ಸಂವಿಧಾನ ಅಂಗೀಕಾರ ಆಗಿ ನವೆಂಬರ್ 24ಕ್ಕೆ 75 ವರ್ಷ ಪೂರ್ಣಗೊಂಡಿದೆ. ಹೀಗಾಗಿ ಲೋಕಸಭೆಯಲ್ಲಿ ವಿಶೇಷ ಚರ್ಚೆಗೆ ಅವಕಾಶ ಕಲ್ಪಿಸಲಾಗಿತ್ತು. ನಿನ್ನೆ ಪ್ರಿಯಾಂಕಾ ಗಾಂಧಿ ಹಾಗು ಇಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವಾರು ನಾಯಕರು ಸಂವಿಧಾನದ ಮೇಲೆ ಚರ್ಚೆ ಮಾಡಿದ್ದರು. ಇವತ್ತು ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿ ವಿರೋಧ ಪಕ್ಷಗಳ ಟೀಕೆಗೆ ಉತ್ತರ ಕೊಡುವ ಕೆಲಸ ಮಾಡಿದ್ರು. ಪ್ರಧಾನಿ ಮಾತನಾಡಿದ ಪ್ರಮುಖ ಅಂಶಗಳನ್ನು ನೋಡುವುದಾದರೆ.
ನಮ್ಮನ್ನ ಇಲ್ಲಿವರೆಗೂ ಕರೆತಂದಿದ್ದು ಸಂವಿಧಾನ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ನಮಗೆ ಯಾವ ರಾಜಕೀಯ ಹಿನ್ನಲೆಯೂ ಇರ್ಲಿಲ್ಲ. ಸಂವಿಧಾನವೇ ನಮ್ಮನ್ನ ಇಲ್ಲಿವರೆಗೂ ಕರೆತಂದಿದೆ. ನನ್ನಂತೆ ಸಾಕಷ್ಟು ಜನರಿಗೆ ಸಂವಿಧಾನವೇ ಶ್ರೀರಕ್ಷೆ ಎಂದಿದ್ದಾರೆ. ಸಂವಿಧಾನ ಬದಲಾವಣೆ ಮಾಡ್ತಾರೆ ಎನ್ನುವ ವಿರೋಧ ಪಕ್ಷಗಳ ಆರೋಪಕ್ಕೆ ಟಾಂಗ್ ಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ, 60 ವರ್ಷದಲ್ಲಿ 75 ಸಲ ಸಂವಿಧಾನ ಬದಲಿಸಿದ್ದು ಕಾಂಗ್ರೆಸ್ ಪಕ್ಷ. ಕಾಂಗ್ರೆಸ್‌ನಲ್ಲಿ ಒಂದು ದೊಡ್ಡ ಕುಟುಂಬ ಇದೆ. ಸಂವಿಧಾನವನ್ನ ಎಷ್ಟು ಬೇಕೋ ಅಷ್ಟು ಬಳಸಿಕೊಂಡಿದೆ. 60 ವರ್ಷಗಳಲ್ಲಿ 75 ಸಲ ಸಂವಿಧಾನ ಬದಲಿಸಿದ ಒಂದೇ ಕುಟುಂಬ ಸಂವಿಧಾನವನ್ನು ದುರುಪಯೋಗ ಪಡಿಸಿಕೊಳ್ತು ಎಂದು ಟೀಕಿಸಿದ್ದಾರೆ.
