ಮೋದಿಯ ಏಳು ವರ್ಷಗಳ ಆಳ್ವಿಕೆಯಲ್ಲಿ ಇಕಾನಮಿ ಪಾತಾಳ ಮುಟ್ಟಿದೆ. ಜಿಡಿಪಿ ಎಂದು ಕರೆಯಲಾಗುವ ಮಾನದಂಡ ಅದೆಷ್ಟೇ ಅಸಂಬದ್ಧವಾಗಿದ್ದರೂ ಮೋದಿಯ ಅಪಕ್ವ ಆಡಳಿತಕ್ಕೆ ಕನ್ನಡಿ ಹಿಡಿಯಲು ಅದೇ ಬೇಕಾಯಿತು. ಯು.ಪಿ.ಎ ಕಾಲದಲ್ಲಿ 8% ವಾರ್ಷಿಕ ಪ್ರಗತಿ ಕಂಡಿದ್ದ ಜಿಡಿಪಿ ಮೋದಿ ಯುಗದಲ್ಲಿ ಇಳಿಯುತ್ತಾ ಬಂದು ಈಗ ಅದು ಮೈನಸ್ಗೆ ಬಂದು ಕೂತಿದೆ.
ಸರಕಾರ ಅಂಕಿ-ಅಂಶಗಳನ್ನು ಕೈಯಾಡಿಸಿ ಮಂಕು ಬೂದಿ ಎರಚಿ ಯಾವುದೋ ಪಾಸಿಟಿವ್ ಲಕ್ಷಣದ ಅಂಕೆ- ಸಂಖ್ಯೆ ತೋರಿದರೂ ಅದು ತಜ್ಞರೆದುರು ನಗೆಪಾಟಲಿಗೀಡಾಗಿದೆ. ಕೇಂದ್ರ ಸರಕಾರದ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ ಸುಬ್ರಹ್ಮಣ್ಯಂ ಅವರು ಈ ನೆಗೆಟಿವ್ ಟ್ರೆಂಟ್ ಕೋವಿಡ್ಗಿಂತ ಮೊದಲೇ ಶುರುವಾಗಿತ್ತು ಎಂದಿದ್ದಾರೆ. ಅಂದರೆ ಕೋವಿಡ್ ಕಾರಣಕ್ಕೆ ಎನ್ನುವುದು ಒಂದು ನೆಪ. ಕೋವಿಡ್ ಈ ಇಳಿಜಾರಿನ ವೇಗವನ್ನು ವರ್ಧಿಸಿತು ಅಷ್ಟೇ.
ಆದರೆ ಜನ ಸಾಮಾನ್ಯರ ಮಟ್ಟಿಗೆ ಇದೆಲ್ಲಾ ಇನ್ನೂ ಇಳಿದಿಲ್ಲ ಎಂದು ಕೆಲವು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಕೋವಿಡ್ ಕಾಲದಲ್ಲಿ ಉಚಿತ ಪಡಿತರ ಮೋದಿ ಕೊಟ್ಟರು; ನಗದು ಕಾಸು ಖಾತೆಗೆ ಹಾಕಿದರು ಎಂದು ಜನ ಸಾಮಾನ್ಯರು ಮೆಚ್ಚುಗೆಯಲ್ಲಿ ಮಾತಾಡುತ್ತಿದ್ದಾರೆ ಎಂಬಿತ್ಯಾದಿ ವರದಿಗಳಿವೆ. ಕಲ್ಯಾಣ ಕಾರ್ಯಕ್ರಮಗಳೆಲ್ಲಾ ನೆಲ ಕಚ್ಚಿದ್ದ ಉತ್ತರ ಪ್ರದೇಶದಲ್ಲಿ ಇಂಥಾ ಒಂದೆರಡು ನೇರಬಟವಾಡೆಗಳೇ ದೊಡ್ಡ ಮೆಚ್ಚುಗೆಯನ್ನು ತಂದಿರಬಹುದು.
ಉತ್ತರ ಪ್ರದೇಶದ ಚುನಾವಣೆ ಗೆಲ್ಲುವುದು ಜೀವನ್ಮರಣದ ಪ್ರಶ್ನೆಯಾಗಿರುವ ಕಾರಣ ಕಂಡ ಕಂಡ ಅಭಿವೃದ್ಧಿ ಯೋಜನೆಗಳನ್ನು ಇನ್ನಿಲ್ಲದಂತೆ ಪ್ರಚಾರ ಮಾಡಿ ಜನರ ಕಣ್ಣು ಕೋರೈಸುವಂತೆ ಮಾಡುತ್ತಿರುವ ಬಗ್ಗೆ ಯಾವ ಮಾಧ್ಯಮಗಳೂ ಬಹುತೇಕ ತಲೆ ಕೆಡಿಸಿಕೊಂಡಿಲ್ಲ. ಪುಟಗಟ್ಟಲೆಯ ಜಾಹೀರಾತು ಮೂಲಕ ಪ್ರಭುತ್ವ ಮಾಧ್ಯಮಗಳ ವಿಧೇಯತೆಯನ್ನು ಖಚಿತಪಡಿಸುತ್ತಿದೆಯಲ್ಲಾ.
