ಮಂಡ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಭಾನುವಾರ ಅಬ್ಬರದ ಕಾರ್ಯಕ್ರಮ ನಡೆಸಿತು. ಪ್ರಧಾನಿ ನರೇಂದ್ರ ಮೋದಿ ಹೆಚ್ಚು ಕಡಿಮೆ ಅರ್ಧದಿನ ಮಂಡ್ಯದಲ್ಲಿ ಕಾಲ ಕಳೆದಿದ್ದಾರೆ. ಪ್ರಧಾನಿ ಆದ 9 ವರ್ಷದ ಬಳಿಕ ಮಂಡ್ಯಕ್ಕೆ ಆಗಮಿಸಿದ ನರೇಂದ್ರ ಮೋದಿ, ಬೆಂಗಳೂರು – ಮೈಸೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆ ಮಾಡಿದ್ರು. ಆ ಬಳಿಕ ಬೃಹತ್ ಸಮಾವೇಶ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಜೆಡಿಎಸ್ ಬಗ್ಗೆ ಕುಹಕ ಆಡಲಿಲ್ಲ, ಜೆಡಿಎಸ್ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳಲಿಲ್ಲ. ಜೆಡಿಎಸ್ ಭದ್ರಕೋಟೆಗೆ ನಿಂತು ಭಾಷಣ ಮಾಡಿದಾಗಲೂ, ಜೆಡಿಎಸ್ ಬಗ್ಗೆ ಎಲ್ಲಿಯೂ ಮಾತನಾಡದೆ ಹೋಗಿದ್ದು, ಸ್ವತಃ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರಿಗೂ ಅಚ್ಚರಿಯನ್ನುಂಟು ಮಾಡಿತು. ಆದರೆ ಪ್ರಧಾನಿ ನರೇಂದ್ರ ಮೋದಿ ಮಾತ್ರ ಜಾಣ ನಟಡೆ ಇಟ್ಟಿದ್ದಾರೆ ಎನ್ನಲಾಗ್ತಿದೆ. ಒಂದು ವೇಳೆ ಜೆಡಿಎಸ್ ಬಗ್ಗೆ ಟೀಕಾಪ್ರಹಾರ ನಡೆಸಿದ್ರೆ ಏನಾಗುತ್ತೆ ಅನ್ನೋದನ್ನು ತಿಳಿದುಕೊಂಡು ಪ್ರಧಾನಿ ಈ ನಿರ್ಧಾರ ಮಾಡಿದ್ದಾರೆ ಅನ್ನೋದು ಗೊತ್ತಾಗ್ತಿದೆ..
ಕಾಂಗ್ರೆಸ್ ಬಗ್ಗೆ ಟೀಕೆಗಳ ಮಳೆ ಸುರಿಸಿದ ಪ್ರಧಾನಿ..!
ಜೆಡಿಎಸ್ ಬಗ್ಗೆ ಟೀಕೆಯ ಕಲ್ಲನ್ನು ಎಸೆಯದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷವನ್ನು ಸುಮ್ಮನೆ ಬಿಡಲಿಲ್ಲ. ಕಾಂಗ್ರೆಸ್ ಮತ್ತು ಅದರ ಮೈತ್ರಿ ಪಕ್ಷಗಳಿಗೆ ಮಾಡಲು ಕೆಲಸ ಇಲ್ಲ, ಕೇವಲ ಮೋದಿ ಬಗ್ಗೆ ಅಪಪ್ರಚಾರ ಮಾಡೋದ್ರಲ್ಲಿ ತೊಡಗಿದ್ದಾರೆ. ನರೇಂದ್ರ ಮೋದಿಗೆ ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ಹೈವೇ ಮಾಡೋ ಕೆಲಸ ಇದೆ. ಅಭಿವೃದ್ಧಿ ಕೆಲಸದಲ್ಲಿ ನಾನು ಬ್ಯುಸಿ ಆಗಿದ್ದೇನೆ. ಹೈವೇ ಕನಸ್ಸನ್ನು ನನಸು ಮಾಡಿದ್ದೇವೆ. ಬಡವರ ಕಲ್ಯಾಣಕ್ಕೆ ಶ್ರಮಿಸುವ ಕೆಲಸ ಮಾಡ್ತಿದ್ದೇವೆ. ಮಂಡ್ಯದ ಜನರ ಪ್ರೀತಿಯ ಋಣವನ್ನು ಅಭಿವೃದ್ಧಿ ಮೂಲಕ ಬಡ್ಡಿ ಸಮೇತ ತೀರಿಸುತ್ತೇನೆ. ಈಗಾಗಲೇ ಸಾವಿರಾರು ಕೋಟಿ ಅಭಿವೃದ್ಧಿ ಕಾರ್ಯಗಳು ಈ ಭಾಗದಲ್ಲಿ ನಡೆಯುತ್ತಿವೆ ಎಂದಿದ್ದಾರೆ. ಇನ್ನು ಕಾಂಗ್ರೆಸ್ ಬಡವರ ಕಲ್ಯಾಣಕ್ಕೆ ಶ್ರಮಿಸಲಿಲ್ಲ. 2014ಕ್ಕೂ ಮೊದಲು ಭಾರತ ದೇಶದಲ್ಲಿ ಲೂಟಿ ಮಾಡುವ ಸರ್ಕಾರ ಇತ್ತು. ಸಾಮಾನ್ಯ ಜನರ ಸುಖ ದುಃಖ, ನೋವು ನಲಿವುಗಳಿಗೆ ಸ್ಪಂದಿಸಲಿಲ್ಲ. ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡಿದ್ದು ಬಿಟ್ಟರೆ ಬಡವರ ಕಲ್ಯಾಣವನ್ನು ಕಾಂಗ್ರೆಸ್ ಮಾಡಲಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
JDS ಕುಟುಂಬದ ಎಟಿಎಂ ಎಂದಿದ್ದ ಅಮಿತ್ ಷಾ..!!
ಪ್ರಧಾನಿ ನರೇಂದ್ರ ಮೋದಿ ಜೆಡಿಎಸ್ ಪಕ್ಷದ ಬಗ್ಗೆ ಕಿಂಚಿತ್ತು ಮಾತನಾಡಲಿಲ್ಲ. ಆದರೆ ಈ ಹಿಂದೆ ಮಂಡ್ಯದಲ್ಲಿ ಸಮಾವೇಶ ಮಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ಜೆಡಿಎಸ್ ಪಕ್ಷದ ವಿರುದ್ಧ ವಾಗ್ದಾಳಿ ಮಾಡಿದ್ದರು. ಕಾಂಗ್ರೆಸ್ಗೆ ಮತ ಹಾಕಬೇಡಿ, ಅದು ಜೆಡಿಎಸ್ಗೆ ಸಹಾಯ ಆಗುತ್ತದೆ. ಜೆಡಿಎಸ್ಗೂ ಮತ ಹಾಕಬೇಡಿ, ಅವರು ಕಾಂಗ್ರೆಸ್ ಜೊತೆಗೆ ಹೋಗ್ತಾರೆ ಎಂದಿದ್ದರು. ಇನ್ನು ಕಾಂಗ್ರೆಸ್ ಪಕ್ಷ ಗೆಲ್ಲಿಸಿದ್ರೆ ದೆಹಲಿ ಪರಿವಾರ ಒಂದಕ್ಕೆ ಎಟಿಎಂ ರೀತಿ ಕೆಲಸ ಮಾಡುತ್ತದೆ. ಅದೇ ರೀತಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಒಂದು ಕುಟುಂಬದ ಎಟಿಎಂ ರೀತಿಯಲ್ಲಿ ಕೆಲಸಗಳು ಆಗುತ್ತವೆ ಎಂದಿದ್ದು. ಅಮಿತ್ ಷಾ ಟೀಕೆ ಬಳಿಕ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದರು. ವಿಧಾನಸಭಾ ಅಧಿವೇಶನದಲ್ಲೂ ಈ ಬಗ್ಗೆ ಅಮಿತ್ ಷಾ ಹೆಸರು ಹೇಳದೆ ವಾಗ್ದಾಳಿ ಮಾಡಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಮಾತ್ರ ಯಾವುದಕ್ಕೂ ಆಸ್ಪದ ಕೊಡಲಿಲ್ಲ. ಜೆಡಿಎಸ್ ಬಗ್ಗೆ ಮೋದಿ ಸಾಫ್ಟ್ ಕಾರ್ನರ್ ತೋರಿಸಿದ್ದು ಯಾಕೆ ಅನ್ನೋ ಬಗ್ಗೆ ಗಹನವಾದ ಚರ್ಚೆ ಬಿಜೆಪಿ ನಾಯಕರಲ್ಲೇ ನಡೆಯುತ್ತಿದೆ.
