ಯುಗಾದಿ ಹಬ್ಬ ಬಂತು ಎಂದು ಸಂಭ್ರಮಿಸುವ ಹೊತ್ತಲ್ಲ ಇದು. ಏಕೆಂದರೆ ನಿಮ್ಮ ತಲೆ ಮೇಲಿನ ನಿಮ್ಮದಲ್ಲದ ತಪ್ಪಿನ ನಿಮ್ಮದೇ ಜವಾಬ್ದಾರಿಯ ಸಾಲದ ಹೊರೆ ಹೆಚ್ಚುತ್ತಲೇ ಇದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಳೆದ 2020 ಯುಗಾದಿಯಿಂದ ಈ ಯುಗಾದಿವರೆಗೆ ಮಾಡಿರುವ ಸಾಲದ ಮೊತ್ತವು 26,37,873.36 ಕೋಟಿ ರೂಪಾಯಿಗಳು.
ದೇಶದ ಒಟ್ಟು ಸಾಲವು 2020 ಮಾರ್ಚ್ ಅಂತ್ಯಕ್ಕೆ 109,50,019.80 ಕೋಟಿ ರೂಪಾಯಿಗಳಷ್ಟಿತ್ತು. 2022 ಮಾರ್ಚ್ ಅಂತ್ಯಕ್ಕೆ ಈ ಮೊತ್ತವು 135,87,893.16 ಕೋಟಿ ರೂಪಾಯಿಗಳಿಗೆ ಏರಿದೆ. ಅಂದರೆ ಎರಡೇ ವರ್ಷದಲ್ಲಿ ಆಗಿರುವ ಸಾಲದ ಮೊತ್ತ 26,37,873.36 ಕೋಟಿ ರೂಪಾಯಿಗಳು. 2021ರ ಒಂದೇ ವರ್ಷದಲ್ಲಿ 14,65,016.28 ಕೋಟಿ ರುೂಪಾಯಿ ಸಾಲ ಮಾಡಲಾಗಿದೆ. ಇದು ಐತಿಹಾಸಿಕ ದಾಖಲೆ. 39.45 ಲಕ್ಷ ಕೋಟಿ ವಾರ್ಷಿಕ ಬಜೆಟ್ ಗೆ ಹೋಲಿಸಿದರೆ, ಇಡೀ ಬಜೆಟ್ಟಿನ ಶೇ.66.84ರಷ್ಟು ಸಾಲವೇ ಆಗಿದೆ. ಒಂದು ವರ್ಷದಲ್ಲಿ ಮಾಡಿದ ಸಾಲದ ಪ್ರಮಾಣ ಎಷ್ಟು ದೊಡ್ಡದು ಎಂದರೆ ಪ್ರತಿನಿತ್ಯ 4013.74 ಕೋಟಿ ರೂಪಾಯಿಗಳಷ್ಟು ಸಾಲ ಮಾಡಲಾಗಿದೆ. ಇತ್ತೀಚೆಗೆ ಮೋದಿ ಖರೀದಿಸಿದ ಏರ್ ಇಂಡಿಯಾ ಒನ್ ಜೆಟ್ ಅನ್ನು ಎರಡುದಿನಕ್ಕೊಂದು ಖರೀದಿಸುವಷ್ಟು ಸಾಲ ಮಾಡಲಾಗಿದೆ.
