(ದಿಲ್ಲಿಯ ಸ್ಟೆಫನಿ ಫೈಂಡ್ಲೇ ಮತ್ತು ಹಾಂಗ್ ಕಾಂಗ್ ನಲ್ಲಿ ಹಡ್ಸನ್ ಲಾಕೆಟ್ ಈ ಉಭಯತರ ನವೆಂಬರ್ ೧೩ˌ ೨೦೨೦ ರ ವರದಿ ಆಧಾರಿತ ವಿಶ್ಲೇಷಣೆ)
ಕಳೆದ ಏಳು ವರ್ಷಗಳಲ್ಲಿ ಭಾರತದ ಆರ್ಥಿಕತೆ ವಿಕೇಂದ್ರೀಕರಣಗೊಳ್ಳುವ ಬದಲಿಗೆ ಕೇಂದ್ರೀಕೃತಗೊಂಡಿದೆ. ಇದು ಕೆಲವೇ ಕೆಲವು ಜನರ ಕೈಯಲ್ಲಿ ಹೆಚ್ಚಿನ ಅಧಿಕಾರ ಮತ್ತು ಸಂಪತ್ತು ಸಂಗ್ರಹಗೊಂಡಿರುವುದರ ಸಂಕೇತವಾಗಿದೆ ಎಂದು ವಿಮರ್ಶಕರು ಹೇಳುತ್ತಾರೆ. ಭಾರತ ಸರಕಾರವು ೨೦೧೮ ರಲ್ಲಿ ದೇಶದ ಆರು ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ಚಾಲನೆ ನೀಡಿದಾಗ, ಉದ್ಯಮಿಗಳ ಸ್ಪರ್ಧೆಯನ್ನು ವಿಸ್ತರಿಸಲು ಕೆಲವು ನಿಯಮಗಳನ್ನು ಸಡಿಲಗೊಳಿಸಲಾಯಿತು. ವಿಮಾನ ನಿಲ್ದಾಣಗಳ ನಿರ್ವಹಣಾ ಕ್ಷೇತ್ರದಲ್ಲಿ ಯಾವುದೇ ಅನುಭವವಿಲ್ಲದ ಕಂಪನಿಗಳು ಕೂಡ ಹರಾಜಿನಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿತು. ಈ ನಿಯಮ ಬದಲಾವಣೆಯಿಂದ ಅನೂಕೂಲವಾಗಿದ್ದು ಮಾತ್ರ ಉದ್ಯಮಿ ಗೌತಮ್ ಅದಾನಿಗೆ. ಈತ ವಿಮಾನ ನಿಲ್ದಾಣಗಳನ್ನು ನಿರ್ವಹಿಸುವ ಯಾವುದೇ ಹಿನ್ನೆಲೆ ಇಲ್ಲದ ಬಿಲಿಯನೇರ್ ಕೈಗಾರಿಕೋದ್ಯಮಿಯಾಗಿ ಸರಕಾರದ ಎಲ್ಲಾ ಆರೂ ವಿಮಾನ ನಿಲ್ದಾಣಗಳನ್ನು ಗುತ್ತಿಗೆಗೆ ಪಡೆದ. ಇದು ಹೇಗೆ ಸಾಧ್ಯವಾಯಿತು ಎಂದು ಬಿಡಿಸಿ ಹೇಳುವ ಅಗತ್ಯವಿಲ್ಲ.
ಸರಕಾರದ ಈ ನಿರ್ಧಾರ ಮತ್ತು ಅದಾನಿಗೆ ವಿಮಾನ ನಿಲ್ದಾಣಗಳ ನಿರ್ವಹಣೆಯ ಜವಾಬ್ದಾರಿ ವಹಿಸಿದ ಮೇಲೆ ಅದು ವಿರೋಧ ಪಕ್ಷಗಳ ಆಕ್ರೋಶಕ್ಕೆ ಗುರಿಯಾಯಿತು. ತಿರುವನಂತಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಿಸಲು ಶ್ರೀ ಅದಾನಿ ೫೦ ವರ್ಷಗಳ ಗುತ್ತಿಗೆಯನ್ನು ಪಡೆದದ್ದು “ಲಜ್ಜೆಯ ಮತ್ತು ಕುತಂತ್ರದ ಕೃತ್ಯ” ಎಂದು ಕೇರಳದ ಹಣಕಾಸು ಸಚಿವರು ಹೇಳಿದರು. ಇದು ಕೇಂದ್ರದ ಬಿಜೆಪಿ ಸರಕಾರ ತಮ್ಮ ಪಕ್ಷದೊಂದಿದೆ ರಾಜಕೀಯ ಸಂಪರ್ಕ ಹೊಂದಿರುವ ಉದ್ಯಮಿಗಳಿಗೆ ನೀಡಿದ್ದು ಸ್ಪಷ್ಟವಾಗಿದೆ ಎನ್ನುವುದು ಕೇರಳದ ಸಚಿವರ ಟೀಕೆಯಾಗಿತ್ತು. ಮುಕ್ತ ಹರಾಜು ಪ್ರಕ್ರಿಯೆಯನ್ನು “ಪಾರದರ್ಶಕ ರೀತಿಯಲ್ಲಿ” ನಡೆಸಲಾಗಿದೆ ಎಂದು ಭಾರತದ ವಿಮಾನಯಾನ ಸಚಿವರು ಅದಕ್ಕೆ ಉತ್ತರಿಸಿದ್ದರು. ರಾತ್ರೋರಾತ್ರಿ ಗೌತಮ್ ಅದಾನಿ ದೇಶದ ಅತಿ ದೊಡ್ಡ ಖಾಸಗಿ ವಿಮಾನ ನಿಲ್ದಾಣ ನಿರ್ವಾಹಕರಲ್ಲಿ ಒಬ್ಬರಾದರು. ಅವರು ಈಗ ಅತಿದೊಡ್ಡ ಖಾಸಗಿ ಬಂದರುಗಳ ನಿರ್ವಾಹಕರು ಮತ್ತು ಉಷ್ಣ ವಿದ್ಯುತ್ ಉತ್ಪಾದಕರೂ ಆಗಿದ್ದಾರೆ.