ಆರ್ಟಿಕಲ್ 370 ಅನ್ನೋದೇ ದೇಶದ ಐಕ್ಯತೆಗೆ ಅಡ್ಡಿಯಾಗಿತ್ತು. ಅದನ್ನು ನಾವು ತೆಗೆದು ಹಾಕಿದ್ದೇವೆ ಎಂದಿದ್ದಾರೆ. ಇನ್ನು ಸಂವಿಧಾನದ ಕರಾಳಪುಟ ಅಂದ್ರೆ ತುರ್ತು ಪರಿಸ್ಥಿತಿ ಹೇರಿಕೆ ಮಾಡಿದ್ದು ಎಂದಿದ್ದಾರೆ. ಭಾರತದ ಇತಿಹಾಸದಲ್ಲಿ ಅದೊಂದು ಕರಾಳ ಅಧ್ಯಾಯ ಎಂದಿರುವ ಪ್ರಧಾನಿ ಮೋದಿ, ಎಮರ್ಜೆನ್ಸಿ ವೇಳೆ ಜನತೆಯ ಹಕ್ಕುಗಳನ್ನು ಕಸಿಯಲಾಗಿತ್ತು, ಕಾಂಗ್ರೆಸ್ನ ಪಾಪಕೃತ್ಯಗಳನ್ನು ಜನತೆ ಎಂದೂ ಕ್ಷಮಿಸಲ್ಲ. ಬಡವರಿಗಾಗಿ ಆಯುಷ್ಮಾನ್ ಯೋಜನೆ ಜಾರಿಯಾಗಿದೆ. ಮಾತೃಭಾಷೆಯಲ್ಲಿ ಎಂಜಿನಿಯರ್, ಮೆಡಿಕಲ್ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂವಿಧಾನ ಎಂಬುದು ಭಾರತಕ್ಕೆ ಸಂಭ್ರಮದ ವಿಚಾರ. ಆದರೆ ಕೆಲವರು ಈ ಚರ್ಚೆಯನ್ನು ರಾಜಕೀಯಕ್ಕೆ ಬಳಸಿದ್ದು ದುರಂತ ಎನ್ನುವ ಮೂಲಕ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಸಂವಿಧಾನ ನಮ್ಮ ದಾರಿಗೆ ಅಡ್ಡ ಬರುತ್ತೆ ಅಂದಿದ್ರು, ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವ್ರೇ ಬರೆದಿದ್ದು. ಸಂವಿಧಾನ ನಮ್ಮ ದಾರಿಗೆ ಅಡ್ಡಿಯಾಗುತ್ತೆ. ಅದನ್ನ ಬದಲಿಸ್ಬೇಕು ಅಂತ ನೆಹರು ಪತ್ರ ಬರೆದಿದ್ರು. ಮುಖ್ಯಮಂತ್ರಿಗೆ ನೆಹರು ಬರೆದ ಪತ್ರದಲ್ಲಿ ಹೀಗೆ ಇದೆ ಎನ್ನುವುದನ್ನು ನೆನಪಿಸಿಕೊಂಡಿದ್ದಾರೆ. ಸಂವಿಧಾನಕ್ಕೆ ಅಡ್ಡಿಯಾಗಲು ನೆಹರು ಶುರು ಮಾಡಿದ್ರು. ಇಂದಿರಾಗಾಂಧಿ ನೆಹರೂ ಹಾದಿ ಮುಂದುವರಿಸಿದ್ರು.. ರಾಜೀವ್ ಗಾಂಧಿಯೂ ವಿರೋಧಿಸಲು ಶಕ್ತಿ ತುಂಬಿದ್ರು. ಸಂವಿಧಾನವನ್ನ ಎಷ್ಟು ಬೇಕೋ ಅಷ್ಟು ಕೆಳಹಂತಕ್ಕೆ ತಳ್ಳಿದ್ರು. ಆ ಬಳಿಕ ಕಾಂಗ್ರೆಸ್ ಕುಟುಂಬವೂ ಇದ್ರಲ್ಲೇ ಮುಳುಗಿತ್ತು ಎನ್ನುವ ಮೂಲಕ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ವಿಶ್ವದೆಲ್ಲೆಡೆ ಒಂದೇ ಭಾರತ – ಶ್ರೇಷ್ಠ ಭಾರತ ಮಂತ್ರ ಮೊಳಗಿಸುವುದು, ರಾಜ್ಯಗಳ ಅಭಿವೃದ್ಧಿಯೇ ರಾಷ್ಟ್ರದ ಅಭಿವೃದ್ಧಿ ಮಂತ್ರ ಆಗಬೇಕು. ದೇಶದಲ್ಲಿ ಮಹಿಳೆಯರ ಅಭಿವೃದ್ಧಿಗೆ ಆದ್ಯತೆ. ದೇಶದ ಬಗ್ಗೆ ಪ್ರತೀ ನಾಗರೀಕರಿಗೆ ಹೆಮ್ಮೆ ಇರಬೇಕು. ವಸಾಹತುಶಾಹಿ ಮನಸ್ಥಿತಿಯಿಂದ ಹೊರ ಬರುವುದು. ಧರ್ಮ ಆಧಾರಿತ ಮೀಸಲಾತಿ ತೊಡೆದು ಹಾಕುವುದು. ವಂಶವಾಹಿ ರಾಜಕಾರಣ ನಿರ್ಮೂಲನೆ ಆಗ್ಬೇಕು. ಕಾನೂನು ಪರಂಪರೆ ಬಗ್ಗೆ ಗೌರವವಿರಬೇಕು. ನಾಗರೀಕರು ಭ್ರಷ್ಟಾಚಾರ ಸಹಿಸಬಾರದು. ಪ್ರತಿಯೊಬ್ಬರಿಗೂ ಅಭಿವೃದ್ಧಿ ಕಾರ್ಯಗಳು ತಲುಪಬೇಕು. ದೇಶದ ಜನತೆ ಸರ್ಕಾರ ತಮ್ಮ ಕರ್ತವ್ಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದಿದ್ದಾರೆ.