ಈ ದೇಶ ದಿವಾಳಿಯಾಗಲು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವೇ ಕಾರಣವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ಕಲಬುಗರಗಿಯಲ್ಲಿ ಶನಿವಾರ (ಆಗಸ್ಟ್ 5) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಧಾನಿ ಮೋದಿ ಸರ್ಕಾರವೇ ಈ ದೇಶವನ್ನು ಲೂಟಿ ಮಾಡುತ್ತಿದೆ. ದೇಶದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರ ಮತ್ತು ನಿರುದ್ಯೋಗವನ್ನು ಹೆಚ್ಚಿಸುವುದರ ಜತೆಗೆ ಬಡವರು, ದಲಿತರು, ಕೂಲಿ ಕಾರ್ಮಿಕರಿಗೆ ಅನ್ಯಾಯ ಮಾಡಿದ್ದು ರಾಜ್ಯದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
“ನಮ್ಮ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೆ ತರುವುದರ ಮೂಲಕ ಪ್ರಣಾಳಿಕೆಯಲ್ಲಿ ಘೋಷಿಸಿರುವ ಎಲ್ಲಾ ಭರವಸೆಗಳನ್ನು ಬಜೆಟ್ಮೂಲಕ ಈಡೇರಿಸುತ್ತೇವೆ. ಪ್ರಧಾನಿ ಸೇರಿದಂತೆ ಬಿಜೆಪಿಯ ನಾಯಕರು ಈ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದಾರೆ” ಎಂದು ಟೀಕಿಸಿದರು.
“ನಮ್ಮ ಸರ್ಕಾರ ಆಡಳಿತದಲ್ಲಿದ್ದಾಗ ಕಲ್ಯಾಣ ಕರ್ನಾಟಕದ 99,600 ಸೇರಿದಂತೆ ರಾಜ್ಯದಲ್ಲಿ 14.52 ಲಕ್ಷ ಮನೆ ಕಟ್ಟಿಸಿದ್ದೆವು. ಆದರೆ ಬಿಜೆಪಿ ಸರ್ಕಾರ ಕ.ಕ ಭಾಗದಲ್ಲಿ 19,000 ಹಾಗೂ ರಾಜ್ಯದಲ್ಲಿ 7 ಲಕ್ಷ ಮನೆ ಕಟ್ಟಿಸಿದ್ದಾರೆ. ಕ.ಕ ಭಾಗದ ಅಭಿವೃದ್ದಿಗೆ ನಮ್ಮ ಸರ್ಕಾರ ತನ್ನ ಬದ್ದತೆ ತೋರಿಸಿದೆ” ಎಂದು ಸರ್ಕಾರದ ಸಾಧನೆಗಳನ್ನು ಬಣ್ಣಿಸಿದರು.
ಶಕ್ತಿ ಯೋಜನೆಯಡಿಯಲ್ಲಿ ಪ್ರತಿನಿತ್ಯ 55 ಲಕ್ಷ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಮಹಿಳೆಯರು ದೇವಸ್ಥಾನ ಸೇರಿದಂತೆ ಅವಶ್ಯಕತೆ ಇರುವ ಕಡೆಗೆ ಹೋಗುತ್ತಿದ್ದಾರೆ. ಇದು ಬಿಜೆಪಿ ನಾಯಕರ ಮುನಿಸಿಗೆ ಕಾರಣವಾಗಿದೆ ಎಂದು ದೂರಿದರು.
“ನಮ್ಮ ರಾಜ್ಯದ ಮಾದರಿಯಲ್ಲಿ ಬೇರೆ ಬೇರೆ ರಾಜ್ಯಗಳು ಕೂಡಾ ಗ್ಯಾರಂಟಿ ಯೋಜನೆ ಜಾರಿಗೆ ತರಲಿವೆ. ಇದು ಕರ್ನಾಟಕ ಮಾದರಿಯಾಗಿದೆ. ನಿಮ್ಮ ಗುಜರಾತ್ ಮಾದರಿ ಜಾರಿಗೆ ಬರಲು ನಾವು ಬಿಡುವುದಿಲ್ಲ” ಎಂದು ಕುಟುಕಿದರು.
ಈ ಸುದ್ದಿ ಓದಿದ್ದೀರಾ? ಗೃಹಜ್ಯೋತಿ ಯೋಜನೆ | ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ
1.41 ಕೋಟಿ ಫಲಾನುಭವಿಗಳು ಗೃಹಜ್ಯೋತಿ ಯೋಜನೆಯ ಲಾಭ ಪಡೆದುಕೊಳ್ಳಲಿದ್ದಾರೆ. ಜುಲೈ 1 ರಿಂದ ಪ್ರಾರಂಭವಾದ ಈ ಯೋಜನೆಯ ಅಡಿಯಲ್ಲಿ ಅಗಷ್ಟ್ ತಿಂಗಳಲ್ಲಿ 200 ಯೂನಿಟ್ ವರೆಗಿನ ವಿದ್ಯುತ್ ಬಳಕೆಗೆ ಶೂನ್ಯ ದರದ ಬಿಲ್ ಒದಗಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
“ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ರಾಜ್ಯದ 1.28 ಕೋಟಿ ಮಹಿಳಿಯರಿಗೆ ಪ್ರತಿತಿಂಗಳು 2000 ರೂ. ಕೊಡಲಿದ್ದೇವೆ. ಇಂತಹ ಯೋಜನೆಯನ್ನು ದೇಶದ ಯಾವುದೇ ರಾಜ್ಯ ಜಾರಿಗೆ ತಂದಿಲ್ಲ. ನುಡಿದಂತೆ ನಾವು ನಡೆಯುತ್ತಿದ್ದೇವೆ” ಎಂದು ಹೇಳಿದರು.