ಕೆಲವೆ ದಿನಗಳಲ್ಲಿ ಅದಾನಿ ಅವರು ಭಾರತದ ವಿದ್ಯುತ್ ಪ್ರಸರಣ ಮತ್ತು ಅನಿಲ ವಿತರಣಾ ಮಾರುಕಟ್ಟೆಗಳಲ್ಲಿ ಅತ್ಯಂತ ಹೆಚ್ಚಿನ ಶೇರನ್ನು ಹೊಂದಿದ್ದು ಇತ್ತೀಚಿನ ವರ್ಷ ಅವರ ನವೀಕರಿಸಬಹುದಾದ ಆರ್ಮ್ ಅದಾನಿ ಗ್ರೀನ್ ಎನರ್ಜಿಯು ೮GW ಸಾಮರ್ಥ್ಯದ ಸೌರ ಸ್ಥಾವರಗಳನ್ನು ನಿರ್ಮಿಸಲು ೬ ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿತು. ಇದು ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಯೋಜನೆಗಳಲ್ಲಿ ಒಂದಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿಯ ಜೊತೆಗೆ, ಗೌತಮ್ ಅದಾನಿ ಕೆಲವೆ ದಿನಗಳಲ್ಲಿ ಸ್ಪರ್ಧೆಗಿಳಿದು ದೇಶದ ಅತ್ಯಂತ ಎದ್ದು ಕಾಣುವ ಉದ್ಯಮಿಗಳಲ್ಲಿ ಒಬ್ಬರಾದರಷ್ಟೆ ಅಲ್ಲದೆ ಕೆಲವೆ ದಿನಗಳಲ್ಲಿ ಜಗತ್ತಿನ ಅತ್ಯಂತ್ರ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದರು. ೨೦೧೪ ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಅದಾನಿಯ ಸಾಮ್ರಾಜ್ಯ ವಿಸ್ತಾರಗೊಂಡಿತು. ಮೋದಿ ಹಾಗು ಅಂಬಾನಿಯವರಂತೆ ಅದಾನಿ ಕೂಡ ಗುಜರಾತಿ ಎನ್ನುವುದು ಗಮನಾರ್ಹ. ಅದಾನಿ ಮೊದಲಿನಿಂದಲೂ ಮೋದಿ ಮತ್ತು ಅವರ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಪ್ರಮುಖ ಬೆಂಬಲಿಗರು.