ಜಲ ಜೀವನ್ ಮಿಶನ್ ಎಂಬ ಯೋಜನೆಯು ಎಲ್ಲಾ ಹಳ್ಳಿಗಳಿಗೂ ಶುದ್ಧ ಕುಡಿಯುವ ನೀರನ್ನು ಪೂರೈಸುವ ಯೋಜನೆ. ಉತ್ತಪ್ರದೇಶದಲ್ಲಿ ಇದು ಜನರ ಗಮನ ಸೆಳೆದಿದೆ ಎಂಬ ಮಾತುಗಳಿವೆ. ಯು.ಪಿ.ಎ. ಇದ್ದಾಗಲೇ ಈ ಯೋಜನೆ ಇತ್ತು. ಇದನ್ನು ಅಮೂಲಾಗ್ರ ಪರಿಷ್ಕರಿಸಿ ಕರ್ನಾಟಕ ಸರಕಾರವು ಜಲಾಮೃತ ಎಂಬ ಯೋಜನೆಯನ್ನು ಜಾರಿಗೊಳಿಸಿತು. ಮೋದಿ ಸರಕಾರ ಅಕ್ಷರಶಃ ಈ ಯೋಜನೆಯನ್ನು ಪೂರಂಪೂರಾ ನಕಲುಗೊಳಿಸಿ ಜಲ್ ಜೀವನ ಮಿಷನ್ ಅನ್ನು ರೂಪಿಸಿತು. ಅಷ್ಟೇ ಅಲ್ಲ, ಕರ್ನಾಟಕದಂಥಾ ರಾಜ್ಯಗಳಲ್ಲಿ ಕೇಂದ್ರದ ಅನುದಾನ ಬೇಕಿದ್ದರೆ ರಾಜ್ಯದ ಫ್ಲಾಗ್ ಶಿಪ್ ಯೋಜನೆಯನ್ನು ಕೇಂದ್ರ ಯೋಜನೆಯಲ್ಲಿ ವಿಲೀನಗೊಳಿಸಿ ಎಂದೂ ಹೇಳಿತು. ಬಹು ಗ್ರಾಮ ಕುಡಿಯುವ ಯೋಜನೆ, ಕೆರೆ ತುಂಬಿಸುವ ಯೋಜನೆಗಳನ್ನು ಜಾರಿಗೆ ತಂದಿರುವ ಕರ್ನಾಟಕದಲ್ಲಿ ಮೋದಿಯ ಈ ಯೋಜನೆಗಳು ಅಂಥಾ ನಾಟಕೀಯ ಪ್ರಭಾವ ಬೀರಿಲ್ಲ. ಆದರೆ ಯು.ಪಿ.ಯಲ್ಲಿ ಪ್ರಭಾವಿಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಮೂಲತಃ ಮೋದಿ ಸರಕಾರ ಎರಡು ತಂತ್ರಗಳನ್ನು ಬಳಸುತ್ತಿದೆ. ಒಂದು ಪ್ರಖರ ಬೆಳಕಿನ ಪ್ರಭೆಗೆ ಕಣ್ಣು ಕೊಟ್ಟ ಮೃಗವೊಂದು ಸ್ತಂಭೀಭೂತವಾಗುತ್ತದೆ. ಶಿಕಾರಿ ಬಲ್ಲವರಿಗೆ ಇದು ಗೊತ್ತು. ಹೀಗೆ ಸ್ತಂಭೀಭೂತವಾದ ಮೃಗ ಮರುಕ್ಷಣದಲ್ಲಿ ಬೇಟೆಗಾರನ ಗುಂಡಿಗೆ ಬಲಿಯಾಗುತ್ತದೆ.
ಪ್ರಚಾರದ ಪ್ರಖರ ವೈಖರಿಗೆ ಮಂತ್ರಮುಗ್ಧವಾಗುವ ಮತದಾರನನ್ನು ಮತದಾನದ ಖೆಡ್ಡಾಕ್ಕೆ ಬೀಳಿಸುವುದು ಅಷ್ಟೇನೂ ಕಷ್ಟದ ಕೆಲಸ ಅಲ್ಲ.