ಕಳೆದ ವರ್ಷದ ಯುಗಾದಿಗೂ ಈ ವರ್ಷದ ಯುಗಾದಿಗೂ ಜನಸಾಮಾನ್ಯರ ಬದುಕಿನಲ್ಲಿ ಆಮೂಲಾಗ್ರ ಬದಲಾವಣೆಯಾಗಿದೆ. ಕಳೆದ ವರ್ಷ ಕೋವಿಡ್ ಬಿಗಿಮುಷ್ಠಿಯಲ್ಲಿ ಸಿಕ್ಕಿಕೊಂಡಿದ್ದೆವು. ಈಗ ಕೋವಿಡ್ ಸಂಕಷ್ಟದಿಂದ ಹೆಚ್ಚುಕಮ್ಮಿ ಪಾರಾಗಿದ್ದೇವೆ. ಈ ಎರಡೂ ಯುಗಾದಿಗಳ ನಡುವಿನಲ್ಲಿ ಕೋವಿಡ್ ಸಂಕಷ್ಟದಿಂದ ಪಾರಾಗಿರುವುದರ ಹೊರತಾಗಿ ಏನಾದರೂ ಉತ್ತಮ ಬೆಳವಣಿಗೆ ಆಗಿದೆಯೇ ಖಂಡಿತಾ ಇಲ್ಲ.
ಏರಬಾರದ್ದೆಲ್ಲವೂ ಏರಿವೆ. ಇಳಿಯಬಾರದ್ದೆಲ್ಲವೂ ಇಳಿದಿವೆ. ಉದಾಹರಣೆಗೆ ಹಣದುಬ್ಬರ ಜಿಗಿದಿದೆ. ರೂಪಾಯಿ ಮೌಲ್ಯ ಕುಸಿದಿದೆ. ವಿತ್ತೀಯ ಕೊರತೆ ಹಿಗ್ಗಿದೆ. ಜಿಡಿಪಿ ಕುಗ್ಗಿದೆ. ಈ ಒಂದು ವರ್ಷದಲ್ಲಿ ಏನೇನು ಏರಿದೆ ಏನೇನು ಇಳಿದಿದೆ ಎಂಬುದರ ಸಂಕ್ಷಿಪ್ತ ವಿವರ ಇಲ್ಲಿದೆ.
ರೂಪಾಯಿ ಮೌಲ್ಯ ಕುಸಿತ: ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಳೆದ ಎಂಟು ವರ್ಷಗಳಲ್ಲಿ ರೂಪಾಯಿ ಮೌಲ್ಯ ಕುಸಿಯುತ್ತಲೇ ಇದೆ. ಅದು ಈ ವರ್ಷವೂ ಮುಂದುವರೆದಿದೆ. ಕಳೆದ ವರ್ಷ ಯುಗಾದಿಯ ಹೊತ್ತಿಗೆ ಡಾಲರ್ ವಿರುದ್ಧ ರೂಪಾಯಿ ಮೌಲ್ಯವು 73.38 ಇತ್ತು. ಈ ಒಂದ ವರ್ಷದಲ್ಲಿ 77ರ ಗಡಿದಾಟಿದ್ದೂ ಆಯ್ತು. ಇದೀಗ 75.95ರ ಆಜುಬಾಜಿನಲ್ಲಿ ವಹಿವಾಟಾಗುತ್ತಿದೆ.
ಆರ್ಥಿಕ ಅಭಿವೃದ್ಧಿ: ಕೋವಿಡ್ ಸಂಕಷ್ಟದಿಂದಾಗಿ ತೀವ್ರವಾಗಿ ಕುಸಿತ ಕಂಡಿದ್ದ ಆರ್ಥಿಕಾಭಿವೃದ್ಧಿಯು 2020-21 ನಾಲ್ಕನೇ ತ್ರೈಮಾಸಿಕದಲ್ಲಿ ಶೇ.1.6ರಷ್ಟು ದಾಖಲಾಗಿತ್ತು. ಇಡೀ ವರ್ಷದಲ್ಲಿ ಶೇ.-7.3ರಷ್ಟು ಕುಸಿತವಾಗಿತ್ತು. 2021-22ರಲ್ಲಿ ಆರ್ಥಿಕತೆ ಚೇತರಿಸಿಕೊಂಡಿದೆ. ಇಡೀ ವರ್ಷದಲ್ಲಿ ಶೇ.5.4ರಷ್ಟು ಅಭಿವೃದ್ಧಿ ದಾಖಲಾಗುವ ಅಂದಾಜು ಇದೆ. ಏಪ್ರಿಲ್ ಅಂತ್ಯಕ್ಕೆ ನಿಖರ ಅಂಕಿ ಅಂಶಗಳು ದಕ್ಕಲಿವೆ. ಆದರೆ, ಕೋವಿಡೋತ್ತರ ಅವಧಿಯಲ್ಲಿದ್ದ ಅಭಿವೃದ್ಧಿ ಪ್ರಮಾಣಕ್ಕಿಂತ ಹೆಚ್ಚಿನ ಅಭಿವೃದ್ಧಿ ದಾಖಲಾದರೆ ಮಾತ್ರ ನಿಜವಾದ ಆರ್ಥಿಕ ಅಭಿವೃದ್ಧಿ ಆಗಿದೆ ಎಂದರ್ಥ.
ಹಣದುಬ್ಬರ: ನಿತ್ಯವೂ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡುವ ಮುನ್ನವೇ ದೇಶದಲ್ಲಿ ಹಣದುಬ್ಬರ ಅಪಾಯದ ಮಟ್ಟಮುಟ್ಟಿತ್ತು. ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯ ಪರಿಣಾಮವು ಏಪ್ರಿಲ್ ತಿಂಗಳ ಹಣದುಬ್ಬರದ ಅಂಕಿ ಅಂಶಗಳಲ್ಲಿ ಗೊತ್ತಾಗಲಿದೆ. ಚಿಲ್ಲರೆ ದರ ಹಣದುಬ್ಬರ ಮಾರ್ಚ್ 2021ರಲ್ಲಿ ಶೇ.5.3ರಷ್ಟಿತ್ತು. ಮಾರ್ಚ್ 2022 ರಲ್ಲಿ ಇದು ಶೇ.6.7ಕ್ಕೆ ಜಿಗಿದೆ. ಇದು ಅಪಾಯ ಮುನ್ಸೂಚನೆ. ಹಣದುಬ್ಬರ ಏರುತ್ತಲೇ ಇದ್ದರೆ ಜನಜೀವನ ಸಂಕಷ್ಟಕ್ಕೀಡಾಗುತ್ತದೆ. ಈಗಾಗಲೇ ಆರ್ಬಿಐ ಗರಿಷ್ಠ ಮಿತಿಯಾದ ಶೇ.6ರಷ್ಟು ಹಣದುಬ್ಬರವನ್ನು ದಾಟಿದ್ದೇವೆ. ಏಪ್ರಿಲ್ ನಲ್ಲಿ ಹಣದುಬ್ಬರ ಶೇ.7ರ ಗಡಿದಾಟಬಹುದು.
ಪೆಟ್ರೋಲ್, ಡೀಸೆಲ್, ಎಲ್ಪಿಜಿ: ದೇಶದಲ್ಲೀಗ ನಿತ್ಯವೂ ಪೆಟ್ರೋಲ್, ಡೀಸೆಲ್ ಮತ್ತು ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಎಲ್ಪಿಜಿ ಸಿಲಿಂಡರ್ ದರ ಏರಿಕೆಯಾಗುತ್ತಿದೆ. ಏ.1 2021ರಲ್ಲಿ ಪೆಟ್ರೋಲ್ 93.59 ರೂ. ಇದ್ದದ್ದು ಈಗ 108.14 ರೂಪಾಯಿಗಳಿಗೆ ಜಿಗಿದಿದೆ. 85.75ರೂ. ಇದ್ದ ಡೀಸೆಲ್ ಈಗ 92.05ರೂಪಾಯಿಗೆ ಜಿಗಿದಿದೆ. ಎಲ್ಪಿಜಿ ಸಿಲಿಂಡರ್ 812 ರೂ. ಇದ್ದದ್ದು ಏ.1 2022ರಲ್ಲಿ 902.50ರೂಪಾಯಿಗೆ ಏರಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಪೆಟ್ರೋಲ್ 14 ರೂಪಾಯಿ, ಡೀಸೆಲ್ ಸುಮಾರು 7 ರೂಪಾಯಿ, ಎಲ್ಪಿಜಿ 90 ರೂಪಾಯಿ ಏರಿದೆ. ನವೆಂಬರ್ ಆರಂಭದಲ್ಲಿ ಪೆಟ್ರೋಲ್ 114, ಡೀಸೆಲ್ 100ರ ಗಡಿ ದಾಟಿದ್ದು ಇದೆ.