೨೦೧೪ ರಲ್ಲಿ ಮೋದಿ ಅಧಿಕಾರ ವಹಿಸಿಕೊಂಡಾಗ, ಅವರು ಗುಜರಾತ್‌ನಿಂದ ಅದಾನಿಯ ಖಾಸಗಿ ಜೆಟ್‌ನಲ್ಲಿ ರಾಜಧಾನಿ ದೆಹಲಿಗೆ ಪ್ರಯಾಣಿಸಿದರು. ಇದು ಅವರ ನಡುವಿನ ಸ್ನೇಹದ ಮುಕ್ತ ಪ್ರದರ್ಶನ ಎಂಬುದು ಜನರಿಗೆ ಮನವರಿಕೆಯಾಯಿತು. ಮೋದಿ ಅಧಿಕಾರಕ್ಕೆ ಬಂದ ನಂತರ, ಅದಾನಿಯವರ ವ್ಯವಹಾರದ ನಿವ್ವಳ ಮೌಲ್ಯವು ಸುಮಾರು ೨೩೦ ಪ್ರತಿಶತದಷ್ಟು ಹೆಚ್ಚಿ $೨೬ ಬಿಲಿಯನ್‌ಗೆ ಏರಿಕೆಯಾಯಿತುˌ ಏಕೆಂದರೆ ದೇಶಾದ್ಯಂತ ಮೂಲಸೌಕರ್ಯ ಯೋಜನೆಯ ಎಲ್ಲಾ ಬಗೆಯ ಸರಕಾರಿ ಟೆಂಡರ್‌ಗಳನ್ನು ಅದಾನಿ ಗೆದ್ದುಕೊಂಡರು. ಆದರೆ ಕೊರೋನ ಸಾಂಕ್ರಾಮಿಕದಿಂದ ದೇಶ ಎದುರಿಸಿದ ತೀವ್ರ ಆರ್ಥಿಕ ಆಘಾತವನ್ನು ಸರಿದೂಗಿಸಲು ಸರಕಾರ ತನ್ನ ಖಾಸಗೀಕರಣದ ಪ್ರಕ್ರೀಯೆಯನ್ನು ವೇಗಗೊಳಿಸುತ್ತಿದ್ದಂತೆ, ಅದಾನಿಯ ಸಾಮ್ರಾಜ್ಯ ನಾಯಿಕೊಡೆಯಂತೆ ಬೆಳೆಯಿತು. ಈ ಬೆಳವಣಿಗೆಯು ಮಧ್ಯಮ ವರ್ಗದ ಜನರ ಬದುಕನ್ನು ಬಲಿಪಡೆದು ದೇಶದ ಸಂಪತ್ತು ಬಿಜೆಪಿ ಬೆಂಬಲಿಗ ಕೆಲವೇ ಕೆಲವು ಕಾರ್ಪೊರೇಟ್ ಟೈಟಾನ್‌ಗಳ ಕೈಯಲ್ಲಿ ಕೇಂದ್ರೀಕೃತಗೊಳಿಸಲಾಗುತ್ತಿದೆ ಎನ್ನುವ ಟೀಕೆಗೆ ಗುರಿಯಾಯಿತು. ದಕ್ಷಿಣ ಕೊರಿಯಾದಲ್ಲಿ ಚೇಬೋಲ್ ಅವರು ಅಲ್ಲಿನ ಯುದ್ದದ ನಂತರ ಕೈಕೊಂಡ ಆರ್ಥಿಕ ನಿರ್ಧಾರಗಳ ಮಾದರಿಯಂತೆ, ಕುಟುಂಬ-ಚಾಲಿತ ಸಂಘಟಿತ ಸಂಸ್ಥೆಗಳಲ್ಲಿ ಆರ್ಥಿಕ ಶಕ್ತಿಯ ಕೇಂದ್ರೀಕರಣವು ಭಾರತದ ಆರ್ಥಿಕ ಅಭಿವೃದ್ಧಿಯನ್ನು ವೇಗಗೊಳಿಸಬಲ್ಲುದು ಎಂದು ಮೋದಿ ಬೆಂಬಲಿಗರು ವಾದಿಸುತ್ತಾರೆ. ಆದರೆ ದೇಶದ ಸ್ವತ್ತುಗಳ ಕ್ಷಿಪ್ರ ಕ್ರೋಢೀಕರಣವು ಉದ್ಯಮ ಮತ್ತು ಸಂಪತ್ತಿನ ಏಕಸ್ವಾಮ್ಯವನ್ನು ಸೃಷ್ಟಿಸುತ್ತಿದೆ ಮತ್ತು ನ್ಯಾಯಯುತ ಸ್ಪರ್ಧೆಯನ್ನು ಉಸಿರುಗಟ್ಟಿಸುತ್ತಿದೆ ಎಂದು ಆರ್ಥಿಕ ವಿಮರ್ಶಕರು ಅಭಿಪ್ರಾಯಪಡುತ್ತಾರೆ.