ಸಾಫ್ಟ್ ಕಾರ್ನರ್ ಹಿಂದೆ ಮೋದಿ ಮಾಸ್ಟರ್ ಪ್ಲ್ಯಾನ್..!
ಮಂಡ್ಯದಲ್ಲಿ ಜೆಡಿಎಸ್ ಅದರಲ್ಲೂ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹಾಗು ಮಾಜಿ ಸಿಎಂ ಕುಮಾರಸ್ವಾಮಿ ಬಗ್ಗೆ ಭಾರೀ ಅಭಿಮಾನ ಇಟ್ಟುಕೊಂಡಿದ್ದಾರೆ. ರಾಜಕೀಯ ಕಾರಣಕ್ಕೆ ಮಂಡ್ಯ ನೆಲದಲ್ಲಿ ನಿಂತು ಏನನ್ನೋ ಮಾತನಾಡಿ ದೇವೇಗೌಡರಿಗೆ ನೋವುಂಟು ಮಾಡುವುದು. ಆ ಮಾತುಗಳೇ ಬಿಜೆಪಿಗೆ ಮತಗಳು ಬಾರದಂತೆ ತಡೆಯುವುದು ಬೇಡ ಅನ್ನೋದು ಒಂದು ಕಾರಣ. ಇನ್ನು ಮಾಜಿ ಪ್ರಧಾನಿ ದೇವೇಗೌಡರ ಜೊತೆಗೆ ಒಡನಾಟ ಚೆನ್ನಾಗಿದೆ. ಈ ಹಿಂದೆ ದೇವೇಗೌಡರಿಗೆ ಕೊಟ್ಟ ಗೌರವದ ಬಗ್ಗೆ ಕರುನಾಡಿನ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗಾಗಲೇ ದೇವೇಗೌಡರು ವಯೋಸಹಜ ಸ್ಥಿತಿಗೆ ತಲುಪಿದ್ದಾರೆ. ಈ ಸಮಯದಲ್ಲಿ ರಾಜಕೀಯವಾಗಿ ಹಿಯ್ಯಾಳಿಸುವುದು, ವಯಸ್ಸಾದ ದೇವೇಗೌಡರಿಗೆ ನೋವು ಕೊಡುವುದು ಸರಿಯಲ್ಲ, ನೋವು ಕೊಟ್ಟ ಕಾರಣದಿಂದ ಬಿಜೆಪಿಗೆ ಬರುವ ಸಾಧ್ಯತೆ ಇರುವ ಮತಗಳು ದೂರ ಆಗುತ್ತವೆ ಅನ್ನೋದು ಎರಡನೇ ಕಾರಣ. ಇದೇ ಕಾರಣದಿಂದ ಕಾಂಗ್ರೆಸ್ ವಿರುದ್ಧ ಮಾತ್ರ ಟೀಕೆ ಮಾಡಿ, ಜೆಡಿಎಸ್ ಬಗ್ಗೆ ಎಲ್ಲಿಯೂ ಮಾತಾಡದೇ ಚುನಾವಣೆ ಮಾಡಲು ಮೋದಿ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗ್ತಿದೆ. ಇದು ವರ್ಕೌಟ್ ಆಗುತ್ತಾ ಅನ್ನೋದನ್ನು ಫಲಿತಾಂಶದ ಬಳಿಕ ನೋಡಬೇಕಿದೆ.