ಮೂಲತಃ ಆರ್ಥಿಕತೆ ಕುಸಿಯುತ್ತಿರುವ ವಿವರಗಳು ಜನ ಸಾಮಾನ್ಯರಿಗೆ ಅರಿವಾಗುವುದು ನಿಧಾನವಾಗಿ. ಅವರಿಗೆ ತಕ್ಷಣದ ಬದುಕಿನ ಬೇಗೆಗೆ ತಕ್ಷಣದ ಪರಿಹಾರ ನೀಡಿದರೂ ಕೃತಜ್ಞತೆ ಉಕ್ಕಬಹುದು. ಕೊರೋನಾ ಕಾಲದ ಉಚಿತ ಪಡಿತರ, ರೈತರಿಗೆ ನೇರ ನಗದು ವರ್ಗಾವಣೆಯಂಥಾ ಉಪಕ್ರಮಗಳು ಈ ರೀತಿಯ ಖಾಸಗಿ/ ವೈಯಕ್ತಿಕ ಅಗತ್ಯಗಳನ್ನು ಪೂರೈಸುವ ಬಗೆ. ಈ ತಂತ್ರ ಬಹುಕಾಲ ನಡೆಯಲಾರದು. ಯಾಕೆಂದರೆ ಇದೇ ರೈತರಿಗೆ ನಿತ್ಯದಲ್ಲಿ ತಾವು ಕೊಳ್ಳುವ ಪೆಟ್ರೋಲ್ ಡೀಸೆಲ್ಲಿನಿಂದ ಹಿಡಿದು ಕೃಷಿ ಪರಿಕರಗಳಿಗೂ ಅಪಾರ ತೆರಿಗೆ ನೀಡುವ ಸಂಗತಿ ಅರಿವಿಗೆ ಬರಲು ಸಮಯ ಬೇಕು.
ಕುರಿಯ ಉಣ್ಣೆ ತೆಗೆದು ಕುರಿಗೆ ಸ್ವೆಟರ್ ಹೊದಿಸಿದ ಕತೆ ಇದು
ಇತ್ತೀಚೆಗಿನ ಹಲವು ಅಧ್ಯಯನಗಳ ಪ್ರಕಾರ ಈ ದೇಶದ ರೈತ ಬಿಡಿ; ಕೂಲಿಕಾರನೂ ವರ್ಷಕ್ಕೆ ಏನಿಲ್ಲವೆಂದರೂ ೫೦-೬೦- ಸಾವಿರದಷ್ಟು ತೆರಿಗೆಯನ್ನು ಸರಕಾರಕ್ಕೆ ಸಲ್ಲಿಸುತ್ತಿದ್ದಾನೆ. ಆದರೆ ಗ್ರಾಮಾಂತರದ ಜನರು ಆಶಾಂತರಾದಾಗ ಒಂದಷ್ಟು ನಗದು, ಪಡಿತರದ ಮೂಲಕ ಜನಾಕ್ರೋಶವನ್ನು ಒಂದಷ್ಟು ಸಮಯ ಶಮನಗೊಳಿಸಬಹುದು. ಜೆ.ಎಚ್.ಪಟೇಲರು ಇದನ್ನು, “ಉಕ್ಕುವ ಹಾಲಿಗೆ ನೀರು ಸಿಂಪಡಿಸುವ ಕ್ರಮ” ಎಂದು ವ್ಯಂಗ್ಯವಾಗಿ ಹೇಳಿದ್ದರು.
ಮೋದಿ ಈ ರೀತಿಯ ನೀರು ಚಿಮುಕಿಸುವ ಮೂಲಕ ತಾತ್ಕಾಲಿಕ ಉಪಶಮನ ಮಾಡಬಹುದು. ಈ ಉಪಶಮನದ ಕಾಲಾವಧಿಯಲ್ಲಿ ಉತ್ತಪ್ರದೇಶದ ಚುನಾವಣೆ ದಾಟಿ ಬಿಟ್ಟರೆ ಸಾಕು ಎಂದಷ್ಟೇ ಮೋದಿ & ಯೋಗಿ ಆಶಿಸುತ್ತಿರುವುದು. ಚುನಾವಣೆ ಮುಗಿದ ಮೇಲೆ, ಯಾವ ರಾಜ್ಯಕ್ಕೂ ಜನಪರವಾದ ಕಲ್ಯಾಣ ಯೋಜನೆಗಳನ್ನು ನೀಡಿದ ಉದಾಹರಣೆ ಮೋದಿ ಸರ್ಕಾರಕ್ಕಿಲ್ಲ. ಗೆದ್ದ ಬಳಿಕ ಹಿಂದುತ್ವದ ಅಜೆಂಡಾ ಒಂದೇ ತನ್ನ ಮ್ಯಾಂಡೇಟ್ ಎಂಬಂತೆ ವರ್ತಿಸಿ ಕೆಲಸ ಮಾಡುತ್ತಿರುವುದು ಎಲ್ಲೆಡೆ ಕಂಡು ಬಂದಿರುವ ವಿನ್ಯಾಸ.
ಉತ್ತರ ಪ್ರದೇಶದ ರಾಜಕೀಯ ಇಷ್ಟು ಸರಳ ಜನಪ್ರಿಯ ಅನುಕೂಲಗಳಿಗೆ ಜನ ಮಾರುಹೋಗುವ ರೀತಿಯದ್ದಾದರೆ, ಮೋದಿಗೇನೂ ಕಷ್ಟವಿಲ್ಲ. ಆದರೆ ಮೊನ್ನೆ ಮೊನ್ನೆಯಷ್ಟೇ ತಾತ್ಕಾಲಿಕವಾಗಿ ಶಮನಗೊಂಡ ರೈತ ಚಳವಳಿ, ಜಾತಿ ರಾಜಕೀಯದ ಸುಳಿಗಳು ಢಾಳಾಗಿ ಬಿಂಬಿತಗೊಂಡರೆ ಏನಾದೀತು?