“ಭಾರತವು ಪೂರ್ವ ಏಷ್ಯಾದ ಮಾದರಿಯತ್ತ ಸಾಗಲಿದೆಯೆ ಅಥವಾ ರಷ್ಯಾದ ಮಾದರಿಯತ್ತ ಸಾಗಲಿದೆಯೇ ಎನ್ನುವ ಪ್ರಶ್ನೆಗೆ ರಷ್ಯಾ ಮಾದರಿಯತ್ತ ಭಾರತ ಸಾಗುತ್ತಿದೆ ಎಂದು ದಿಲ್ಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಾರ್ವಜನಿಕ ನೀತಿಯ ಸಹಾಯಕ ಪ್ರಾಧ್ಯಾಪಕ ರೋಹಿತ್ ಚಂದ್ರ ಅಭಿಪ್ರಾಯ ವ್ಯಕ್ತಪಡಿಸಿದ ಬಗ್ಗೆ ವರದಿಗಳಾಗಿವೆ. ಭಾರತದಲ್ಲಿ ಬಂಡವಾಳದ ಕೇಂದ್ರೀಕರಣವು ಭಾರತೀಯ ಗ್ರಾಹಕರ ದೀರ್ಘಾವಧಿಯ ಪ್ರಯೋಜನಕ್ಕೆ ಕಾರಣವಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎನ್ನುವ ಅಭಿಪ್ರಾಯ ರೋಹಿತ್ ಚಂದ್ರ ಅವರು ವ್ಯಕ್ತಪಡಿಸಿದ್ದಾರಂತೆ. ಭಾರತದ ಕೈಗಾರಿಕೀಕರಣವು ೨೦ ನೇ ಶತಮಾನದ ಆರಂಭದಲ್ಲಿ ತೈಲ ಉದ್ಯಮಿ ಜಾನ್ ಡಿ ರಾಕ್‌ಫೆಲ್ಲರ್ ರ ಮಾದರಿಯಿಂದ ವ್ಯಾಪಕವಾಗಿ ಪ್ರಭಾವಿಸಿತ್ತು ಅಥವಾ ೧೯೯೦ ರ ದಶಕದಲ್ಲಿ ರಷ್ಯಾದ ನೀತಿಯು ಅಮೆರಿಕೆಯನ್ನು ಹೋಲುವಂತೆ ಮಾಡತು ಎನ್ನಲಾಗುತ್ತದೆ. ಅದಾನಿ ಅವರ ಡೀಲ್ ಮೇಕಿಂಗ್ ಮತ್ತು ರಾಜಕೀಯ ಪ್ರವೃತ್ತಿಯ ಹೊಟ್ಟೆಬಾಕತನವು ಅವರು ಭಾರತದ ಆರ್ಥಿಕತೆಯ ಜೊತೆಗೆ ಆಟವಾಡುವುದನ್ನು ಖಾತ್ರಿಪಡಿಸಿದೆ ಎನ್ನುವುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ. “ಇತ್ತೀಚಿಗೆ ಗೌತಮ್ ಅದಾನಿಯು ಅತ್ಯಂತ ಶಕ್ತಿಶಾಲಿ ಉದ್ಯಮಿಯಾಗಿ ಹೊರಹೊಮ್ಮಿದ್ದು ಅವರು ರಾಜಕೀಯವಾಗಿ ಮೋದಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಮತ್ತು ಆ ರಾಜಕೀಯ ಶಕ್ತಿಯನ್ನು ಸಮರ್ಪಕವಾಗಿ ಬಳಸುವಲ್ಲಿ ಬಹಳ ಚಾಣಾಕ್ಷರು. ಆದ್ದರಿಂದ ಗೌತಮ್ ಅದಾನಿಯವರನ್ನು ಮೋದಿಯವರ ರಾಕ್‌ಫೆಲ್ಲರ್ ” ಎಂದು ಭಾರತದ ಬೆಳವಣಿಗೆಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿರುವ ಆಸ್ಟ್ರೇಲಿಯಾ ಮೂಲದ ಎನರ್ಜಿ ವಿಶ್ಲೇಷಕ ಟಿಮ್ ಬಕ್ಲೆ ಹೇಳಿರುವ ಬಗ್ಗೆ ಆರ್ಥಿಕ ಸಮೀಕ್ಷಾ ವರದಿಗಳು ದಾಖಲಿಸಿವೆ. ಈ ತರಹದ ಆರ್ಥಿಕ ಸಮೀಕ್ಷಕರ ಅಭಿಪ್ರಾಯಗಳಿಗೆ ಪ್ರತಿಕ್ರಿಯಿಸಲು ಅದಾನಿ ಗ್ರೂಪ್ ನಿರಾಕರಿಸಿದೆಯಂತೆ.

