ್ಷ ಮೊಯಿನುದ್ದೀನ್ ಹಣ ದುರುಪಯೋಗ ಬಹಿರಂಗವಾಗುತಿದ್ದಂತೆಯೇ ಮತ್ತೋರ್ವ ನಿರ್ದೇಶಕಿ ತಸ್ಲಿಂ ಅಕ್ಥರ್ ಅವರಿಗೆ ಅದ್ಯಕ್ಷ ಸ್ಥಾನ ಹೊರಿಸಿ ಜಾರಿಕೊಂಡಿದ್ದಾರೆ. ಈ ಕುರಿತು ನೂತನ ಅಧ್ಯಕ್ಷೆ ತಸ್ಲೀಂ ಅಕ್ತರ್ ಅವರನ್ನು ಸಂಪರ್ಕಿಸಿದಾಗ ಸಂಘದಲ್ಲಿ ಸುಮಾರು ಆರು ಕೋಟಿ ಹಣ ಲೆಕ್ಕಚಾರದಲ್ಲಿ ವ್ಯತ್ಯಾಸಗೊಂಡಿ ರುವ ಕುರಿತು ತನಗೆ ಏನು ಗೊತ್ತಿಲ್ಲ. ಸಂಘದ ಹಿರಿಯ ಆಪ್ತರ ಒತ್ತಾಯದ ಮೇರೆ ನಾನು ಈ ಸಂಘದ ಅಧ್ಯಕ್ಷಳಾಗಿ 2021ರ ಜನವರಿಯಲ್ಲಿ ಅಧಿಕಾರ ವಹಿಸಿಕೊಂಡಿದ್ದೇನೆ. ಈ ಹಿಂದೆ ಸಂಘದಲ್ಲಿ ಏನು ನಡೆದಿದೆ ಎಂಬುದು ನನಗೆ ತಿಳಿದಿಲ್ಲ. ಆದರೆ ಸಂಘದ ಎಲ್ಲ ಠೇವಣಿದಾರರಿಗೆ ನ್ಯಾಯ ಸಮ್ಮತವಾಗಿ ದೊರೆಯ ಬೇಕಾದ ಹಣ ಪಾವತಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತೇನೆ. ಸಂಘದ ಕಾರ್ಯನಿರ್ವ ಹಣಾಧಿಕಾರಿಗೆ ಸಂಘದ ಲೆಕ್ಕಚಾರದ ಸಂಬಂಧದಲ್ಲಿ ತುರ್ತು ನೋಟೀಸ್ ಕಳಿಸಲಾಗಿದೆ. 19-20 ರ ಸಂಘದ ಆಡಿಟ್ಗೆ ಕಾರ್ಯನಿರ್ವಹಣಾಧಿಕಾರಿ ಸಹಕರಿಸುತ್ತಿಲ್ಲ ಎಂಬ ದೂರು ಬಂದ ಮೇಲೆ ಅಂತಿಮ ನೋಟೀಸ್ ನೀಡಲಾಗಿದೆ. ಸಂಘದ ಸದಸ್ಯರುಗಳ, ಹಿತೈಷಿಗಳ ಹಿತ ಹಾಗೂ ಠೇವಣಿಗಳ ರಕ್ಷಣೆ ಮಾಡುವುದೇ ತನ್ನ ಉದ್ದೇಶ ಎಂದು ತಸ್ಲೀಂ ಅಕ್ತರ್ ತಿಳಿಸಿದರು.
ಒಟ್ಟಿನಲ್ಲಿ ಸಂಘದ ಆಡಳಿತ ಮಂಡಳಿ , ಸಿಬ್ಬಂದಿಗಳು , ಸಹಕಾರಿ ಅಧಿಕಾರಿಗಳೆಲ್ಲರೂ ಈ ಹಗರಣದಲ್ಲಿ ಶಾಮೀಲಾಗಿ ಬಡವರ ಹಣ ನುಂಗಿ ಹಾಕಿರುವುದು ಸ್ಪಷ್ಟವಾಗಿದ್ದು ಇದು ವಾಪಾಸ್ ಬರುವ ನಂಬಿಕೆಯೇ ಇಲ್ಲದಂತಾಗಿದೆ.