ಕಚ್ಚಾತೈಲ: 2021 ಏಪ್ರಿಲ್ 1 ರಂದು ಪ್ರತಿ ಬ್ಯಾರೆಲ್ ಗೆ 65 ಡಾಲರ್ ಇದ್ದ ಬ್ರೆಂಡ್ ಕ್ರೂಡ್ ಈಗ 107 ರೂಪಾಯಿಗೆ ಜಿಗಿದಿದೆ. ರಷ್ಯಾ ಉಕ್ರೇನ್ ಯುದ್ಧ ಆರಂಭವಾದಾಗ 140 ಡಾಲರ್ ಗೆ ಜಿಗಿದು ಮತ್ತು ಇಳಿದಿದೆ. ಬೆಲೆ ಅಸ್ಥಿರತೆ ಮುಂದುವರೆದಿದೆ. ಕಚ್ಚಾ ತೈಲದರ ಹೆಚ್ಚಿದಂತೆ ಜನಸಾಮಾನ್ಯರ ಅಗತ್ಯ ವಸ್ತುಗಳು ಮತ್ತು ಸೇವೆಗಳ ದರವೂ ಏರಲಿದೆ.
ಸೆನ್ಸೆಕ್ಸ್, ನಿಫ್ಟಿ: ಏಪ್ರಿಲ್ 1, 2021ರಲ್ಲಿ 50,029 ಅಂಶದಷ್ಟಿದ್ದ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಈಗ 2022 ಏಪ್ರಿಲ್ 1ರಂದು 58,997 ಅಂಶಗಳಿಗೆ ಜಿಗಿದಿದೆ. ಈ ನಡುವೆ ಅದು 62,000 ಗರಿಷ್ಠ ಮಟ್ಟಕ್ಕೇರಿ ದಾಖಲೆ ಮಾಡಿತ್ತು. 14600 ಅಂಶಗಳಷ್ಟಿದ್ದ ನಿಫ್ಟಿ ಈಗ 17670ಕ್ಕೆ ಜಿಗಿದಿದೆ.
ಚಿನ್ನ: ಬೌಗೋಳಿಕ ರಾಜಕೀಯ ಪ್ರಕ್ಷುಬ್ಧತೆ ಇದ್ದಾಗಲೆಲ್ಲ ಜಿನ್ನದ ದರ ಏರುತ್ತದೆ. ಕೋವಿಡ್ ಸಂಕಷ್ಟದಿಂದಾಗಿ ಆರ್ಥಿಕತೆ ಕುಸಿದಾಗಲೂ ಚಿನ್ನದ ಬೆಲೆ ಏರಿತ್ತು. ರಷ್ಯಾ ಉಕ್ರೇನ್ ಯುದ್ದ ಆರಂಭವಾದಾಗಲೂ ಜಿಗಿದಿತ್ತು. 2021 ಏಪ್ರಿಲ್ 1ರಂದು 46,330 ರೂಪಾಯಿ ಇದ್ದ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಈಗ 53,530 ರೂಪಾಯಿಗೆ ಏರಿದೆ. ಸಾರ್ವಕಾಲಿಕ ದಾಖಲೆಯಾದ 56,000 ರೂಪಾಯಿ ಮಟ್ಟ ಮುಟ್ಟಿ, ಇಳಿದಿದೆ. ಒಂದೇ ವರ್ಷದಲ್ಲಿ 7200 ರೂಪಾಯಿ ಏರಿದಂತಾಗಿದೆ.