೨೦೦೩ ರಲ್ಲಿ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ ತಮ್ಮ ಸ್ಥಾನವನ್ನು ಅನೇಕ ಬಗೆಯಲ್ಲಿ ಭದ್ರಪಡಿಸಿಕೊಳ್ಳುವಲ್ಲಿ ಅದಾನಿಯ ಸಂಪೂರ್ಣ ಬೆಂಬಲವಿತ್ತು ಎನ್ನಲಾಗಿದೆ. ಅಲ್ಲಿಂದ ಅದಾನಿಯವರ ಸಾಮ್ರಾಜ್ಯವು ಉಲ್ಕೆಯಂತೆ ಏರಿಕೆಯಾಗಲು ಪ್ರಾರಂಭವಾಯಿತು. ಆ ಸಮಯದಲ್ಲಿ, ಗುಜರಾತ್ ನರಮೇಧಮನ್ನು ನಿಯಂತ್ರಿಸಲು ವಿಫಲರಾಗಿದ್ದಕ್ಕೆ ಮೋದಿ ಎಲ್ಲರ ಟೀಕೆಗೊಳಗಾಗಿದ್ದರು. ಆ ಗಲಭೆಯು ೧,೦೦೦ ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿತ್ತು ಮತ್ತು ಸತ್ತವರಲ್ಲಿ, ಹೆಚ್ಚಿನವರು ಮುಸ್ಲಿಮರಾಗಿದ್ದರು. ಆ ಕಾರಣದಿಂದ ಮೋದಿಯನ್ನು ಜಾಗತಿಕವಾಗಿ ದೂರವಿಡಲಾಗಿತ್ತು. ಸುಮಾರು ಒಂದು ದಶಕದ ಅವಧಿಗೆ ಅಂದರೆ ಅವರು ಪ್ರಧಾನಿಯಾಗುವವರೆಗೆ ಅವರ ಅಮೆರಿಕ ಭೇಟಿಯನ್ನು ನಿಷೇಧಿಸಲಾಗಿತ್ತು. ಮೋದಿಯ ಸಹಾಯದಿಂದ ಅದಾನಿ ಚಿಗುರೊಡೆದರುˌ ಅದಾನಿಯ ಸಹಾಯದಿಂದ ಮೋದಿ ಬೆಳೆದರು. ಗುಜರಾತಿ ಉದ್ಯಮಿ ಅದಾನಿ ಈಗ ತಮ್ಮ ಉದ್ಯಮದ ರೆಕ್ಕೆಗಳನ್ನು ಎಲ್ಲಾ ಕಡೆಗಳಲ್ಲಿ ಹರಡಿದ್ದಾರೆ. ಅದಾನಿ, ಪ್ರಾಚೀನ ಭಾರತೀಯ ರಾಜವಂಶಗಳ ಶ್ರೇಣಿಯಲ್ಲಿ ನಿಲ್ಲುವಂತೆ ಬೆಳೆದವರು. ಅದಾನಿಯವರು ಎಂಟು ಜನರಿರುವ ತುಂಬು ಕುಟುಂಬದಲ್ಲಿ ಜನಿಸಿದ, ಜೈನ ಧರ್ಮಕ್ಕೆ ಸೇರಿದ ವ್ಯಕ್ತಿಯಾಗಿದ್ದಾರೆ. ಕಾಲೇಜು ಶಿಕ್ಷಣ ಅರ್ಧಕ್ಕೆ ನಿಂತಾದ ಮೇಲೆ ಅವರು ಮುಂಬೈನಲ್ಲಿ ವಜ್ರ ಉದ್ಯಮದ ಮೂಲಕ ವೃತ್ತಿಜೀವನವನ್ನು ಆರಂಭಿಸಿˌ ಆನಂತರ ಅವರು ಪ್ಲಾಸ್ಟಿಕ್ ಆಮದು ವ್ಯವಹಾರ ಆರಂಭಿಸಿ ತಮ್ಮ ಉದ್ಯಮಕ್ಕೆ ಸಂಘಟಿತ ಅಡಿಪಾಯವನ್ನು ಹಾಕುತ್ತಾರೆ.
೧೯೯೦ ರ ದಶಕದಲ್ಲಿ ಅದಾನಿಯವರು ಅರಬ್ಬಿ ಸಮುದ್ರದ ಮ್ಯಾಂಗ್ರೋವ್-ರೇಖೆಯ ಗುಜರಾತ್ ಕರಾವಳಿಯಲ್ಲಿರುವ ಮುಂದ್ರಾ ಬಂದರನ್ನು ನಿರ್ವಹಿಸುವ ಹಕ್ಕನ್ನು ಪಡೆದುಕೊಂಡರು. ಅದಾನಿಯವರು ಬಂದರಿನ ಟರ್ಮಿನಲ್‌ಗಳನ್ನು ವಿಸ್ತರಿಸಿದರು. ಅದರಂತೆ ಅವರು ಭಾರತದ ಇತರ ಬಂದರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಅಭಿವೃದ್ಧಿಪಡಿಸಲು ಭಾರತೀಯ ಅಧಿಕಾರಶಾಹಿಯ ಜೊತೆಗೆ ಚೌಕಾಸಿ ಮಾಡಲು ನಗದು ಮತ್ತು ಉಡುಗೊರೆಯ ಮಾದರಿಯನ್ನು