ಬಿಜೆಪಿಗೆ ಸಾಲು ಸಾಲು ರೌಡಿ ಶೀಟರ್‌ಗಳು ಸೇರ್ಪಡೆಗೊಂಡು ರಾಜ್ಯ ರಾಜಕೀಯದಲ್ಲಿ ಕೋಲಾಹಲವೆದ್ದು ವಾರಗಳು ಕಳೆಯುವುದರೊಳಗೆ ಬಿಜೆಪಿ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ. ಫೈಟರ್ ರವಿ ಎಂಬ ರೌಡಿ ಶೀಟರ್ ನ ಎದುರು ಪ್ರಧಾನಿ ಮೋದಿ ಅರು ಕೈಮುಗಿದು ನಿಂತಿರುವ ಚಿತ್ರ ವೈರಲ್ ಆಗಿದ್ದು, ಕರ್ನಾಟಕ ಕಾಂಗ್ರೆಸ್ ಆಕ್ಷೇಪ ಎತ್ತಿದೆ.
ಮಂಡ್ಯ ಭೇಟಿ ವೇಳೆ ಪ್ರಧಾನಿಯನ್ನು ಸ್ವಾಗತಿಸಲು ಬಂದ ಫೈಟರ್ ರವಿಗೆ ಪ್ರಧಾನಿ ಮೋದಿ ಕೈಮುಗಿದಿದ್ದಾರೆ ಎನ್ನಲಾಗಿದೆ. ಈ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ರೌಡಿ ಶೀಟರ್ ಎದುರು ಪ್ರಧಾನಿ ಕೈಮುಗಿದು ನಿಂತಿರುವುದು ಪ್ರಧಾನಿ ಹುದ್ದೆಗೆ ಕಳಂಕ ಎಂದು ಕಾಂಗ್ರೆಸ್ ಆಕ್ಷೇಪಿಸಿದೆ.

“ಜಗತ್ತಿನಲ್ಲಿಯೇ ಬಿಜೆಪಿಯಂತಹ ನಿರ್ಲಜ್ಜ ರಾಜಕೀಯ ಪಕ್ಷ ಬೇರೆ ಇರಲು ಸಾಧ್ಯವೇ ಇಲ್ಲ. ಫೈಟರ್ ರವಿ ಎಂಬ ರೌಡಿ ಶೀಟರ್ ಎದುರು ಕೈಮುಗಿದು ನಿಂತ ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಧಾನಿ ಹುದ್ದೆಗೆ ಕಳಂಕ ಅಂಟಿದೆ. ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದ ಬಿಜೆಪಿ ರೌಡಿಯನ್ನು ಪ್ರಧಾನಿ ಎದುರು ನಿಲ್ಲಿಸಿದ್ದು ನಾಚಿಕೆಗೇಡು.” ಎಂದು ಕಾಂಗ್ರೆಸ್ ಟೀಕಿಸಿದೆ.
ಇನ್ನೊಂದು ಟ್ವೀಟ್‌ನಲ್ಲಿ “ಮೋದಿಯವರೆಂದರೆ ಕಳ್ಳರಿಗೆ, ಸುಳ್ಳರಿಗೆ, ವಂಚಕರಿಗೆ, ಭ್ರಷ್ಟರಿಗೆ, ರೌಡಿಗಳಿಗೆ ಭಲೇ ಅಚ್ಚುಮೆಚ್ಚು! #BJPRowdyMorcha ವತಿಯಿಂದ ಮೋದಿಗೆ ಭಾರಿ ಸ್ವಾಗತವಿದೆ! ನರೇಂದ್ರ ಮೋದಿ ಅವರೇ, ಬಿಜೆಪಿ ಪಕ್ಷದ ರೌಡಿ ಮೋರ್ಚಾ ಯಾವಾಗ ಉದ್ಘಾಟಿಸುವಿರಿ? ಯಾವಾಗಮಚ್ಚು, ಲಾಂಗುಗಳನ್ನು ಪಕ್ಷದ ಚಿಹ್ನೆಯಾಗಿ ಪಡೆಯುವಿರಿ?” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.