ಬಳಸಿಕೊಂಡರು. ಅಲ್ಲಿಂದೀಚೆಗೆ, ಅವರು ಪಿಟ್-ಟು-ಪ್ಲಗ್ ಲಂಬವಾಗಿ ಸಂಯೋಜಿತ ವಿದ್ಯುತ್ ಸರಬರಾಜು ಸರಪಳಿಯನ್ನು ನಿರ್ಮಿಸಲು ದೊಡ್ಡ ಪ್ರಮಾಣದ ಸಾಲವನ್ನು ತೆಗೆದುಕೊಂಡರು. ಹಿಮಾಚಲ ಪ್ರದೇಶದ ಗುಡ್ಡಗಾಡು ರಾಜ್ಯಗಳಲ್ಲಿನ ದತ್ತಾಂಶ ಕೇಂದ್ರಗಳಿಗೆ ಮತ್ತು ಸೇಬು ತೋಟಗಳಿಗೆ ರಕ್ಷಣೆಯನ್ನು ಒದಗಿಸುವ ವ್ಯವಹಾರಗಳನ್ನು ನಿರ್ಮಿಸಿದರು. ಇತ್ತೀಚಿನ ವರೆಗೆ $೭.೮ ಬಿಲಿಯನ್ ಮೌಲ್ಯದ ಬಾಂಡ್‌ಗಳು ಮತ್ತು $೨೨.೩ ಬಿಲಿಯನ್ ಸಾಲವನ್ನು ಒಳಗೊಂಡಂತೆ ಡೀ-ಲಾಜಿಕ್‌ನ ಮಾಹಿತಿಯ ಪ್ರಕಾರ, ಅದಾನಿ ಗ್ರೂಪ್‌ನ ಒಟ್ಟು ಬಾಕಿ ಸಾಲವು ನವೆಂಬರ್ ೧೧ˌ ೨೦೨೦ ರ ಹೊತ್ತಿಗೆ $೩೦ ಬಿಲಿಯನ್ ಗಿಂತ ಹೆಚ್ಚಿದೆ. ಉದ್ಯಮಿಗಳಿಗೆ ನೀಡುವ ಈ ಪ್ರಮಾಣದ ಹೆಚ್ಚಿನ ಸಾಲವು ಭಾರತೀಯ ಸಂಘಟಿತ ಸಂಸ್ಥೆಗಳಲ್ಲಿ ಹೊಸದೇನಲ್ಲವಾದರೂˌ ಅದಾನಿ ಸಮೂಹದ ತ್ವರಿತ ವಿಸ್ತರಣೆಯು ಆರ್ಥಿಕ ವಿಮರ್ಶಕರಲ್ಲಿ ಮತ್ತು ಸಾರ್ವಜನಿಕರಲ್ಲಿ ಅತ್ಯಂತ ಕಳವಳವನ್ನು ಉಂಟುಮಾಡಿದ್ದು ನಿಜ.
೨೦೧೫ ರ “ಹೌಸ್ ಆಫ್ ಡೆಟ್” ವರದಿಯಲ್ಲಿ ಅದಾನಿ ಗ್ರೂಪ್ “ತೀವ್ರ ಒತ್ತಡ” ದಲ್ಲಿ ೧೨ ಪ್ರತಿಶತದಷ್ಟು ಬ್ಯಾಂಕಿಂಗ್ ವಲಯದ ಸಾಲಗಳನ್ನು ಹೊಂದಿರುವ ೧೦ ಸಂಘಟಿತ ಸಂಸ್ಥೆಗಳಲ್ಲಿ ಒಂದಾಗಿದೆ ಎಂದು ಕ್ರೆಡಿಟ್ ಸ್ಯೂಸ್ ಎಚ್ಚರಿಸಿತ್ತು. ಆದರೂ ಅದಾನಿ ಗ್ರೂಪ್ ಸಾಗರೋತ್ತರ ಸಾಲದಾತರಿಂದ ಎರವಲು ಪಡೆಯುವ ಮೂಲಕ ಮತ್ತು ಹಸಿರು ಶಕ್ತಿಗೆ ಪಿವೋಟ್ ಮಾಡುವ ಮೂಲಕ ಹಣವನ್ನು ಸಂಗ್ರಹಿಸಲು ಸಮರ್ಥವಾಗಿದೆ ಎಂದು ವಾದಿಸಲಾಗಿತ್ತು. “ಪ್ರಬಲ ರಾಜಕೀಯ ಸಂಪರ್ಕ ಹೊಂದಿರುವ ಗುಂಪುಗಳು ಇನ್ನೂ ಹೆಚ್ಚಿನ ಸಾಲಕ್ಕಾಗಿ ಬ್ಯಾಂಕ್‌ಗಳನ್ನು ಟ್ಯಾಪ್ ಮಾಡಬಹುದು” ಎಂದು ಮುಂಬೈ ಮೂಲದ ಬ್ಯಾಂಕಿಂಗ್ ವಿಶ್ಲೇಷಕ ಹೇಮಿಂದ್ರ ಹಜಾರಿ ಅಭಿಪ್ರಾಯ ಪಟ್ಟಿರುವ ವರದಿಗಳು ಹೊರಬಂದಿವೆ. ಬ್ಲೂಮ್‌ಬರ್ಗ್‌ನ ವಿಶ್ಲೇಷಣೆಯ ಪ್ರಕಾರ, ಸೌರ ಘಟಕದಲ್ಲಿ ಅದಾನಿಯವರ ವೈಯಕ್ತಿಕ ಪಾಲು $೧೩.೯ ಬಿಲಿಯನ್ ಮೌಲ್ಯದ್ದಾಗಿದೆ. ಇತ್ತೀಚಿಗೆ ಅದಾನಿ ಇಟಾಲಿಯನ್ ಅನಿಲ ಮತ್ತು ಮೂಲಸೌಕರ್ಯ ಗುಂಪು ಸ್ನಾಮ್‌ನೊಂದಿಗೆ ಹೈಡ್ರೋಜನ್ ಮತ್ತು ಜೈವಿಕ ಅನಿಲದಲ್ಲಿ ಕಾರ್ಯತಂತ್ರದ ಸಹಯೋಗವನ್ನು ಹೊಂದಿದ್ದಾರೆ.
ಅದಾನಿ ಸಾಮ್ರಾಜ್ಯದ ಆರೋಹಣವು ಅನೇಕ ಆರ್ಥಿಕ ವಂಚನೆ ಮತ್ತು ಪರಿಸರ ದುರುಪಯೋಗದವರೆಗೆ ಅಸಂಖ್ಯಾತ ವಿವಾದಗಳು ಮತ್ತು ಆರೋಪಗಳಿಂದ ಪೀಡಿತವಾಗಿದ್ದು ಸುಳ್ಳಲ್ಲ. ೨೦೨೦ ರ ಫೆಬ್ರವರಿಯಲ್ಲಿ, ಕಾರ್ಮೈಕಲ್ ಗಣಿ ಸ್ಥಳದಲ್ಲಿ ಭೂಮಿಯನ್ನು ತೆರವುಗೊಳಿಸುವ ಕುರಿತು ಆಸ್ಟ್ರೇಲಿಯಾದ ಪರಿಸರ ಅಧಿಕಾರಿಗಳನ್ನು ತಪ್ಪುದಾರಿಗೆಳೆದಿದ್ದಕ್ಕಾಗಿ ಅದಾನಿ ಉದ್ಯಮ ತಪ್ಪೊಪ್ಪಿಕೊಂಡಿತ್ತು ಮತ್ತು ೨೦ˌ೦೦೦ ಆಸ್ಟ್ರೇಲಿಯನ್ ಡಾಲರ್ ದಂಡವನ್ನು ಕಟ್ಟಿತ್ತು.
ಇದರ ಜೊತೆಗೆˌ ಇತರ ಕಂಪನಿಗಳ ಜೊತೆಗೆ, ಇಂಡೋನೇಷ್ಯಾದಿಂದ ಶತಕೋಟಿ ಡಾಲರ್ ಮೌಲ್ಯದ ಕಲ್ಲಿದ್ದಲು ಆಮದುಗಳನ್ನು ಅತಿಯಾಗಿ ಇನ್‌ವಾಯ್ಸ್ ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ಭಾರತದ ಕಂದಾಯ ಗುಪ್ತಚರ ನಿರ್ದೇಶನಾಲಯವು ಅದಾನಿ ಉದ್ಯಮದ ಮೇಲೆ ತನಿಖೆ ನಡೆಸುತ್ತಿದೆ. ಅದಾನಿ ಸಮೂಹವು ಅತಿಯಾದ ಮೌಲ್ಯಮಾಪನದ ಆರೋಪಗಳನ್ನು ಬಲವಾಗಿ ನಿರಾಕರಿಸುತ್ತಲೆ ಬರುತ್ತಿದೆ. ಬಾಂಗ್ಲಾದೇಶ ಮತ್ತು ಭಾರತದ ಇತರ ಸ್ಥಾವರಗಳಿಗಿಂತ ಅದಾನಿ ಪವರ್ˌ ಗ್ರಾಹಕರಿಗೆ ಗೊಡ್ಡಾದ ವಿದ್ಯುತ್‌ಗೆ ಹೆಚ್ಚು ಶುಲ್ಕ ವಿಧಿಸುತ್ತದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ. ರಾಜ್ಯ ಅಕೌಂಟೆಂಟ್ ಜನರಲ್ ಕಚೇರಿಯು ಸೋರಿಕೆಯಾದ ಆಡಿಟ್ ವರದಿಯಲ್ಲಿ ಈ ಕುರಿತು ಎಚ್ಚರಿಸಿದೆ. ೨೦೧೯ ರಲ್ಲಿ ಮೋದಿ ಆಡಳಿತದ ಮೊದಲ ಅವಧಿಯ ಕೊನೆಯ ತಿಂಗಳುಗಳಲ್ಲಿ, ಸರಕಾರ ಅದಾನಿ ಸ್ಥಾವರವನ್ನು ವಿಶೇಷ ಆರ್ಥಿಕ ವಲಯವೆಂದು ಘೋಷಿಸಿಕೊಳ್ಳಲು ಹಸಿರು ನಿಶಾನೆ ನೀಡಿತು. ಈ ನಿರ್ಧಾರವು ಗಮನಾರ್ಹ ತೆರಿಗೆ ಪ್ರಯೋಜನಗಳನ್ನೊಳಗೊಂಡಿದೆ. ಮುಂದ್ರಾ ಬಂದರಿನ ನಂತರ ಗೊಡ್ಡಾ ಯೋಜನೆ ಅದಾನಿಯವರ ಎರಡನೇ ವಿಶೇಷ ಆರ್ಥಿಕ ವಲಯವಾಯಿತು. ಅದಾನಿ ಪವರ್ ಉದ್ಯಮವು ಖಾಸಗಿ ಬಳಕೆಗಾಗಿ ಗೊಡ್ಡಾ ನಿರ್ಮಿಸಿದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ ಮತ್ತು ಆ ಪ್ರದೇಶದಲ್ಲಿ ವಾಸಿಸುವ ಬುಡಕಟ್ಟು ಗುಂಪುಗಳನ್ನು ರಕ್ಷಿಸುವ ಮಾಲೀಕತ್ವದ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಪ್ರತಿಪಕ್ಷಗಳು ಜಾರ್ಖಂಡ್ ಹೈಕೋರ್ಟ್‌ನಲ್ಲಿ ರಾಜ್ಯ ಸರಕಾರದ ವಿರುದ್ಧ ಅರ್ಜಿ ಸಲ್ಲಿಸಿವೆ.
ಅದಾನಿ ಪವರ್ˌ ಗೊಡ್ಡಾ ನಿರ್ಮಿಸಲು ಭೂಮಿಯನ್ನು ಬಳಸುವುದು “ಸಂಪೂರ್ಣವಾಗಿ ಅಕ್ರಮ, ಅನೂರ್ಜಿತ ಮತ್ತು ಅನಿಯಂತ್ರಿತ” ಎಂದು ರಾಂಚಿ ಮೂಲದ ಮಾನವ ಹಕ್ಕುಗಳ ವಕೀಲ ಸೋನಾಲ್ ತಿವಾರಿ ವಾದಿಸಿದ್ದಾರೆ. “ಯೋಜನೆಯ ಇಡೀ ಲಾಭ ಅದಾನಿಗೆ ಹೋಗುತ್ತದೆ, ಗೊಡ್ಡಾದ ಜನರಿಗೆ ಏನೂ ಸಿಗುವುದಿಲ್ಲ” ಎಂದು ಆರೋಪಿಸಲಾಗಿದೆ. ಭೂಸ್ವಾಧೀನದಲ್ಲಿ ಆಗಿವೆ ಎನ್ನಲಾದ ಅವ್ಯವಹಾರಗಳ ಆರೋಪಗಳನ್ನು ಅದಾನಿ ಪವರ್ ನಿರಾಕರಿಸಿದೆ. ಇಂಧನ ನೀತಿ ನಿಯಮಗಳು ಅಥವಾ ನಿಬಂಧನೆಗಳನ್ನು ಬದಲಾಯಿಸಲು ಜಾರ್ಖಂಡ್ ಸರ್ಕಾರಕ್ಕೆ ಯಾವುದೇ ವಿನಂತಿಗಳನ್ನು ಮಾಡಿಲ್ಲ ಎಂದು ಅದು ಹೇಳಿಕೊಂಡಿದೆ. ಕೊರೋನ ಸಂಕಷ್ಟದ ಕಾಲದಲ್ಲಿ ಭಾರತದ ಆರ್ಥಿಕತೆ ಕುಸಿದರೆˌ ಅದಾನಿ ಸಮೂಹ ಉದ್ಯಮ ವಿಸ್ತರಣೆಗೊಂಡಿದೆ. ಈಗ ಅದಾನಿಯ ಮೋಸದ ಹಾಗು ವಂಚನೆಯ ದಂಧೆ ಬಯಲುಗೊಂಡಿದೆ. ಆರ್ಥಿಕ ರಾಮ್ರಾಜ್ಯ ಕುಸಿಯಲಾರಂಭಿಸಿದೆ. ಮೋದಿ ೨೦೨೪ ರ ಚುನಾವಣೆಯಲ್ಲಿ ಸೋತರೆ, ಅದಾನಿಯ ಸಾಮ್ರಾಜ್ಯ ಮುಳುಗಲಿದೆ ಎನ್ನುತ್ತಾರೆ ಮುಂಬೈನಲ್ಲಿ ಹೂಡಿಕೆ ವಿಶ್ಲೇಷಕರೊಬ್ಬರು. ಹಿಂಡೆನ್ಬರ್ಗ್ ರಿಸರ್ಚ್ ಬಯಲುಗೊಳಿಸಿದ ಅದಾನಿಯ ವಂಚಕ ದಂಧೆ ಆತನ ಉದ್ಯಮವು ನಾಶದೆಡೆಗೆ ಚಲಿಸುವಂತೆ ಮಾಡಿದ್ದು ಸುಳ್ಳಲ್ಲ. ಸತ್ಯದ ಬುನಾದಿ ಇಲ್ಲದ ಕಟ್ಟಡವು ಬೇಗ ಕುಸಿಯುತ್ತದೆ ಎನ್ನಲು ಅದಾನಿ ಉತ್ತಮ ಉದಾಹರಣೆಯಾಗಬಲ್ಲರು. ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಹಿತಿ ನೀಡುವೆ.

